More

    ಕೋಟೆ ಹೊಂಡ ಅಭಿವೃದ್ಧಿಗೆ ನಿರ್ಲಕ್ಷ್ಯ

    ಕಿರಣ ಹೂಗಾರ ಅಕ್ಕಿಆಲೂರ

    ಒಂದು ಕಾಲದಲ್ಲಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನತೆಯ ದಾಹ ನೀಗಿಸುತ್ತಿದ್ದ ಸ್ಥಳೀಯ ಕೋಟೆ ಹೊಂಡ ಇಂದು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಹೊಂಡ ಅಭಿವೃದ್ಧಿಗೆ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಸಾರ್ವಜನಿಕ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

    1940ರ ಬ್ರಿಟಿಷರ ಕಾಲದಲ್ಲಿ ಸುಸಜ್ಜಿತವಾಗಿದ್ದ ಕೋಟೆ ಹೊಂಡದಲ್ಲಿ ಮಳೆ ನೀರು ಸಂಗ್ರಹವಾಗಿ ವರ್ಷ ಪೂರ್ತಿ ಜನತೆಗೆ ಕುಡಿಯುವ ನೀರು ದೊರೆಯುತ್ತಿತ್ತು. ಕೆಲವು ಸಂದರ್ಭಗಳಲ್ಲಿ ನೆರೆಯ ಗ್ರಾಮದ ಜನರೂ ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಿದ್ದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆದರೆ, ಇಂತಹ ಐತಿಹಾಸಿಕ ಹೊಂಡ ಇಂದು ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಂದ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ.

    ಪಟ್ಟಣದ ಹೃದಯ ಭಾಗದಲ್ಲಿ ಸಿ.ಎಂ. ಉದಾಸಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕೋಟೆ ಹೊಂಡದ ಸುತ್ತಲೂ ಅನುಪಯುಕ್ತ ಗಿಡಗಂಟಿಗಳು ಬೆಳೆದು, ತ್ಯಾಜ್ಯ ಪದಾರ್ಥಗಳು ವಿಲೇವಾರಿಯಾಗುತ್ತಿದೆ. ಅಲ್ಲದೆ, ಕೆಲವು ಕಡೆಗಳಲ್ಲಿ ಚರಂಡಿ ನೀರು ನೇರವಾಗಿ ಕೋಟೆ ಹೊಂಡ ಸೇರುತ್ತಿದೆ. ಇದರಿಂದ ಸುತ್ತಲಿನ ವಾತಾವರಣ ಕಲುಷಿತಗೊಳ್ಳಲು ಕಾರಣವಾಗಿದೆ. ವಿಷ ಜಂತುಗಳು ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಭಯದಲ್ಲೇ ದಿನ ದೂಡುವಂತಾಗಿದೆ.

    ಎಗ್ಗಿಲ್ಲದೆ ವಿಲೇವಾರಿಯಾಗುತ್ತಿದೆ ತ್ಯಾಜ್ಯ: ಪ್ರತಿ ಮಂಗಳವಾರ ಕೋಟೆ ಹೊಂಡದ ಸುತ್ತ ಸಾಲುಸಂತೆ ನಡೆಯುತ್ತದೆ. ಸಂತೆ ಮುಗಿದ ನಂತರ ಉಳಿದ ತರಕಾರಿ, ಮಾಂಸ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಈ ಹೊಂಡದಲ್ಲೇ ಎಸೆಯಲಾಗುತ್ತಿದೆ. ನಿರಂತರ ಮಳೆಯಿಂದ ಸದ್ಯ ಹೊಂಡದಲ್ಲಿ ಸಂಗ್ರಹವಾಗಿರುವ ನೀರು ಸಂಪೂರ್ಣ ಗಲೀಜುಮಯವಾಗಿದೆ. ಹೊಂಡದ ಸುತ್ತಲೂ ಅನುಪಯುಕ್ತ ಗಿಡಗಂಟಿಗಳು ಬೆಳೆದಿದ್ದು, ಹಾಳು ಕೊಂಪೆಯಂತೆ ಕಾಣುತ್ತಿದೆ.

    ಹಣ ಬಿಡುಗಡೆಯಾದರೂ ಅಭಿವೃದ್ಧಿ ಕಾಣದ ಹೊಂಡ: ಈ ಹಿಂದೆ ಗ್ರಾಪಂ ಅಧ್ಯಕ್ಷರಾದರು ಕೋಟೆ ಹೊಂಡದ ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದರು. ವರ್ಗ 1ರಲ್ಲಿ ಅನುದಾನ ಬಿಡುಗಡೆ ಮಾಡಿ, ಅಭಿವೃದ್ಧಿ ಕಾಮಗಾರಿಯೂ ನಡೆದಿತ್ತು. ಆದರೆ, ಯೋಜನೆ ಪ್ರಕಾರ ಕಾಮಗಾರಿ ನಡೆಯದೆ ಅರ್ಧಕ್ಕೆ ಸ್ಥಗಿತವಾಗಿವಾಯಿತು. ಅನವಶ್ಯಕವಾಗಿ ಹಣ ಖರ್ಚಾಯಿಯೇ ವಿನಃ ಹೊಂಡ ಅಭಿವೃದ್ಧಿಯಾಗಲಿಲ್ಲ.

    ಕೋಟೆ ಹೊಂಡ ಅಭಿವೃದ್ಧಿ ಕಾಣದೆ, ಮೂಲ ಸ್ವರೂಪ ಕಳೆದುಕೊಂಡಿದೆ. ಸರ್ಕಾರದ ಅನೇಕ ಯೋಜನೆಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಮಾಡಬಹುದು, ಆದರೆ, ಸ್ಥಳೀಯ ಗ್ರಾಪಂ ನಿರ್ಲಕ್ಷ್ಯವಹಿಸುತ್ತಿದೆ. ಕೋಟೆ ಹೊಂಡ ಸ್ವಚ್ಛಗೊಳಿಸಿ, ಸುತ್ತಲೂ ತಂತಿ ಬೇಲಿ ಹಾಕಿ, ಕುಡಿಯುಲು ಯೋಗ್ಯ ನೀರು ಸರಬರಾಜು ಮಾಡಬೇಕು.

    | ಮಹೇಶ ಸಾಲವಟಿಗಿ, ಅಕ್ಕಿಆಲೂರ ನಿವಾಸಿ

    ಅನುದಾನದ ಕೊರತೆ ಹಿನ್ನೆಲೆಯಲ್ಲಿ ಹೊಂಡ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ವ ಸದಸ್ಯರೊಂದಿಗೆ ರ್ಚಚಿಸಿ ಶಾಸಕರ ಅನುದಾನಕ್ಕೆ ಬೇಡಿಕೆ ಇಟ್ಟು, ಕೋಟೆ ಹೊಂಡವನ್ನು ಅಭಿವೃದ್ಧಿಗೊಳಿಸಲಾಗುವುದು.

    | ಪಾರ್ವತಿ ಹರಿಜನ, ಗ್ರಾಪಂ ಅಧ್ಯಕ್ಷೆ ಅಕ್ಕಿಆಲೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts