More

    ಗೇಟ್ ಇಲ್ಲದ ರೈಲ್ವೆ ಕ್ರಾಸಿಂಗ್!

    ಪ್ರಕಾಶ್ ಮಂಜೇಶ್ವರ ಮಂಗಳೂರು

    ವಿಮಾನವನ್ನು ಹೋಲುವ ಮತ್ತು ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಂಚರಿಸುವ ಬುಲೆಟ್ ರೈಲುಗಳನ್ನು ಆರಂಭಿಸಲು ಭಾರತ ಹೊರಟಿರುವ ಹೊತ್ತಿನಲ್ಲೂ ಮಂಗಳೂರು ಅಡ್ಯಾರ್‌ಕಟ್ಟೆಯಲ್ಲಿ ಗೇಟೇ ಇಲ್ಲದ ಕ್ರಾಸಿಂಗ್ ಪ್ರದೇಶ ಇದೆ ಅಂದರೆ ಯಾರಿಗಾದರೂ ಅಚ್ಚರಿಯಾಗಬಹುದು!

    ಅಡ್ಯಾರ್ ಕಟ್ಟೆಯಿಂದ ಅಡ್ಯಾರ್ ಪದವು ಕಡೆಗೆ ಸಾಗುವ ಮಾರ್ಗದಲ್ಲಿ ಈ ಅಪಾಯಕಾರಿ ಕ್ರಾಸಿಂಗ್ ಪ್ರದೇಶ ಕಾಣ ಸಿಗುತ್ತದೆ. ಈ ಮಾರ್ಗವನ್ನು ಹಾದುಹೋಗುವ ಸಂದರ್ಭ ರೈಲ್ವೆ ನೌಕರರೊಬ್ಬರು ಇಲ್ಲಿ ರಸ್ತೆ ನಡುವೆ ನಿಂತು ಜನರು ಮತ್ತು ವಾಹನಗಳು ರೈಲ್ವೆ ಹಳಿ ದಾಟದಂತೆ ನೋಡಿಕೊಳ್ಳುತ್ತಾರೆ. ಇಂತಹ ವ್ಯವಸ್ಥೆ ಎಲ್ಲ ಸಂದರ್ಭಗಳಲ್ಲಿ ಸುರಕ್ಷಿತ ಎನ್ನುವಂತಿಲ್ಲ. ಕೆಲವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಅಪಘಾತವೊಂದು ಸಂಭವಿಸಿ ಒಬ್ಬರು ಮೃತಪಟ್ಟಿದ್ದರು.

    ಈ ಪ್ರದೇಶದಲ್ಲಿ ರೈಲು ಹಳಿ ಮತ್ತು ನಡುವೆ ಹಾದುಹೋಗುವ ಸಾಮಾನ್ಯ ಮಾರ್ಗ ಎರಡು ಕೂಡ ನೇರವಾಗಿಲ್ಲ. ತಿರುವಿನಿಂದ ಕೂಡಿದೆ. ಅಲ್ಲದೆ ಆಸುಪಾಸಿನಲ್ಲಿ ಮರ, ಗಿಡ, ಬಳ್ಳಿಗಳು ಇದ್ದು ರೈಲುಗಳು ಬರುತ್ತಿರುವುದು ದೂರದಿಂದಲೇ ಗೋಚರಿಸುವುದು ಅಸಾಧ್ಯ. ಬಹುಶಃ ಇಂತಹ ಅಪಾಯಕಾರಿ ಕ್ರಾಸಿಂಗ್ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣ ಆಸುಪಾಸಿನಲ್ಲಿ ಎಲ್ಲೂ ಇಲ್ಲ.

    ರೈಲು ದಟ್ಟಣೆಯ ಹಳಿ: ಈ ಪ್ರದೇಶ ರಾತ್ರಿ-ಹಗಲು ನಿರಂತರ ರೈಲುಗಳು ಸಂಚರಿಸುತ್ತಿರುವ ನೈರುತ್ಯ ರೈಲ್ವೆ ವ್ಯಾಪ್ತಿಗೆ ಸೇರಿದೆ. ಮಂಗಳೂರು ಸೆಂಟ್ರಲ್ ಮತ್ತು ಪಡೀಲ್ ನಿಲ್ದಾಣಗಳ ನಡುವೆ ಇದೆ. ದಿನಂಪ್ರತಿ ನಾಲ್ಕು ಬಾರಿ ಸಂಚರಿಸುವ ಪುತ್ತೂರು ಪ್ಯಾಸೆಂಜರ್, ದಿನಂಪ್ರತಿ ಸಂಚರಿಸುವ ಮಂಗಳೂರು ಜಂಕ್ಷನ್-ವಿಜಯಪುರ ರೈಲು, ವಾರದಲ್ಲಿ ಮೂರು ದಿನ ಮೈಸೂರು ಮಾರ್ಗ ಸಂಚರಿಸುವ ಮಂಗಳೂರು-ಬೆಂಗಳೂರು ರೈಲು, ವಾರದಲ್ಲಿ ಎಲ್ಲ ದಿನ ಸಂಚರಿಸುವ ಮಂಗಳೂರು-ಬೆಂಗಳೂರು ರಾತ್ರಿ ರೈಲು, ಹಗಲು ರೈಲು, ಕಾರವಾರ- ಬೆಂಗಳೂರು ರೈಲು, ಗೂಡ್ಸ್‌ಗಳ ಸಹಿತ ವಿವಿಧ ರೈಲುಗಳು ಇಡೀ ದಿನ ರಾತ್ರಿ-ಹಗಲು ಈ ಮಾರ್ಗದಲ್ಲಿ ಸಂಚರಿಸುತ್ತಿರುತ್ತವೆ.

    ಜನರ ಬಳಕೆಯೂ ಹೆಚ್ಚು: ಅಡ್ಯಾರ್ ಕಟ್ಟೆಯ ಈ ರೈಲ್ವೆ ಕ್ರಾಸಿಂಗ್‌ಅನ್ನು ದಿನನಿತ್ಯ ಸಾವಿರಾರು ಜನ ಬಳಸುತ್ತಿದ್ದಾರೆ. ಈ ಮಾರ್ಗದಲ್ಲಿ ಬಸ್‌ಗಳು ಸಂಚರಿಸುತ್ತಿದ್ದು, ಸ್ವಂತ ವಾಹನಗಳನ್ನು ಬಳಸುವವರು ಕೂಡ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಅಡ್ಯಾರ್‌ಕಟ್ಟೆಯಿಂದ ಪದವು ತಲುಪಲು ಈ ಮಾರ್ಗದಲ್ಲಿ ಕೇವಲ ಅರ್ಧ ಕಿ.ಮೀ. ದಾರಿ. ಬೇರೆ ಮಾರ್ಗದಲ್ಲಿ ಸುತ್ತು ಬಳಸಿ ಸುಮಾರು 3.5 ಕಿ.ಮೀ. ಅಧಿಕ ಪ್ರಯಾಣಿಸಬೇಕು.

    ಅಂಡರ್‌ಪಾಸ್ ಪ್ರಸ್ತಾವ: ಈ ಹಿಂದೆ ಮಂಗಳೂರಿನಲ್ಲಿ ಸ್ಥಳೀಯ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಡ್ಯಾರ್‌ಕಟ್ಟೆಯಲ್ಲಿ ರೈಲು ಹಳಿ ಮತ್ತು ಬಸ್ ಮಾರ್ಗ ಸಂಧಿಸುವ ಕಡೆ ಅಂಡರ್‌ಪಾಸ್ ರಚಿಸುವ ಕುರಿತು ಚರ್ಚೆಯಾಗಿತ್ತು. ಈ ಸಭೆಯಲ್ಲಿ ವಿಭಾಗೀಯ ರೈಲ್ವೆ ಪ್ರಬಂಧಕರು ಭಾಗವಹಿಸಿದ್ದರು. ಮಹಾನಗರ ಪಾಲಿಕೆಯವರು ರೈಲ್ವೆ ಅನುಮತಿ ಪಡೆದು ಯೋಜನೆಯ ವೆಚ್ಚ ಪಾವತಿಸಿದರೆ ಅಂಡರ್‌ಪಾಸ್ ರಚಿಸುವ ಕುರಿತು ಚರ್ಚೆಯಾಗಿತ್ತು. ಬಳಿಕ ಯೋಜನೆ ಅನುಷ್ಠಾನ ಹಂತ ತಲುಪಿಲ್ಲ.

    ಸದ್ಯ ರೈಲುಗಳು ಈ ಮಾರ್ಗದಲ್ಲಿ ಸಾಗುವಾಗ ಇಲಾಖೆ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ನಿಂತು ಎಚ್ಚರಿಕೆ ವಹಿಸುತ್ತಾರೆ. ಈ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನೊಂದು ರೈಲು ಗೇಟ್ ಇರುವ ಕಾರಣ ಇಲ್ಲಿ ಇನ್ನೊಂದು ಗೇಟ್ ನಿರ್ಮಿಸಲು ಅವಕಾಶವಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ರೈಲ್ವೆ ಅಂಡರ್ ಪಾಸ್ ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

    ಸುಧೀರ್ ಶೆಟ್ಟಿ ಕಣ್ಣೂರು, ಸದಸ್ಯ, ಮಂಗಳೂರು ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts