More

    ಗುರಿಗೆ ಅನುಗೂಣವಾಗಿ ಮಾನವ ದಿನಗಳ ಸೃಜನೆಗೆ ಒತ್ತು ಕೊಡಿ – ಬಸವರಾಜ ಅಡವಿಮಠ

    ನರಗುಂದ : ಎಪ್ರೀಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ನರೇಗಾ ಕೆಲಸಗಳು ನರಗುಂದ ತಾಲೂಕಿನಲ್ಲಿ ಯದ್ಧೋಪಾದಿಯಲ್ಲಿ ನಡೆಯಲು ಗ್ರಾಮ ಪಂಚಾಯತ ಸಿಬ್ಬಂದಿಗಳು ಮತ್ತು ನರೇಗಾ ಸಿಬ್ಬಂದಿ ಆಸಕ್ತಿಯಿಂದ ಶ್ರಮಿಸಬೇಕೆಂದು ಗದಗ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಅಡವಿಮಠ ಸೂಚಿಸಿದರು.

    ನರಗುಂದ ನಗರದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ನರಗುಂದ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ತಾಲೂಕಿನ ಎಲ್ಲ 13 ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ತಾಲೂಕಿನ ಎಲ್ಲ ನರೇಗಾ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.

    ಬೇಸಿಗೆಯ ಎಪ್ರೀಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ತಾಲೂಕಿನಾದ್ಯಂತ ನರೇಗಾ ಕಾಮಗಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶುರುವಾಗಬೇಕು. ಬೇಸಿಗೆ ಅವಧಿಯಲ್ಲಿ ಹೆಚ್ಚಿನ ಸಮುದಾಯ ಕಾಮಗಾರಿಗಳನ್ನು ಆರಂಭಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವಂತ್ತಾಗಬೇಕು. ಮುಂಗಾರು ಮಳೆ ಆರಂಭವಾಗುವ ಮುನ್ನವೇ ಕೂಲಿಕಾರರಿಗೆ ಕೆಲಸ ನೀಡಿ ನಿಗದಿತ ಗುರಿ ಸಾಧನೆಗೆ ಒತ್ತು ನೀಡಬೇಕು. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ನರೇಗಾ ಕೆಲಸಕ್ಕೆ ಬರುವ ಕೂಲಿಕಾರರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ಸ್ಥಳದಲ್ಲಿ ನೆರಳು, ಕುಡಿಯುವ ನೀರು ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಅಂತ ತಿಳಿಸಿದರು.

    ತಾಲೂಕಿನಲ್ಲಿ ಮಹಿಳಾ ಕೂಲಿಕಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನರೇಗಾದಲ್ಲಿ ಕೆಲಸ ನೀಡಿ ತಾಲೂಕಿನ ನರೇಗಾ ಯೋಜನೆಯಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವಂತೆ ಸೂಚಿಸಿದರು. 

    ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ನರಗುಂದ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ (ಗ್ರಾಮೀಣ ಮತ್ತು ಉದ್ಯೋಗ) ಸಂತೋಷಕುಮಾರ ಪಾಟೀಲ್, ಗ್ರಾಮೀಣ ಪ್ರದೇಶದ ದುಡಿಯುವ ಕೈಗಳನ್ನು ನರೇಗಾ ಕೆಲಸ ನೀಡಿ ಬಲಪಡಿಸಬೇಕು. ಬೇಸಿಗೆ ಅವಧಿಯಲ್ಲಿ ಕೃಷಿ ಚಟುವಟಿಕೆಗಳಿಲ್ಲದಿರುವುದು ನರೇಗಾ ಕೆಲಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಭಾಗವಹಿಸುತ್ತಾರೆ. ಯೋಜನೆಯಡಿ ಬರುವ ಕೂಲಿಕಾರರಿಗೆ ಸರಿಯಾಗಿ ಕೆಲಸ ನೀಡಿ ಸರಿಯಾದ ಸಮಯದಲ್ಲಿ ಕೂಲಿ ಮೊತ್ತ ನೀಡುವಂತೆ ತಿಳಿಸಿದರು.

    ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ನರಗುಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಂಜುಳಾ ಹಕಾರಿ, ತಾಲೂಕಿನ ಅನುಷ್ಟಾನ ಇಲಾಖೆಗಳ ಅಧಿಕಾರಿಗಳು ಹಾಗೂ ನರೇಗಾ ಸಿಬ್ಬಂದಿ ಮತ್ತು ತಾಲೂಕು ಪಂಚಾಯತ ಸಿಬ್ಬಂದಿ ವರ್ಗ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts