More

    ಉಳ್ಳಾಲ, ಸೋಮೇಶ್ವರ ಬೀಚ್‌ನಲ್ಲಿ ಪ್ಲಾಸ್ಟಿಕ್‌ಗಿಲ್ಲ ಅವಕಾಶ, ಅಧಿಕಾರಿಗಳ ಕಣ್ಗಾವಲು

    ಉಳ್ಳಾಲ: ಉಳ್ಳಾಲ ಮತ್ತು ಸೋಮೇಶ್ವರ ಕಡಲ ಕಿನಾರೆ ಸ್ವಚ್ಛತೆ ನಿಟ್ಟಿನಲ್ಲಿ ಉಭಯ ಸ್ಥಳೀಯಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದಕ್ಕಾಗಿ ಅಧಿಕಾರಿಗಳನ್ನೂ ನೇಮಿಸಲಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.

    ಇವೆರಡೂ ಕಡಲ ಕಿನಾರೆಯ ಆಸುಪಾಸಿನಲ್ಲಿ ಪವಿತ್ರ, ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿವೆ. ಸೋಮೇಶ್ವರ ಕಡಲ ತಟದಲ್ಲಿ ಸೋಮನಾಥ ದೇವಸ್ಥಾನ, ಉಳ್ಳಾಲದಲ್ಲಿ ಇತಿಹಾಸ ಪ್ರಸಿದ್ಧ ಸಯ್ಯಿದ್ ಮದನಿ ದರ್ಗಾ ಇದೆ. ಈ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ಕಡಲ ಕಿನಾರೆಗೆ ಹೋಗದೆ ಹಿಂದಿರುಗುವುದು ಅಪರೂಪ. ಇಲ್ಲಿಗೆ ಬರುವವರು ತಿಂಡಿ, ತಿನಿಸುಗಳನ್ನು ತರುವುದು, ಇಲ್ಲವೇ ಎಲ್ಲೆಲ್ಲಿಂದಲೋ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳನ್ನು ತಂದು ಬಿಸಾಡುವುದು ಮಾಮೂಲಾಗಿದೆ. ಅಲ್ಲದೆ ಆಸುಪಾಸಿನಲ್ಲಿರುವ ಅಂಗಡಿಗಳಲ್ಲಿ ಚಹಾ, ಚರ್ಮುರಿ, ಆಮ್ಲೆಟ್, ಐಸ್‌ಕ್ರೀಂ ಸಹಿತ ಇತರ ತಿಂಡಿ ನೀಡಲು ಪ್ಲಾಸ್ಟಿಕ್ ಅಥವಾ ಕಾಗದದ ತಟ್ಟೆ, ಲೋಟಗಳನ್ನು ಬಳಸುವುದೂ ಸಾಮಾನ್ಯವಾಗಿದೆ. ನೀರಿನ ಬಾಟಲ್‌ಗಳ ಬಳಕೆಗೂ ಕೊರತೆಯಿಲ್ಲ. ಖರೀದಿಸಿದವರೂ ಅಲ್ಲೇ ತಿಂದು ಎಸೆದು ಹೋಗುವುದಕ್ಕೂ ಈವರೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಮಳೆಗಾಲದಲ್ಲಂತೂ ಸಮುದ್ರದ ತೆರೆಗಳೊಂದಿಗೆ ಬರುವ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳು ಕಿನಾರೆಯಲ್ಲಿ ರಾಶಿಬಿದ್ದು ಅಸಹ್ಯ ಸೃಷ್ಟಿಸುತ್ತದೆ.

    ಸ್ವಚ್ಛಗೊಂಡರೂ ಮತ್ತದೇ ಅವಸ್ಥೆ: ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಸಂಘ-ಸಂಸ್ಥೆಗಳು, ಸ್ಥಳೀಯಾಡಳಿತದಿಂದ ಸ್ವಚ್ಛತಾ ಕಾರ್ಯಕ್ರಮ ನಡೆದು ಸ್ವಚ್ಛಗೊಳ್ಳುವ ಕಡಲ ಕಿನಾರೆ ಒಂದೆರೆಡು ದಿನದಲ್ಲೇ ಮತ್ತೆ ಹಿಂದಿನ ಸ್ಥಿತಿಗೆ ಮರಳುವುದು ಮಾಮೂಲಿ. ಅ.31ರಂದು ಎರಡೂ ಬೀಚ್‌ಗಳ ಸಾಮೂಹಿಕ ಸ್ವಚ್ಛತೆ ನಡೆದಿದೆ. ಸ್ವಚ್ಛ ಕಿನಾರೆ ಉಳಿಸುವ ನಿಟ್ಟಿನಲ್ಲಿ ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆಯಿಂದ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಿ ಫಲಕಗಳನ್ನು ಅಳವಡಿಸಲಾಗಿದೆ. ಸ್ಥಳೀಯ ವ್ಯಾಪಾರಿಗಳಿಗೂ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಸಲಾಗಿದ್ದು, ಕಣ್ಗಾವಲಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಸ್ವಚ್ಛತೆ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೀಚ್‌ನಲ್ಲಿ ವ್ಯಾಪಾರಿಗಳು ಸ್ಟೀಲ್ ಲೋಟ, ತಟ್ಟೆ ಬಳಸುವಂತೆ ಸೂಚನೆ ನೀಡಲಾಗಿದೆ. ಪ್ರವಾಸಿಗರೂ ಪ್ಲಾಸ್ಟಿಕ್ ಅಥವಾ ಕಸ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಕಣ್ಣಿಡಲಿದ್ದಾರೆ.

    ರಾಯಪ್ಪ, ಪೌರಾಯುಕ್ತ, ಉಳ್ಳಾಲ ನಗರಸಭೆ

    ಸೋಮೇಶ್ವರ ಬೀಚ್ ಪ್ರವಾಸೋದ್ಯಮ ಇಲಾಖೆ ಅಧೀನದಲ್ಲಿದ್ದು, ಸ್ವಚ್ಛತೆಗಾಗಿ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಲಾಗಿದೆ. ಕಣ್ಗಾವಲಿಗಾಗಿ ಕಂದಾಯ ಅಧಿಕಾರಿಯನ್ನು ನೇಮಿಸಲಾಗಿದ್ದು, ಪ್ರತಿದಿನ ಸಂಜೆ ಮತ್ತು ವಾರಾಂತ್ಯದಂದು ಅವರು ಬೀಚ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಸಹಕಾರವೂ ಅಗತ್ಯ.

    ವಾಣಿ ವಿ.ಆಳ್ವ, ಮುಖ್ಯಾಧಿಕಾರಿ, ಸೋಮೇಶ್ವರ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts