More

    ಯರಗಟ್ಟಿಯಲ್ಲಿ ಕುರಿ ಮಾರಾಟಕ್ಕೆ ಪರದಾಟ

    ಬೆಳಗಾವಿ: ವ್ಯಾಪಾರ-ವಹಿವಾಟು ಕೇಂದ್ರ ಸ್ಥಾನವಾಗಿರುವ ಯರಗಟ್ಟಿ ಪಟ್ಟಣದಲ್ಲಿ ಎಪಿಎಂಸಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಪ್ರತಿ ಶನಿವಾರ ವಾರದ ಸಂತೆಯಲ್ಲಿ ಕುರಿ, ಮೇಕೆ, ಕೋಳಿ ಮಾರಾಟಕ್ಕೆ ಸಾಕಣಿದಾರರು ಪರದಾಡುತ್ತಿದ್ದಾರೆ.

    ಸರ್ಕಾರವು ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಎಪಿಸಿಎಂ ಮಾರುಕಟ್ಟೆಗಳಲ್ಲಿ ಹಸು, ಎತ್ತು ಮಾರಾಟ ಸಂತೆಗೆ ಮಾತ್ರ ನಿರ್ಬಂಧಿಸಿ ಎಮ್ಮೆ, ಕುರಿ, ಮೇಕೆ, ಕೋಳಿ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಆದರೆ, ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಪಟ್ಟಣದಿಂದ 1.5 ಕಿ.ಮೀ.ದೂರದಲ್ಲಿ ಹೆದ್ದಾರಿ, ಖಾಲಿ ಪ್ರದೇಶಗಳಲ್ಲಿ ಕುರಿ, ಮೇಕೆ, ಕೋಳಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಪ್ರತಿವಾರ ಕುರಿಗಾರರು, ರೈತರು, ವ್ಯಾಪಾರಿಗಳು, ಅಂಗಡಿಕಾರರು ಸಮಸ್ಯೆ ಎದುರಿಸುತ್ತಿದ್ದಾರೆ.

    ಯರಗಟ್ಟಿ ಪಟ್ಟಣದ ಸುತ್ತಮುತ್ತಲಿನ ಸುಮಾರು 25 ಹಳ್ಳಿಗಳಿಂದ ಬಡವರು, ಕೂಲಿಕಾರರು, ರೈತರು, ಕಟ್ಟಡ ಕಾರ್ಮಿಕರು ಪ್ರತಿ ಶನಿವಾರದ ನಡೆಯುವ ವಾರದ ಸಂತೆ ಮೇಲೆ ಅವಲಂಬಿತರಾಗಿದ್ದಾರೆ. ಕುರಿ, ಮೇಕೆ, ಕೋಳಿ ಸೇರಿ ಕಾಳು ಮಾರಾಟ ಮಾಡುತ್ತಾರೆ. ಇಲ್ಲಿ ಬರುವ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಾರೆ. ಆದರೆ, ಎಪಿಎಂಸಿ ಅಧಿಕಾರಿಗಳು ಜಾನುವಾರುಗಳಿಗೆ ಚರ್ಮಗಂಟು ರೋಗ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಸಂಪೂರ್ಣ ಮಾರಾಟ ಬಂದ್ ಮಾಡಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.
    ನಾಲ್ಕೈದು ತಿಂಗಳಿಂದ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿರುವುದರಿಂದ ಕುರಿ, ಮೇಕೆ ಮಾರಾಟ ಮಾಡಲು ಪರದಾಡುತ್ತಿದ್ದೇವೆ. ರಸ್ತೆಯ ಪಕ್ಕದಲ್ಲಿ ಮಾರಾಟ ಮಾಡಿದರೆ ಸಂಚಾರ ದಟ್ಟಣೆ ಸಮಸ್ಯೆ ಜತೆಗೆ ಪೊಲೀಸರ ಕಿರಿಕಿರಿ. ಪಟ್ಟಣ ಬಿಟ್ಟು 1 ಕಿ.ಮೀ.ದೂರ ಹೋಗಿ ಮಾರಾಟ ಮಾಡಲು ಕಷ್ಟವಾಗುತ್ತಿದೆ. ಅನಿವಾರ್ಯವಾಗಿ ಬೇರೆ ಮಾರುಕಟ್ಟೆಗಳಿಗೆ ಹೋಗಬೇಕಾಗಿದೆ. ಇಲ್ಲದಿದ್ದರೆ ಅನಿವಾರ್ಯವಾಗಿ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಗಿದೆ ಎಂದು ಕುರಿಗಾಹಿಗಳಾದ ಯಮನಪ್ಪ ಪೂಜೇರ, ರಾಯಪ್ಪ ಸತ್ತಿಗೇರಿ ದೂರಿದ್ದಾರೆ.

    ಎಪಿಎಂಸಿ ಮಾರುಕಟ್ಟೆಗಳಲ್ಲಿ ಹಸು, ಎತ್ತುಗಳ ಮಾರಾಟ ಸಂತೆಗೆ ಮಾತ್ರ ನಿರ್ಬಂಧವಿದೆ. ಕುರಿ, ಮೇಕೆ, ಎಮ್ಮೆ, ಕೋಳಿ ಮಾರಾಟಕ್ಕೆ ನಿರ್ಬಂಧ ಇಲ್ಲ. ಯರಗಟ್ಟಿ ಎಪಿಎಂಸಿ ಯಾವ ಕಾರಣಕ್ಕೆ ಮಾರುಕಟ್ಟೆ ಬಂದ್ ಮಾಡಿದ್ದಾರೆ ಎಂಬುದರ ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು.
    | ವಿರೂಪಾಕ್ಷ ಲಮಾಣಿ, ಜಿಲ್ಲಾ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts