More

    ಗ್ರಾಮಗಳ ಹೆಸರು ಬದಲಾವಣೆ ಇಲ್ಲ, ಮಂಜೇಶ್ವರ ಶಾಸಕ ಸ್ಪಷ್ಟೋಕ್ತಿ

    ಮಂಗಳೂರು: ಕೇರಳ-ಕರ್ನಾಟಕ ಗಡಿಭಾಗದ ಗ್ರಾಮಗಳ ಹೆಸರು ಬದಲಾವಣೆ ಬಗ್ಗೆ ಕನ್ನಡಿಗರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾದ ಬೆನ್ನಿಗೆ ಎಚ್ಚೆತ್ತುಕೊಂಡ ಕೇರಳ ಸರ್ಕಾರ, ಹೆಸರು ಬಲಾವಣೆಯ ಪ್ರಸ್ತಾಪವೇ ಇಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದೆ.

    ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಹೆಸರಿನ ಮಲಯಾಳೀಕರಣ ವದಂತಿ ಅಷ್ಟೇ, ಅದರಲ್ಲಿ ನಿಜಾಂಶವಿಲ್ಲ ಎಂದು ತಿಳಿಸಿದ್ದಾರೆ.

    ಸಿಎಂ ಪತ್ರದ ಭರವಸೆ: ಈ ಮಧ್ಯೆ, ಮಂಜೇಶ್ವರ, ಕಾಸರಗೋಡು ಜಿಲ್ಲೆಯ ಹಲವು ಊರುಗಳ ಹೆಸರುಗಳ ಮಲಯಾಳೀಕರಣ ನಿರ್ಧಾರ ಕೈಬಿಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆಯುವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು.

    ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಸೋಮವಾರ ಮುಖ್ಯಮಂತ್ರಿಯವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಕೇರಳ ಸರ್ಕಾರ ಗ್ರಾಮಗಳ ಹೆಸರು ಬದಲಾವಣೆ ಮಾಡುತ್ತಿರುವ ವಿಚಾರವನ್ನು ಗಮನಕ್ಕೆ ತಂದಿದ್ದರು.

    ಸ್ಪಂದಿಸಿದ ಯಡಿಯೂರಪ್ಪ ಅವರು, ಕೇರಳ ಸಿಎಂಗೆ ಪತ್ರ ಬರೆಯುವ ಭರವಸೆ ನೀಡಿದರು. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರು ಮತ್ತು ಮಲಯಾಳಿಗರು ಸಹೋದರಂತೆ ಬದುಕುತ್ತಿದ್ದಾರೆ. ಮಂಜೇಶ್ವರ ಮತ್ತು ಕಾಸರಗೋಡು ಭಾಗದ ಜನರು ಕರ್ನಾಟಕದೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲಿನ ಬಹುತೇಕ ಸ್ಥಳಗಳ ಹೆಸರು ಕನ್ನಡ ಭಾಷೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿವೆ. ಅವುಗಳನ್ನು ಬದಲಾಯಿಸುವುದು ಸರಿಯಲ್ಲ ಎಂದರು. ಹೆಸರು ಬದಲಾಯಿಸುವ ನಿರ್ಧಾರ ಸರ್ಕಾರದ ಗಮನಕ್ಕೆ ಬಾರದೆ, ಅಲ್ಲಿನ ಸ್ಥಳೀಯ ಸಂಸ್ಥೆಗಳ ಹಂತದಲ್ಲೇ ನಡೆದಿರುವ ಸಾಧ್ಯತೆಯೂ ಇದೆ ಎಂಬುದನ್ನು ಸೋಮಶೇಖರ್ ಮುಖ್ಯಮಂತ್ರಿಗಳಿಗೆ ವಿವರಿಸಿದರು.

    ಇನ್ನೊಂದೆಡೆ, ಬದಲಾವಣೆ ಮಾಡುವ ಕೇರಳ ಸರ್ಕಾರದ ವಿಷಯದಲ್ಲಿ ಮಧ್ಯಪ್ರವೇಶಿಸಿ, ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

    ಪಿಣರಾಯಿಗೆ ಎಚ್‌ಡಿಕೆ ಮನವಿ: ಕಾಸರಗೋಡು, ಮಂಜೇಶ್ವರದಲ್ಲಿ ಕನ್ನಡದಲ್ಲಿರುವ ಗ್ರಾಮಗಳ ಹೆಸರನ್ನು ಮಲಯಾಳಕ್ಕೆ ಬದಲಾಯಿಸುವ ಪ್ರಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಯನ್ನು ತಡೆಯುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಅವರು ಪತ್ರ ಬರೆದಿದ್ದಾರೆ. ಹೆಸರು ಬದಲಾಯಿಸಿದರೆ ಅರ್ಥ ಬದಲಾಗುವುದಿಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ಅದು ಸರಿಯಲ್ಲ, ಮೂಲ ಕನ್ನಡದ ಹೆಸರುಗಳನ್ನು ಹಾಗೇ ಮುಂದುವರಿಸಬೇಕು. ಇದರಿಂದ ಅದರ ಸೊಗಡು ಉಳಿಯಲು ಸಾಧ್ಯ. ಕರ್ನಾಟಕ ಕೇರಳ ನಡುವಿನ ಭಾಷಾ ಸಾಮರಸ್ಯ ಮುಂದುವರಿಯುವುದು ಅಗತ್ಯ ಎಂದಿದ್ದಾರೆ.

    ಕನ್ನಡ ಪ್ರದೇಶಗಳ ಕೆಲವು ಗ್ರಾಮಗಳ ಹೆಸರುಗಳನ್ನು ಕೇರಳ ಸರ್ಕಾರ ಬದಲಾಯಿಸಲು ನಿರ್ಧರಿಸಿರುವುದನ್ನು ಖಂಡನೀಯ. ಇದು ಸಾಧುವಾದ ಕ್ರಮವಲ್ಲ. ಕನ್ನಡಿಗರ ಭಾವನೆಗಳೊಂದಿಗೆ ಚೆಲ್ಲಾಟ ಸರಿಯಲ್ಲ.

    ಎಸ್.ಸುರೇಶ್‌ಕುಮಾರ್
    ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts