More

  ಚಿನ್ನಾಭರಣ ಹರಾಜು ರದ್ದತಿಗೆ ಆಗ್ರಹ

  ನಾಯಕನಹಟ್ಟಿ: ಕೃಷಿ ಸಾಲಕ್ಕೆ ಅಡವಿಟ್ಟ ರೈತರ ಆಭರಣಗಳ ಹರಾಜು ಪ್ರಕ್ರಿಯೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಳುಕು ಹೋಬಳಿಯ ಹಿರೇಹಳ್ಳಿ ಬ್ಯಾಂಕ್‌ವೊಂದರ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

  ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತರ ಪರಿಸ್ಥಿತಿ ಅರ್ಥಮಾಡಿಕೊಳ್ಳದೆ ಬ್ಯಾಂಕ್‌ಗಳು, ರೈತರು ಅಡವಿಟ್ಟಿದ್ದ ಬಂಗಾರವನ್ನು ಹರಾಜಿಗಿಡುತ್ತಿವೆ. ತಳಕು ಹಾಗೂ ಹಿರೇಹಳ್ಳಿ ಗ್ರಾಮದ ಬ್ಯಾಂಕ್‌ಗಳಲ್ಲಿ 80ಕ್ಕೂ ಹೆಚ್ಚು ರೈತರು ಆಭರಣ ಅಡವಿಟ್ಟು ಸಾಲ ಪಡೆದಿದ್ದಾರೆ. ಇವುಗಳನ್ನು ಹರಾಜು ಹಾಕುವ ಬದಲು ಸಾಲ ತೀರಿಸಲು ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

  ರೈತ ಮುಖಂಡ ಎರ‌್ರಿಸ್ವಾಮಿ ಮಾತನಾಡಿ, ಒಡವೆಗಳನ್ನು ಹರಾಜು ಹಾಕುವುದಾಗಿ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ. ಒಡವೆ ಹರಾಜು ರೈತರ ವಿಶ್ವಾಸ ಕುಂದಿಸುತ್ತದೆ. ಇದಕ್ಕೆ ಸರ್ಕಾರ ಆಸ್ಪದ ಕೊಡಬಾರದು. ತಕ್ಷಣ ಹರಾಜು ಪ್ರಕ್ರಿಯೆ ರದ್ದುಗೊಳಿಸಬೇಕೆಂದು ಪಟ್ಟು ಹಿಡಿದರು.

  ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬ್ಯಾಂಕ್ ಮ್ಯಾನೇಜರ್, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಬಂಗಾರದ ಹರಾಜನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

  ರೈತ ಮುಖಂಡರಾದ ರಾಜಣ್ಣ, ತಿಮ್ಮಣ್ಣ, ತಿಪ್ಪೇಸ್ವಾಮಿ, ಡಿ.ಆರ್. ಬಸವರಾಜ್, ಶ್ರೀಕಂಠ ಮೂರ್ತಿ, ಓಬಣ್ಣ, ಸಣ್ಣ ಪಾಲಯ್ಯ, ಬೊಮ್ಮಣ್ಣ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts