More

    ಪುಂಡಾಲಲ್ಲಿ ನಿರ್ಮಾಣವಾಗಲಿದೆ ಸೇತುವೆ

    ಹೆಬ್ರಿ: ತಾಲೂಕಿನ ಮುದ್ರಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ನಕ್ಸಲ್ ಪೀಡಿತ ಕಬ್ಬಿನಾಲೆ ಗ್ರಾಮದ ಜಡ್ಡು ಗುಳೆಲ್ ರಸ್ತೆಗೆ ಪುಂಡಾಲು ಎಂಬಲ್ಲಿ ಹರಿಯುವ ಹೊಳೆಗೆ, ಸೇತುವೆ ಇಲ್ಲದೆ ಇಲ್ಲಿನ ಜನರಿಗೆ ತುಂಬಾ ಸಮಸ್ಯೆಯಾಗಿತ್ತು. ಈಗ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ವಿಶೇಷ ಕಾಳಜಿಯಿಂದ 40 ವರ್ಷಗಳಿಂದ ಬೇಡಿಕೆಯಲ್ಲಿದ್ದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದ್ದು, ಶನಿವಾರ ಸ್ಥಳ ಪರಿಶೀಲನೆ ಪ್ರಕ್ರಿಯೆ ನಡೆದಿದೆ.
    ಈ ಭಾಗದ ಜನರು ಮಳೆಗಾಲದಲ್ಲಿ ಕಾಲುಸಂಕದ ಮೂಲಕ ಕಿ.ಮೀ. ಸುತ್ತು ಬಳಸಿ ಮುನಿಯಾಲು, ಕಬ್ಬಿನಾಲೆಯ ಪೇಟೆ, ಬಸ್ಸು ನಿಲ್ದಾಣ ಶಾಲೆಗೆ ಹೋಗಬೇಕಾಗಿತ್ತು. ಈ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಬೇಡಿಕೆ ಈಡೇರಿಸಿದ್ದಕ್ಕಾಗಿ ಶಾಸಕ ಸುನೀಲ್ ಕುಮಾರ್ ಮತ್ತು ನಿಕಟಪೂರ್ವ ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್ ಮತ್ತು ಮುದ್ರಾಡಿ ಗ್ರಾಪಂಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
    ಇಂಜಿನಿಯರ್ ಪಾಲಣ್ಣ, ಮುದ್ರಾಡಿ ಗ್ರಾಪಂ ಅಧ್ಯಕ್ಷ ಮಂಜುನಾಥ ಹೆಗ್ಡೆ, ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಪಲ್ಲವಿ ರಾವ್ ಹಾಗೂ ಅನೇಕರು ಉಪಸ್ಥಿತರಿದ್ದರು.
    ಕೈಕೊಟ್ಟ ನೆಟ್‌ವರ್ಕ್: ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅಳತೆ ಮತ್ತು ಅಂದಾಜು ನಿರ್ವಹಿಸಲು ಬಂದಿದ್ದ ಖಾಸಗಿ ಕಂಪನಿಯ ಸಿಬ್ಬಂದಿ ನೆಟ್‌ವರ್ಕ್ ಸಿಗದೆ ಕೆಲಸ ಕಾರ್ಯಗಳಿಗೆ ಹೆಣಗಾಡಿದರು. ನಂತರ ಸ್ಥಳೀಯರ ಸಹಕಾರದಿಂದ ಸಾಧ್ಯವಾಯಿತು.
    ಗ್ರಾಮಸ್ಥರಲ್ಲಿ ಹರ್ಷ: ಸೇತುವೆ ಸಮಸ್ಯೆಯಿಂದ ಮಳೆಗಾಲದಲ್ಲಿ ಹೈನುಗಾರರು ಡೇರಿಗೆ ಹಾಲು ನೀಡಲು ಸಾಧ್ಯವಾಗದೆ ಅನೇಕರು ದನ ಕರುಗಳನ್ನು ಮಾರಿದ್ದರು. ಕೃಷಿಗೆ ಯೋಗ್ಯ ಬೆಲೆ ಬಂದಾಗ ರಸ್ತೆ ಇಲ್ಲದೆ ಸಾಗಾಟಕ್ಕೆ ತೊಂದರೆಯಾಗಿತ್ತು. ಆರು ತಿಂಗಳ ಮಟ್ಟಿಗೆ ಬೇಕಾಗುವ ದಿನಪಯೋಗಿ ವಸ್ತುಗಳನ್ನು ಶೇಖರಿಸಿಡಬೇಕಾಗಿತ್ತು. ಮಳೆಗಾಲದಲ್ಲಿ ದ್ವೀಪದಂತೆ ಆಗುತ್ತಿದ್ದ ಭಂಡಾರಬೆಟ್ಟು, ಶಿವರಮಡಿ ಮತ್ತು ಜಾರ್ಮೆಟ್ಟು ಭಾಗದಲ್ಲಿ ಸ್ಥಳೀಯರು ಅಡಕೆ ಮರದಿಂದ ಕಾಲುಸಂಕ ನಿರ್ಮಿಸಿ ಸಂಚರಿಸುತ್ತಿದ್ದರು. ಈಗ ಸೇತುವೆ ನಿರ್ಮಾಣವಾಗುತ್ತಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.


    ಸೇತುವೆ ಇಲ್ಲದ ಕಾರಣ ಬಹಳ ಕಷ್ಟದ ದಿನ ಅನುಭವಿಸಿದ್ದೇವೆ. ಈಗ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಮ್ಮ 40 ವರ್ಷದ ಬೇಡಿಕೆ ಈಡೇರಿದೆ. ಸಕಾಲದಲ್ಲಿ ವರದಿ ಪ್ರಕಟಿಸಿದ ವಿಜಯವಾಣಿ ಪತ್ರಿಕೆ ಮತ್ತು ಜನಪ್ರತಿನಿಧಿಗಳಿಗೆ ಧನ್ಯವಾದಗಳು.
    | ಶ್ರೀನಿಧಿ ಭಟ್ ಸ್ಥಳಿಯರು

    ಶಾಸಕರ ವಿಶೇಷ ಮುತುವರ್ಜಿಯಿಂದ ಈ ಕಾರ್ಯ ಸಾಧ್ಯವಾಗಿದೆ. ಸ್ಥಳೀಯರು ಹಲವು ಬಾರಿ ಸೇತುವೆ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಬೇಡಿಕೆ ಈಡೇರಲಿದ್ದು, |ಶೀಘ್ರದಲ್ಲೇ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ.
    | ಜ್ಯೋತಿ ಹರೀಶ್ ಜಿಪಂ ನಿಕಟಪೂರ್ವ ಸದಸ್ಯರು

    |

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts