More

    ಕೋವಿಡ್ ವಾರ್ಡ್ ಆರಂಭಕ್ಕೆ ಸಿದ್ಧತೆ

    ನಿಡಗುಂದಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆಡಳಿತದಿಂದ ಕೋವಿಡ್ ವಾರ್ಡ್ ಆರಂಭಿಸಲು ಮಂಗಳವಾರದಿಂದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ ತಿಳಿಸಿದರು.

    ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಕೋವಿಡ್‌ಗಾಗಿಯೇ 10 ಹಾಸಿಗೆಗಳನ್ನು ಪ್ರತ್ಯೇಕವಾಗಿ ಮೀಸಲಿಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಕೋವಿಡ್ ವಾರ್ಡ್‌ಗೆ ತೆರಳಲು ಪ್ರತ್ಯೇಕ ರಸ್ತೆ ನಿರ್ಮಾಣ ಕಾರ್ಯ, ವಾರ್ಡ್‌ಗೆ ಪ್ರತ್ಯೇಕ ಬಾಗಿಲು ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಅಲ್ಲದೆ, ಆಕ್ಸಿಜನ್ ರಹಿತ ಬೆಡ್‌ಗಳನ್ನು ಸಿದ್ಧಪಡಿಸಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಈ ಕೋವಿಡ್ ವಾರ್ಡ್ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

    ಸ್ಥಳೀಯ ಹಲವು ದಾನಿಗಳು, ಪಪಂ ಆಡಳಿತ ವತಿಯಿಂದ ವಾರ್ಡ್‌ಗೆ ಬೇಕಾಗುವ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಮೂರ‌್ನಾಲ್ಕು ದಿನದಲ್ಲಿ ಕೋವಿಡ್ ಆಸ್ಪತ್ರೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಓತಗೇರಿ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಜತೆ ಬಸವನಬಾಗೇವಾಡಿಯ ತಜ್ಞ ವೈದ್ಯರು ಹಾಗೂ ಸ್ಥಳೀಯ ಖಾಸಗಿ ವೈದ್ಯರ ಸಹಕಾರ ಪಡೆದು ರೋಗಿಗಳಿಗೆ ತುರ್ತಾಗಿ ಬೇಕಾಗುವ ಚಿಕಿತ್ಸೆ ನೀಡಲಾಗುವುದು. ಇಲ್ಲಿ ಆಕ್ಸಿಜನ್‌ಮಟ್ಟ ಕಡಿಮೆಯಾದರೆ ಆಂಬುಲೆನ್ಸ್ ಮೂಲಕ ಬಸವನಬಾಗೇವಾಡಿ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

    ಇದೇ ವೇಳೆ ತಾಲೂಕು ಆಡಳಿತ ಮನವಿಗೆ ಸ್ಪಂದಿಸಿದ ಪಟ್ಟಣದ ಖಾಸಗಿ ಆಸ್ಪತ್ರೆಗಳ ವೈದ್ಯರು, ತಾವು ಆಸ್ಪತ್ರೆಗೆ ಬಂದು ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು.

    ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಖಾಸಗಿ ವೈದ್ಯರಾದ ಡಾ. ಸಂಗಮೇಶ ಗೂಗಿಹಾಳ, ಡಾ. ಸಂತೋಷ ಬಸರಕೋಡ, ಡಾ. ತೆಳಗಡಿ, ಡಾ. ರಾಜಶೇಖರ ಪಟ್ಟಣಶೆಟ್ಟಿ, ಅಬ್ದುಲ್ ಜಬ್ಬಾರ ಕೋಟ್ಯಾಳಕರ, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಮೇಘಾ ಕೋಲಕಾರ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts