More

    ಹಿರಿಯರಿಗೆ ಸಿಗದ ನ್ಯಾಯ!

    ಅವಿನ್ ಶೆಟ್ಟಿ ಉಡುಪಿ
    ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿ ರಚನೆಯಾಗಿ ಹಲವು ವರ್ಷ ಕಳೆದಿದ್ದರೂ ಈ ಬಗ್ಗೆ ಹೆಚ್ಚಿನ ಮಂದಿಗೆ ಅರಿವಿಲ್ಲ. ಮಂಡಳಿಯಲ್ಲಿ ಕನಿಷ್ಠ ಪ್ರಕರಣಗಳಿದ್ದರೂ ನ್ಯಾಯದಾನ ವಿಳಂಬ, ತೀರ್ಪು ಸಿಕ್ಕರೂ ಆದೇಶಕ್ಕೆ ಮನ್ನಣೆ ಇಲ್ಲದೆ ಸಾವನ್ನಪ್ಪುವ ಹಿರಿಯ ನಾಗರಿಕರು. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಈ ಸಮಸ್ಯೆ ಗಂಭೀರವಿದ್ದು, ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಅನುಷ್ಠಾನದಲ್ಲಿ ನ್ಯೂನತೆಗಳಿಂದ ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ.

    ಕಾಯ್ದೆ ಪ್ರಕಾರ ನ್ಯಾಯ ನಿರ್ವಹಣಾ ಮಂಡಳಿ 90 ದಿನಗಳಲ್ಲಿ ವಿಚಾರಣೆ ನಡೆಸಿ ನ್ಯಾಯ ನೀಡಬೇಕು. ಆದರೆ ವರ್ಷ ಕಳೆದರೂ ನ್ಯಾಯದಾನವಾಗದ ಪ್ರಕರಣಗಳಿವೆ. ಸಂಧಾನ ಸಭೆ ದಿನ ನಿಗದಿಗೊಳಿಸಿ ಸಮನ್ಸ್ ಕಳುಹಿಸಿದರೂ ಸಮನ್ಸ್ ಜಾರಿ ಆಗುವುದಿಲ್ಲ. ಇದರಿಂದ ಸಂಧಾನ ಪ್ರಕ್ರಿಯೆ ತಡವಾಗುತ್ತಿದೆ. ನ್ಯಾಯ ಮಂಡಳಿ ಆದೇಶ ಆಧಾರದಲ್ಲಿ ಹಿರಿಯ ನಾಗರಿಕರಿಗೆ ನ್ಯಾಯ ಸಿಗುವ ಮೊದಲೇ ಎದುರು ಪಾರ್ಟಿಯವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವ ಮೂಲಕ ಜಿಲ್ಲಾ ನ್ಯಾಯ ನಿರ್ವಹಣಾ ಮಂಡಳಿ ಆದೇಶಗಳನ್ನೇ ನಿಷ್ಪ್ರಯೋಜಕ ಮಾಡಿರುವ ಹಲವು ಪ್ರಕರಣಗಳಿವೆ.
    ಆದೇಶ ಬಂದರೂ ಕಾರ್ಯರೂಪಕ್ಕೆ ತರಲು ಅನುಷ್ಠಾನಾಧಿಕಾರಿಗಳು ಪ್ರಯತ್ನಿಸುತ್ತಿಲ್ಲ. ಪರಿಣಾಮ ನ್ಯಾಯ ಮಂಡಳಿಗೆ ದೂರು ನೀಡಿ ತೀರ್ಪು ಸಿಕ್ಕರೂ ಸಮರ್ಪಕ ಸಹಕಾರ ದೊರೆಯದೆ ಜಿಲ್ಲೆಯಲ್ಲಿ 7 ಹಿರಿಯರು ಮೃತಪಟ್ಟಿದ್ದಾರೆ. ಕಾಯ್ದೆ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಸಮಿತಿ ರಚನೆಯಾದ ಮಾಹಿತಿ ನೀಡಿಲ್ಲ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಸಮಾಧಾನ ವ್ಯಕ್ತಪಡಿಸಿದೆ.

    ಏನಿದು ಹಿರಿಯ ನಾಗರಿಕರ ನ್ಯಾಯ ಮಂಡಳಿ?: 2007ರಲ್ಲಿ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಂತೆ ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿ ಜಾರಿಗೆ ಬಂದಿತ್ತು. ಈ ಹಿಂದೆ ಹಿರಿಯ ನಾಗರಿಕರು ತಮಗೆ ಸಮಸ್ಯೆಯಾದಾಗ ಪರಿಹಾರ ಪಡೆಯಲು ಸಿವಿಲ್ ಕೋರ್ಟ್‌ಗೆ ಅಹವಾಲು ಸಲ್ಲಿಸಬೇಕಿತ್ತು. ಈ ಕಾಯ್ದೆ ಜಾರಿ ನಂತರ ಸಿವಿಲ್ ಕೋರ್ಟ್‌ಗಿದ್ದ ಅಧಿಕಾರವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾಧಿಕಾರಿಯಿಂದ ಅದು ಉಪ ವಿಭಾಗ ಅಧಿಕಾರಿಗೆ ವರ್ಗಾವಣೆಗೊಂಡಿತು. ಪ್ರತೀ ಜಿಲ್ಲೆಯಲ್ಲಿ ಮಂಡಳಿಗೆ ಎಸಿ ಅಧ್ಯಕ್ಷರು. ಈ ಮಂಡಳಿ 2007-08ರಲ್ಲೇ ರಚನೆ ಆಗಬೇಕಿತ್ತು. ಆದರೆ ಆಡಳಿತ ವ್ಯವಸ್ಥೆ ನಿರ್ಲಕ್ಷೃದಿಂದಾಗಿ ರಾಜ್ಯದಲ್ಲಿ ಮಂಡಳಿ ರಚನೆ ಆಗಿದ್ದು 2013ರಲ್ಲಿ. ಜಿಲ್ಲೆಯಲ್ಲಿ ಮಂಡಳಿಗೆ 2014-15ರಿಂದ 2019-20ವರೆಗೆ 160 ದೂರು ಬಂದಿದ್ದು, ಇದರಲ್ಲಿ 108 ವಿಲೇವಾರಿಯಾಗಿದೆ. 52 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆ. ಶೇ.90ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಹಿರಿಯ ನಾಗರಿಕರಿಗೆ ತಮ್ಮ ಮಕ್ಕಳೇ ಎದುರು ಪಾರ್ಟಿ!

    ಮಂಡಳಿಯ ಮಾಹಿತಿಯೇ ಇಲ್ಲ: ಹಣ, ಆಸ್ತಿ, ಮನೆ ವಿಚಾರಕ್ಕೆ ಸಂಬಂಧಿಸಿ ಹಿರಿಯರನ್ನು ಮಕ್ಕಳು ಮನೆಯಿಂದ ಹೊರಹಾಕುವುದು. ಗಲಾಟೆ ಮಾಡುವುದು, ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ನಿರ್ವಹಣೆಗೆ ಹಣ ನೀಡದಿರುವುದು, ಚೆನ್ನಾಗಿ ನೋಡಿಕೊಳ್ಳದೆ ತಿಂಗಳ ಖರ್ಚಿಗೆ ಮಾಸಾಶನ ನೀಡದಿರುವುದು, ಇಂಥ ವಿಚಾರಕ್ಕೆ ಸಂಬಂಧಿಸಿ ಹಿರಿಯ ನಾಗರಿಕರು ಮಂಡಳಿಯಿಂದ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಮಂಡಳಿ ರಚನೆಯಾಗಿ ಹಲವು ವರ್ಷಗಳೇ ಕಳೆದರೂ, ಮಂಡಳಿ ಬಗ್ಗೆ ಹೆಚ್ಚಿನ ಹಿರಿಯರಿಗೆ ತಿಳಿದಿಲ್ಲ. ಸರ್ಕಾರದ ಮಟ್ಟದಲ್ಲಿ ಕನಿಷ್ಠ ಅರಿವು ಮೂಡಿಸುವ ಕೆಲಸವೂ ಆಗಿಲ್ಲ.

    ನ್ಯಾಯ ಸಿಗುವ ಮೊದಲೇ..!
    ನ್ಯಾಯ ನಿರ್ವಹಣಾ ಮಂಡಳಿಯಲ್ಲಿ ತೀರ್ಪು ಸಿಕ್ಕರೂ, ಜೀವಿತಾವಧಿಯಲ್ಲಿ ನ್ಯಾಯ ಸಿಗದ ಪ್ರಕರಣಗಳು ಉಡುಪಿಯಂಥ ಪ್ರಜ್ಞಾವಂತ ಜಿಲ್ಲೆಯಲ್ಲಿ ನಡೆದಿರುವುದು ಕಳವಳಕಾರಿ. ಮಾನವ ಹಕ್ಕು ಪ್ರತಿಷ್ಠಾನ ಮೂಲಕ ತಮಗೆ ನ್ಯಾಯ ಕೋರಿ ಮಂಡಳಿಗೆ ದೂರು ನೀಡಿದ್ದ ಏಳೆಂಟು ಮಂದಿ ಹಿರಿಯರು ವಯಸ್ಸಾಗಿ, ಇತರೆ ವಯೋಸಹಜ ಅನಾರೋಗ್ಯದಿಂದ, ಅತಿಯಾದ ಚಿಂತೆಯಿಂದ ಮೃತಪಟ್ಟಿದ್ದಾರೆ. ಆಸ್ತಿ ಮತ್ತು ಠೇವಣಿ ಹಣಕ್ಕೆ ಸಂಬಂಧಿಸಿದ ಪ್ರಕರಣ ಜಿಲ್ಲೆಯ ಶಾಂತಿ ತೋಳಾರ್(80), ಜಾಗದ ಸಮಸ್ಯೆ ಪ್ರಕರಣ ಗೋಪಾಲಕೃಷ್ಣ ಜಿ.ಪೈ, ನಂತರ ಅವರ ಪತ್ನಿ ಇಂದಿರ ಪೈ ಹೋರಾಟ ಮುಂದುವರಿಸಿದರೂ, ನ್ಯಾಯ ಸಿಗುವ ಮೊದಲೇ ನಿಧನರಾದರು. ಮನೆ, ಆಸ್ತಿ ವಿಚಾರದಲ್ಲಿ ಗೌರಮ್ಮ(76), ಪ್ರಕರಣ ತನಿಖೆ ಆಗುವ ಮೊದಲೇ 3-4 ತಿಂಗಳು ಅಲೆದಾಡಿದ ಕಮಲ ಪೂಜಾರಿ(82), ವನಜ ಪೈ (76) ಕೊನೆಗೂ ನ್ಯಾಯ ಸಿಗದೇ ನಿಧನರಾದವರು.

    ಹಲವು ಹಿರಿಯ ನಾಗರಿಕರು ನಮ್ಮ ಪ್ರತಿಷ್ಠಾನಕ್ಕೆ ಬಂದು ಮಾರ್ಗದರ್ಶನ ಕೇಳುತ್ತಾರೆ. ಅವರಿಂದ ತಿಳಿದು ಬಂದ ಮಾಹಿತಿ ಪ್ರಕಾರ ಮಂಡಳಿಯಿಂದ ಅನೇಕ ತಿಂಗಳವರೆಗೆ ಆದೇಶ ಸಿಗುತ್ತಿಲ್ಲ. ಒಂದು ವೇಳೆ ಆದೇಶ ಸಿಕ್ಕಿದರೂ ಅನುಷ್ಠಾನಕ್ಕಾಗಿ ವಿವಿಧ ಕಚೇರಿಗಳನ್ನು ಸುತ್ತಾಡುವುದು ಹಿರಿಯರಿಗೆ ಕಷ್ಟವಾಗುತ್ತಿದೆ. ಈ ನಡುವೆ ತೀರ್ಪು ಸಿಕ್ಕರೂ ನ್ಯಾಯ ಸಿಗುವ ಮೊದಲೇ ಕೆಲವು ಹಿರಿಯರು ಮೃತಪಟ್ಟಿದ್ದಾರೆ. ಇದರಿಂದಾಗಿ ಹಿರಿಯರು ನ್ಯಾಯವಂಚಿತರಾಗುತ್ತಿದ್ದಾರೆ.
    – ಡಾ.ರವೀಂದ್ರನಾಥ್ ಶ್ಯಾನುಭಾಗ್  ಅಧ್ಯಕ್ಷ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ

    ದ.ಕ.ದಲ್ಲಿ 149 ದೂರು ದಾಖಲು: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿ 2007ರಿಂದ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ದ.ಕ.ಉಪವಿಭಾಗಾಧಿಕಾರಿ ಮತ್ತು ಪುತ್ತೂರು ಉಪವಿಭಾಗಾಧಿಕಾರಿ ಮಂಡಳಿ ಅಧ್ಯಕ್ಷರು. 2019-20ರವರಗೆ ಮಂಗಳೂರು ಉಪವಿಭಾಗದಲ್ಲಿ 69 ಅರ್ಜಿಗಳು ಸಲ್ಲಿಕೆಯಾಗಿದ್ದು, 59 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 10 ಪ್ರಕಣಗಳು ಬಾಕಿ ಇವೆ. 11 ಪ್ರಕರಣಗಳು ಮುಂದಿನ ಹಂತವಾಗಿ ಜಿಲ್ಲಾಧಿಕಾರಿ ಕೋರ್ಟ್‌ಗೆ ಹೋಗಿದ್ದು, ಇವುಗಳಲ್ಲಿ 8 ಪ್ರಕರಣ ಇತ್ಯರ್ಥವಾಗಿದೆ. 3 ದೂರುಗಳು ಬಾಕಿ ಇವೆ. ಪುತ್ತೂರು ಉಪವಿಭಾಗದಲ್ಲಿ 80 ದೂರುಗಳು ದಾಖಲಾಗಿ 73 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 7 ಪ್ರಕರಣ ಇನ್ನೂ ಬಾಕಿ ಇದೆ. ಇಲ್ಲಿಂದಲೂ 5 ಡಿಸಿ ಕೋರ್ಟ್‌ಗೆ ಹೋಗಿದ್ದು, 2 ವಿಲೇವಾರಿ ಆಗಿದೆ. 3 ದೂರುಗಳ ವಿಚಾರಣೆ ಬಾಕಿ ಇದೆ ಎಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಯಮುನಾ ಹರೀಶ್ ವಿಜಯವಾಣಿಗೆ ತಿಳಿಸಿದ್ದಾರೆ.

    ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಅನುಷ್ಠಾನಕ್ಕಾಗಿ ಜಿಲ್ಲಾಮಟ್ಟದ ಸಮಿತಿ ರಚನೆ ಆಗಿದೆ. ಹಿರಿಯ ನಾಗರಿಕರ ಸಮಸ್ಯೆ ಪರಿಹಾರಕ್ಕಾಗಿ ಬೇಕಾದ ವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸುತ್ತಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿ ಇರುವುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಜಾಗೃತಿ ಮೂಡಿಸಲಿದೆ.
    – ಜಿ.ಜಗದೀಶ್ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts