More

    ಕುಸಿಯಲು ದಿನ ಎಣಿಸುತ್ತಿದೆ ದೇವಗಿರಿ ಶಾಲೆ : ಮಕ್ಕಳ ಕೊರತೆಯಿಂದ ಮುಚ್ಚಿದ ಬಳಿಕ ಶಿಥಿಲವಾದ ಕಟ್ಟಡ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಸಾವಿರಾರು ಜನರಿಗೆ ಅಕ್ಷರ ಜ್ಞಾನ ನೀಡಿ ಸಮಾಜಕ್ಕೆ ಮಾದರಿಯಾಗಿದ್ದ ಸರ್ಕಾರಿ ಶಾಲೆಯೊಂದು ವಿದ್ಯಾರ್ಥಿಗಳ ಕೊರತೆಯಿಂದ 12 ವರ್ಷಗಳ ಹಿಂದೆ ಮುಚ್ಚಲ್ಪಟ್ಟು, ಸದ್ಯದಲ್ಲೇ ಸಂಪೂರ್ಣ ಧರಾಶಾಯಿಯಾಗುವ ಪರಿಸ್ಥಿತಿಗೆ ತಲುಪಿದೆ.

    ಇದು ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ದೇವಗಿರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. ಈ ಸರ್ಕಾರಿ ಶಾಲೆ ಸುಮಾರು 40 ವರ್ಷಗಳ ಹಿಂದೆ ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭವಾಯಿತು. 1 ಎಕರೆಯಷ್ಟು ಜಾಗವನ್ನು ಊರವರೊಬ್ಬರು ಶಾಲೆಗಾಗಿ ನೀಡಿದ್ದರು. ಎಲ್ಲ ವಿಚಾರಗಳಲ್ಲೂ ವ್ಯವಸ್ಥಿತವಾಗಿದ್ದ ಶಾಲೆ 2012ರಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಮುಚ್ಚಲ್ಪಟ್ಟಿತು.

    ನೆರಿಯ ಗ್ರಾಮದ ದೇವಗಿರಿ, ಅಂಬಟೆಮಲೆ ಮೊದಲಾದ ಪ್ರದೇಶಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಶಾಲೆಯು ಆಸರೆಯಾಗಿತ್ತು. 1ರಿಂದ 7ನೇ ತರಗತಿ ತನಕ ಇದ್ದ ಶಾಲೆಯಲ್ಲಿ ಹಲವು ವರ್ಷ 200ಕ್ಕಿಂತ ಅಧಿಕ ಮಕ್ಕಳ ಹಾಜರಾತಿ ಇರುತ್ತಿತ್ತು. ಆದರೆ ಮುಂದೆ ಮಕ್ಕಳ ದಾಖಲಾತಿ ಕ್ಷೀಣಿಸಿ, 2012ರಿಂದ ಮುಚ್ಚಿಹೋಗಿದೆ. ಬಳಿಕ ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಶಾಲೆಯನ್ನು ಮತ್ತೆ ತೆರೆಯುವ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದಿರುವುದು ವಿಪರ್ಯಾಸ.
    ಶಾಲಾ ಪರಿಸರದ ಸುತ್ತ ಭಾರಿ ಗಿಡಗಂಟಿ ಬೆಳೆದಿದ್ದು, ಹಾವು ಮೊದಲಾದ ಜೀವಿಗಳಿಗೆ ಆಶ್ರಯ ತಾಣವಾಗಿದೆ. ಶಾಲಾ ಕೊಠಡಿಗಳು ಕಸ ತುಂಬಿ ತ್ಯಾಜ್ಯ ಕೇಂದ್ರಗಳಾಗಿವೆ. ಮುಂಭಾಗದ ಗೋಡೆ ಧರಾಶಾಯಿಯಾಗಿದೆ. ಇರುವ 6 ಕೊಠಡಿಗಳ ಛಾವಣಿ ಅಲ್ಲಲ್ಲಿ ಕುಸಿದು ಹೆಂಚು, ರೀಪು, ಪಕ್ಕಾಸುಗಳು ಪುಡಿಯಾಗಿ ಬಿದ್ದಿವೆ. ಈ ಬಾರಿ ಮಳೆಗಾಲದಲ್ಲಿ ಈ ಶಾಲೆ ಕುಸಿದು ಬೀಳುವುದು ಬಹುತೇಕ ಖಚಿತ. ಶಾಲೆಯ ಬಳಿಗೆ ಗಿಡಗಂಟಿಗಳನ್ನು ಸರಿಸಿ ಹೋಗಬೇಕಾದ ಸ್ಥಿತಿ ಇದೆ. ಶೌಚಗೃಹ ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣದಂತಾಗಿದೆ.

    ಕುಸಿಯಲು ದಿನ ಎಣಿಸುತ್ತಿದೆ ದೇವಗಿರಿ ಶಾಲೆ : ಮಕ್ಕಳ ಕೊರತೆಯಿಂದ ಮುಚ್ಚಿದ ಬಳಿಕ ಶಿಥಿಲವಾದ ಕಟ್ಟಡ

    ತೆರವುಗೊಳಿಸುವುದು ಉತ್ತಮ

    ನೆರಿಯ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹಲವು ಆಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತಿರುವುದು ಈ ಶಾಲೆಯ ದಾಖಲಾತಿ ಕ್ಷೀಣಿಸಲು ಕಾರಣ. ಶಾಲೆಯನ್ನು ಉಳಿಸಿಕೊಳ್ಳಲು ಅಥವಾ ದುರಸ್ತಿ ಬಗ್ಗೆ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆದರೂ ಯಾರ ಗಮನಕ್ಕೂ ಬರುವುದಿಲ್ಲ. ಇಂತಹ ಸ್ಥಿತಿಯಲ್ಲಿರುವ ಈ ಶಾಲೆಯ ಕಟ್ಟಡವನ್ನು ತೆರವುಗೊಳಿಸಿದರೆ ಅಲ್ಲಿರುವ ಕೆಲವು ಹೆಂಚು, ಮರಮಟ್ಟು, ಬಾಗಿಲು, ಕಿಟಕಿಗಳಾದರೂ ಉಪಯೋಗಕ್ಕೆ ಸಿಗಬಹುದು ಎಂಬುದು ಊರವರ ಅಭಿಪ್ರಾಯ.

    1985ರಲ್ಲಿ ಸ್ಥಳೀಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ದಾನಿಯೊಬ್ಬರಿಂದ ಜಾಗವನ್ನು ಪಡೆದು, ಸರಿಯಾದ ರಸ್ತೆ, ಇತರ ಸೌಕರ್ಯ ಇಲ್ಲದ ಇಲ್ಲಿ ಶಾಲೆಯನ್ನು ನಿರ್ಮಿಸಲು ಜನಪ್ರತಿನಿಧಿಗಳು ಹಿರಿಯರು ಹಾಗೂ ಊರವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಪ್ರಸ್ತುತ ಶಾಲೆಯ ಪರಿಸ್ಥಿತಿ ಹೀಗಾಗಿರುವುದು ಖೇದಕರ.
    – ವಿ.ಟಿ.ಸೆಬಾಸ್ಟಿಯನ್, ಹಿರಿಯ ಮುಖಂಡ

    ಪರಿಸರದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಕಟ್ಟಡ ದುರಸ್ತಿಗೊಳಿಸಿ ಶಾಲೆಯನ್ನು ಪುನರಾರಂಭಿಸುವ ಕುರಿತು ಸಮಾಲೋಚಿಸಲಾಗುವುದು.
    – ತಾರಾಕೇಸರಿ
    ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts