More

    ಗ್ರಾಮೀಣ ಮಹಿಳೆಯರಿಗೆ ಕೂಸಿನ ಮನೆ ವರದಾನ

    ನರಗುಂದ: ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗದ ಮಕ್ಕಳ ಲಾಲನೆ, ಪಾಲನೆಗೆ ರಾಜ್ಯ ಸರ್ಕಾರದ ಕೂಸಿನ ಮನೆ ಕಾರ್ಯಕ್ರಮ ವರದಾನವಾಗಿದೆ. ಕೂಸಿನ ಮನೆ ಕಾರ್ಯಕ್ರಮ ಅನುಷ್ಠಾನದಿಂದ ಗ್ರಾಮೀಣ ಮಹಿಳಾ ಕೂಲಿಕಾರರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕೂಸಿನ ಮನೆ ಕಾರ್ಯಕ್ರಮದ ನರಗುಂದ ತಾಲೂಕು ನೋಡಲ್ ಅಧಿಕಾರಿ ಶ್ಯಾಮಸುಂದರ ಇನಾಮತಿ ಹೇಳಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಪಂ ವತಿಯಿಂದ ಆಯೋಜಿಸಿದ್ದ ಕೂಸಿನ ಮನೆ ಆರೈಕೆದಾರರ ಮೂರು ದಿನಗಳ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನರೇಗಾ ಕೆಲಸಕ್ಕೆ ಬರುವ ಮಹಿಳೆಯರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಬರುವುದರಿಂದ ಮಕ್ಕಳಿಗೆ ಲಾಲನೆ-ಪಾಲನೆ ಜತೆಗೆ ಪೌಷ್ಟಿಕಾಂಶವುಳ್ಳ ಆಹಾರ ದೊರಕುತ್ತದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಉದ್ಯೋಗವೂ ಸಿಗುತ್ತದೆ ಎಂದರು.

    ಗ್ರಾಮೀಣ ಪ್ರದೇಶದ ಮಕ್ಕಳು ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಕಾರ್ಯಕ್ರಮ ಜಾರಿಗೊಳಿಸಿದೆ. ಅದರಂತೆಯೇ ತಾಲೂಕಿನಲ್ಲಿ ಏಳು ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಆರಂಭಿಸಿ ಅದರ ಕೇರ್ ಟೇಕರ್ಸ್​ಗಳಿಗೆ (ಆರೈಕೆದಾರರು) ಮೂರು ದಿನಗಳ ತರಬೇತಿ ನೀಡುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.

    ನರಗುಂದ ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಸರ್ಕಾರದಿಂದ ಒಟ್ಟು,109 ಕೂಸಿನ ಮನೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 69 ಮನೆಗಳನ್ನು ಜಿಲ್ಲೆಯಾದ್ಯಂತ ಆರಂಭಿಸಲಾಗುತ್ತಿದ್ದು, ನರಗುಂದ ತಾಲೂಕಿನ ವಿವಿಧೆಡೆ 7 ಕೂಸಿನ ಮನೆಗಳನ್ನು ಅರಂಭಿಸಲಾಗುತ್ತಿದೆ ಎಂದು ತಿಳಿಸಿದರು.

    ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ, ತರಬೇತುದಾರರಾದ ವೀರಭದ್ರಪ್ಪ ಸಜ್ಜನ, ಮಂಜುಳಾ ಗುರಾಣಿ, ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ ಗಣಿ ಹಾಗೂ ನರಗುಂದ, ಚಿಕ್ಕನರಗುಂದ, ಹುಣಶಿಕಟ್ಟಿ, ಕಣಕೀಕೊಪ್ಪ, ಸುರಕೋಡ, ರೆಡ್ಡರನಾಗನೂರು, ಕೊಣ್ಣೂರು ಹಾಗೂ ಹಿರೇಕೊಪ್ಪ ಗ್ರಾಮ ಪಂಚಾಯತಿ ಕೂಸಿನ ಮನೆಯ ಆರೈಕೆದಾರರು ಇದ್ದರು. ಪ್ರದೀಪ ಕದಂ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts