More

    ‘ನಾಡಗೀತೆ’ ವಿವಾದಕ್ಕೆ ಕೊನೆಗೂ ಬಿತ್ತು ತೆರೆ ಮೈಸೂರು ಅನಂತಸ್ವಾಮಿ ಧಾಟಿಗೆ ಹೈ ಪುರಸ್ಕಾರ


    ಬೆಂಗಳೂರು :
    ಯಾವ ಧಾಟಿಯಲ್ಲಿ ನಾಡಗೀತೆ ಹಾಡಬೇಕೆಂಬ ಬಗ್ಗೆ ದಶಕಗಳಿಂದ ಮೂಡಿದ್ದ ಜಿಜ್ಞಾಸೆ, ವಿವಾದಗಳಿಗೆ ತೆರೆ ಎಳೆದಿರುವ ಹೈಕೋರ್ಟ್ ದಿ. ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯನ್ನೇ ಅಂತಿಮಗೊಳಿಸಿದೆ. ಜತೆಗೆ ನಿರ್ದಿಷ್ಟ ರಾಗ ಸೂಚಿಸಲು ಶಿಕ್ಷಣ ಕಾಯ್ದೆಯಡಿ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

    2 ನಿಮಿಷ 30 ಸೆಕೆಂಡ್ ಅವಧಿಯಲ್ಲಿ ನಾಡಗೀತೆ ಹಾಡುವುದನ್ನು ಅಂತಿಮಗೊಳಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪುರಸ್ಕರಿಸಿರುವ ನ್ಯಾಯಾಲಯ, ಆದೇಶದ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಕಾಯ್ದರಿಸಲಾಗಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಬುಧವಾರ ಪ್ರಕಟಿಸಿದೆ.

    ಈ ಪ್ರಕರಣ ಸಂಬಂಧ ನಾನು ವಿವಿಧ ರಾಜ್ಯಗಳ ನಾಡಗೀತೆ ಹಾಗೂ ದೇಶಗಳ ರಾಷ್ಟ್ರಗೀತೆಯ ಅಧ್ಯಯನ ಮಾಡಿದ್ದೇನೆ. ಒಂದೊಂದು ಭಾಗದಲ್ಲಿ ಒಂದೊಂದು ತೆರನಾಗಿ ರಾಷ್ಟ್ರಗೀತೆ ಹೇಳುವ ಕಾನೂನಿದೆ. ಜಪಾನ್‌ನಲ್ಲಿ ಬಾಯಿಮುಚ್ಚಿ ರಾಷ್ಟ್ರಗೀತೆ ಹೇಳುವಂತೆ ಕಾನೂನು ರೂಪಿಸಲಾಗಿದೆ ಎಂದು ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದರು. 1986ರಲ್ಲಿ ಸುಪ್ರೀಂಕೋರ್ಟ್ ಬಿಜೋ ಇಮ್ಯಾನುಯೆಲ್ ಮತ್ತು ಇತರರ ವಿರುದ್ಧ ಕೇರಳ ರಾಜ್ಯ ಪ್ರಕರಣದ ಕುರಿತಾಗಿ ಆದೇಶ ನೀಡಿತ್ತು. ಇದರಲ್ಲಿ ‘ರಾಷ್ಟ್ರಗೀತೆ ಹಾಡಬೇಕೆಂದಿಲ್ಲ, ಎದ್ದು ನಿಂತು ಗೌರವ ಸೂಚಿಸಿದರೆ ಸಾಕು’ ಎಂದು ಹೇಳಿತ್ತು. ಇದರ ಅನುಸಾರ ಗಾಯನದ ಹಕ್ಕು ವಾಕ್ ಸ್ವಾತಂತ್ರ್ಯ ಸಾರುತ್ತದೆ. ಅದು ಮೌನವನ್ನು ಒಳಗೊಂಡಿದೆ ಎಂದರು.

    ಕೋರ್ಟ್ ಹೇಳಿದ್ದೇನು?
    ಬಯಸಿದಲ್ಲಿ ಬಯಸಿದಂತೆ ನಾಡಗೀತೆ ಹೇಳುವ ಅಧಿಕಾರವಿದೆ. ಬೇಕಿದ್ದರೆ ಮರದ ರಂಬೆಯ ಮೇಲೆ ಕುಳಿತು ಹೇಳಿ. ಆದರೆ, ರಂಬೆ ಗಟ್ಟಿಯಾಗಿದೆಯೇ ಎಂದು ಪರಿಶೀಲಿಸಿ, ನೀವು ದಾರಿಯಲ್ಲಿ ಹೋಗುವಾಗ ಎಲ್ಲಿ ಬೇಕಾದರೂ ನಿಮಗೆ ಇಷ್ಟದ ರಾಗದಲ್ಲಿ ಹಾಡಬಹುದು. ಆದರೆ, ಶಾಲೆಯ ಮಕ್ಕಳಿಗೆ ಇದೇ ರೀತಿ ಹಾಡುವಂತೆ ಹೇಳಿರುವುದರಲ್ಲಿ ತಪ್ಪೇನಿಲ್ಲ. ಇದರಿಂದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನಲು ಸಾಧ್ಯವಿಲ್ಲ. ಕ್ರೀಡಾಕೂಟದ ವೇಳೆ ಹತ್ತಾರು ಶಾಲೆಯ ಮಕ್ಕಳು ಒಟ್ಟಾದಾಗ ಒಂದೊಂದು ರಾಗದಲ್ಲಿ ಹಾಡಿದಾಗ ಅದು ಆಭಾಸಕ್ಕೆ ದಾರಿ ಮಾಡಿಕೊಡಬಹುದು. ಸಂಗೀತ ಎಂದರೆ ಸಂಪೂರ್ಣ. ಕಾವ್ಯಗಳು ದೇವರಿಗೆ ಬಹಳ ಹತ್ತಿರವಾದದ್ದು. ಹೀಗಾಗಿ ಅದನ್ನು ಸರಿಯಾದ ರೀತಿ ಹಾಡಬೇಕಾಗಿರುವುದು ಮುಖ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

    ವಾದ ಒಪ್ಪುವುದಿಲ್ಲ
    ಕುವೆಂಪು ಬರೆದ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಹಾಡನ್ನು 1993ರಲ್ಲಿ ನಾಡಗೀತೆಯಾಗಿ ಅಂಗೀಕರಿಸಲಾಯಿತು. ಸರ್ಕಾರಕ್ಕೆ ನಾಡಗೀತೆಯನ್ನು ಇದೇ ರೀತಿಯಲ್ಲಿ ಹೇಳಲು ಆದೇಶಿಸುವ ಅಧಿಕಾರವಿಲ್ಲ ಎಂದು ಅರ್ಜಿದಾರರು ಹೇಳುತ್ತಾರೆ. ಆದರೆ, ಪೀಠ ಇದನ್ನು ಒಪ್ಪುವುದಿಲ್ಲ. 1983ರ ಶಿಕ್ಷಣ ಕಾಯ್ದೆಯಡಿ ಅವರಿಗೆ ಅಧಿಕಾರವಿದೆ. ಹೀಗಾಗಿ ಸರ್ಕಾರ ಯೋಚನೆ ಮಾಡದೆ ಈ ರೀತಿ ಆದೇಶ ಮಾಡಿದೆ ಎಂದು ಹೇಳಲಾಗದು. ಇದೆಲ್ಲವನ್ನು ಪರಿಗಣಿಸಿ, ಪರಿಶೀಲಿಸಿ ನಂತರ ಈ ತೀರ್ಪು ನೀಡಲಾಗಿದ್ದು, ಅದರ ಅನುಸಾರ ಅರ್ಜಿ ವಜಾಗೊಳಿಸಲಾಗಿದೆ ಎಂದು ಆದೇಶಿಸಿದೆ.


    ಅರ್ಜಿದಾರರದ್ದು ಸದ್ದುದ್ದೇಶ
    ಅರ್ಜಿದಾರ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಉತ್ತಮ ಗಾಯಕ. ಅವರು ಯಾವುದೇ ದುರ್ಭಾವನೆಯಿಂದ ಇಲ್ಲಿಗೆ ಬಂದಿಲ್ಲ. ಕಳೆದ ಬಾರಿ ಅವರು ಕಲಾಪದ ವೇಳೆ ನಾಡಗೀತೆ ಹಾಡಿದ್ದು ಪ್ರಶಂಸಾರ್ಹ. ಸುದೀರ್ಘ ವಿಚಾರಣೆಯ ಯಾವುದೇ ಹಂತದಲ್ಲೂ ಅವರು ನಾಡಗೀತೆಗೆ ಅಗೌರವ ತೋರುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.


    ಇಬ್ಬರದ್ದೂ ಮೇರು ವ್ಯಕ್ತಿತ್ವ
    ‘ನಾನು ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯನ್ನು ಕೇಳಿದ್ದೆ. ಜತೆಗೆ, ಸಿ.ಅಶ್ವತ್ಥ ಅವರ ಗಾಯನವನ್ನೂ ಕೇಳಿದ್ದೆ. ಯಾರಿಗೆ ಹೆಚ್ಚಿಗೆ ಅಂಕ ಕೊಡಬೇಕು ಎನ್ನುವುದು ಸಾಧ್ಯವೇ ಇಲ್ಲ. ಅವರನ್ನು ತೂಕ ಮಾಡಲಿಕ್ಕೆ ಹೋದರೆ ತಕ್ಕಡಿಯೇ ತುಂಡಾಗುವುದೋ ಏನೋ.. ಅಂತಹ ಮೇರು ವ್ಯಕ್ತಿತ್ವದವರು ಎಂದು ನ್ಯಾಯಮೂರ್ತಿಗಳು ಗೌರವ ವ್ಯಕ್ತಪಡಿಸಿದರು.


    ಮೇಲ್ಮನವಿ ಸಲ್ಲಿಸುತ್ತೇನೆ
    ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ, ಆದರೆ, ನನಗೆ ನ್ಯಾಯ ಸಿಗಲೇ ಇಲ್ಲ, ಬಹಳ ನಿರಾಶೆಯಾಗಿದೆ. ಅನಂತಸ್ವಾಮಿಯವರ ಪೂರ್ತಿ ಹಾಡಿನ ಧಾಟಿಯ ಪ್ರತಿ ಕೇಳಿದ್ದೆ. ಆದರೆ, ಅದನ್ನು ಸರ್ಕಾರ ಇಲ್ಲಿಯವರೆಗೂ ನೀಡಿಲ್ಲ. ಅನಂತಸ್ವಾಮಿಯವರು ಪೂರ್ತಿಯಾಗಿ ಹಾಡದೇ ಇದ್ದ ನಾಡಗೀತೆಯನ್ನು ಅವರು ಸಂಯೋಜಿಸಿರುವ ಧಾಟಿಯಲ್ಲಿ ಹಾಡಲು ಹೇಗೆ ಸಾಧ್ಯ? ತೀರ್ಪಿನ ಪ್ರತಿ ಲಭ್ಯವಾದ ಬಳಿಕ ಮೇಲ್ಮನವಿ ಸಲ್ಲಿಸುತ್ತೇನೆ. ಆಗಲಾದರೂ ನ್ಯಾಯ ಸಿಗಬಹುದು ಎನ್ನುವ ವಿಶ್ವಾಸ ನನ್ನದು.
    ಕಿಕ್ಕೇರಿ ಕೃಷ್ಣಮೂರ್ತಿ, ಅರ್ಜಿದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts