More

    ಕಾಂಗ್ರೆಸ್‌ಗೆ ಅರ್ಹ ಅಭ್ಯರ್ಥಿ ಕೊರತೆ

    ವಿಜಯವಾಣಿ ವಿಶೇಷ
    ಮಂಗಳೂರು: ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಜತೆ ೪ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಸದಸ್ಯರ ಸಂಖ್ಯಾಬಲ ಆಧಾರದಲ್ಲಿ ಪ್ರತೀ ಸ್ಥಾಯಿ ಸಮಿತಿಯಲ್ಲಿ ಬಿಜೆಪಿಗೆ ೫ ಹಾಗೂ ಕಾಂಗ್ರೆಸ್‌ಗೆ ಇಬ್ಬರು ಸದಸ್ಯರು ಆಯ್ಕೆಗೆ ಅವಕಾಶವಿತ್ತು. ಆದರೆ ಕಾಂಗ್ರೆಸ್‌ನಲ್ಲಿ ಅರ್ಹ ಅಭ್ಯರ್ಥಿ ಕೊರತೆಯಿಂದ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಒಂದು ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.

    ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿಯ ೭ ಸದಸ್ಯರ ಪೈಕಿ ಇಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರಾಗಿರಬೇಕು. ಕಾಂಗ್ರೆಸ್‌ನಿಂದ ಆಯ್ಕೆಯಾದ ೧೪ ಮಂದಿ ಸದಸ್ಯರ ಪೈಕಿ ಪ.ಜಾತಿ, ಪ.ಪಂಗಡದ ಯಾವುದೇ ಸದಸ್ಯರಿಲ್ಲ. ಹಾಗಾಗಿ ಕಾಂಗ್ರೆಸ್‌ಗೆ ಇಬ್ಬರು ಅಭ್ಯರ್ಥಿಗಳನ್ನು ಈ ಸಮಿತಿಗೆ ಆಯ್ಕೆ ಮಾಡುವುದು ಸಾಧ್ಯವಾಗಿಲ್ಲ. ಪ.ಜಾತಿ, ಪ.ಪಂಗಡದ ಇಬ್ಬರು ಅಭ್ಯರ್ಥಿಗಳು ಸಹಿತ ಒಟ್ಟು ೬ ಮಂದಿ ಬಿಜೆಪಿ ಸದಸ್ಯರು ನಾಮಪತ್ರ ಸಲ್ಲಿಸಿದ್ದರು.

    ಅವಿರೋಧ ಆಯ್ಕೆ: ರಾಜಕೀಯ ಪಕ್ಷಗಳು ಗೆದ್ದ ಸಂಖ್ಯಾಬಲದ ಆಧಾರದಲ್ಲಿ ಸ್ಥಾಯಿ ಸಮಿತಿಗಳಿಗೆ ಆಯ್ಕೆ ಸಾಧ್ಯವಾಗುತ್ತದೆ. ಪ್ರಸ್ತುತ ಮನಪಾದಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸಹಿತ ಒಟ್ಟು ೬೫ ಮಂದಿಯ ಸಂಖ್ಯಾ ಬಲವಿದೆ. ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದರೆ ಎಣಿಕೆ ಪ್ರಾಶಸ್ತ್ಯ ಮತಗಳ ಆಧಾರದಲ್ಲಿ ನಡೆಯುವ ಕಾರಣ ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅವಿರೋಧ ಆಯ್ಕೆ ನಡೆಸುವುದು ಸಾಮಾನ್ಯವಾಗಿದೆ.

    ಬಿಜೆಪಿಯಲ್ಲಿ ೪ ಸದಸ್ಯರು :  ಈ ಬಾರಿ ಬಿಜೆಪಿಗೆ ೫ ಹಾಗೂ ಕಾಂಗ್ರೆಸ್‌ಗೆ ೨ ಸ್ಥಾನ ನೀಡಲು ಮಾತುಕತೆ ನಡೆದಿತ್ತು. ಆದರೆ ಅರ್ಹ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್‌ಗೆ ಆರೋಗ್ಯ ಸ್ಥಾಯಿ ಸಮಿತಿಯಲ್ಲಿ ಒಂದು ಸದಸ್ಯ ಸ್ಥಾನ ನಷ್ಟವಾಗಿದೆ. ಇತರ ಮೂರು ಸ್ಥಾಯಿ ಸಮಿತಿಯಲ್ಲಿ ಬಿಜೆಪಿಯ ೫ ಹಾಗೂ ಕಾಂಗ್ರೆಸ್‌ನ ಇಬ್ಬರು ಸದಸ್ಯರಿದ್ದಾರೆ. ಪಾಲಿಕೆಯಲ್ಲಿ ಪ.ಜಾತಿ ಹಾಗೂ ಪ.ಪಂಗಡ ಮೀಸಲು ಇರುವ ೪ ವಾರ್ಡ್‌ಗಳಿವೆ. ಈ ೪ ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ.

    ಉಪ ಮೇಯರ್ ಹುದ್ದೆ : ಹಿಂದಿನ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ಹರಿನಾಥ್ ಅವರು ಮೇಯರ್ ಸ್ಥಾನಕ್ಕೆ ಆಯ್ಕೆಯಾದಾಗ ಉಪ ಮೇಯರ್ ಸ್ಥಾನ(ಪರಿಶಿಷ್ಟ ಪಂಗಡ ಮಹಿಳಾ ಮೀಸಲು) ಕಾಂಗ್ರೆಸ್‌ನಲ್ಲಿ ಅರ್ಹ ಸದಸ್ಯರು ಇರಲಿಲ್ಲ. ಹಾಗಾಗಿ ಬಿಜೆಪಿಯ ಸುಮಿತ್ರಾ ಕರಿಯ ಅವರಿಗೆ ಉಪ ಮೇಯರ್ ಹುದ್ದೆ ಒಲಿದಿತ್ತು. ಈ ಹಿಂದೆ ೨೦೦೦-೨೦೦೧ರಲ್ಲಿ ಕಾಂಗ್ರೆಸ್‌ನ ಸುಂದರಿ ಅವರು ಮೇಯರ್ ಆಗಿದ್ದ ಸಂದರ್ಭ ಬಿಜೆಪಿಯ ದೇವಪ್ಪ ಕುದ್ರೋಳಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗುವ ಅವಕಾಶ ಪಡೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts