More

    ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ; ಇಬ್ರಾಹಿಂ

    ಬಿಜೆಪಿ ಜತೆಗಿನ ಮೈತ್ರಿ ವಿಚಾರ ಜೆಡಿಎಸ್‌ನಲ್ಲಿ ಕೋಲಾಹಲ ಎಬ್ಬಿಸಿದೆ. ಖುದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಜೆಡಿಎಸ್ ವರಿಷ್ಠರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಮೈತ್ರಿ ವಿರೋಧಿಸಿ ತಮ್ಮ ನಿರ್ಧಾರವನ್ನು ತಿಳಿಸಲು ಚಿಂತನ-ಮಂಥನ ಸಭೆ ನಡೆಸಿದ್ದಾರೆ.

    ನಮ್ಮದೇ ಒರಿಜಿನಲ್ ಜಾತ್ಯಾತೀತ ಜನತಾದಳ. ನಾನೇ ಅದರ ಅಧ್ಯಕ್ಷ. ಇದು ನನ್ನ ಮನೆ. ಮುಂದೇನಾಗುತ್ತದೆ ಎಂಬುದನ್ನು ಪರದೆ ಮೇಲೆ ನೋಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ದಳಪತಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ‘ಜೆಡಿಎಸ್ ಚಿಂತನ-ಮಂಥನ’ ಸಭೆಯಲ್ಲಿ ಮಾತನಾಡಿದ ಆವರು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ಅದಕ್ಕೆ ಸಭೆ ನಡೆಸಿ ತೀರ್ಮಾನ ಮಾಡಬೇಕು ಎಂದು ಗುಡುಗಿದರಲ್ಲದೆ, ನಿತೀಶ್ ಕುಮಾರ್, ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ನಾಯಕರೂ ನನ್ನ ಜತೆ ಮಾತನಾಡಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಹೊಸ ಕೋರ್ ಕಮಿಟಿ ರಚನೆ

    ಈ ಸಭೆಯಲ್ಲಿನ ಚರ್ಚೆಯನ್ನು ಮಾಜಿ ಪ್ರಧಾನಿ ದೇವೇಗೌಡರಿಗೆ ತಿಳಿಸುತ್ತೇನೆ. ಹೊಸ ಕೋರ್ ಕಮಿಟಿ ರಚನೆ ಮಾಡುತ್ತೇನೆ, ಅದಕ್ಕೆ ಸಭೆ ಕರೆಯುತ್ತೇನೆ. ಅಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಜಿಲ್ಲಾ ಪ್ರವಾಸ ಮಾಡುತ್ತೇನೆ. ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ಫೋಟೋ ತೆಗೆಸಿಕೊಂಡ್ರೆ ಮೈತ್ರಿ ಆಗಲ್ಲ

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಏಕಾಕಾಕಿ ದೆಹಲಿಗೆ ಹೋಗಿ ಅಮಿತ್ ಶಾ ಜತೆ ಫೋಟೋ ತೆಗೆಸಿಕೊಂಡು ನಾವು ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರೆ ನಡೆಯುವುದಿಲ್ಲ. ನನಗೆ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ ತತ್ವ, ಸಿದ್ಧಾಂತ ಬೇರೆ ಇದೆ. ಅದಕ್ಕೆ ನಾವು ಈ ಮೈತ್ರಿ ವಿರೋಧ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
    ನಾನು ಮೈತ್ರಿ ಒಪ್ಪುವುದಿಲ್ಲ. ಮೈತ್ರಿಯ ಬಗ್ಗೆ ಪಕ್ಷದಲ್ಲಿ ಸಭೆ ಆಗಿದೆಯೆ? ನಿರ್ಣಯ ಆಗಿದೆಯೆ? ಶಾಸಕರು ಸಂಪರ್ಕದಲ್ಲಿ ನನ್ನ ಇದ್ದಾರೆ. ದೇವೇಗೌಡರ ಜತೆಗೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ದೇವೇಗೌಡರೇ ನಿಮಗೆ 92 ವಯಸ್ಸಾಗಿದೆ, ತಪ್ಪು ಹೆಜ್ಜೆ ಇಡಬೇಡಿ ಎಂದು ಮನವಿ ಮಾಡಿದರು.

    ಚನ್ನಪಟ್ಟಣದಲ್ಲಿ ಇಪ್ಪತ್ತು ಸಾವಿರ ಮುಸ್ಲಿಂಮರು ಮತ ಹಾಕಿದ್ದಾರೆ. ಅದಕ್ಕೆ ನೀವು(ಕುಮಾರಸ್ವಾಮಿ)ಗೆದ್ದಿರುವುವುದು. ಅದಕ್ಕಾಗಿ ಅಮಿತ್ ಶಾ ನಿಮ್ಮನ್ನು ಕರೆದರು. ನಿಮ್ಮ ಪುತ್ರ ನಿಂತಾಗಲೂ ಮುಸ್ಲಿಮರು ವೋಟು ಕೊಟ್ಟರು ಎಂದರು.

    ಮೈತ್ರಿಯಿಂದ ಹೊರಬನ್ನಿ

    ದೇವೇಗೌಡರಿಗೆ ಮೈತ್ರಿ ಬಗ್ಗೆ ಮನಸ್ಸಿನಲ್ಲಿ ನೋವಿದೆ. ಆದರೆ ಸ್ವಯಂ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈಗಲೂ ಅವಕಾಶ ಇದೆ, ಅವರ ಜತೆ ಹೋಗುವುದಿಲ್ಲ ಎಂದು ವಾಪಸ್ ಬಂದರೆ ಹೀರೋ ಆಗುತ್ತೀರಿ ಎಂದು ಹೇಳಿದರು.
    ಜೆಡಿಎಸ್ ಯಾವ ಕಾರಣಕ್ಕೂ ಎನ್‌ಡಿಎ ಜತೆಗೆ ಹೋಗುವುದಿಲ್ಲ. 19 ಜನ ಶಾಸಕರ ಜತೆ ನಾನೇ ಮಾತನಾಡುತ್ತೇನೆ. ಒಕ್ಕಲಿಗರು ಕೂಡ ಕೈಬಿಟ್ಟಿದ್ದಾರೆ. ಮುಸ್ಲಿಮರನ್ನು ನಂಬಿ ರಾಜಕೀಯ ಮಾಡುವುದಿಲ್ಲ ಎನ್ನುತ್ತಾರೆ. ಆದರೆ ಯಾರನ್ನು ನಂಬಿ ರಾಜಕೀಯ ಮಾಡಿದ್ದರೋ ಅವರೇ ಕೈ ಬಿಟ್ಟರು ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.
    ಕೇರಳದವರು ನಿಮ್ಮನ್ನು ಬಿಟ್ಟು ಆಗಿದೆ. ಜೆಡಿಎಸ್‌ನ್ನು ಯಾವುದೇ ಕಾರಣಕ್ಕೂ ಎನ್‌ಡಿಎ ಜತೆ ಹೋಗಲು ಬಿಡುವುದಿಲ್ಲ ಎಂದು ಗುಡುಗಿದರು.
    ಮಾಜಿ ಶಾಸಕ, ಜೆಡಿಯು ನಾಯಕ ಮಹಿಮಾ ಪಟೇಲ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಮುಖಂಡರಾದ ಇಮ್ರಾನ್ ಪಾಶಾ ಮತ್ತಿತರರು ಉಪಸ್ಥಿತರಿದ್ದರು.

    ನಮ್ಮ ಮನೆಯಲ್ಲಿ ನಾವು ಇದ್ದೇವೆ. ನನ್ನನ್ನು ಯಾರು ಅಧ್ಯಕ್ಷ ಸ್ಥಾನದಿಂದ ತೆಗೆಯುವುದಕ್ಕೆ ಆಗುವುದಿಲ್ಲ. ನಾನು ಹೆದರುವನು ಅಲ್ಲ, ಬೆದರಿಕೆಯನ್ನು ಹಾಕಲ್ಲ. ಒಂದು ಪಾರ್ಟಿ ವ್ಯಕ್ತಿ ಸ್ವತ್ತಲ್ಲ. ನಾನು ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಬಹುದಾಗಿತ್ತು. ಆದರೆ ನಿಮ್ಮ ಅಭಿಪ್ರಾಯ ಪಡೆಯಲು ಈ ಸಭೆ ಮಾಡಿದ್ದೇನೆ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

    ಕಾಂಗ್ರೆಸ್‌ಗೆ ಪರೋಕ್ಷ ಆಫರ್
    ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ಅವರು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗಬೇಕು. ಎನ್‌ಡಿಎ ಸೋಲಿಸಬೇಕಾದರೆ ಎಲ್ಲ ಶಕ್ತಿ ಒಂದು ಗೂಡಿಸಬೇಕು. ಇದಕ್ಕೆ ನಾವು ಬೆಂಬಲ ಕೊಡಲು ರೆಡಿ ಇದ್ದೇವೆ ಎಂದು ಕಾಂಗ್ರೆಸ್‌ಗೆ ಇಬ್ರಾಹಿಂ ಪರೋಕ್ಷ ಆಫರ್ ನೀಡಿದರು.

    ಶಾಸಕರು, ಮಾಜಿ ಸಚಿವರಿಲ್ಲದ ಸಭೆ
    ಬಿಜೆಪಿ ಜತೆ ಮೈತ್ರಿಗೆ ಅನೇಕ ಶಾಸಕರ ವಿರೋಧವಿದೆ. ನನ್ನ ಜತೆ 12 ಶಾಸಕರು ಮಾತನಾಡಿದ್ದಾರೆ ಎಂದು ಇಬ್ರಾಹಿಂ ಹೇಳಿದ್ದರು. ಆದರೆ ಚಿಂತನ-ಮಂಥನ ಸಭೆಯಲ್ಲಿ ಪಕ್ಷದ ಹಾಲಿ ಶಾಸಕರು, ಮಾಜಿ ಸಚಿವರು, ಪ್ರಮುಖ ನಾಯಕರು ಯಾರೂ ಭಾಗವಹಿಸಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts