More

    ಮಹಾ ಸರ್ಕಾರದಲ್ಲಿ ಕಾಂಗ್ರೆಸ್​ ಎಂಎಲ್​ಎ ಪ್ರಣೀತಿ ಶಿಂಧೆಗೆ ದೊರೆಯದ ಸಚಿವ ಸ್ಥಾನ; ಸೋನಿಯಾ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದ ಯುವ ಘಟಕದ ಅಧ್ಯಕ್ಷ

    ಮುಂಬೈ: ಮಹಾರಾಷ್ಟ್ರ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಸಚಿವ ಸಂಪುಟ ನಿನ್ನೆಯಷ್ಟೇ ರಚನೆಯಾಗಿದೆ.

    ಆದರೆ ಈ ಸಚಿವ ಸಂಪುಟದಲ್ಲಿ ಕಾಂಗ್ರೆಸ್​ನಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾದ ಪ್ರಣೀತಿ ಶಿಂಧೆ ಅವರಿಗೆ ಸ್ಥಾನ ಸಿಗದ ಕಾರಣ ಕೆಲವು ಕಾರ್ಯಕರ್ತರು ತೀವ್ರವಾಗಿ ಕೆರಳಿದ್ದಾರೆ. ಅದರಲ್ಲೂ ಸೋಲಾಪುರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಪ್ರಣೀತಿ ಶಿಂಧೆ ಅವರು ಸೋಲಾಪುರ ಕ್ಷೇತ್ರದಿಂದ 2009ರಿಂದ ಸತತವಾಗಿ ಮೂರು ಬಾರಿ ಶಾಸಕಿಯಾಗಿ ಚುನಾಯಿತರಾಗಿದ್ದಾರೆ. ಇವರು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸುಶೀಲ್​ ಕುಮಾರ್ ಶಿಂಧೆ ಅವರ ಪುತ್ರಿ. ಮೂರು ಬಾರಿ ಶಾಸಕಿಯಾದ ಪ್ರಣೀತಿ ಅವರಿಗೆ ಈ ಬಾರಿ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂದೇ ಅವರ ಬೆಂಬಲಿಗರು ನಂಬಿಕೊಂಡಿದ್ದರು.

    ನಿನ್ನೆ ಉದ್ಧವ್​ ಠಾಕ್ರೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಆದರೆ ಪ್ರಣೀತಿ ಶಿಂಧೆ ಅವರಿಗೆ ಸ್ಥಾನ ಸಿಗದ ಕಾರಣ ಸೋಲಾಪುರ ಕ್ಷೇತ್ರದ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ.

    ಯುವ ಕಾಂಗ್ರೆಸ್ ಸೋಲಾಪುರ ಜಿಲ್ಲಾಧ್ಯಕ್ಷ ನಿತಿನ್​ ನಾಗ್ನೆ ಅವರು ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದು, ಪ್ರಣೀತಿ ಶಿಂಧೆ ಹಾಗೂ ಅವರ ತಂದೆ ಕಾಂಗ್ರೆಸ್​ಗಾಗಿ ನಿಷ್ಠೆಯಿಂದ ದುಡಿದಿದ್ದಾರೆ. ಆದರೆ ಪಕ್ಷ ಅವರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ಪ್ರಣೀತಿ ಶಿಂಧೆ ಅವರಿಗೆ ದೊಡ್ಡ ಜವಾಬ್ದಾರಿ ನೀಡಬೇಕು. ಈ ಮೂಲಕ ಸೋಲಾಪುರ ಕಾಂಗ್ರೆಸ್ ಕಾರ್ಯಕರ್ತರ ಪಡೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

    ಅಷ್ಟೇ ಅಲ್ಲದೆ ಸೋಲಾಪುರ ಕಾಂಗ್ರೆಸ್​ ಕಾರ್ಪೋರೇಟರ್​ ಫಿರ್ದೌಸ್ ಪಟೇಲ್ ಅವರು ಮಹಾರಾಷ್ಟ್ರ ಕಾಂಗ್ರೆಸ್​ ಮುಖ್ಯಸ್ಥ ಬಾಳಾಸಾಹೇಬ್​ ಥೋರಟ್ ಅವರಿಗೆ ಪತ್ರ ಬರೆದಿದ್ದು, ಪ್ರಣೀತಿ ಶಿಂಧೆ ಅವರಿಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ತಾವು ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts