More

    ಶಾಲೆಯಲ್ಲಿಲ್ಲ ಮೂಲಸೌಕರ್ಯ

    ನರಗುಂದ: ಮಕ್ಕಳ ಕಲಿಕೆಗೆ ಪೂರಕವಾಗುವ ವಾತಾವರಣ ಕಲ್ಪಿಸುವುದರ ಜತೆಗೆ ಅಗತ್ಯ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಪಟ್ಟಣದ ಮೌಲಾನಾ ಆಜಾದ್ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
    ಪಟ್ಟಣದಲ್ಲಿ 2018ರ ಜೂನ್‌ನಲ್ಲಿ ಮೌಲಾನಾ ಆಜಾದ್ ಶಾಲೆ ಪ್ರಾರಂಭಿಸಲಾಯಿತು. ಪ್ರತಿ ತರಗತಿಗೆ 60 ವಿದ್ಯಾರ್ಥಿಗಳ ಸಂಖ್ಯಾ ಬಲದಂತೆ ಶೇ. 75ರಷ್ಟು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ವಿದ್ಯಾರ್ಥಿಗಳು ಹಾಗೂ ಶೇ. 25ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಸದ್ಯ ಶಾಲೆಯಲ್ಲಿ 153 ವಿದ್ಯಾರ್ಥಿಗಳಿದ್ದಾರೆ.
    ಆರಂಭದಲ್ಲಿ ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ. ಹೀಗಾಗಿ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ 3, ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಹೆಚ್ಚುವರಿ ಕೊಠಡಿಗಳಲ್ಲಿ ಶಾಲೆ ನಡೆಸಲಾಗುತ್ತಿತ್ತು. ಬಳಿಕ ಎರಡ್ಮೂರು ಕಿಮೀ ದೂರದಲ್ಲಿ ಗುಡ್ಡದ ಬಳಿ 16 ಗುಂಟೆ ಸ್ವಂತ ನಿವೇಶನದಲ್ಲಿ 50 ಲಕ್ಷ ರೂಪಾಯಿ ಅನುದಾನದಲ್ಲಿ 5 ಕೊಠಡಿಗಳನ್ನು ನಿರ್ಮಿಸಿ, 6 ರಿಂದ 10ನೇ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಗೃಹ, ಕಾಂಪೌಂಡ್, ವಾಚನಾಲಯ, ಕಂಪ್ಯೂಟರ್, ಆಟದ ಮೈದಾನ ಯಾವುದೂ ಇಲ್ಲ. ಕೊಠಡಿಗಳ ಕೊರತೆಯಿಂದ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ದೂರದ ಶಾಲೆಗೆ ತೆರಳಲು ಮಿನಿ ಬಸ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ಶಾಸಕ ಸಿ.ಸಿ. ಪಾಟೀಲ ಭರವಸೆ ನೀಡಿದ್ದರು. ಬಸ್‌ಗಳಿರಲಿ, ಶಾಲೆ ಮುಂದೆ ರಸ್ತೆಯನ್ನೇ ನಿರ್ಮಿಸಿಲ್ಲ. ಜತೆಗೆ ಶಾಲೆಗೆ ತೆರಳುವ ರಸ್ತೆಯಲ್ಲಿ ಜನತಾ ಪ್ಲಾಟ್ ಬಡಾವಣೆ ಕೆಲ ನಿವಾಸಿಗಳು ಮನೆಯ ತ್ಯಾಜ್ಯ ಎಸೆಯುತ್ತಿದ್ದಾರೆ. ಒಂದೆಡೆ ಕೆಸರುಮಯ ರಸ್ತೆ, ಮತ್ತೊಂದೆಡೆ ತ್ಯಾಜ್ಯದ ದುರ್ನಾತದಿಂದ ನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ. ಶಾಲೆ ದೂರ ಇರುವುದರಿಂದ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಂದಲೂ ಇಲ್ಲಿನ ಮಕ್ಕಳು ಸಾಕಷ್ಟು ಹಿನ್ನೆಡೆ ಅನುಭವಿಸುವಂತಾಗಿದೆ.

    ಹೊಸದಾಗಿ ಶಾಲೆ ಪ್ರಾರಂಭವಾಗಿರುವುದರಿಂದ ಸಮಸ್ಯೆಗಳಿರುವುದು ನಿಜ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಎಲ್ಲ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದು.
    ವಿಜಯಲಕ್ಷ್ಮೀ ಕೊಂಡಿಕೊಪ್ಪ
    ಶಾಲೆ ಮುಖ್ಯೋಪಾಧ್ಯಾಯಿನಿ

    ಮೌಲಾನಾ ಆಜಾದ್
    ಶಾಲೆಯಲ್ಲಿ ಮೂಲಸೌಕರ್ಯ ಗಳಿಲ್ಲದೆ ಹೈರಾಣಾಗಿದ್ದೇವೆ. ನಿರ್ಜನ ಪ್ರದೇಶದಲ್ಲಿ ಇರುವುದರಿಂದ ಶಾಲೆಗೆ ಸಿಸಿ ಕ್ಯಾಮರಾ ಅಳವಡಿಸುವುದರ ಜತೆಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ವರ್ಷದಿಂದ ಬೇರೆ ಶಾಲೆಗೆ ಹೋಗುತ್ತೇವೆ.
    ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts