More

    ನವರಾತ್ರಿ ವೈಭವ 4: ನಗುವಿನಿಂದ ಬ್ರಹ್ಮಾಂಡ ಸೃಷ್ಟಿಸಿದ ಕೂಷ್ಮಾಂಡಾದೇವಿ…

    | ಎಚ್.ವಿ. ದೀಪಕ್ ನರಸಿಂಹ

    ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |

    ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||

    ದೇವಿ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ಸೃಷ್ಟಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುತ್ತಾರೆ. ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು, ಅದಕ್ಕಿಂತ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ. ಒಂದು ಸಮಯದಲ್ಲಿ ದುರ್ಗಾಮಾತೆ ಸೂರ್ಯನ ಒಳಗೆ ವಾಸಿಸಲು ಆರಂಭಿಸಿದಳು. ಆಗ ಸೂರ್ಯನಿಂದ ವಿಶ್ವಕ್ಕೆ ಶಕ್ತಿ ಬಿಡುಗಡೆಯಾಯಿತು. ಸೂರ್ಯನೊಳಗೇ ನೆಲೆಸುವಷ್ಟು ಪ್ರಖರ ದೇವತೆಯೀಕೆ. ಇವಳಿಗೆ ಎಂಟು ಭುಜಗಳಿದ್ದು, ಅಷ್ಟಭುಜಾದೇವಿ ಎಂದು ಖ್ಯಾತಳು. ಸಿಂಹವಾಹಿನಿಯಾಗಿ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ. ಏಳು ಕೈಗಳಲ್ಲಿ ಕ್ರಮವಾಗಿ ಕಮಂಡಲ, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಹಿಡಿದಿದ್ದಾಳೆ. ಈ ದಿನ ಸಾಧಕನ ಮನಸ್ಸು ‘ಅನಾಹತ’ ಚಕ್ರದಲ್ಲಿ ನೆಲೆಸುತ್ತದೆ. ಅನಾಹತ ಚಕ್ರವನ್ನು ಹೃದಯ ಚಕ್ರ ಎಂದೂ ಕರೆಯುತ್ತಾರೆ. ಇದು ಎದೆಯ ಮಧ್ಯಭಾಗದಲ್ಲಿರುತ್ತದೆ. ಈ ಚಕ್ರದ ಬಣ್ಣ ಹಸಿರು. ಅನಾಹತ ಚಕ್ರ ಪ್ರೀತಿ ಹಾಗೂ ವಾತ್ಸಲ್ಯದೊಂದಿಗೆ ಗುರುತಿಸಿಕೊಂಡಿದೆ. ಈ ಚಕ್ರವು ನಮ್ಮ ಭಾವನಾತ್ಮಕ ಹಾಗೂ ಮಾನಸಿಕ ಆರೋಗ್ಯದ ಜವಾಬ್ದಾರ. ಕೂಷ್ಮಾಂಡಾ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಘಟಾಂಪುರದಲ್ಲಿದೆ.

    ಕೂಷ್ಮಾಂಡಾ ದೇವಿ ಕವಚ

    ಹಂಸರೈ ಮೇ ಶಿರ ಪಾತು ಕೂಷ್ಮಾಂಡೆ ಭವನಾಶಿನಿಮ್

    ಹಸಲಕರಿಂ ನೇತ್ರೇಚ, ಹಸರೌಷ್ಚ ಲಲಾಟಕಮ್

    ಕೌಮಾರಿ ಪಾತು ಸರ್ವಗಾತ್ರೆ, ವಾರಾಹಿ ಉತ್ತರೆ ತಥಾ,

    ಪೂರ್ವೆ ಪಾತು ವೈಷ್ಣವಿ ಇಂದ್ರಾನಿ ದಕ್ಷಿಣೆ ಮಮ

    ದಿಗ್ವಿದಿಕ್ಷು ಸರ್ವತ್ರೇವ ಕೂಮ್ ಬಿಜಮ್ ಸರ್ವದಾವತು

    ದೇವಿ ಕೂಷ್ಮಾಂಡಾ ಮಂತ್ರ:

    ಓಂ ದೇವಿ ಕೂಷ್ಮಾಂಡೈ ನಮಃ

    ಕೂಷ್ಮಾಂಡಾ ದೇವಿಗೆ ಕೆಂಪು ಹೂವಿ ನಿಂದ ಪೂಜೆ ಮಾಡುವುದರಿಂದ ಎಲ್ಲ ರೀತಿಯ ಕಾಯಿಲೆಗಳು ದೂರವಾಗುವುದು ಮತ್ತು ಒಳ್ಳೆಯ ಆರೋಗ್ಯ ಸಿಗುವುದು. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವುದು.

    ದೈವದ ಕೃಪಾಕಟಾಕ್ಷಕ್ಕೆ ಭಕ್ತಿಮಾರ್ಗದಲ್ಲಿ ನಾಲ್ಕನೆಯದ್ದು ‘ಪಾದಸೇವನೆ’.

    ಭಗವಂತನ ಪಾದಸೇವೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದೇ ‘ಪಾದಸೇವನ ಭಕ್ತಿ’. ಇದರಲ್ಲಿ ಬಾಹ್ಯ, ಮಾನಸಿಕ ಎನ್ನುವ ಎರಡು ರೀತಿಯ ಭಕ್ತಿಗಳಿವೆ. ಭಗವದ್ ವಿಗ್ರಹ ಪೂಜೆ, ಗುರುಪೂಜೆಯಿಂದ ‘ಪಾದಸೇವನ ಭಕ್ತಿ’ಯಲ್ಲಿ ಏಕಾಗ್ರತೆ ಲಭಿಸುತ್ತದೆ. ಅಂತಹ ಏಕಾಗ್ರತೆಯಿಂದ ತನ್ನ ಮಾನಸಿಕ ಜಗತ್ತಿನಲ್ಲಿ ಭಕ್ತನು ಅಪ್ರಾಕೃತವಾದ ಭಗವತ್ ಚರಣಾರವಿಂದಗಳನ್ನು ಸೇವಿಸುವವನು. ಈ ರೀತಿಯಲ್ಲಿ ಬಾಹ್ಯವಾಗಿ-ಮಾನಸಿಕವಾಗಿ ಭಗವತ್ ಪಾದಸೇವೆ ಮಾಡುವುದರಿಂದ ಲೋಕಾಶ್ರಯವಾದ ಭಾವ ತೊಲಗಿಹೋಗುವುದು. ಭಗವತ್ ಸೇವೆಯಲ್ಲೇ ಅಂಥ ಭಕ್ತನ ಮನಸ್ಸು ಸಂಲಗ್ನವಾಗಿರುವುದರಿಂದ, ಲೋಕವೃತ್ತಿಗಳ ಬಗ್ಗೆ ಅವನು ಉದಾಸೀನ ಭಾವವನ್ನು ಹೊಂದಿದವನಾಗುತ್ತಾನೆ. ಮಾನಸಿಕವಾದ ಭಗವತ್ ಪಾದಸೇವೆಯು ಭಕ್ತಿಯನ್ನು ಸಾಧಿಸುವುದರಲ್ಲಿ ತುಂಬ ಮಹತ್ತರ ಪಾತ್ರವಹಿಸುತ್ತದೆ. ಆದುದರಿಂದ ಭಕ್ತರು ಭಗವಂತನ ಚರಣಾರವಿಂದಗಳನ್ನು ತಮ್ಮ ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡು ಅವರನ್ನು ಭಕ್ತಿ-ಶ್ರದ್ಧೆಗಳಿಂದ ಪೂಜಿಸುವರು. ಆದುದರಿಂದ ‘ಹೇ ಭಗವಂತಾ! ನಾನು ನಿನ್ನ ಚರಣಸೇವೆಯ ಅಭಿಲಾಷೆ ಉಳ್ಳವನಾಗಿದ್ದೇನೆ. ನಿನ್ನ ಚರಣಾರವಿಂದಗಳನ್ನು ನನ್ನ ಶಿರಸ್ಸಿನ ಮೇಲೆ ಧರಿಸಿಕೊಂಡು ಧನ್ಯನಾಗುವೆ’ ಎಂದು ಪೊಯ್ ಹೈ ಆಳ್ವಾರರು (ಮೊದಲ್ ತಿರುವಂದಾದಿ- 88) ತಿಳಿಸಿದ್ದಾರೆ. (ಲೇಖಕರು ಆಧ್ಯಾತ್ಮಿಕ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts