More

    ಇಂಜಿನಿಯರಿಂಗ್ ಶಿಕ್ಷಣ, ಬದಲಾದ ವ್ಯಾಖ್ಯಾನ: ಇಂಜಿನಿಯರ್ ಆಗಲು ಇನ್ಮುಂದೆ ಗಣಿತ-ಭೌತಶಾಸ್ತ್ರ ಓದಬೇಕಿಲ್ಲ!

    | ರಮೇಶ್ ಮೈಸೂರು

    ಎಲ್ಲರಿಗೂ ಸಮಾನ ಹಾಗೂ ಗುಣಮಟ್ಟದ ಅವಕಾಶಗಳನ್ನು ಕಲ್ಪಿಸುವುದು ಉನ್ನತ ಶಿಕ್ಷಣದ ಧ್ಯೇಯ. ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ವಲಯದಲ್ಲಿ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ.

    ಇತ್ತೀಚೆಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊರಡಿಸಿರುವ ಅನುಮೋದನೆ ಪ್ರಕ್ರಿಯೆ ಕೈಪಿಡಿ ತಾಂತ್ರಿಕ ಶಿಕ್ಷಣಕ್ಕೆ ನಿಗದಿಪಡಿಸಿದ ಪ್ರವೇಶಾರ್ಹತೆಯನ್ನು ಇನ್ನಷ್ಟು ವಿಸ್ತರಿಸಿದೆ. ಅದರ ಪ್ರಕಾರ, ಬಿ.ಇ., ಬಿ.ಟೆಕ್ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರ ಹಾಗೂ ಗಣಿತವನ್ನು ಕಡ್ಡಾಯವಾಗಿ ಓದಿರಬೇಕೆಂದೇನಿಲ್ಲ. ಈ ವಿಷಯಗಳೆಲ್ಲ ಇನ್ನು ಮುಂದೆ ಐಚ್ಛಿಕ. ಒಟ್ಟು 14 ವಿಷಯಗಳನ್ನು ಆಯ್ಕೆ ಮಾಡಿದ್ದು, ಆ ಪೈಕಿ ಮೂರನ್ನು ದ್ವಿತೀಯ ಪಿಯು ಅಥವಾ 12ನೇ ತರಗತಿಯಲ್ಲಿ ಓದಿದ್ದರೆ ಇಂಜಿನಿಯರಿಂಗ್ ಕೋರ್ಸ್​ಗಳಿಗೆ ಪ್ರವೇಶ ಪಡೆಯಬಹುದು!

    ಕಡ್ಡಾಯ ವಿಷಯಗಳ ಪಟ್ಟಿ ವಿಸ್ತರಣೆ: ಬಿ.ಇ, ಬಿ.ಟೆಕ್ ವ್ಯಾಸಂಗ ಮಾಡಲು ಈ ವಿಷಯಗಳ ಪೈಕಿ ಮೂರನ್ನು ಓದಿರಬೇಕು- ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಕಯಂತ್ರ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಇನ್​ಫಾಮೇಟಿಕ್ಸ್ ಪ್ರಾಕ್ಟೀಸ್, ಜೈವಿಕ ತಂತ್ರಜ್ಞಾನ, ತಾಂತ್ರಿಕ ವೃತ್ತಿಪರ ತರಬೇತಿ ವಿಷಯ, ಕೃಷಿ, ಇಂಜಿನಿಯರಿಂಗ್ ಗ್ರಾಫಿಕ್ಸ್, ಬಿಜಿನೆಸ್ ಸ್ಟಡೀಸ್ ಹಾಗೂ ಆಂತ್ರಪ್ರಿ್ರ್ಯೂರ್​ಶಿಪ್.

    ದೇಶದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ನಿಗದಿತ ಸೀಟುಗಳು ಕ್ರಮವಾಗಿ ಇಂತಿವೆ.

    • ಡಿಪ್ಲೊಮಾ: 4449- 1067027; ಪದವಿ: 4062- 1384395; ಸ್ನಾತಕೋತ್ತರ: 4940- 631160

    ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ನಿಗದಿತ ಸೀಟುಗಳು ಕ್ರಮವಾಗಿ ಇಂತಿವೆ.

    • ಡಿಪ್ಲೊಮಾ: 322-81944; ಪದವಿ: 263-118204; ಸ್ನಾತಕೋತ್ತರ: 365-51487

    ಇಂಜಿನಿಯರಿಂಗ್ ಶಿಕ್ಷಣ, ಬದಲಾದ ವ್ಯಾಖ್ಯಾನ: ಇಂಜಿನಿಯರ್ ಆಗಲು ಇನ್ಮುಂದೆ ಗಣಿತ-ಭೌತಶಾಸ್ತ್ರ ಓದಬೇಕಿಲ್ಲ!

    ಪರಿಣಾಮವೇನು?: ಇಂಜಿನಿಯರಿಂಗ್ ವಿದ್ಯಾರ್ಥಿ ಗಳು ಕೂಡ ಕಲಾ ವಿಷಯ, ಇಷ್ಟವಾದ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸದ್ಯ ಇಂಜಿಯರಿಂಗ್​ಗೆ ಗಣಿತ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಓದು ಕಡ್ಡಾಯವಾಗಿದ್ದು, ಜೆಇಇ ಮೇನ್ ಹಾಗೂ ಅಡ್ವಾನ್ಸ್​ನಲ್ಲೂ ಈ ವಿಷಯಗಳಲ್ಲಿ ಪಡೆದ ಅಂಕಗಳನ್ನೇ ಪರಿಗಣಿಸ ಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲೂ ಬದಲಾವಣೆ ಆಗಲಿದೆ. ರಾಜ್ಯದಲ್ಲಿ ಸಿಇಟಿಗೂ ಬೇರೆ ಬೇರೆ ವಿಷಯಗಳ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.

    ರಾಷ್ಟ್ರೀಯ ಶಿಕ್ಷಣ ನೀತಿ ಪ್ರಭಾವ: ನೂತನ ಶಿಕ್ಷಣ ನೀತಿಯನ್ವಯ ಪ್ರೌಢ ಶಿಕ್ಷಣ ಹಂತದಲ್ಲಿ ತಮಗಿಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬಹುದು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೂಡ ಕಲಾ ವಿಷಯಗಳನ್ನು ಆಯ್ದುಕೊಳ್ಳಬಹುದು. ಅಂಥದ್ದೊಂದು ಸ್ವಾತಂತ್ರ್ಯವನ್ನು ನೂತನ ನೀತಿಯಲ್ಲಿ ನೀಡಲಾಗಿದೆ. ಹೀಗಾಗಿ ವೈವಿಧ್ಯಮಯ ವಿಷಯಗಳ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪಡೆಯಲು ಈ ಕ್ರಮದಿಂದ ಅನುಕೂಲವಾಗಲಿದೆ. ಬೇರೆ ವಿಷಯಗಳನ್ನು ಅಭ್ಯಸಿಸಿ ಇಂಜಿನಿಯರಿಂಗ್ ಕೋರ್ಸ್​ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಆಯಾ ವಿಶ್ವವಿದ್ಯಾಲಯಗಳು ಗಣಿತ, ಭೌತಶಾಸ್ತ್ರ, ಇಂಜಿನಿಯರಿಂಗ್ ಡ್ರಾಯಿಂಗ್ ಮೊದಲಾದ ವಿಷಯಗಳಲ್ಲಿ ಬ್ರಿಡ್ಜ್ ಕೋರ್ಸ್​ಗಳನ್ನು ಏರ್ಪಡಿಸಿ ತರಬೇತಿ ನೀಡಲಿವೆ.

    ಎಐಸಿಟಿಇ ಹೇಳೋದೇನು?: ಗಣಿತ, ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರ ಅಧ್ಯಯ ನವನ್ನು ಐಚ್ಛಿಕವನ್ನಾಗಿಸಿದ ಕ್ರಮಕ್ಕೆ ಶೈಕ್ಷಣಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ. ಆದರೆ, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಎಐಸಿಟಿಇ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಬೇರೆ ಬೇರೆ ವಿಷಯಗಳನ್ನು ಓದಿರುವ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದೆ. ಮೂರು ಕಡ್ಡಾಯ ವಿಷಯಗಳನ್ನು ಓದಿರಬೇಕೆಂಬ ಪಟ್ಟಿಯನ್ನು ವಿಸ್ತರಿಸಿ ಇನ್ನಷ್ಟು ವಿಷಯಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

    ಇಷ್ಟು ದಿನ ಇಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳಿಗೆ ಪಿಸಿಎಂ ಕಡ್ಡಾಯವಾಗಿತ್ತು. ಅದರಲ್ಲೂ ಗಣಿತ ಅತ್ಯಂತ ಪ್ರಮುಖ ವಿಷಯವಾಗುತ್ತಿತ್ತು. ಆದರೆ ಕೆಲವು ಇಂಜಿನಿಯರಿಂಗ್ ಕೋರ್ಸ್​ಗಳಲ್ಲಿ ಗಣಿತ ಎಲ್ಲೂ ಹೆಚ್ಚಾಗಿ ಉಪಯುಕ್ತ ಎನಿಸಿಕೊಳ್ಳುವುದಿಲ್ಲ. ಎಲೆಕ್ಟ್ರಾನಿಕ್ಸ್​ನಂತಹ ಕೆಲವು ಕೋರ್ಸ್​ಗಳಿಗೆ ಮಾತ್ರವೇ ಗಣಿತ ಹೆಚ್ಚು ಅವಶ್ಯವಾಗಿದೆ. ಗಣಿತ ಅಗತ್ಯವಿರುವ ಕೋರ್ಸ್ ತೆಗೆದುಕೊಂಡು, ಗಣಿತವನ್ನೇ ಕಲಿತಿಲ್ಲವೆಂದರೆ ಇಂಜಿನಿಯರಿಂಗ್​ನಲ್ಲಿ ಮತ್ತೆ ಅದನ್ನು ಹೇಳಿಕೊಡ ಬೇಕಾಗುತ್ತದೆ. ಹಾಗಾಗಿ ಕೋರ್ಸ್​ಗೆ ತಕ್ಕಂತೆ ವಿಷಯ ಕಡ್ಡಾಯ ಮಾಡುವುದು ಒಳ್ಳೆಯದು. ಇದೀಗ ನಮ್ಮಲ್ಲಿ ಅಪ್​ಡೇಟೆಡ್ ಸಾಫ್ಟ್​ವೇರ್​ಗಳು ಇರುವುದರಿಂದ ತೀರಾ ಬೇಸಿಕ್ ಕಲಿಯುವ ಅವಶ್ಯಕತೆ ಇಲ್ಲ. ಗಣಿತವನ್ನು ಬುಡದಿಂದ ಕಲಿಯುವುದಕ್ಕಿಂತ ಅದರ ಉಪಯೋಗವನ್ನು ಕಲಿತಿದ್ದರೆ ಸಾಕು ಎನ್ನುವಂತಾಗಿದೆ. ಇದು ಒಂದು ರೀತಿ ಥಿಯರಿಯಿಂದ ಪ್ರಾಕ್ಟಿಕಲ್​ಗೆ ಬರುತ್ತಿರುವ ಬಗೆ ಎನ್ನಬಹುದು.

    | ಡಾ. ಶ್ರೀನಿವಾಸ ಬಳ್ಳಿ ಕುಲಪತಿ, ನೃಪತುಂಗ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts