More

    ಬಂದರಿನಲ್ಲಿ ಮೀನು ಮಾರಾಟ ನಿಷೇಧ

    ಮಂಗಳೂರು: ಮೀನುಗಾರಿಕಾ ಬಂದರಿನಲ್ಲಿ ಚಿಲ್ಲರೆ ಮೀನು ಮಾರಾಟ, ಸಾರ್ವಜನಿಕರು ಮೀನು ಖರೀದಿ ನಿಷೇಧಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶಿಸಿದ್ದಾರೆ.

    ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಶಾಸಕ ವೇದವ್ಯಾಸ ಕಾಮತ್ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಜತೆ ಹಳೆ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮೀನುಗಾರಿಕಾ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ದೈಹಿಕ ಅಂತರ ಕಾಯ್ದುಕೊಳ್ಳದೆ ಮೀನು ಖರೀದಿಗೆ ಜನಜಂಗುಳಿ ಕಂಡುಬರುತ್ತಿದೆ. ಇದರಿಂದ ಸೋಂಕು ಹರಡುವ ಸಾಧ್ಯತೆಯಿದ್ದು, ಸಾರ್ವಜಿನಿಕರು ಮೀನುಗಾರಿಕಾ ಬಂದರಿನಲ್ಲಿ ಮೀನು ಖರೀದಿಸುವಂತಿಲ್ಲ. ನಿಯಮ ಉಲ್ಲಂಘನೆ ಮಾಡುವವರಿಂದ ದಂಡ ವಸೂಲಿ ಮಾಡಲಾಗುವುದು ಎಂದರು.

    ಸಾರ್ವಜನಿಕರು ಸ್ಥಳೀಯ ಮಾರುಕಟ್ಟೆಗಳಲ್ಲಿ ಮೀನು ಖರೀದಿಸಬಹುದು. ಸ್ಥಳೀಯ ಮಾರುಕಟ್ಟೆಯಲ್ಲೇ ಮೀನು ಕಟ್ಟಿಂಗ್ ಮತ್ತು ಶುಚಿಗೊಳಿಸುವುದು ಅವಶ್ಯ. ಮೀನುಗಾರಿಕಾ ಬಂದರಿನ ಒಳಗೆ ಹೊರ ರಾಜ್ಯದಿಂದ ಮೀನು ಬರುವ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರವನ್ನು ನಿಷೇಧಿಸಲಾಗಿದೆ. ಬಂದರಿನಲ್ಲಿ ಸಾರ್ವಜನಿಕರ ಅನವಶ್ಯ ಓಡಾಟ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿ ಲ್ಲಂಘನೆಯ ಕುರಿತು ಅಧಿಕಾರಿಗಳು ವೀಡಿಯೋ-ಚಿತ್ರಗಳನ್ನು ಸಂಗ್ರಹಿಸಬೇಕು. ಬಂದರಿನಲ್ಲಿ ಹೆಚ್ಚಿನ ಹೋಮ್‌ಗಾರ್ಡ್ಸ್ ಹಾಗೂ ಪೊಲೀಸರನ್ನು ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
    ಉಲ್ಲಂಘನೆ ಕ್ರಮದ ಬಗ್ಗೆ ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಹಾಗೂ ಮೀನು ಮಾರಾಟಗಾರರಿಗೆ ಮಾಹಿತಿ ನೀಡಬೇಕು ಎಂದು ಶಾಸಕ ವೇದವ್ಯಾಸ್‌ಕಾಮತ್ ತಿಳಿಸಿದರು.

    ನಿರ್ಬಂಧ ಉಲ್ಲಂಘಿಸಿದರೆ ಜೈಲು ಶಿಕ್ಷೆ: ಮೀನುಗಾರಿಕಾ ಬಂದರಿನಲ್ಲಿ ಸಾರ್ವಜನಿಕರ ಅನಗತ್ಯವಾಗಿ ಓಡಾಟ, ಮೀನು ಚಿಲ್ಲರೆ ವ್ಯಾಪಾರ, ಮೀನು ಖರೀದಿ, ಕತ್ತರಿಸುವಿಕೆ ಹಾಗೂ ಶುಚಿಗೊಳಿಸುವಿಕೆ ನಿಷೇಧಿಸಿದ ಹಿನ್ನೆಲೆಯಲ್ಲಿ ಆದೇಶ ಉಲ್ಲಂಘಿಸುವವರಿಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ. ಆದೇಶ ಪಾಲಿಸದೆ ಜೀವಹಾನಿ ಇಲ್ಲವೇ ಅಪಾಯಕ್ಕೆ ದೂಡಿದರೆ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಕರ್ನಾಟಕ ಸಾಂಕ್ರಾಮಿಕ ರೋಗ ಅಧಿನಯಮದಡಿ 5 ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಮತ್ತು 50 ಸಾವಿರ ರೂ.ಗಳಿಂದ 2 ಲಕ್ಷ ರೂ.ವರೆಗೆದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts