More

    ನೂತನ ಶಾಸಕಗೆ ಹಳೆಯ ಸವಾಲುಗಳು, ಯುಜಿಡಿ ಕಾಮಗಾರಿ ನನೆಗುದಿಗೆ

    ಅಶೋಕ ಬೆನ್ನೂರು ಸಿಂಧನೂರು

    ನಗರದಲ್ಲಿ ನಿರಂತರ ಕುಡಿವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿ ಸಂಪೂರ್ಣ ಅನುಷ್ಠಾನ ಸೇರಿ ಇತರ ಹಳೆಯ ಸಮಸ್ಯೆಗಳೇ ನೂತನ ಶಾಸಕ ಹಂಪನಗೌಡ ಬಾದರ್ಲಿಗೆ ಸವಾಲಾಗಿವೆ. ಹಂಪನಗೌಡ ಬಾದರ್ಲಿ ಈ ಹಿಂದೆ ಶಾಸಕರಾಗಿದ್ದಾಗ ಜಾರಿಗೆ ಬಂದಿದ್ದ ಯೋಜನೆಗಳು ಈ ಅವಧಿಯಲ್ಲಿ ಪೂರ್ಣಗೊಳ್ಳುವುದೇ ಎನ್ನುವುದು ಜನರ ಪ್ರಶ್ನೆಯಾಗಿದೆ.

    ಇದನ್ನೂ ಓದಿ: ನೂತನ ಶಾಸಕರಿಗೆ ಹತ್ತಾರು ಸವಾಲು

    ನಿರಂತರ ಕುಡಿವ ನೀರಿನ ಯೋಜನೆ ಅನುಷ್ಠಾನಗೊಂಡರೆ ನಗರದಲ್ಲಿ ಜಲ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬ ಕಾರಣಕ್ಕೆ ಹಂಪನಗೌಡ ಬಾದರ್ಲಿ ಶಾಸಕರಾಗಿದ್ದಾಗ 2002-03 ರಲ್ಲಿ ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಡಿ ಉತ್ತರ ವಲಯ ಬಂಡವಾಳ ಹೂಡಿಕೆ ಯೋಜನೆಯಡಿ 99 ಕೋಟಿ ರೂ. ಅನುದಾನ ತಂದಿದ್ದರು.

    ಯೋಜನೆಯ ಕಾಮಗಾರಿ ಮುಗಿದಿದ್ದರೂ ಇದುವರೆಗೆ ಯಾವುದೇ ವಾರ್ಡ್‌ಗೂ ನೀರು ಹರಿದಿಲ್ಲ. ನಗರದಲ್ಲಿ 1 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, ಯೋಜನೆ ಅನುಷ್ಠಾನಗೊಂಡರೆ ಜನರಿಗೆ ಅನುಕೂಲವಾಗಲಿದೆ.

    ಬಾದರ್ಲಿ ಶಾಸಕರಾಗಿದ್ದಾಗಲೇ ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಡಿ ಕೆಯುಐಡಿಎಫ್‌ಸಿ ಯೋಜನೆ ಮೂಲಕ 55.75 ಕೋಟಿ ರೂ. ಮೂಲಕ ಒಳಚರಂಡಿ ಕಾಮಗಾರಿ ಆರಂಭಿಸಲಾಗಿತ್ತು. ಕಳಪೆ ನಿರ್ವಹಣೆ, ಕ್ಯೂರಿಂಗ್ ಇಲ್ಲದೆ ಮ್ಯಾನ್‌ಹೋಲ್‌ಗಳ ನಿರ್ಮಾಣ.

    ಪೈಪ್‌ಲೈನ್ ಕೆಳಭಾಗದಲ್ಲಿ ಮರಳು ಬದಲು ಮಣ್ಣು ಬಳಕೆ ಸೇರಿ ಹಲವು ರೀತಿಯ ಕಳಪೆ ಕಾಮಗಾರಿಗೆ ಯುಜಿಡಿ ಸಾಕ್ಷಿಯಾಗಿದೆ. ಈ ಮೂಲಕ ಯೋಜನೆಯ ಉದ್ದೇಶವೇ ಬುಡಮೇಲಾಗಿದ್ದು, ಶಾಸಕ ಬಾದರ್ಲಿ ಯಾವ ಕ್ರಮಕೈಗೊಳ್ಳುವರು ಎನ್ನುವುದನ್ನು ಕಾದು ನೋಡಬೇಕಿದೆ.

    ಹೊರ ವರ್ತುಲ ರಸ್ತೆಗೆ ವೇಗ..?

    ನಗರದಲ್ಲಿ ಬೈಪಾಸ್ ರಸ್ತೆ ಬೇಡಿಕೆ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಬೈಪಾಸ್ ರಸ್ತೆಗೆ ಸಂಬಂಧಿಸಿದಂತೆ ಭೂಸ್ವಾಧೀನ, ತಗಲುವ ವೆಚ್ಚದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, ವಿಸ್ತೃತ ಯೋಜನಾ ವರದಿ ಕೂಡ ತಯಾರಿಸಲಾಗಿದೆ. ಶಾಸಕ ಬಾದರ್ಲಿ ಕಾಂಗ್ರೆಸ್‌ನವರಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿರುವುದರಿಂದ ಕಾಮಗಾರಿಗೆ ವೇಗ ಸಿಗುವ ನಿರೀಕ್ಷೆ ಇದೆ.

    ಜೆಜೆಎಂ ಕಾಮಗಾರಿ ಅಪೂರ್ಣ

    ತಾಲೂಕಿನ 42 ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿ ನಡೆದಿದೆ. ಗ್ರಾಮೀಣ ಭಾಗದಲ್ಲಿ ಅಗತ್ಯ ನೀರಿನ ಸೌಕರ್ಯ ಹೊಂದಿರುವ ಕಡೆ ರಸ್ತೆ ಅಗೆದು ಪೈಪ್‌ಲೈನ್ ಹಾಕಲು ಜನರು ವಿರೋಧಿಸುತ್ತಿದ್ದಾರೆ. ಜನರು ಯೋಜನೆಗೆ ವಂತಿಗೆ ಪಾವತಿಸಲು ಹಿಂದೇಟು ಹಾಕುತ್ತಿರುವುದು ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ.

    ರೈತನಗರಕ್ಯಾಂಪ್, ಮುಕ್ಕುಂದಾ ಸೇರಿ ಹಲವು ಕಡೆಗಳಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಈ ಯೋಜನೆ ಪೂರ್ಣಗೊಂಡರೆ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ತಗ್ಗಲಿದೆ. ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ.

    ಕುಂಟುತ್ತಾ ಸಾಗಿದೆ ತಾಯಿ-ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ

    ಚುನಾವಣೆ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿರುವ ಸಿಂಧನೂರು ಜಿಲ್ಲಾ ಕೇಂದ್ರ ಬೇಡಿಕೆಗೆ ಮನ್ನಣೆ ಸಿಗಬೇಕಿದೆ. ಕಾಂಗ್ರೆಸ್ ಸ್ಥಳೀಯ ಪ್ರಣಾಳಿಕೆಯಲ್ಲೂ ಜಿಲ್ಲಾ ಕೇಂದ್ರ ಪ್ರಸ್ತಾಪಿಸಲಾಗಿತ್ತು. ಈಗ ಈ ಬೇಡಿಕೆ ತಾಲೂಕಿನಾದ್ಯಂತ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಶಾಸಕ ಬಾದರ್ಲಿ ಈ ಬೇಡಿಕೆ ಈಡೇರಿಸಲು ಆಸಕ್ತಿ ತೋರಬೇಕಿದೆ.

    ತಿಮ್ಮಾಪುರ ಏತ ನೀರಾವರಿ ಸೇರಿ ವಿವಿಧ ನೀರಾವರಿ ಯೋಜನೆಗಳಿಗೂ ಪರಿಹಾರ ಕಲ್ಪಿಸಬೇಕಿದೆ. ಕುಂಟುತ್ತಾ ಸಾಗಿರುವ ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿಯ ವೇಗ ಹೆಚ್ಚಿಸುವ ಕೆಲಸವಾಗಬೇಕಿದೆ.

    ನಾನು ನೀಡಿರುವ ಭರವಸೆ ಈಡೇರಿಸಲು ಬದ್ಧನಾಗಿರುವೆ. ಸಿಂಧನೂರು ಜಿಲ್ಲಾ ಕೇಂದ್ರ, ನೀರಾವರಿ ಯೋಜನೆ ಸೇರಿ ನಾನು ವಿಶೇಷ ಆಸಕ್ತಿಯಿಂದ ಜಾರಿಗೊಳಿಸಿದ ಮಹತ್ವಕಾಂಕ್ಷೆಯ ಯೋಜನೆಗಳ ಸೇವೆ ಜನರಿಗೆ ಒದಗಿಸಲು ಪ್ರಾಮಾಣಿಕ ಕೆಲಸ ಮಾಡುವೆ. ಯಾವ ಕೆಲಸಗಳು ಬಾಕಿ ಉಳಿದಿವೆ ಎಂಬುದು ಮಾಹಿತಿ ಪಡೆದು ಕಾರ್ಯಗತಗೊಳಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ.
    | ಹಂಪನಗೌಡ ಬಾದರ್ಲಿ, ಶಾಸಕ, ಸಿಂಧನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts