More

    ಅಕ್ರಮ ಮಟ್ಟ ಹಾಕಲು ‘ಸಿ ವಿಜಿಲ್’ ಕಣ್ಗಾವಲು!

    ಬೆಳಗಾವಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಚುನಾವಣಾ ಅಕ್ರಮಗಳೂ ಮಿತಿ ಮೀರುತ್ತಿವೆ. ಈ ಅಕ್ರಮಗಳನ್ನು ತಡೆಗಟ್ಟುವುದಕ್ಕೆಂದೇ ಚುನಾವಣಾ ಆಯೋಗವು ‘ಸಿ ವಿಜಿಲ್ ಆ್ಯಪ್’ ಕಾರ್ಯಾರಂಭಿಸಿದೆ. ಸಾರ್ವಜನಿಕರಿಂದಲೂ ದೂರುಗಳು ಸ್ವೀಕರಿಸುವ ಮೂಲಕ ನಿಯಮ ಬಾಹಿರ ಚಟುವಟಕೆಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

    ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ‘ಸಿ ವಿಜಿಲ್ ಆ್ಯಪ್’ ಅನ್ನು ಅಧಿಕಾರಿಗಳು ಕಾರ್ಯಾರಂಭಿಸಿದ್ದು, ಈವರೆಗೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ 53 ಕರೆಗಳು ಬಂದಿವೆ. ಹಣ ಹಂಚಿಕೆ, ಪರವಾನಗಿ ಪಡೆಯದೇ ಪಕ್ಷದ ಪೋಸ್ಟರ್, ಬ್ಯಾನರ್‌ಗಳನ್ನು ಮನೆಗಳು ಹಾಗೂ ಎಲ್ಲೆಂದರಲ್ಲಿ ಅಂಟಿಸುವುದು, ವಾಹನಗಳನ್ನು ಬಳಸುವುದು ಸೇರಿ ಹಲವು ದೂರುಗಳು ದಾಖಲಾಗುತ್ತಿವೆ. ಸಾರ್ವಜನಿಕರು ಆಡಿಯೋ, ವಿಡಿಯೋ, ಫೋಟೋಗಳನ್ನು ‘ಸಿ ವಿಜಿಲ್ ಆ್ಯಪ್’ ಮೂಲಕ ಅಪ್‌ಲೋಡ್ ಮಾಡಿ ದೂರು ದಾಖಲಿಸಬಹುದು. ಅಕ್ರಮಗಳು ಕಂಡ ತಕ್ಷಣ 5 ನಿಮಿಷ ಅವಧಿಯಲ್ಲಿ ದೂರು ದಾಖಲಿಸಿದರೆ ಮಾನ್ಯವಾಗುತ್ತದೆ.

    ಜಿಲ್ಲೆಯ ವಿವಿಧೆಡೆಯಿಂದ ದಾಖಲಾದ ದೂರುಗಳಿಗೆ ಸಮೀಪದ ಫ್ಲೈಯಿಂಗ್ ಸ್ಕ್ವಾಡ್‌ಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು, ರಿಟರ್ನಿಂಗ್ ಅಫೀಸರ್(ಆರ್‌ಒ)ಗಳಿಗೆ ವರದಿ ಸಲ್ಲಿಕೆ ಮಾಡುತ್ತಾರೆ. ಆರ್‌ಒ ಅವರು ಸತ್ಯಾಸತ್ಯತೆ ಕಂಡುಕೊಂಡು ದೂರುದಾರರಿಗೆ ಪ್ರತಿಕ್ರಿಯೆ ನೀಡುತ್ತಾರೆ. ದೂರುದಾರರ ಹೆಸರು, ವಿಳಾಸವನ್ನು ಗೌಪ್ಯವಾಗಿಡುತ್ತಾರೆ. ಲಂಚ, ಉಚಿತ ಉಡೂಗೊರೆ, ಮದ್ಯ, ಮಾದಕ ವಸ್ತು ವಿತರಣೆ, ಚಿನ್ನಾಭರಣ ಹಂಚಿಕೆ ಪ್ರಕರಣಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿ ಸಿದ್ದು, ಇಂತಹ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ.

    ಜಿಯೋಟ್ಯಾಗ್: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ. ನೀತಿಸಂಹಿತೆ ಉಲ್ಲಂಘನೆ ವರದಿ ಮಾಡಲು ಬಳಕೆದಾರರು ‘ಸಿ ವಿಜಿಲ್‌ನಲ್ಲಿ ತಮ್ಮ ಕ್ಯಾಮರಾ ಆನ್ ಮಾಡಿದಾಗ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಜಿಯೋ-ಟ್ಯಾಗಿಂಗ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುತ್ತದೆ. ಇದು ಘಟನೆಯ ನಿಖರವಾದ ಸ್ಥಳವನ್ನು ತಿಳಿಯಲು ಸಹಾಯ ಮಾಡುತ್ತದೆ. ‘ಸಿ ವಿಜಿಲ್ ಆ್ಯಪ್’ ಮೂಲಕ ನಿಮ್ಮ ಕಣ್ಣಿಗೆ ಕಾಣುವ, ನೀವಿರುವ ಸ್ಥಳದಲ್ಲಿ ಸಂಭವಿಸುವ ಚುನಾವಣಾ ಅಕ್ರಮಗಳ ಬಗ್ಗೆ ಅತ್ಯಂತ ಸುಲಭವಾಗಿ ಮತ್ತು ನಿಖರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು. ನಾಗರಿಕರು ಲೈವ್ ಫೋಟೋ ಅಥವಾ ವೀಡಿಯೊವನ್ನು ಸೆರೆಹಿಡಿದು ಅಪ್‌ಲೋಡ್ ಮಾಡಬೇಕು, ನೀತಿಸಂಹಿತೆ ಉಲ್ಲಂಘನೆಯ ಸಾಕ್ಷೃದ ಪುರಾವೆಗಳು ಸಿಕ್ಕ ತಕ್ಷಣ ಅಧಿಕಾರಿಗಳು ಕಾರ್ಯಾಚರಣೆಗಿಳಿಯುತ್ತಾರೆ.

    ಪ್ರತಿ ಸಿ ವಿಜಿಲ್ ಪ್ರಕರಣದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು 100 ನಿಮಿಷಗಳ ಅವಧಿಯಲ್ಲಿ ತೆಗೆದುಕೊಂಡ ಕ್ರಮದೊಂದಿಗೆ ಪ್ರತ್ಯುತ್ತರ ನೀಡಲಾಗುತ್ತದೆ. ಜಿಲ್ಲೆಯಲ್ಲಿ ದಾಖಲಾದ 53 ದೂರುಗಳ ಪೈಕಿ 39 ದೂರುಗಳು ನಿಖರವಾಗಿದ್ದು, ಇವುಗಳಿಗೆ ಅಧಿಕಾರಿಗಳು ಪ್ರತ್ಯುತ್ತರ ನೀಡಿದ್ದಾರೆ.

    ಘಟನೆಗಳ ಮೇಲೆ ತ್ವರಿತ ಕ್ರಮ: ದೂರು ಸಲ್ಲಿಕೆಯಾದ 15 ನಿಮಿಷಗಳಲ್ಲಿ ತನಿಖಾ ತಂಡಕ್ಕೆ ತಲುಪುತ್ತದೆ. ಪರಿಶೀಲನೆ ನಡೆಸಿದ ತಂಡ, ಸೂಕ್ತ ಕ್ರಮ ಕೈಗೊಳ್ಳುತ್ತದೆ. ಬಳಿಕ ಆ ಕ್ರಮಗಳ ಬಗ್ಗೆ ದೂರುದಾರರಿಗೆ ಮೊಬೈಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ದೂರು ನೋಂದಾಯಿಸಿ ಮೊಬೈಲ್ ಫೋನ್‌ನಲ್ಲಿ ಸಿ ವಿಜಿಲ್ ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡುವ ಮೂಲಕ ಫೋಟೋ ಆಡಿಯೊ, ವಿಡಿಯೋ ತೆಗೆದು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ತಮ್ಮ ವೈಯಕ್ತಿಕ ವಿವರಗಳು/ಗುರುತು ಬಹಿರಂಗಪಡಿಸದೆ ದೂರು ನೀಡಲು ನಾಗರಿಕರಿಗೆ ಆ್ಯಪ್ ಅವಕಾಶ ನೀಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts