More

    ಭೂಕುಸಿತ ಪ್ರದೇಶಗಳಲ್ಲಿ ಪರಿಶೀಲನೆ

    ನರಗುಂದ: ಪಟ್ಟಣದಲ್ಲಿ ಪದೇಪದೆ ಸಂಭವಿಸುತ್ತಿದ್ದ ಭೂಕುಸಿತದ ಪ್ರದೇಶಗಳಿಗೆ ಬೆಂಗಳೂರಿನ ಹಿರಿಯ ಭೂವಿಜ್ಞಾನಿ ಡಾ. ಎಚ್.ಎಸ್.ಎಂ. ಪ್ರಕಾಶ ನೇತೃತ್ವದ ಭೂವಿಜ್ಞಾನಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನರಗುಂದ ಗುಡ್ಡದ ಮೇಲಿರುವ ಗಾಳಿ ಯಂತ್ರಗಳು, ಬೆಟ್ಟದ ಕೆಳಭಾಗದಲ್ಲಿರುವ ಸಿದ್ಧೇಶ್ವರ ದೇವಸ್ಥಾನ ಮತ್ತು ಅಲ್ಲಿನ ಸುರಂಗ ಮಾರ್ಗಗಳು, ದೇಸಾಯಿಯವರ ಬಾವಿ, ಕುಡಿಯುವ ನೀರಿನ ಕೆಂಪಕೆರೆ ಪ್ರದೇಶಗಳಿಗೆ ಭೇಟಿ ನೀಡಿದರು. ನಂತರ ಅಧ್ಯಯನಕ್ಕೆ ಬೇಕಾದ ಕಲ್ಲು ಮತ್ತು ಮಣ್ಣು ತೆಗೆದುಕೊಂಡು ಹೋದರು.

    ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ನರಗುಂದ ಪಟ್ಟಣದ ಕಸಬಾ, ಅರ್ಭಾಣ, ಶಂಕರಲಿಂಗನ ಓಣಿ, ಹಗೇದಕಟ್ಟಿ, ದೇಸಾಯಿ ಬಾವಿ, ದಂಡಾಪೂರ ಸೇರಿ ವಿವಿಧ ಬಡಾವಣೆಗಳಲ್ಲಿ ಅಂತರ್ಜಲದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು.

    ಹಗೇದಕಟ್ಟಿ ಬಡಾವಣೆಯಲ್ಲಿ ಕಳೆದ ಶನಿವಾರ ಮತ್ತೆ ಭೂಕುಸಿತ ಸಂಭವಿಸಿದ ಪರಿಣಾಮ ದಂಪತಿ ಆಳವಾದ ಗುಂಡಿಯಲ್ಲಿ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಸಮಸ್ಯೆಯ ಗಂಭೀರತೆ ಅರಿತ ಸಚಿವ ಸಿ.ಸಿ.ಪಾಟೀಲ, ಈ ಘಟನೆಗೆ ನಿಖರ ಕಾರಣ ಪತ್ತೆ ಹಚ್ಚುವಂತೆ ಭೂಗರ್ಭ ಶಾಸ್ತ್ರಜ್ಞರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆಗಮಿಸಿದ ಡಾ.ಪ್ರಕಾಶ, ದಿಲೀಪಕುಮಾರ ಹಾಗೂ ಸಂತೋಷ ಎಂಬ ಮೂವರು ಅಧಿಕಾರಿಗಳು ತಂಡ ಕಾಟಾಚಾರಕ್ಕೆಂಬಂತೆ ಕೇವಲ ಒಂದು ದಿನ ಮಾತ್ರ ಅಧ್ಯಯನ ಮಾಡಿ ನಿರ್ಗಮಿಸಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ಬಸ್ಸು ಪಾಟೀಲ, ಸೋಮು ಸೋನಾವಣೆ, ಪವಾಡೆಪ್ಪ ವಡ್ಡಿಗೇರಿ, ಶಿವಾನಂದ ಮುತವಾಡ, ಅನೇಕರು ಉಪಸ್ಥಿತರಿದ್ದರು.

    ಪೂರ್ಣ ಪ್ರಮಾಣದ ಅಧ್ಯಯನ ಮಾಡದ ಹೊರತು ಅಂತರ್ಜಲ ಹೆಚ್ಚಳಗೊಂಡಿರುವ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ. ನರಗುಂದ ಪಟ್ಟಣದ ಕೆಲವು ಪ್ರದೇಶಗಳಲ್ಲಿನ ಕಲ್ಲು ಮತ್ತು ಮಣ್ಣನ್ನು ತೆಗೆದುಕೊಂಡಿದ್ದೇವೆ. ಒಂದು ವಾರ ಅಧ್ಯಯನ ನಡೆಸಿ ಘಟನೆಗೆ ನಿಖರ ಕಾರಣವನ್ನು ತಿಳಿಸಲಾಗುವುದು.
    |ಡಾ. ಎಚ್.ಎಸ್.ಎಂ. ಪ್ರಕಾಶ, ಹಿರಿಯ ಭೂವಿಜ್ಞಾನಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts