More

    ಉಚಿತ ಊಟ ಇನ್ನು ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲ್ಲ- ಅಂಥದ್ದೇನಾಯಿತು?

    ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಕಂಗೆಟ್ಟಿದ್ದ ನಿರಾಶ್ರಿತರು, ಬಡವರು ಹಾಗೂ ಕೂಲಿ ಕಾರ್ವಿುಕರಿಗೆ ನೆರವಾಗಲು ಸರ್ಕಾರ ಇಂದಿರಾ ಕ್ಯಾಂಟೀನ್​ಗಳ ಮೂಲಕ ನೀಡುತ್ತಿದ್ದ ಉಚಿತ ಊಟ ಮತ್ತು ಉಪಾಹಾರ ರದ್ದುಗೊಳಿಸಿ, ಮೊದಲಿನ ದರ ವಿಧಿಸುವಂತೆ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

    ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಲಾಕ್​ಡೌನ್ ತುರ್ತು ಪರಿಸ್ಥಿತಿ ವಿಧಿಸಿರುವ ಕಾರಣ ಎಲ್ಲ ಹೋಟೆಲ್, ದರ್ಶಿನಿ, ಕ್ಯಾಂಟೀನ್, ಖಾನಾವಳಿ, ಬೀದಿಬದಿ ವ್ಯಾಪಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ನಿರ್ಗತಿಕರು, ಬಡವರಿಗೆ ಊಟಕ್ಕೆ ತೊಂದರೆ ಆಗದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾ.23 ರಂದು ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟ ನೀಡುವಂತೆ ಆದೇಶಿಸಿದ್ದರು.

    ಬೆಂಗಳೂರು ಸೇರಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಆಹಾರ ವಿತರಣೆಯಲ್ಲಿ ರಾಜಕೀಯ ನಡೆಸುವ ಮೂಲಕ ಕೆಲವು ಜನರಿಗೆ ಮಾತ್ರ ಊಟ ನೀಡಲಾಗುತ್ತಿದೆ ಎಂಬ ದೂರುಗಳು ಬಂದ ಕಾರಣ ನಗರಾಭಿವೃದ್ಧಿ ಇಲಾಖೆ ಮಾ.23ರಂದು ಹೊರಡಿಸಿದ ಉಚಿತ ಆಹಾರ ವಿತರಣೆ ಆದೇಶವನ್ನು ಹಿಂಪಡೆದಿದೆ.

    ಮೊದಲಿನ ದರದಲ್ಲಿ ಊಟ: ಆದೇಶದ ಅನ್ವಯ ಶನಿವಾರದಿಂದ ಬೆಂಗಳೂರು ನಗರ ಸೇರಿ ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಬೆಳಗ್ಗಿನ ಉಪಹಾರಕ್ಕೆ 5 ರೂ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾಗೆ 10 ರೂ. ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಾಲಿಕೆ ಆಯುಕ್ತರಿಗೆ ಮುಖ್ಯಮಂತ್ರಿ ತರಾಟೆ: ಇಂದಿರಾ ಕ್ಯಾಂಟೀನ್ ಉಚಿತ ಆಹಾರ ವಿತರಣೆಯಲ್ಲಿ ಅವ್ಯವಹಾರ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಯಡಿಯೂರಪ್ಪ ಸಭೆ ನಡೆಸಿದ್ದಾರೆ. ಈ ವೇಳೆ ನಗರದ ಇಂದಿರಾ ಕ್ಯಾಂಟೀನ್​ನಿಂದ ಉಚಿತವಾಗಿ ನಿರಾಶ್ರಿತರು, ಬಡವರು ಹಾಗೂ ಕೂಲಿ ಕಾರ್ವಿುಕರಿಗೆ ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿಲ್ಲ. ನಿಜವಾದ ಫಲಾನುಭವಿಗಳಿಗೆ ಕ್ಯಾಂಟೀನ್ ಊಟ ಸಿಗುತ್ತಿಲ್ಲ. ಜತೆಗೆ ಅವ್ಯವಹಾರ ದೂರುಗಳು ಕೇಳಿಬಂದಿದೆ. ಇದೇ ರೀತಿ ದೂರುಗಳು ಮುಂದುವರಿದರೆ ನೀವೇ ಹೊಣೆಯಾಗುತ್ತೀರಿ ಎಂದು ಬಿಬಿಎಂಪಿ ಆಯುಕ್ತರಿಗೆ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.

    ಆಯುಕ್ತರು ಹೇಳಿದ್ರೂ ವಾಹನ ಕೊಡ್ತಿಲ್ಲ!: ಕರೊನಾ ರೋಗಿಗಳ ಸೇವೆಗೆ ವಾಹನಗಳ ಸಮಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts