More

    ಬೆಂಬಲ ಬೆಲೆ, ಖರೀದಿಗಿಲ್ಲ ಮಿತಿ; ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದ ಸರ್ಕಾರ

    ಬೆಂಗಳೂರು: ಭತ್ತ, ರಾಗಿ, ಬಿಳಿಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಲು ಹಾಕಿದ್ದ ಷರತ್ತು ಸಡಿಲಿಸುವ ಮೂಲಕ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಪ್ರಕಟಿಸಿದೆ. ಆದರೆ, ಬೆಂಬಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆಗಳ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಪರಿಶೀಲಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯ ಸಭೆ ಬುಧವಾರ ವಿಧಾನಸೌಧದಲ್ಲಿ ನಡೆಯಿತು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಹಾರ ಸಚಿವ ಉಮೇಶ ಕತ್ತಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ, ಸಹಕಾರ ಸಚಿವ ಎಸ್.ಟಿ ಸೋಮಶೇಖರ, ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭಾಗವಹಿಸಿದ್ದರು.

    ಖರೀದಿ ಕೇಂದ್ರದ ಮೂಲಕ ತುರ್ತು ಖರೀದಿಗೆ ಅನುವಾಗುವಂತೆ ಪೂರ್ವಸಿದ್ಧತೆಗೆ 25 ಕೋಟಿ ರೂ. ಬಳಸಿಕೊಳ್ಳಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ 1.10 ಲಕ್ಷ ಮೆಟ್ರಿಕ್ ಟನ್ ಭತ್ತ, 3 ಲಕ್ಷ ಟನ್ ರಾಗಿ ಮತ್ತು 4 ಸಾವಿರ ಮೆಟ್ರಿಕ್ ಟನ್ ಬಿಳಿಜೋಳ ಖರೀದಿಸಲು ಕೇಂದ್ರ ಅನುಮತಿ ನೀಡಿತ್ತು. ಈ ಪ್ರಮಾಣ ಹೆಚ್ಚಿಸಲು ಕೋರಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಈ ಸಾಲಿನಲ್ಲಿ ರೈತರಿಂದ 12.10 ಲಕ್ಷ ಮೆಟ್ರಿಕ್ ಟನ್ ಭತ್ತ, 4 ಲಕ್ಷ ಮೆಟ್ರಿಕ್ ಟನ್ ರಾಗಿ ಮತ್ತು 1 ಲಕ್ಷ ಮೆಟ್ರಿಕ್ ಟನ್ ಬಿಳಿಜೋಳ ಖರೀದಿಸಲು ಅನುಮತಿ ನೀಡಿದೆ. ಆ ಪ್ರಕಾರವೇ ಖರೀದಿಗೆ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರಧಾನ್ಯಗಳನ್ನು ರಾಜ್ಯ ಸರ್ಕಾರದಿಂದ ಖರೀದಿಸಿ ಕೇಂದ್ರ ಸರ್ಕಾರದ ಲೆಕ್ಕಕ್ಕೆ ತೆಗೆದುಕೊಂಡು ಸಾರ್ವಜನಿಕ ವಿತರಣಾ ಪದ್ಧತಿಯಡಿ ರಾಜ್ಯದಲ್ಲಿನ ಪಡಿತರ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ರೈತರಿಂದ ಗರಿಷ್ಠ ಪ್ರಮಾಣದಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿಸಲು ತೀರ್ವನಿಸಲಾಗಿದೆ.

    ಬೆಂಬಲ ಬೆಲೆ ಎಷ್ಟು?

    • ಭತ್ತ -ಸಾಮಾನ್ಯ-1868
    • ಭತ್ತ-ಗ್ರೇಡ್-ಎ-1888
    • ಬಿಳಿಜೋಳ- ಹೈಬ್ರಿಡ್-2620
    • ಬಿಳಿಜೋಳ-ಮಾಲ್ದಂಡಿ-2640
    • ರಾಗಿ-3295
    • ತೊಗರಿ-6000
    • ಶೇಂಗಾ-5275
    • ಕಡಲೆ-5100

    (ರೂ.ಗಳಲ್ಲಿ)

    ಪ್ರಮುಖ ನಿರ್ಧಾರಗಳು

    • ಈ ಹಿಂದೆ ಪ್ರತಿ ಎಕರೆಗೆ 25 ಕ್ವಿಂಟಾಲ್​ನಂತೆ, ಗರಿಷ್ಠ 75 ಕ್ವಿಂಟಾಲ್​ನಂತೆ ಭತ್ತ ಖರೀದಿ ನಿಗದಿಪಡಿಸ ಲಾಗಿತ್ತು. ಆ ನಿಬಂಧನೆ ಸಡಿಲಿಸಿ ಎಕರೆಗೆ 25 ಕ್ವಿಂಟಾಲ್ ಮಿತಿ ಮುಂದುವರಿಸಲಾಗಿದೆ. ಗರಿಷ್ಠ ಮಿತಿ ತೆಗೆದು ಹಾಕಲಾಗಿದೆ
    • ಪ್ರತಿ ಎಕರೆಗೆ 10 ಕ್ವಿಂಟಾಲ್​ನಂತೆ ರಾಗಿ, ಪ್ರತಿ ಎಕರೆಗೆ 15 ಕ್ವಿಂಟಾಲ್​ನಂತೆ ಬಿಳಿಜೋಳ ಖರೀದಿಸಲಿದ್ದು, ಗರಿಷ್ಠ ಮಿತಿ ತೆಗೆದು ಹಾಕಲಾಗಿದೆ
    • ತೊಗರಿಗೆ ಮಾರುಕಟ್ಟೆಯಲ್ಲಿ 6900 ರೂ.ವರೆಗೆ ವ್ಯಾಪಾರ ಆಗುತ್ತಿರುವುದರಿಂದ ಪ್ರೋತ್ಸಾಹಧನ ಘೋಷಿಸದಿರಲು ನಿರ್ಧಾರ
    • ರೈತ ನೋಂದಣಿ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಕಂಡುಬಂದಲ್ಲಿ ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳ ಸಿಬ್ಬಂದಿ ಬಳಸಿಕೊಳ್ಳಲು ಕ್ರಮ

    ತೊಗರಿಗಿಲ್ಲ ಪ್ರೋತ್ಸಾಹಧನ

    ಕೇಂದ್ರವು ಘೊಷಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ತೊಗರಿಗೆ 6 ಸಾವಿರ ರೂ.ನಂತೆ ಪ್ರತಿ ಎಕರೆಗೆ 7.5 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿಗೆ ಮಿತಿ ಹಾಕಲಾಗಿದೆ. ಹಾಗೆಯೇ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿ ಕಾಲಾವಧಿಯನ್ನು ಫೆ.28ರವರೆಗೆ ವಿಸ್ತರಿಸುವ ಆದೇಶಕ್ಕೆ ಸಂಪುಟ ಉಪ ಸಮಿತಿ ಅನುಮೋದನೆ ನೀಡಿದೆ. ರೈತರ ನೋಂದಣಿ ಕಾಲಾವಧಿಯನ್ನು ಫೆ.28ರವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ಮಾ.14ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

    ಫೆ.15ರಿಂದ ಕಡಲೆ ಖರೀದಿ

    ಹಿಂಗಾರು ಹಂಗಾಮಿನ ಕಡಲೆ ಉತ್ಪನ್ನವನ್ನು ಪ್ರತಿ ಕ್ವಿಂಟಾಲಿಗೆ 5100 ರೂ. ಬೆಂಬಲ ಬೆಲೆಯಂತೆ ಪಿಎಸ್​ಎಸ್ ಸ್ಕೀಮ್ಡಿ ಒಟ್ಟು 1,67,000 ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಅನುಮತಿ ನೀಡಿದ್ದು, ಆ ಪ್ರಕಾರ ಕಡಲೇಕಾಳು ಬೆಳೆಯುವ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಿ ಮೇ 14ರವರೆಗೂ ಖರೀದಿ ಪ್ರಕ್ರಿಯೆ ನಡೆಸಲು ಸಂಪುಟ ಉಪ ಸಮಿತಿ ನಿರ್ಧರಿಸಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಯಿತು. ರೈತರ ನೋಂದಣಿ ಕಾರ್ಯವನ್ನು ಫೆ.15ರಿಂದ ಏ.29ರವರೆಗೆ ಹಾಗೂ ಖರೀದಿಯನ್ನು ಫೆ.15ರಿಂದ ಮೇ14ರವರೆಗೆ ಕೈಗೊಳ್ಳುವುದು.

    ಶೇಂಗಾಗೆ ಕಾಲಾವಕಾಶ

    ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿಸಲು ಕಾಲಾವಧಿ ಮುಕ್ತಾಯವಾಗಿದ್ದು, ನೋಂದಾಯಿತ ರೈತರು ಖರೀದಿ ಸೌಲಭ್ಯ ಬಳಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಒಂದು ತಿಂಗಳ ಹೆಚ್ಚಿನ ಖರೀದಿ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts