More

    ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರ ತಪ್ಪಿಲ್ಲ, ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆ

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರು ತಪ್ಪಿತಸ್ಥರಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

    2019ರ ಡಿ.19ರಂದು ನಡೆದಿದ್ದ ಗೋಲಿಬಾರ್ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸ್ವಾತಂತ್ರೃ ಹೋರಾಟಗಾರ ದಿ.ಎಚ್.ಎಸ್.ದೊರೆಸ್ವಾಮಿ ಮತ್ತಿತರರು ಸಲ್ಲಿಸಿರುವ ಪಿಐಎಲ್ ಅನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

    ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಮಂಗಳೂರು ಗೋಲಿಬಾರ್ ಪ್ರಕರಣ ಮ್ಯಾಜಿಸ್ಟ್ರೇಟ್ ತನಿಖೆ ಪೂರ್ಣಗೊಂಡಿದ್ದು, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿ ಯಾರೊಬ್ಬರೂ ತಪ್ಪಿತಸ್ಥರಲ್ಲ ಎಂದು ಹೇಳಲಾಗಿದ್ದು, ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಗಲಭೆಗೆ ಕಾರಣರಾದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ದೂರುಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ ಎಂದು ವಿವರಿಸಿದರು.

    ಅದನ್ನು ದಾಖಲಿಸಿಕೊಂಡ ಪೀಠ, ಮ್ಯಾಜಿಸ್ಟ್ರೇಟ್ ವರದಿ ಹಾಗೂ ದೂರುಗಳ ತನಿಖೆ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಈ ಹಿಂದೆ ಸರ್ಕಾರಕ್ಕೆ ನಿರ್ದೇಶಿಸಲಾಗಿತ್ತು. ಇದೀಗ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನ್ಯಾಯಾಲಯ ಲಕೋಟೆ ತೆರೆದು ವರದಿ ಪರಿಶೀಲಿಸಿದ ಬಳಿಕ ಅರ್ಜಿದಾರರ ಪರ ವಕೀಲರಿಗೂ ಪ್ರತಿ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.

    ಅರ್ಜಿದಾರರ ಆಕ್ಷೇಪ: ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಮ್ಯಾಜಿಸ್ಟ್ರೇಟ್ ತನಿಖೆ ಪೊಲೀಸರಿಂದ, ಪೊಲೀಸರಿಗಾಗಿ, ಪೊಲೀಸರಿಗೋಸ್ಕರ ಎಂಬಂತಿದೆ. ಘಟನೆ ಸಂಬಂಧ ಪೊಲೀಸರ ವಿರುದ್ಧ 10 ದೂರುಗಳು ದಾಖಲಾಗಿವೆ. ಆದರೆ, ಯಾವೊಂದು ಪ್ರಕರಣದಲ್ಲಿಯೂ ಎಫ್‌ಐಆರ್ ದಾಖಲಿಸಿಲ್ಲ, ತನಿಖೆ ನಡೆದಿಲ್ಲ. ಪೊಲೀಸರ ವಿರುದ್ಧ ದಾಖಲಾದ ದೂರುಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕಳೆದ ಜುಲೈನಲ್ಲಿ ಸರ್ಕಾರಕ್ಕೆ ಕೋರ್ಟ್ ನಿರ್ದೇಶಿಸಿದೆ. ಆದರೆ, ಈವರೆಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಕ್ಷೇಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts