More

    ವಾಯುವಿಹಾರಕ್ಕೆ ಇಲ್ಲ ಪಾರ್ಕ್

    ಕೊಪ್ಪ: ಇಡೀ ತಾಲೂಕು ಮಲೆನಾಡ ಮಡಿಲಿನಲ್ಲಿದೆ. ಇಂತಹ ಸೊಬಗನ್ನು ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದ ಜನರು ಪ್ರತಿದಿನ ಕಣ್ತುಂಬಿಕೊಂಡು ಆಸ್ವಾದಿಸುತ್ತಾರೆ. ಆದರೆ ಪಟ್ಟಣದ ನಿವಾಸಿಗಳಿಗೆ ಇದರ ಅನುಭವ ಸಿಗದು. ಏಕೆಂದರೆ ಇಲ್ಲಿ ವಾಯುವಿಹಾರಕ್ಕೂ ಯೋಗ್ಯವಾದ ಉದ್ಯಾನವಿಲ್ಲ. ಇರುವ ಉದ್ಯಾನ ಕೂಡ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ.

    ಪಟ್ಟಣದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಷ್ಟು ಜನಸಂಖ್ಯೆಯನ್ನು ಹೊಂದಿದ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇವಲ ಎರಡು ಉದ್ಯಾನಗಳಿವೆ. ಅದು ಕೂಡ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಜನರ ಉಪಯೋಗಕ್ಕೆ ಸಿಗದಂತಾಗಿದೆ.
    ಮಕ್ಕಳು ಆಟವಾಡಲು, ವೃದ್ಧರ ವಾಯುವಿಹಾರಕ್ಕೆ ಇಲ್ಲಿ ಅಚ್ಚುಕಟ್ಟಾದ ಒಂದೇ ಒಂದು ಉದ್ಯಾನವಿಲ್ಲ. ಇರುವ ಪಾರ್ಕ್‌ಗೆ ಸರಿಯಾದ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ. ಸಾರ್ವಜನಿಕರು ಸಹ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಪಾಳುಬಿದ್ದಿದೆ.
    1956-57ರಲ್ಲಿ ಕಡಿದಾಳ್ ಮಂಜಪ್ಪ ಅವರು ಕೊಪ್ಪ-ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ವೀರಭದ್ರ ದೇವಸ್ಥಾನದ ಮುಂಭಾಗ ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ವಾಟರ್ ಟ್ಯಾಂಕ್‌ಗೆ 10 ಗುಂಟೆ ಜಾಗ ಮಂಜೂರು ಮಾಡಿಸಿದ್ದರು. ಉಳಿಕೆ ಜಾಗದಲ್ಲಿ ಮಕ್ಕಳ ಉದ್ಯಾನ ಸ್ಥಾಪಿಸಲು ನಿರ್ಧರಿಸಲಾಗಿತ್ತು. ನಂತರ ಉದ್ಯಾನ ರೂಪುಗೊಂಡು ಉದ್ಘಾಟನೆಯಾಗಿದ್ದರೂ ಸ್ಥಳೀಯ ಆಡಳಿತದಿಂದ ಸೂಕ್ತ ನಿರ್ವಹಣೆಯಿಲ್ಲದೆ ವಿಷಜಂತುಗಳ ಆವಾಸ ಸ್ಥಾನವಾಗಿದೆ.
    ಸರ್ಕಾರದಿಂದ ಪಟ್ಟಣ ಪಂಚಾಯಿತಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು, ಸಾರ್ವಜನಿಕ ಬೇಡಿಕೆ, ಉದ್ಯಾನಗಳಿಗೆ ಒಂದಷ್ಟು ಪಾಲು ಮೀಸಲಿಡಬೇಕು. ಆದರೆ 2015ರ ನಂತರದಿಂದ ಸಾರ್ವಜನಿಕ ಉದ್ಯಾನವನ್ನು ಮರೆತ ಜನಪ್ರತಿನಿಧಿಗಳು ಅನುದಾನ ಮೀಸಲಿಡುವುದನ್ನೇ ಕೈಬಿಟ್ಟಿದ್ದಾರೆ.
    ಪ್ರಸ್ತುತ ವಾಟರ್ ಟ್ಯಾಂಕ್ ಪಾರ್ಕ್ ದುಸ್ಥಿತಿಗೆ ತಲುಪಿದೆ. ಪಾರ್ಕಿನಲ್ಲಿ ಇರುವ ಜೋಕಾಲಿಗಳು ಮುರಿದು ಬೀಳುವಂತಿದೆ. ಇತ್ತ ಜಾರುಬಂಡಿಗಳು ಮಾಯವಾಗಿದೆ. ಹೂ ತೋಟಗಳಿಗೆ ನೀರು ಇಲ್ಲದೆ ಗಿಡಗಳು ಸತ್ತುಹೋಗಿವೆ. ಸಾರ್ವಜನಿಕರಿಗೆ ಓಡಾಡಲು ಮಾಡಿದ್ದ ಫುಟ್‌ಪಾತ್‌ಗಳಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ಹರಡಿಕೊಂಡಿವೆ. ಜನರು ಇಲ್ಲಿ ಕಾಲಿಡಲು ಕೂಡ ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ.
    ಪಟ್ಟಣ ಹೊರಭಾಗದ ಅಮ್ಮಡಿ ಹಾಗೂ ಹುಲ್ಲುಮಕ್ಕಿಯಲ್ಲಿ ಅರಣ್ಯ ಇಲಾಖೆ ಉದ್ಯಾನವನಗಳನ್ನು ತಕ್ಕಮಟ್ಟಿಗೆ ನಿರ್ವಹಣೆ ಮಾಡಿರುವುದರಿಂದ ಕೊಂಚ ಸುಸ್ಥಿತಿಯಲ್ಲಿವೆ. ಆದರೆ ಪಟ್ಟಣದ ಹೊರ ಭಾಗದಲ್ಲಿರುವ ಕಾರಣ ಜನರು ಈ ಪಾರ್ಕ್‌ಗಳಿಗೆ ಹೋಗುವುದು ಕಡಿಮೆ.
    ಅನುದಾನ ನೀರಲ್ಲಿ ಹೋಮ:
    2008ರಿಂದ 2015ರ ವರೆಗೆ ವಾಟರ್ ಟ್ಯಾಂಕ್ ಪಾರ್ಕ್ ಅನ್ನು ಸರ್ಕಾರದಿಂದ ನಿರಂತರವಾಗಿ ಲಕ್ಷಗಟ್ಟಲೇ ಅನುದಾನ ತಂದು ಅಭಿವೃದ್ಧಿ ಮಾಡಲಾಗಿತ್ತು. ಆದರೆ, ನಂತರದಲ್ಲಿ ಸೂಕ್ತವಾಗಿ ನಿರ್ವಹಣೆ ಮಾಡದಿದ್ದರಿಂದ ಪಾರ್ಕ್ ಅಭಿವೃದ್ಧಿಗೆ ವಿನಿಯೋಗಿಸಿದ್ದ ಅನುದಾನ ನೀರಲ್ಲಿ ಹೋಮ ಮಾಡಿದಂತಾಗಿದೆ. ಇಂದಿರಾನಗರದ ಪಾರ್ಕ್‌ನ ಸ್ಥಿತಿ ಕೂಡ ಇದಕ್ಕೆ ಹೊರತೇನಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರದಲ್ಲಿರುವ ಮಕ್ಕಳ ಪಾರ್ಕ್‌ನಲ್ಲಿಯೂ ಸರಿಯಾದ ನಿರ್ವಹಣೆಯಿಲ್ಲ. ಜೋಕಾಲಿ, ಜಾರುಬಂಡಿ ಮುರಿದು ಬಿದ್ದಿವೆ. ಒಂದಷ್ಟು ಶೋ ಗಿಡಗಳು ಮಾತ್ರ ಜೀವಹಿಡಿದುಕೊಂಡಿವೆ.
    ಸಾರ್ವಜನಿಕ ಬಳಕೆಗೆ ಸಿಗಲಿ:
    ಈ ಹಿಂದೆ ವಾಟರ್‌ಟ್ಯಾಂಕ್ ಉದ್ಯಾನವನ್ನು ಪಟ್ಟಣ ಪಂಚಾಯಿತಿ ಆಡಳಿತ ಸರಿಯಾಗಿ ನಿರ್ವಹಣೆ ಮಾಡುತ್ತಿತ್ತು. ಕಾಲಕಾಲಕ್ಕೆ ಗಿಡಗಳಿಗೆ ನೀರುಣಿಸಲಾಗುತ್ತಿತ್ತು. ಇದರಿಂದ ಎಲ್ಲೆಲ್ಲೂ ಹಸಿರು ವಾತಾವರಣ ಇತ್ತು. ಜನರು ವಾಯುವಿಹಾರಕ್ಕೆ ಹೋಗುತ್ತಿದ್ದುದರಿಂದ ಉತ್ತಮವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಿರ್ವಹಣೆ ಇಲ್ಲದ್ದರಿಂದ ಜಾನುವಾರುಗಳ ದೊಡ್ಡಿಯಾದಂತಾಗಿದೆ. ಕೂಡಲೇ ಪಪಂ ಪಾರ್ಕ್ ಅಭಿವೃದ್ಧಿಪಡಿಸಿ ಪಟ್ಟಣದ ಜನತೆಗೆ ಉಪಯೋಗಕ್ಕೆ ಲಭಿಸುವಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
    ಪಟ್ಟಣದ ವಾಟರ್‌ಟ್ಯಾಂಕ್ ಉದ್ಯಾನ ಅಭಿವೃದ್ಧಿಪಡಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಅಭಿವೃದ್ಧಿ ಕಾರ್ಯ ಕೈಗೊಂಡು, ಆಟಿಕೆಗಳನ್ನು ಸರಿಪಡಿಸಲಾಗುವುದು ಎಂದು ಪಪಂ ಇದಿನಬ್ಬ ಹೇಳಿದ್ದಾರೆ.
    ಕೊಪ್ಪ ದಿನೇದಿನೆ ಅಭಿವೃದ್ಧಿ ಹೊಂದುತ್ತಿದೆ. ಹಾಗೆಯೇ ಜನಸಂಖ್ಯೆಯೂ ಹೆಚ್ಚಾಗುತ್ತದೆ. ಆದರೆ ಮಕ್ಕಳಿಗೆ, ವಯೋವೃದ್ಧರಿಗೆ, ಕುಟುಂಬ ಸಮೇತರಾಗಿ ತೆರಳಲು ಒಂದೇ ಒಂದು ಉದ್ಯಾನವನವಿಲ್ಲ. ಪಟ್ಟಣ ಪಂಚಾಯಿತಿ ಆಸಕ್ತಿವಹಿಸಿ ನಾಲ್ಕೈದು ಎಕರೆ ಜಾಗದಲ್ಲಿ ಎಲ್ಲ ವಯೋಮಿತಿಯವರಿಗೂ ಅನುಕೂಲವಗುವಂತೆ ಹೊಸ ಉದ್ಯಾನ ನಿರ್ಮಿಸಲಿ ಎನ್ನುತ್ತಾರೆ ಕೊಪ್ಪ ನಿವಾಸಿ ಚಂದನ್ ರಾವ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts