More

    ರಾಜ್ಯದಲ್ಲಿ ಹೊಸ ಎಂ 3 ಮತಯಂತ್ರ: ಇದೇ ಮೊದಲ ಬಾರಿ ಬಳಕೆ; ಮುಖ್ಯ ಚುನಾವಣಾಧಿಕಾರಿ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಎಂ 3 ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಗುತ್ತದೆ. ಹೈದರಾಬಾದ್ ಇಸಿಐನಲ್ಲಿ ತಯಾರಿಸಲಾಗಿರುವ ಮತ್ತು ಇದುವರೆಗೆ ಯಾವುದೇ ಚುನಾವಣೆಯಲ್ಲಿ ಬಳಸದೇ ಇರುವ ಮಷಿನ್ ಬಳಸಿ ಚುನಾವಣೆ ನಡೆಸಲಾಗುತ್ತದೆ. ಇತ್ತೀಚೆಗೆ ಬಿಜೆಪಿ ಅಧಿಕಾರಕ್ಕೆ ಬಂದಿರುವ ರಾಜ್ಯಗಳಲ್ಲಿ ಬಳಸಲಾಗಿರುವ ಇವಿಎಂಗಳನ್ನು ಕರ್ನಾಟಕದ ಚುನಾವಣೆಯಲ್ಲಿ ಬಳಸಬಾರದು ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಚುನಾವಣಾ ಪೂರ್ವ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಈ ಚುನಾವಣೆಯಲ್ಲಿ ಹೊಸ ಎಂ 3 ಮತ ಯಂತ್ರಗಳನ್ನು ಬಳಸಲಾಗುವುದು. ರಾಜ್ಯದಲ್ಲಿ ಒಟ್ಟು 1,15,709 ಬ್ಯಾಲೆಟ್ ಯೂನಿಟ್, 82,543 ಕಂಟ್ರೋಲ್ ಯೂನಿಟ್, 89,379 ವಿ.ವಿ.ಪ್ಯಾಟ್​ಗಳು ಇದ್ದು, ಅವಶ್ಯಕತೆಗಿಂತ ಹೆಚ್ಚಾಗಿಯೇ ಇವೆ. ಈಗಾಗಲೆ ಮೊದಲ ಹಂತದ ಪರಿಶೀಲನೆ ಕಾರ್ಯ ಕೂಡ ಮುಗಿದಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 5.24 ಕೋಟಿ ಮತದಾರರಿದ್ದು, 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆ ಮತದಾರರಿದ್ದಾರೆ. 4,751 ತೃತೀಯ ಲಿಂಗಿ ಮತದಾರರಿದ್ದಾರೆ. 47,690 ಸೇವಾ ಮತದಾರರಿದ್ದಾರೆ. 18-19 ವರ್ಷದೊಳಗಿನ 9,58, 806 ಯುವ ಮತದಾರರು ನೋಂದಣಿಯಾಗಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು 12.15 ಲಕ್ಷ ಮಂದಿ ಇದ್ದಾರೆ. 100 ವರ್ಷ ದಾಟಿರುವ 16,976 ಮತದಾರರಿದ್ದಾರೆ. 5.60 ಲಕ್ಷ ಅಂಗವಿಕಲ ಮತದಾರರಿದ್ದು, ಒಂದು ಲಕ್ಷಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಏ.1ರೊಳಗೆ 18 ವರ್ಷ ಪೂರೈಸುವಂತಹ 52 ಸಾವಿರ ಅರ್ಜಿ ಬಂದಿದ್ದು, ಅವುಗಳನ್ನು ಮತದಾರರ ಅಂತಿಮಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

    1200 ಸೂಕ್ಷ್ಮ ಮತಗಟ್ಟೆಗಳು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಂತೆ ಒಟ್ಟು 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ 1,320 ಮಹಿಳಾ ಮತಗಟ್ಟೆಗಳು, 224 ಯುವ ಅಧಿಕಾರಿಗಳ ನಿರ್ವಹಣೆಯ ಮತಗಟ್ಟೆ, 224 ವಿಶೇಷ ಚೇತನರು ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,200 ಸೂಕ್ಷ್ಮ ಮತಗಟ್ಟೆಗಳಾಗಿದ್ದು, ಇವುಗಳ ನಿರ್ವಹಣೆಗೆ ಅಗತ್ಯ ಹೆಚ್ಚಿನ ಭದ್ರತೆಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

    ಬೆಂಗಳೂರು ದಕ್ಷಿಣ ಅತಿ ಹೆಚ್ಚು ಮತದಾರರು ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ 6,77,247 ಲಕ್ಷ ಮತದಾರರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ ಮತದಾರರನ್ನು ಹೊಂದಿದೆ. ಇಲ್ಲಿ 1,68, 564 ಮತದಾರರಿದ್ದಾರೆ. ಬೆಳಗಾವಿ ಜಿಲ್ಲೆ 4434 ಮತಗಟ್ಟೆಗಳನ್ನು ಹೊಂದಿದ್ದು, ಅತಿ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಕೊಡಗಿನಲ್ಲಿ 542 ಮತಗಟ್ಟೆಗಳಿದ್ದು, ಅತಿ ಕಡಿಮೆ ಮತಗಟ್ಟೆ ಹೊಂದಿರುವ ಜಿಲ್ಲೆಯಾಗಿದೆ.

    ಏ.11ರವರೆಗೆ ಅವಕಾಶ: ಏ.11ರ ಒಳಗೆ ಫಾರಂ 6 ಅಡಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಅಲ್ಲಿಯವರೆಗೆ ಬರುವ ಅರ್ಜಿಗಳನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

    171 ಅಂತಾರಾಜ್ಯ ಗಡಿ ಚೆಕ್​ಪೋಸ್ಟ್: ಚುನಾವಣೆ ವೇಳೆ ಅಕ್ರಮ ತಡೆಗೆ 942 ಚೆಕ್​ಪೋಸ್ಟ್​ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 171 ಅಂತಾರಾಜ್ಯ ಗಡಿ ಚೆಕ್​ಪೋಸ್ಟ್​ಗಳಾಗಿವೆ. ವಿಧಾನಸಭೆ ಚುನಾವಣೆಗೆ 2,040 ಫ್ಲೈಯಿಂಗ್ ಸ್ಕಾ್ವಡ್ ತಂಡಗಳು, 2,605 ಸ್ಥಿರ ಕಣ್ಗಾವಲು, 266 ವಿಡಿಯೋ ವೀಕ್ಷಣೆ ತಂಡಗಳು, 631 ವಿಡಿಯೋ ಕಣ್ಗಾವಲು ತಂಡ ಮತ್ತು 225 ಲೆಕ್ಕಪರಿಶೋಧಕ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

    ಮನೆಯಿಂದ ಮತದಾನ: 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಫಾರಂ 12ಡಿ ಯನ್ನು ಮನೆ ಮನೆಗೆ ವಿತರಣೆ ಮಾಡಲಿದೆ. ಯಾರು ಮನೆಯಿಂದ ಮತದಾನ ಮಾಡಲು ಇಷ್ಟಪಡುತ್ತಾರೋ ಅವರ ಅರ್ಹತೆ ನೋಡಿ ಅವಕಾಶ ಮಾಡಿಕೊಡಲಾಗುತ್ತದೆ. ಇಬ್ಬರು ಮತದಾನ ಸಿಬ್ಬಂದಿ, ಒಬ್ಬ ಭದ್ರತಾ ಸಿಬ್ಬಂದಿ ಹಾಗೂ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಪೋಸ್ಟಲ್ ಬ್ಯಾಲೆಟ್​ನಲ್ಲಿ ಗೌಪ್ಯ ಮತದಾನಮಾಡಿಸಿಕೊಂಡು ತೆಗೆದುಕೊಂಡು ಬರುತ್ತಾರೆ. ರಾಜಕೀಯ ಏಜೆಂಟರ ಎದುರೇ ಈ ಎಲ್ಲ ಪ್ರಕ್ರಿಯೆ ನಡೆಯುತ್ತಿದೆ. ಮತದಾನಕ್ಕಿಂತ 2-3 ದಿನ ಮುಂಚೆ ಈ ಪ್ರಕ್ರಿಯೆ ಮುಗಿಯಲಿದೆ. ರಾಜ್ಯದಲ್ಲಿ 12, 15,142 ಜನ 80ಕ್ಕೂ ಹೆಚ್ಚು ವಯಸ್ಸಿನವರು ಹಾಗೂ 5,60, 908 ಅಂಗವಿಕಲರಿದ್ದಾರೆ.

    ಪತ್ರಕರ್ತರೂ ಸರ್ವೀಸ್ ವೋಟರ್ಸ್: ಸರ್ವೀಸ್ ವೋಟರ್ಸ್ ಪಟ್ಟಿಗೆ ಇದೇ ಮೊದಲ ಬಾರಿಗೆ ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಲಾಗಿದೆ. ಅವರಿಗೆ ಪೋಸ್ಟಲ್ ಬ್ಯಾಲೆಟ್ ಕೊಡಲಾಗುತ್ತದೆ. ಇದು ರಾಜ್ಯದಲ್ಲೇ ಮೊದಲ ಬಾರಿಗೆ ಆರಂಭವಾಗಿದೆ.

    40 ಲಕ್ಷ ರೂ.ವೆಚ್ಚದ ಮಿತಿ: ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗಳು 40 ಲಕ್ಷ ರೂ.ವರೆಗೆ ಚುನಾವಣಾ ವೆಚ್ಚವನ್ನು ನಿಗದಿಗೊಳಿಸಿದೆ. ಅಭ್ಯರ್ಥಿಗಳು ವೆಚ್ಚ ಮಾಡುವ ಮೊತ್ತದ ಮೇಲೆ ನಿಗಾವಹಿಸಲು 234 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ.

    ನೀತಿ ಸಂಹಿತೆಯ ಪ್ರಮುಖ ಅಂಶಗಳು

    • ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಯಾವುದೇ ಘೋಷಣೆ ಮಾಡುವಂತಿಲ್ಲ
    • ನೀರಾವರಿ, ಲೋಕೋಪಯೋಗಿ ಸೇರಿ ಈಗಾಗಲೆ ಕೆಲವೊಂದು ಯೋಜನೆಗಳ ಕಾರ್ಯ ಪ್ರಗತಿಯಲ್ಲಿದ್ದರೆ ಅವುಗಳನ್ನು ಮುಂದುವರಿಸಬಹುದು.
    • ಸರ್ಕಾರಿ ಯೋಜನೆಗಳಿಗೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ.
    • ಬರ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲನೆಯನ್ನು ಅಧಿಕಾರಿಗಳು ಮಾತ್ರ ನಡೆಸಬಹುದು.
    • ಕುಡಿಯುವ ನೀರು ಪೂರೈಕೆ ಸೇರಿ ತುರ್ತು ಅವಶ್ಯಕತೆಗಳಿಗೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ.
    • ಸಿಎಂ ಸರ್ಕಾರಿ ಕಾರನ್ನು ತಮ್ಮ ಕಚೇರಿ, ವಿಧಾನಸೌಧಕ್ಕೆ ಬಳಸಬೇಕು. ಜಿಲ್ಲಾ ಪ್ರವಾಸ, ಪ್ರಚಾರಗಳಿಗೆ ಸರ್ಕಾರಿ ವಾಹನ ಬಳಕೆ ನಿರ್ಬಂಧ ಇರಲಿದೆ.
    • ಸರ್ವೆ ನೆಪದಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕೇಳುವಂತಿಲ್ಲ.
    • ವಿವಿಧ ಜಾತಿ, ಸಮುದಾಯಗಳ ನಡುವೆ, ಧಾರ್ವಿುಕ ಅಥವಾ ಭಾಷಿಕರ ನಡುವೆ ಉದ್ವಿಗ್ನತೆ ಉಂಟು ಮಾಡುವ ಯಾವುದೇ ಚಟವಟಿಕೆ ಕೈಗೊಳ್ಳುವಂತಿಲ್ಲ.
    • ರಾಜಕೀಯ ನಾಯಕರು ವೈಯಕ್ತಿಕ ಟೀಕೆ ಮಾಡುವಂತಿಲ್ಲ.
    • ಜಾತಿ, ಕೋಮು ಆಧಾರದ ಮೇಲೆ ಮತ ಕೇಳುವಂತಿಲ್ಲ.
    • ಧಾರ್ವಿುಕ ಸ್ಥಳಗಳನ್ನು ಚುನಾವಣಾ ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳುವಂತಿಲ್ಲ.
    • ರಾಜಕೀಯ ಪಕ್ಷ, ಅಭ್ಯರ್ಥಿ ಯಾವುದೇ ಸಭೆ, ಸಮಾರಂಭ ಆಯೋಜಿಸಬೇಕಿದ್ದರೆ ಚುನಾವಣಾ ಆಯೋಗದ ಪೂರ್ವಾನುಮತಿ ಕಡ್ಡಾಯ.
    • ಸಂಘಟಿತ ಮೆರವಣಿಗೆ ನಡೆಸಲು ಸ್ಥಳೀಯ ಪೊಲೀಸ್ ಅನುಮತಿ ಪಡೆಯಬೇಕು.

    ರಾಜ್ಯದಲ್ಲಿ ಹೊಸ ಎಂ 3 ಮತಯಂತ್ರ: ಇದೇ ಮೊದಲ ಬಾರಿ ಬಳಕೆ; ಮುಖ್ಯ ಚುನಾವಣಾಧಿಕಾರಿ ಮಾಹಿತಿಅಕ್ರಮ ತಡೆಗೆ ಅಖಾಡಕ್ಕಿಳಿದ ಆಯೋಗ

    ಮತದಾರರಿಗೆ ಆಮಿಷ ಒಡ್ಡುವುದಕ್ಕೆ ಕಡಿವಾಣ ಹಾಕಲು ಚುನಾವಣಾ ಆಯೋಗ ನೇರ ಆಖಾಡಕ್ಕಿಳಿಯಲಿದೆ. ಮೂರ್ನಾಲ್ಕು ತಿಂಗಳಿಂದ ನಗದು, ಕುಕ್ಕರ್, ಸೀರೆ, ಚಿನ್ನ-ಬೆಳ್ಳಿ ಆಭರಣ, ಟಿವಿ, ನಿವೇಶನ ಸೇರಿ ಗೃಹೋಪಯೋಗಿ ವಸ್ತುಗಳನ್ನು ಮತದಾರರಿಗೆ ರಾಜಾರೋಷವಾಗಿ ವಿತರಣೆ ಮಾಡಲಾಗುತ್ತಿತ್ತು. ಇದು ತೀರಾ ಮಿತಿ ಮೀರಿತ್ತು. ನೀತಿ ಸಂಹಿತೆ ಜಾರಿಗೆ ಮುನ್ನ ಆಮಿಷ ಒಡ್ಡುವ ಮೂಲಕ ಕಾಯ್ದೆ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆದಿತ್ತು. ಮಾ.11 ರಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡ ಬೆಂಗಳೂರಿಗೆ ಭೇಟಿ ನೀಡಿ ಚುನಾವಣಾ ಪೂರ್ವ ತಯಾರಿ ಪರಿಶೀಲನಾ ಸಭೆ ನಡೆಸಿ, ಮತದಾರರ ಆಮಿಷಕ್ಕೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿತ್ತು. ಚುನಾವಣಾ ನೀತಿ ಸಂಹಿತೆ ಜಾರಿ ಯಾಗದೇ ಇರುವ ಕಾರಣ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯ ಕಾನೂನು ಅನ್ವಯಿಸಿ ಕಾರ್ಯಾ ಚರಣೆ ಮಾಡುವಂತೆ ಸೂಚನೆ ನೀಡಿದ್ದರು.

    ವೀಕ್ಷಕರ ನೇಮಕದಿಂದ ಕಡಿವಾಣ: ಚುನಾವಣೆ ಅಕ್ರಮ ತಡೆಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ವಿಚಕ್ಷಣಾ ದಳ, ಸ್ಕಾ್ವಡ್, ಪ್ಲಯಿಂಗ್ ಸ್ಕಾ್ವಡ್, ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗುತ್ತದೆ. ಆ ಮೂಲಕ ಮತದಾರರಿಗೆ ಒಡ್ಡುವ ಆಮಿಷಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ. ಈಗಾಗಲೆ ಇರುವ ಚೆಕ್ ಪೋಸ್ಟ್ ಜತೆಗೆ ಅಗತ್ಯ ಕಂಡು ಬಂದಲ್ಲಿ ಇನ್ನಷ್ಟು ಚೆಕ್ ಪೋಸ್ಟ್​ಗಳನ್ನು ತೆರೆಯಲು ನಿರ್ದೇಶನ ನೀಡಲಾಗುತ್ತದೆ.

    ಸಹಾಯವಾಣಿ, ಸಿ-ವಿಸಿಲ್ : ಸಾರ್ವಜನಿಕರು ದೂರು ನೀಡಲು ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಆರಂಭಿಸಲಾಗುತ್ತದೆ. ಜತೆಗೆ ಸಿ-ವಿಸಿಲ್ ಆಪ್​ಗಳಿಗೆ ಚಾಲನೆ ನೀಡಲಾಗುತ್ತದೆ. ಇದರಿಂದ ಚುನಾವಣಾ ಅಕ್ರಮಗಳು ಎಲ್ಲೇ ಕಂಡು ಬಂದರೂ ಸಾರ್ವಜನಿಕರು ನೇರವಾಗಿ ದೂರು ನೀಡಲು ಸಹಕಾರಿಯಾಗಲಿದೆ.

    4119 ಪ್ರಕರಣ ದಾಖಲು: ಪೊಲೀಸ್, ಅಬಕಾರಿ, ವಾಣಿಜ್ಯ, ಆದಾಯ ತೆರಿಗೆ, ಕಂದಾಯ ಸೇರಿ ನಾನಾ ಇಲಾಖೆಗಳು ಆಕಾಡಕ್ಕಿಳಿದಿದ್ದವು. ಇದುವರೆಗೆ 196 ನಗದು, 1406 ಮದ್ಯ, 18 ಬೆಲೆ ಬಾಳುವ ಲೋಹ, 179 ಡ್ರಗ್ಸ್, 186 ಆಮಿಷ ಪ್ರಕರಣ ಒಳಗೊಂಡಂತೆ 4119 ಮೊಕದ್ದಮೆ ದಾಖಲಿಸಿ 57,72,35,315 ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ನಿರ್ದೇಶನದ ಅನ್ವಯ ವಿವಿಧ ಇಲಾಖೆಗಳು ಕಾರ್ಯಾಚರಣೆ ನಡೆಸಲಿವೆ.

    ಶೇ.50 ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್: ಮತದಾನ ಪ್ರಕ್ರಿಯೆ ನೇರ ಪ್ರಸರಣಕ್ಕಾಗಿ ವೆಬ್​ಕಾಸ್ಟಿಂಗ್ ಈ ಬಾರಿಯೂ ಇರಲಿದ್ದು, ರಾಜ್ಯದ 58,282 ಮತಗಟ್ಟೆಗಳ ಪೈಕಿ ಶೇ.50ರಲ್ಲಿ ವೆಬ್​ಕಾಸ್ಟಿಂಗ್ ಸೌಲಭ್ಯವಿರಲಿದೆ. ಗ್ರಾಮಾಂತರ ಪ್ರದೇಶದಲ್ಲಿ 34219 ಹಾಗೂ ನಗರ ಪ್ರದೇಶಗಳಲ್ಲಿ 24063 ಮತಗಟ್ಟೆಗಳಿವೆ. ಮತದಾನ ದಿನಂದು ನೆಟ್​ವರ್ಕ್ ಸಮಸ್ಯೆ ಕಾಣಿಸಬಾರದೆಂಬ ಕಾರಣಕ್ಕೆ ಆಯೋಗ ಈಗಾಗಲೆ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.

    3.51 ಲಕ್ಷ ಸಿಬ್ಬಂದಿ ನಿಯೋಜನೆ: ಚುನಾವಣಾ ಕಾರ್ಯಕ್ಕಾಗಿ ರಾಜ್ಯದಲ್ಲಿ 3.51 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದನ್ನು ಹೊರತು ಪಡಿಸಿ 17,276 ಮಂದಿ ಸೂಕ್ಷ್ಮ ವೀಕ್ಷಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಚುನಾವಣಾ ಸಿಬ್ಬಂದಿಯ ಪೈಕಿ ಈಗಾಗಲೆ ಹಲವರಿಗೆ ತರಬೇತಿ ನೀಡಲಾಗಿದ್ದು, ಇನ್ನುಳಿದವರಿಗೆ ಶೀಘ್ರದಲ್ಲಿಯೇ ತರಬೇತಿ ನೀಡಲಾಗುತ್ತದೆ. 224 ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಗಳಿಗೆ ತರಬೇತಿ ಪೂರ್ಣಗೊಳಿಸಲಾಗಿದೆ. ಇನ್ನು, 317 ಸಹಾಯಕ ರಿಟರ್ನಿಂಗ್ ಅಧಿಕಾರಿಗಳಿಗೂ ತರಬೇತಿ ನೀಡಲಾಗಿದೆ.

    ಬೆಂಗಳೂರು ವೋಟಿಂಗ್: ಬೆಂಗಳೂರಿನಲ್ಲಿ 28 ಕ್ಷೇತ್ರ ಇವೆ. 2018ರಲ್ಲಿ 2013ಕ್ಕಿಂತ ಕಡಿಮೆ ಮತದಾನವಾಗಿದೆ. ಕಡಿಮೆ ಮತದಾನವಾಗಿರುವ ಮತಗಟ್ಟೆ ಗುರುತಿಸಿದ್ದು, ಬಿಎಲ್​ಒ ಮತ್ತಿತರ ಅಧಿಕಾರಿಗಳು ಅಂತಹ ಮತಗಟ್ಟೆ ಹೋಗಿ ಜನರ ಜತೆ ಸಂವಾದ ಮಾಡಿ ಅವರ ಬೇಡಿಕೆಗಳಿಗೆ ಸ್ಪಂದಿಸಲಿದ್ದಾರೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಳವಾಗುವ ವಿಶ್ವಾಸವಿದೆ ಎಂದು ಮನೋಜ್​ಕುಮಾರ್ ಮೀನಾ ಹೇಳಿದರು.

    ಧಾರ್ವಿುಕ, ಜಾತ್ರೆ ಕಾರ್ಯಕ್ರಮ: ಸಾಮಾಜಿಕ, ಧಾರ್ವಿುಕ ಚಟುವಟಿಕೆ ನಿರ್ಬಂಧ ಇಲ್ಲ. ಆ ಚಟುವಟಿಕೆಗಳಲ್ಲಿ ರಾಜಕಾರಣಿಗಳು ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನ ಮಾಡಿದರೆ, ರಾಜಕೀಯ ಭಾಷಣ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

    ವರ್ಗಾವಣೆಗೆ ಲಂಚ ಕೊಟ್ಟವರು ಕಂಗಾಲು

    ಬೆಂಗಳೂರು: ರಾಜ್ಯ ಚುನಾವಣಾ ಆಯೋಗದ ಆದೇಶವನ್ನು ಗಾಳಿಗೆ ತೂರಿ ನಿಯಮಬಾಹಿರವಾಗಿ ಆಯಕಟ್ಟಿನ ಹುದ್ದೆಗೆ ವರ್ಗಾವಣೆ ಬಯಸಿ ಕೋಟ್ಯಂತರ ರೂ.ಲಂಚ ನೀಡಿದ್ದ ಕೆಲ ಸರ್ಕಾರಿ ಅಧಿಕಾರಿಗಳು ಕಂಗಾಲಾಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಇಷ್ಟದ ಹುದ್ದೆಗೆ ವರ್ಗಾವಣೆಗಾಗಿ ಕೆಲ ಸಚಿವರಿಗೆ ಈಗಾಗಲೆ ಕೋಟ್ಯಂತರ ರೂ.ಲಂಚ ನೀಡಿದ್ದ ಅಧಿಕಾರಿಗಳಿಗೆ ಇತ್ತ ಹಣವೂ ಸಿಗದೆ ಅತ್ತ ಹುದ್ದೆಯೂ ಸಿಗದೆ ಸಂಕಷ್ಟ ಅನುಭವಿಸುವಂತಾಗಿದೆ. ಅಬಕಾರಿ, ಜಲಸಂಪನ್ಮೂಲ, ಲೋಕೋಪಯೋಗಿ ಸೇರಿ ಇತರ ಇಲಾಖೆಗಳ ಕೆಲ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಧಾನಸಭಾ ಚುನಾವಣೆಯು ಸನ್ನಿಹಿತವಾಗುತ್ತಿದ್ದು, ಕೇಂದ್ರ ಚುನಾವಣಾ ಆಯೋಗ ಸದ್ಯದಲ್ಲಿಯೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಿದೆ. ಈ ಹಂತದಲ್ಲಿ ಚುನಾವಣಾ ಕಾರ್ಯದಲ್ಲಿ ನಿರತರಾದ ಅಧಿಕಾರಿ/ಸಿಬ್ಬಂದಿ ಮುಖ್ಯ ಚುನಾವಣಾಧಿಕಾರಿ ಸಹಮತ ಪಡೆಯದೇ ವರ್ಗಾವಣೆ ಮಾಡಬಾರದು. 2023ರ ಮಾ.8ರ ಎಲ್ಲ ವರ್ಗಾವಣೆ ಪ್ರಕ್ರಿಯೆಗಳಿಗೆ ಮುಖ್ಯ ಚುನಾವಣಾಧಿಕಾರಿಯವರ ಸಹಮತಿ ಪಡೆದು ವರ್ಗಾವಣೆ ಮಾಡಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಆದೇಶ ಹೊರಡಿಸಿದ್ದರು. ಆದರೂ, ಕೆಲವರೂ ಕಾನೂನುಬಾಹಿರವಾಗಿ ವರ್ಗಾವಣೆ, ಮುಂಬಡ್ತಿ ಹೆಸರಿನಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲು, ಲಾಭದಾಯಕ ಹುದ್ದೆಗಳಲ್ಲಿ ಕುಳಿತುಕೊಳ್ಳಲು ಕೆಲವರು, ಕೋಟ್ಯಂತರ ರೂ. ಲಂಚ ನೀಡಿ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

    ಹಣ ಹಂಚುವವರ ವಿರುದ್ಧ ಕ್ರಮ

    ನವದೆಹಲಿ: ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಿಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ವ್ಯಕ್ತಿಯ ಸ್ಥಾನಮಾನವನ್ನೂ ಲೆಕ್ಕಿಸದೆ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಚುನಾವಣಾ ಆಯೋಗ ಹೇಳಿದೆ. ಮಂಡ್ಯ ತಾಲೂಕಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಟ್ರಕ್​ನಿಂದ ಹಣವನ್ನು ಎಸೆದಿರುವ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚುನಾವಣಾ ಆಯೋಗ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಅಭ್ಯರ್ಥಿಗಳು, ಮುಖಂಡರು, ಏಜೆಂಟರ ವಾಹನಗಳು ಅಥವಾ ಮನೆಗಳಲ್ಲಿ ನಗದು ಅಥವಾ ಮತದಾರರನ್ನು ಪ್ರೇರೇಪಿಸುವ ಯಾವುದೇ ವಸ್ತು ಕಂಡುಬಂದಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು. ಮಾದರಿ ನೀತಿ ಸಂಹಿತೆ ಜಾರಿಗೆ ಬರದಿದ್ದರೂ, ಮತದಾರರಿಗೆ ನಗದು, ಉಡುಗೊರೆ ಅಥವಾ ಇನ್ನಾವುದೇ ವಸ್ತು, ಲಂಚ ನೀಡುವುದು ಕಂಡುಬಂದರೆ ಕ್ರಮ ಕೈಗೊಳ್ಳಲು ಭಾರತೀಯ ದಂಡ ಸಂಹಿತೆ ಅಡಿ ಸಾಕಷ್ಟು ನಿಬಂಧನೆಗಳಿವೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿ ಕಾರಿಗಳು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಯನ್ನು ಈಗಾಗಲೆ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಾವು ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದ ವೇಳೆ ಮತದಾರರನ್ನು ಪ್ರಚೋದಿಸಲು ಹಣದ ಬಳಕೆ ಆಗುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ಹಣ ಬಲ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

    ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ

    ಬೆಂಗಳೂರು: ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡುವ ಅಗತ್ಯ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಜೆ.ಪಿ.ಭವನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಲು ಪಕ್ಷದಲ್ಲಿ ಈಗಾಗಲೆ ನಿರ್ಧಾರ ಆಗಿದೆ. ಹಾಗಾಗಿ ನಾನೇಕೆ ಮಂಡ್ಯದಲ್ಲಿ ಸ್ಪರ್ಧೆ ಮಾಡಬೇಕು? ಮಂಡ್ಯಕ್ಕೆ ಬರುವಂತೆ ಕೆಲವರು ಕೇಳಿದ್ದು ನಿಜ. ಆದರೆ, ಚನ್ನಪಟ್ಟಣದ ಕಾರ್ಯಕರ್ತರಿಗೆ ಅದರಿಂದ ಬೇರೆ ಸಂದೇಶ ಹೋಗುತ್ತದೆ. ಹಾಗೆ ಆಗುವುದು ಬೇಡ. ಹೀಗಾಗಿ ನಾನು ಒಂದೇ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

    ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರಕ್ಕೆ ಜೆಡಿಎಸ್ ಸ್ವಾಗತವಿದೆ. ಮತಯಂತ್ರಗಳ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅನುಮಾನ ನಿವಾರಣೆಯಾಗಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಚೆಕ್​ಪೋಸ್ಟ್ ತಪಾಸಣೆ ನೆಪದಲ್ಲಿ ರೈತರು, ಸಾಮಾನ್ಯರಿಗೆ ಕಿರುಕುಳ ಆಗದಂತೆ ನೋಡಿಕೊಳ್ಳಬೇಕು.

    | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

    ಮಾವನಿಗೆ ಮಂಡಿಯೂರಿದ ಗೋಪಾಲ

    ಸಾಗರ: ಬುಧವಾರ ಬೆಳಗ್ಗೆ ಸಾಗರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರಿಗೆ ಕಾರ್ಯಕರ್ತರು ರಸ್ತೆಯುದ್ದಕ್ಕೂ ಭವ್ಯ ಸ್ವಾಗತ ನೀಡಿದರು. ತೆರೆದ ಕಾರಿನಲ್ಲಿ ಎಂದಿನಂತೆ ಕೈ ಬೀಸಿದ ಬೇಳೂರು ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಕಾಗೋಡು ತಿಮ್ಮಪ್ಪ ಅವರ ಮನೆಗೆ ತೆರಳಿ ತಿಮ್ಮಪ್ಪ ಅವರಿಗೆ ಮಂಡಿಯೂರಿ ನಮಸ್ಕರಿಸಿದರು. ನಂತರ ಮಾವ- ಅಳಿಯ ಪರಸ್ಪರ ಸಿಹಿ ತಿನಿಸಿದರು. ಮಾವನ ಆಶೀರ್ವಾದ ಪಡೆದ ತದನಂತರ ಕಾಂಗ್ರೆಸ್ ಕಚೇರಿಗೆ ತೆರಳಿ ಕಾರ್ಯಕರ್ತರೊಂದಿಗೆ ಬೆರೆತರು. ದಾರಿಯುದ್ದಕ್ಕೂ ಬೇಳೂರು ಪರ ಜಯಘೊಷ, ಕಾರುಗಳು ಹಿಂಬಾಲಿಸಿದವಲ್ಲದೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಸಿಎಂ ಬೊಮ್ಮಾಯಿ ಪ್ರವಾಸ ರದ್ದು

    ಬೆಂಗಳೂರು: ಆಯೋಗ ಚುನಾವಣಾ ದಿನಾಂಕ ಘೋಷಿಸುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದವು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ ಹಠಾತ್ ರದ್ದಾದವು. ಸಿಎಂ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಕೆಲವು ಯೋಜನೆಗಳ ಉದ್ಘಾಟನೆ ನೆರವೇರಿಸಬೇಕಿತ್ತು. ನೀತಿ ಸಂಹಿತೆ ಜಾರಿಯಾದ ಕಾರಣ ರಾಜ್ಯ ಪ್ರವಾಸ ರದ್ದುಗೊಳಿಸಿದರು. ಅಧಿಕೃತ ಪ್ರವಾಸ ಪಟ್ಟಿಯಂತೆ ಮುಖ್ಯಮಂತ್ರಿ ಬುಧವಾರ ಕೊಪ್ಪಳ, ಹಾವೇರಿ, ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು.

    ಮೇ 10 ಹೊಸ ಇಂಜಿನ್​ ನಿರ್ಮಾಣ ಮಾಡುವ ದಿನ

    ಬೆಂಗಳೂರು: ಮೇ 10 ಕೇವಲ ಮತದಾನದ ದಿನವಲ್ಲ, ನವ ಕರ್ನಾಟಕಕ್ಕೆ ಹೊಸ ದಿಕ್ಕು ನೀಡುವ ದಿನ. ಫೇಲಾದ ಎರಡೂ ಇಂಜಿನ್​ಗಳ ಬದಲಿಗೆ ಜನರೇ ಹೊಸ ಇಂಜಿನ್ ನಿರ್ಮಾಣ ಮಾಡುವ ದಿನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಾಖ್ಯಾನಿಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ದಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಹಾಗೂ ಜನರ ಭವಿಷ್ಯ ನಿರ್ಮಾಣ ಮಾಡುವ ದಿನ. ಬರಲಿದೆ ಕಾಂಗ್ರೆಸ್, ತರಲಿದೆ ಪ್ರಗತಿ ಎಂದು ತಿಳಿಸಿದರು. ಈ ಹಿಂದೆಯೇ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟು ಸಾಧ್ಯವೋ ಅಷ್ಟು ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಇಷ್ಟು ದಿನ ಸಮಯ ತಳ್ಳಿದ್ದರು. ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದು, ನಾವು ಇದನ್ನು ಸ್ವಾಗತಿಸುತ್ತೇವೆ ಎಂದರು. ರಾಜ್ಯದಲ್ಲಿ ಒಂದು ಹಂತದ ಚುನಾವಣೆ ನಡೆಸುವ ಆಯೋಗದ ತೀರ್ವನವನ್ನು ನಾವು ಸ್ವಾಗತಿಸುತ್ತೇವೆ. ಆಯೋಗ ಈ ಬಾರಿ ಸಾಕಷ್ಟು ಸುಧಾರಣೆಗಳನ್ನು ತರಲು ನಿರ್ಧರಿಸಿದ್ದು, ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಹೇಳಿದರು. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಡಬಲ್ ಇಂಜಿನ್ ಸರ್ಕಾರದ ದಬ್ಬಾಳಿಕೆಗೆ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಇದಕ್ಕೆ ಜನ ಅಂತ್ಯವಾಡಲಿದ್ದಾರೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

    ಏ.5ರಿಂದ ಸತ್ಯಮೇವ ಜಯತೆ ಹೋರಾಟ: ಏಪ್ರಿಲ್ 5ರಂದು ರಾಹುಲ್ ಗಾಂಧಿ ಅವರು ಕೋಲಾರಕ್ಕೆ ಬಂದು ‘ಸತ್ಯ ಮೇಯ ಜಯತೆ’ ಹೋರಾಟವನ್ನು ದೇಶದುದ್ದಗಲಕ್ಕೆ ಆರಂಭಿಸುತ್ತಿದ್ದಾರೆ. ನಾವು ಇಲ್ಲಿಂದಲೇ ಹೋರಾಟ ಆರಂಭಿಸಲು ಮನವಿ ಮಾಡಿದ್ದು, ಅವರು ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.

    ವಿವಿಧೆಡೆ ನಗದು, ಉಡುಗೊರೆ ವಶಕ್ಕೆ

    •  ಕುಂದಾಪುರದಲ್ಲಿ ಬೈಕ್​ನಲ್ಲಿ ದಾಖಲೆ ರಹಿತವಾಗಿ ಸಾಗಿಸು ತ್ತಿದ್ದ 13 ಲಕ್ಷ ರೂ. ಪೊಲೀಸರ ವಶಕ್ಕೆ.
    • ಮಂಗಳೂರಿನ ರಥಬೀದಿಯಲ್ಲಿ ಕಾರಿನಲ್ಲಿದ್ದ 3.23 ಲಕ್ಷ ರೂ. ನಗದು ವಶ.
    • ಮಂಗಳೂರಿನ ಕದ್ರಿಯಲ್ಲಿ ಕಾರು ತಪಾಸಣೆ ವೇಳೆ ಸಿಕ್ಕ 1.10 ಲಕ್ಷ ರೂ. ನಗದು ಜಪ್ತಿ.
    • ಕಲಬುರಗಿ ಜಿಲ್ಲೆಯಲ್ಲಿ 54 ಲಕ್ಷದ ಬೆಳ್ಳಿಯ ವಸ್ತು ಸೇರಿ ವಿವಿಧ ಚೆಕ್ ಪೋಸ್ಟ್​ಗಳಲ್ಲಿ ತಪಾಸಣೆ ವೇಳೆ 3.50 ಕೋಟಿ ರೂ. ವಶಕ್ಕೆ.
    • ಬೆಳಗಾವಿಯ ವಿವಿಧ ಕಡೆ 72.30 ಲಕ್ಷ ರೂ. ನಗದು, 3.5 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ.
    • ಹರಪನಹಳ್ಳಿ ತಾಲೂಕಿನ ಜಂಬುಲಿಂಗನಹಳ್ಳಿ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದ 2.52 ಕೋಟಿ ರೂ. ವಶಕ್ಕೆ.

    3 ಹಂತದಲ್ಲಿ ಪ್ರಚಾರ ತಂತ್ರ

    ಬೆಂಗಳೂರು: ಅತಿ ಹೆಚ್ಚು ಸದಸ್ಯ ಬಲ, ಬಲಿಷ್ಠ ಸಂಘಟನೆ, ವ್ಯವಸ್ಥಿತ ಕಾರ್ಯಯೋಜನೆಯನ್ನು ಬಿಜೆಪಿ ಅಳವಡಿಸಿಕೊಂಡಿದ್ದು, ವಿಧಾನಸಭೆ ಚುನಾವಣೆಗೆ ಮೂರು ಹಂತದ ಪ್ರಚಾರ ತಂತ್ರ ಹೆಣೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ಬೂತ್ ಹಾಗೂ ವಿಧಾನಸಭೆ ಕ್ಷೇತ್ರಮಟ್ಟದಲ್ಲಿ ಜಿಲ್ಲಾ ಮುಖಂಡರು, ಜಿಲ್ಲಾಹಂತದಲ್ಲಿ ರಾಜ್ಯ ನಾಯಕರು ಹಾಗೂ ರಾಜ್ಯಮಟ್ಟದಲ್ಲಿ ರಾಷ್ಟ್ರೀಯ ನಾಯಕರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಡಿಜಿಟಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದೆ. ಮನೆಮನೆಗೆ ಭೇಟಿ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಿ, ಗರಿಷ್ಠ ಪ್ರಮಾಣದಲ್ಲಿ ಜನರನ್ನು ತಲುಪುವ ಕಾರ್ಯತಂತ್ರ ರೂಪಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳ ಜತೆಗೆ ಅಮಿತ್ ಷಾ, ಜೆ.ಪಿ.ನಡ್ಡಾ ಅವರ ಪ್ರವಾಸ ಕಾರ್ಯಕ್ರಮಗಳನ್ನು ಸಂಬಂಧಿಸಿದ ಸಮಿತಿ ಸಭೆಗಳಲ್ಲಿ ನಿರ್ಧರಿಸಲಿದ್ದು, ರಾಜ್ಯದಲ್ಲಿ ವ್ಯಾಪಕ, ಯೋಜನಾಬದ್ಧ ಪ್ರಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನೀತಿ ಸಂಹಿತೆ ಪಾಲನೆಗೂ ಪಕ್ಷ ಬದ್ಧವಾಗಿದೆ ಎಂದು ವಿವರಿಸಿದರು.

    ಪಕ್ಷದ ಪರ ಒಲವು: ರಾಜ್ಯ ಸರ್ಕಾರದ ಕೆಲಸಗಳನ್ನು ಕಂಡುಂಡ ಜನರ ಒಲವು ಬಿಜೆಪಿ ಪರವಾಗಿದೆ. ಚುನಾವಣೆಯಲ್ಲಿ ಖಂಡಿತವಾಗಿ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದು, ನಿಚ್ಚಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂಬ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್​ಗೆ ಅಭ್ಯರ್ಥಿಗಳ ಕೊರತೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎರಡನೇ ಪಟ್ಟಿ ಸಿದ್ಧ ಮಾಡುವಾಗ ನಮ್ಮ ಶಾಸಕರಿಗೆ ಕರೆ ಮಾಡಿ ಟಿಕೆಟ್ ಭರವಸೆ ನೀಡಿದ್ದು, ಯಾರೂ ಸ್ಪಂದಿಸಿಲ್ಲ. ಕಾಂಗ್ರೆಸ್​ಗೆ ಅಭ್ಯರ್ಥಿಗಳ ಕೊರತೆ ಇರುವುದು ಎತ್ತಿ ತೋರಿಸುತ್ತದೆ. ನಮ್ಮ ಪಕ್ಷದಲ್ಲಿ ಮೂಲ, ವಲಸಿಗ ಎಂದಿಲ್ಲ. ಎಲ್ಲರೂ ನಮ್ಮವರೇ ಎಂದು ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದರು.

    ಬಿಜೆಪಿಗೆ ಅಭಿವೃದ್ಧಿಯೇ ಪ್ರಧಾನ ಕಾರ್ಯಸೂಚಿ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಅಭಿವೃದ್ಧಿಯೇ ಬಿಜೆಪಿ ಪ್ರಧಾನ ಕಾರ್ಯಸೂಚಿಯಾಗಿರಲಿದೆ. ರಾಜ್ಯ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರ ಮನ, ಮನೆಗೆ ತಲುಪಿಸಲಿದ್ದೇವೆ ಎಂದು ಕೇಂದ್ರ ಸಚಿವೆ, ಪಕ್ಷದ ಚುನಾವಣೆ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು. ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆಯೇ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಕಾರ್ಯಚಟುವಟಿಕೆಗಳು ಚುನಾವಣೆಗೆ ಸೀಮಿತವಲ್ಲ. ವರ್ಷದ ಎಲ್ಲ ದಿನಗಳಲ್ಲಿ ಒಂದಿಲ್ಲೊಂದು ಕಾರ್ಯಕ್ರಮದ ಮೂಲಕ ಜನರೊಂದಿಗೆ ನಿಕಟತೆ, ಕಾರ್ಯಕರ್ತರಲ್ಲಿ ಕ್ರಿಯಾಶೀಲತೆ ಕಾಯ್ದುಕೊಂಡಿದೆ ಎಂದರು. ಕಾಂಗ್ರೆಸ್, ಜೆಡಿಎಸ್ ಚುನಾವಣೆ ಬಂದಾಗ ಎಚ್ಚೆತ್ತುಕೊಳ್ಳುತ್ತವೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆದಾಳುವ ನೀತಿ ಅನುಸರಿಸುತ್ತಿವೆ. ಗ್ಯಾರಂಟಿಗಳನ್ನು ಕೊಡಲು ಮುಂದಾಗುತ್ತವೆ ಎಂದು ಶೋಭಾ ಕರಂದ್ಲಾಜೆ ಛೇಡಿಸಿದರು. ಹಿಂದುತ್ವ ಎನ್ನುವುದು ಜೀವನವಿಧಾನ, ರಕ್ತಗತವಾಗಿದೆ. ಎಲ್ಲರನ್ನೂ ಒಳಗೊಳ್ಳುವುದಾಗಿದ್ದು, ಚುನಾವಣೆಗೆ ಕಾರ್ಯಸೂಚಿಯಾಗುವುದಿಲ್ಲ. ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಲು ಹಿಂದುತ್ವ ಬಯಸುವುದಿಲ್ಲ ಎಂದು ಪ್ರತಿಪಾದಿಸಿದರು.

    ಪ್ರಜಾಧ್ವನಿ ಯಾತ್ರೆಯಲ್ಲಿ ಕಲಾವಿದರ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಣ ಎಸೆದು, ಹಣದ ಮದ ತೋರಿಸಿದ್ದು, ಕಲಾವಿದರಿಗೂ ಅಪಮಾನಿಸಿದ್ದಾರೆ. ಚುನಾವಣೆಯಲ್ಲಿ ದುಡ್ಡಿನ ಹೊಳೆ ಹರಿಸುತ್ತೇವೆ ಎಂಬ ಮುನ್ಸೂಚನೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದೇ ಹಂತದಲ್ಲಿ ಮತದಾನ, ಏ.1ರಂದು 18 ವರ್ಷ ತುಂಬುವವರಿಗೆ ಮತದಾನ ಮಾಡಲೆಂದು ನೋಂದಣಿಗೆ ಅವಕಾಶ ಸೇರಿ ಚುನಾವಣೆ ಆಯೋಗ ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹವಾಗಿವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

    ನಾನು ಯಾರಿಗೂ ಹೆದರಲ್ಲ

    ಮೈಸೂರು: ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ನಾನು ಹೆದರುವುದಿಲ್ಲ. ಯಾರೇ ನಿಂತರೂ ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ವರುಣದಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರು ಕಣಕ್ಕಿಳಿಯುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಳೆದ ಚುನಾವಣೆಯಲ್ಲಿ ಸೋತ ಮೇಲೆ ರಾಹು, ಕೇತುಗಳು ಒಂದಾದವು ಎಂದು ಹೇಳಿದ್ದೆ. ಈಗ ನಾನು ಆ ಪದ ಬಳಸುವುದಿಲ್ಲ. ಬಳಸಿದರೆ ಅವರು ಈಗ ಸಿಟ್ಟಾಗುತ್ತಾರೆ ಎಂದು ಟಾಂಗ್ ನೀಡಿದರು. ಕಳೆದ ಬಾರಿಯಂತೆ ಈ ಬಾರಿಯ ಚುನಾವಣೆಯಲ್ಲೂ ಜೆಡಿಎಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಳ್ಳುವ ಸೂಚನೆ ಇದೆ ಎಂದರು. ಇದೇ ನನ್ನ ಕೊನೆಯ ಚುನಾವಣೆ. ಹುಟ್ಟೂರಿನ ಕ್ಷೇತ್ರದಿಂದಲೇ ಸ್ಪರ್ಧಿಸಿ ನಿವೃತ್ತಿಯಾಗಬೇಕೆಂಬುದು ನನ್ನ ಬಯಕೆ. ಹೀಗಾಗಿ ನಾನು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಹೀಗಾಗಿ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದೆ. ಈ ಬಾರಿ ನನಗೆ ಯಾವ ಅನುಮಾನ ಇಲ್ಲ. ಆದರೆ, ಕೋಲಾರದ ಜನರ ಒತ್ತಾಯದಿಂದ ಕರೆಯುತ್ತಿರುವ ಕಾರಣ ಅಲ್ಲೂ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಅಂತಿಮ ತೀರ್ಮಾನ ಹೈಕಮಾಂಡ್​ಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.

    25 ಕ್ಷೇತ್ರಗಳಲ್ಲೂ ಗೆಲ್ಲುವ ಅವಕಾಶ: ನಾನು ವರುಣ ಕ್ಷೇತ್ರದ ಪ್ರಚಾರಕ್ಕೆ ಹೋಗಲ್ಲ. ನಾಮಪತ್ರ ಸಲ್ಲಿಕೆಗೆ ಮಾತ್ರ ಕ್ಷೇತ್ರಕ್ಕೆ ಹೋಗುತ್ತೇನೆ. ಪ್ರಚಾರವನ್ನು ಪುತ್ರ ಯತೀಂದ್ರ ನೋಡಿಕೊಳ್ಳುತ್ತಾನೆ. ನಾನು ರಾಜ್ಯ ಪ್ರವಾಸ ಮಾಡಬೇಕಿದೆ. ನನಗೆ ಕ್ಷೇತ್ರ ಇಲ್ಲ ಎನ್ನುವುದೆಲ್ಲ ಅರ್ಥ ಇಲ್ಲದ ಮಾತು. ನನಗೆ 25 ಕ್ಷೇತ್ರಗಳಲ್ಲೂ ಗೆಲ್ಲುವ ಅವಕಾಶ ಇರುವ ಕಾರಣ ನನ್ನನ್ನು ಜನರು ಆಹ್ವಾನಿಸುತ್ತಿದ್ದಾರೆ ಎಂದರು. ಕಾಂಗ್ರೆಸ್​ನ ಎರಡನೇ ಪಟ್ಟಿ ಒಂದೆರಡು ದಿನದಲ್ಲಿ ಬಿಡುಗಡೆಯಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಹೀಗಾಗಿ, ಟಿಕೆಟ್​ಗಾಗಿ ಸಾಕಷ್ಟು ಜನರು ಪೈಪೋಟಿ ನಡೆಸುತ್ತಿದ್ದಾರೆ ಎಂದರು.

    ಸರ್ಕಾರಿ ಕಾರು ವಾಪಸ್: ರಾಜ್ಯ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೊಷಣೆ ಮಾಡುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಿ ಕಾರನ್ನು ಹಿಂದಿರುಗಿಸಿ, ಖಾಸಗಿ ಕಾರಿನಲ್ಲಿ ತೆರಳಿದರು.

    ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts