More

    ರಕ್ತಸೈನಿಕರ ಊರಿಗೆ ಬೇಕು ಸ್ವಾಗತ ಕಮಾನು

    ಅಕ್ಕಿಆಲೂರ: ರಕ್ತದಾನ ಮೂಲಕ ಪ್ರಸಿದ್ಧಿ ಪಡೆದು, ವಿಶ್ವದ ಮೊದಲ ರಕ್ತದಾನಿಗಳ ಊರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಕ್ಕಿಆಲೂರ ಬಳಿ ಹೆದ್ದಾರಿಯಲ್ಲಿ ‘ರಕ್ತಸೈನಿಕರ ತವರೂರಿಗೆ ಸ್ವಾಗತ’ ಎಂಬ ಕಮಾನು ನಿರ್ಮಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.
    ಅಕ್ಕಿಆಲೂರ ಪಟ್ಟಣವು ರಕ್ತದಾನಕ್ಕೆ ರಾಜ್ಯ ಮಾತ್ರವಲ್ಲದೆ, ರಾಷ್ಟ್ರದ ಗಮನ ಸೆಳೆದಿದೆ. ಶಿರಸಿ-ಮೊಳಕಾಲ್ಮೂರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಪಟ್ಟಣದ ಮಾರ್ಗವಾಗಿ ಅನೇಕ ಪ್ರವಾಸಿಗರು ಸಂಚರಿಸುತ್ತಾರೆ. ಹೀಗಾಗಿ, ಸ್ವಾಗತ ಕಮಾನು ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕೆಂಬುದು ಜನತೆಯ ಆಗ್ರಹವಾಗಿದೆ.
    2021ರ ಡಿ. 30ರಂದು ಅಕ್ಕಿಆಲೂರಿನಲ್ಲಿ ಪೊಲೀಸ್ ಪೇದೆ ಕರಬಸಪ್ಪ ಗೊಂದಿ ನೇತೃತ್ವದಲ್ಲಿ ಆರಂಭವಾದ ಸ್ನೇಹಮೈತ್ರಿ ಬ್ಲಡ್ ಆರ್ಮಿ ಸಂಸ್ಥೆ ಮೂಲಕ ತುರ್ತು ಪರಿಸ್ಥಿತಿ ಮತ್ತು ಶಿಬಿರಗಳಲ್ಲಿ ರಕ್ತದಾನ ಮಾಡಿದ 1200ಕ್ಕೂ ಹೆಚ್ಚು ರಕ್ತದಾನಿಗಳು ಇರುವ ವಿಶ್ವದ ಏಕೈಕ ಪಟ್ಟಣ ಅಕ್ಕಿಆಲೂರ. 2023ರಲ್ಲಿ ಬರೋಬ್ಬರಿ 2467 ಯೂನಿಟ್ ರಕ್ತದಾನ ಮಾಡಲಾಗಿದೆ. ರಾಜ್ಯದ ಯಾವುದೇ ಮೂಲೆಗೆ ತುರ್ತು ರಕ್ತದ ಅಗತ್ಯವಿದ್ದರೆ ತೆರಳಿ ಜೀವದಾನಿಗಳಾಗುತ್ತಾರೆ. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸಂಗ್ರಹವಾದ ರಕ್ತದ ಪೈಕಿ ಶೇ.40ರಷ್ಟು ಕೊಡುಗೆ ಅಕ್ಕಿಆಲೂರಿನ ಜನರದ್ದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಕ್ತಸ್ರಾವವಾಗಿ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುವ ರೋಗಿಗಳಿಗಾಗಿ ರಾಜ್ಯದ ಮೊದಲ ಸ್ನೇಹಮೈತ್ರಿ ರಕ್ತಸ್ರಾವ ಹೋರಾಟಗಾರ ಹಾರೈಕೆ ಕೇಂದ್ರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿದೆ. ರಕ್ತದಾನ ಮಾಹಿತಿಗಾಗಿ ‘ರಕ್ತದಾನಿಗಳ ರಥ’ ಎಂಬ ವಿಶೇಷ ಸಾರಿಗೆ ಬಸ್‌ಗೆ ಅಕ್ಕಿಆಲೂರಿನಿಂದ ಚಾಲನೆ ನೀಡಲಾಗಿದೆ. ಇದರಲ್ಲಿ ರಕ್ತದಾನದ ಕುರಿತು ಮೌಲ್ಯಯುತ ಮಾಹಿತಿ ಅನಾವರಣಗೊಂಡಿದೆ. 100 ಬಾರಿ ರಕ್ತದಾನ ಮಾಡಿದ ಪೊಲೀಸ್ ಪೇದೆ ಕರಬಸಪ್ಪ ಗೊಂದಿ, ಹಾವೇರಿ ಜಿಲ್ಲೆಯ ಮೊದಲ ಶತಕ ರಕ್ತದಾನಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಕ್ಕಿಆಲೂರಿನ ಜನ ಮಾತ್ರವಲ್ಲದೆ, ಸಿರಿ ಮತ್ತು ಜಿಮ್ಮಿ ಎಂಬ ಹೆಸರಿನ ಎರಡು ಶ್ವಾನಗಳೂ ರಕ್ತದಾನ ಮಾಡಿ, ವಿಶೇಷ ಗಮನ ಸೆಳೆದಿವೆ.
    ಇಷ್ಟೆಲ್ಲ ಗಮನಾರ್ಹ ಸೇವೆ ಸಲ್ಲಿಸಿರುವ ಪಟ್ಟಣದ ಜನತೆಯ ಕೀರ್ತಿ ಬಿಂಬಿಸುವ ಸ್ವಾಗತದ ಕಮಾನು ನಿರ್ಮಾಣವಾಗಬೇಕಿದೆ. ಸದ್ಯ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುತ್ತಿರುವ ರಸ್ತೆಯಲ್ಲಿ ಶಿರಸಿ ಮತ್ತು ಹಾನಗಲ್ಲ ಸೇರುವ ಮೂರನೇ ಕ್ರಾಸ್ ಮತ್ತು ಹಾವೇರಿಯಿಂದ ಆಗಮಿಸುವ ಹಾವಣಗಿ ಕ್ರಾಸ್ ಬಳಿ ಎರಡು ಕಮಾನು ನಿರ್ಮಾಣವಾಗಬೇಕು ಎಂಬುದು ನಾಗರಿಕರ ಬೇಡಿಕೆಯಾಗಿದೆ.

    ಭಾರತದ ಒಂದೊಂದು ಪ್ರದೇಶಗಳು, ಊರುಗಳು ವಸ್ತು, ತಿನಿಸು, ಆಚರಣೆಗಳಿಗೆ ಹೆಸರಾಗಿವೆ. ಅಕ್ಕಿಆಲೂರ ರಕ್ತದಾನಕ್ಕೆ ವಿಶ್ವದಲ್ಲಿ ಹೆಸರು ಆಗಿರುವುದನ್ನು ಸ್ವತಃ ಗೂಗಲ್ ಸಹ ಅನಾವರಣಗೊಳಿಸಿದೆ. ತುರ್ತು ಪರಿಸ್ಥಿತಿಯಲ್ಲಿ ರಕ್ತ ನೀಡುವ ಅಕ್ಕಿಆಲೂರಿಗೆ ಧನ್ಯತೆಗಾಗಿ ನಮ್ಮೂರ ಹೆದ್ದಾರಿಗೆ ವಿಶ್ವದ ಮೊದಲ ರಕ್ತಸೈನಿಕರ ತವರೂರು ಎಂಬ ಕಮಾನು ಅಳವಡಿಸಬೇಕು.
    ಶಿವಬಸವ ಸ್ವಾಮೀಜಿ
    ವಿರಕ್ತಮಠ ಅಕ್ಕಿಆಲೂರ

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಮಾನು ಮತ್ತು ಫಲಕ ಅಳವಡಿಸಲು ಕಾನೂನಾತ್ಮಕ ಅಂಶಗಳಿವೆ. ಭಾರತೀಯ ರಸ್ತೆ ಸಮಿತಿಗೆ ಮನವಿ ನೀಡಿ, ಬೆಂಗಳೂರಿನ ಹೆದ್ದಾರಿ ಮುಖ್ಯ ಕಚೇರಿಯಿಂದ ಅಧಿಕೃತ ಪರವಾನಗಿ ಪಡೆದುಕೊಳ್ಳಬೇಕು. ಅನುದಾನ ಮತ್ತಿತರ ಮಾಹಿತಿಗಾಗಿ ಹೊನ್ನಾವರ ಹೆದ್ದಾರಿ ನಿರ್ವಾಹಣೆ ಕಚೇರಿಯನ್ನು ಸಂಪರ್ಕಿಸಬೇಕು.
    ಕಿರಣ ಗುಬ್ಬಣ್ಣನವರ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts