More

    ಕರಾವಳಿಯಲ್ಲಿ ಇಳಿಯುತ್ತಿದೆ ‘ಎಣ್ಣೆ’ ಕಿಕ್:  ಲಾಕ್‌ಡೌನ್ ಬಳಿಕ ಮದ್ಯ ಮಾರಾಟ ಕುಸಿತ, ಬಿಯರ್ ಶೇ.40 ಕಡಿಮೆ

    ಹರೀಶ್ ಮೋಟುಕಾನ ಮಂಗಳೂರು
    ಕರೊನಾ ಆರಂಭವಾದ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಕಡಿಮೆಯಾಗಿದೆ. ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭ ಜಾರಿಯಾದ ಲಾಕ್‌ಡೌನ್ ಬಳಿಕ ಇದು ಚೇತರಿಕೆ ಕಂಡಿಲ್ಲ. ಬಿಯರ್ ಮಾರಾಟ ಶೇ.40ರಷ್ಟು ಕಡಿಮೆಯಾಗಿದೆ.

    ಈ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 6 ಗಂಟೆ ತನಕ ಮದ್ಯ ಮಾರಾಟಕ್ಕೆ ಅವಕಾಶಕ್ಕೆ ಕಲ್ಪಿಸಿದ್ದರಿಂದ ನಿರೀಕ್ಷಿತ ಮದ್ಯ ಮಾರಾಟ ಆಗಿಲ್ಲ. ಬಹುತೇಕ ವಲಯಗಳು ಸ್ಥಗಿತಗೊಂಡ ಕಾರಣ ಕೆಲಸ ಇಲ್ಲದೆ ಜನರು ಆರ್ಥಿಕ ಅಡಚಣೆಗೆ ಸಿಲುಕಿದ್ದರು. ಆ ಬಳಿಕ ವಾರಾಂತ್ಯ ಕರ್ಫ್ಯೂ ಮತ್ತಷ್ಟು ಮದ್ಯ ಮಾರಾಟಕ್ಕೆ ಹೊಡೆತ ನೀಡಿದೆ. ಸಾಮಾನ್ಯವಾಗಿ ಕೇರಳದ ಗಡಿಭಾಗದಲ್ಲಿ ಅತಿ ಹೆಚ್ಚು ಮದ್ಯ ಖರೀದಿ ನಡೆಯುತ್ತದೆ. ಆದರೆ, ಕೇರಳ-ಕರ್ನಾಟಕ ಗಡಿ ಬಂದ್ ಆದ ಕಾರಣ ಮಾರಾಟಕ್ಕೆ ತಡೆ ಉಂಟಾಗಿತ್ತು ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು.
    ಪ್ರತಿ ವರ್ಷ ಮೆಹಂದಿ, ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಮದ್ಯ ಪೂರೈಕೆಯಾಗುತ್ತಿತ್ತು. ಈ ವರ್ಷ ಕರೊನಾ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರ ಸೀಮಿತ ಸಂಖ್ಯೆಯಲ್ಲಿ ಜನ ಸೇರುವಂತೆ ನಿರ್ಬಂಧ ಹೇರಿದ ಕಾರಣ ಮದ್ಯ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ.

    ಅಗ್ಗದ ಮದ್ಯ ಸೇವನೆ ಮಾಡುವ ಕಾರ್ಮಿಕರು, ಮೀನುಗಾರಿಕೆ ವೃತ್ತಿ ಮಾಡುವವರು ಊರಿಗೆ ಮರಳಿರುವುದು ಕೂಡ ಪ್ರಮುಖ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಹೊರ ರಾಜ್ಯದ ಮೀನುಗಾರರು ಮೀನು ಸಿಗದ ಕಾರಣ ಲಾಕ್‌ಡೌನ್ ಮುಂಚಿತವಾಗಿಯೇ ತಮ್ಮ ಊರುಗಳಿಗೆ ಮರಳಿದ್ದರು. ವಲಸೆ ಕಾರ್ಮಿಕರು ಬಹಳಷ್ಟು ಮಂದಿ ಊರಿಗೆ ಹೋಗಿದ್ದರು. ಇಲ್ಲಿಯೇ ಇದ್ದವರಿಗೆ ಕೆಲಸ ಇಲ್ಲದೆ ಅವರ ಬಳಿ ಹಣದ ಕೊರತೆ ಉಂಟಾಗಿತ್ತು.

    ಬಾರ್, ಪಬ್, ಹೊಟೇಲ್‌ಗಳು ಲಾಕ್‌ಡೌನ್ ವೇಳೆ ಬಂದ್ ಆಗಿದ್ದ ಕಾರಣ ವೈನ್‌ಶಾಪ್‌ಗಳಿಗೆ ಉತ್ತಮ ವ್ಯಾಪಾರವಾಗಿದೆ. ಸಣ್ಣ ವೈನ್‌ಶಾಪ್‌ಗಳಲ್ಲಿ ಸ್ಟಾಕ್ ಕೊರತೆ ಉಂಟಾಗಿತ್ತು. ಗ್ರಾಹಕರು ಕೇಳುವ ಬ್ರಾಂಡ್‌ನ ಮದ್ಯ ಸಿಗುತ್ತಿರಲಿಲ್ಲ. ಕೆಲವರು ಅವರು ಸೇವನೆ ಮಾಡುವ ಬ್ರಾಂಡ್ ಸಿಗದಿದ್ದರೆ ಬೇರೆ ಬ್ರಾಂಡ್ ಖರೀದಿ ಮಾಡುವುದಿಲ್ಲ. ಕರೊನಾ ಭಯದಿಂದ ಕೋಲ್ಡ್ ಬಿಯರ್ ಸೇವನೆಯಿಂದ ಯುವಕರು ಸಹಿತ ಬಹು ಮಂದಿ ದೂರವಿದ್ದರು ಎಂದು ಗ್ರಾಹಕರು ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟ 2019ಕ್ಕೆ ಹೋಲಿಸಿದಾಗ ಕಡಿಮೆಯಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕ ವರ್ಗ ಎದುರಿಸಿದ ಆರ್ಥಿಕ ಸಮಸ್ಯೆ, ಕೇರಳ ಗಡಿ ಬಂದ್ ಆಗಿರುವುದು ಮೊದಲಾದ ಕಾರಣಗಳಿಂದ ಮದ್ಯ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಬಾರ್, ಪಬ್‌ಗಳು ಕಾರ್ಯಾಚರಿಸಲು ಆರಂಭಿಸಿದ್ದು, ಇನ್ನು ಚೇತರಿಕೆಯಾಗಲಿದೆ.
    – ಬಿಂದುಶ್ರೀ ಪಿ, ಅಬಕಾರಿ ಉಪ ಆಯುಕ್ತರು, ದಕ್ಷಿಣ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts