More

    ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್ ಮಾಜಿ ಎಂಡಿ ಪ್ರೇಮನಾಥ್ ಏನಂತಾರೆ?

    ಬೆಂಗಳೂರು: ನಂದಿನಿ-ಅಮುಲ್ ವಿಚಾರದಲ್ಲಿ ರಾಜ್ಯದಲ್ಲಿ ದೊಡ್ಡ ಸಂಘರ್ಷವೇ ಏರ್ಪಟಿದ್ದು, ಕರ್ನಾಟಕಕ್ಕೆ ಅಮುಲ್ ಹಾಲಿನ ಪ್ರವೇಶದ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗಿದೆ. ನಂದಿನಿ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಕೂಡ ದನಿ ಎತ್ತಿದ್ದು, ಇದೀಗ ಕೆಎಂಎಫ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್​.ಪ್ರೇಮ​ನಾಥ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ನಂದಿನಿ-ಅಮುಲ್ ವಿಚಾರವಾಗಿ ವಾಸ್ತವಾಂಶ ತೆರೆದಿಟ್ಟು ಅರಿವು ಮೂಡಿಸಲು ಯತ್ನಿಸಿದ್ದಾರೆ.

    ಸಹಕಾರಿ ಬ್ರ್ಯಾಂಡ್​ ಅಮುಲ್ ಹಾಲು ನೇರವಾಗಿ ಬೆಂಗಳೂರು ಮಾರುಕಟ್ಟೆಗೆ ಬರುವ ವಿವಾದದ ಬಗ್ಗೆ ಕೆಲವು ವಿಷಯಗಳು ಇಲ್ಲಿ ಹೇಳಬೇಕೆನಿಸಿದೆ. ಅಮುಲ್ -ನಂದಿನಿ ಬಗ್ಗೆ ಮುಖ್ಯ ವಿಷಯ ಬಿಟ್ಟು ಹಲವಾರು ಮಾತುಗಳು ಕೇಳಿ ಬರುತ್ತಿದ್ದು, ಅದು ರಾಜಕೀಯ ಬಣ್ಣವನ್ನೂ ಪಡೆದು, ಯಾವ್ಯಾವುದೋ ದೃಷಿಕೋನ ತಳೆದು ವಾಸ್ತವ ಸಂಗತಿ ಪೂರ್ತಿ ಹೊರಬರದಂತಾಗಿದೆ ಎನ್ನುತ್ತ ಅವರು ವಾಸ್ತವಾಂಶ ವಿವರಿಸಿದ್ದಾರೆ.

    ಇದನ್ನೂ ಓದಿ: ಕನ್ನಡಿಗರು ನಂದಿನಿ ಉತ್ಪನ್ನಗಳನ್ನೇ ಖರೀದಿಸಿ, ಅಮುಲ್​ಗೆ ತಕ್ಕ ಉತ್ತರ ನೀಡಿ: ಕಸಾಪ ಅಧ್ಯಕ್ಷ ಮಹೇಶ ಜೋಶಿ

    ವಿಶಾಲ ಸಾಗರದ ಆಳದಲ್ಲಿ ಏನೇನು ಹುದುಗಿದೆ ಎಂಬುದು ಒಳ ಹೊಕ್ಕಿ ನೋಡಿದರೂ ಹಲವರಿಗೆ ಸಿಗುವುದು ಹಿಡಿಯಷ್ಟು ಮಾತ್ರ! ಪರಿಸ್ಥಿತಿ ಹೀಗಿದ್ದಾಗ ವೈಯುಕ್ತಿಕವಾಗಿ ಹಿಂದೆ ಕಾರ್ಯನಿರ್ವಹಿಸಿದ ಅನುಭವದಲ್ಲಿ, ಪ್ರತಿಕ್ರಿಯಿಸಿ ವಾಸ್ತವ ಸಂಗತಿ ಹೇಳುವುದು ಅಗತ್ಯವೆನಿಸಿದರೂ, ಎಲ್ಲರಿಗೂ ತೃಪ್ತಿ ಆಗುವಂತೆ ಹೇಳುವುದು ಸಾಧ್ಯವೂ ಇಲ್ಲ ಎಂದಿರುವ ಅವರು ಈ ಕೆಳಗಿನ ಅಂಶಗಳನ್ನು ತಿಳಿಸಿದ್ದಾರೆ.

    ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್ ಮಾಜಿ ಎಂಡಿ ಪ್ರೇಮನಾಥ್ ಏನಂತಾರೆ?
    ಡಾ.ರಾಜಕುಮಾರ್ ಅವರು ನಂದಿನಿಗೆ ಉಚಿತವಾಗಿ ರಾಯಭಾರಿ ಆದ ಸಂದರ್ಭ.

    ಸಂಕ್ಷಿಪ್ತವಾಗಿ ಮುಖ್ಯ ವಿವರಗಳ ಹೇಳಬೇಕೆಂದರೆ ..

    1. ಇಲ್ಲಿ ಅಮುಲ್ ಹಾಲು ಮಾರಾಟ ಪ್ರಯತ್ನ ಹೊಸದಲ್ಲ. ಆದರೆ ಕಾಲಕಾಲಕ್ಕೆ ಇದು ಬೇಡ ಎಂದು ನಾವು ಮನವಿ ಮಾಡಿ ನಿಲ್ಲಿಸಿದ್ದೆವು. ಅವರು ನಂದಿನಿಯೊಂದಿಗೆ ಇದ್ದ ಸಹಕಾರ ಬಾಂಧವ್ಯದಲ್ಲಿ ಈ ಪ್ರಯತ್ನ ಮುಂದುವರಿಸಲಿಲ್ಲ!
    2. ಇಲ್ಲಿ ಮುಖ್ಯವಾಗಿರೋದು ಆಯಾ ರಾಜ್ಯದ ರೈತರ ಹಿತಾಸಕ್ತಿ ವಿಷಯ ಮಾತ್ರ. ದಿನವೂ ಈಗ ಸಾವಿರಾರು, ಮುಂದೆ ಲಕ್ಷಾಂತರ ಲೀಟರ್ ಹಾಲು ಅಮುಲ್​ನಿಂದ ಮಾರಾಟಕ್ಕೆ ಬಂದರೆ ಈಗಲೇ 73 ಲಕ್ಷ ಲೀಟರ್​ಗೂ ಹೆಚ್ಚು ಹಾಲು ಕೊಡುವ ನಮ್ಮ ರೈತರು/ಡೇರಿಗಳು ನಂದಿನಿ ಸಂಸ್ಥೆ ಈ ಉಳಿಕೆಯಾಗುವ ಹೆಚ್ಚುವರಿ ಹಾಲು ಮಾರಲು ಎಲ್ಲಿಗೆ ಹೋಗಬೇಕು?
    ಅಮುಲ್​ನ ಎಲ್ಲಾ ಉತ್ಪನ್ನಗಳು ಇಲ್ಲಿ ಮೊದಲಿನಿಂದ ಮುಕ್ತವಾಗಿ ಮಾರಾಟವಾಗುತ್ತಿವೆ. ಅದಕ್ಕೆ ಯಾವ ವಿರೋಧವೂ ಇಲ್ಲ. ಆದರೆ ಈಗ ನೇರವಾಗಿ ಹೊಸದಾಗಿ ಪಾಲಿಥಿನ್ ಪ್ಯಾಕ್​ನಲ್ಲಿ ಹಾಲು ಮಾರಾಟ ಮಾಡಲು ಬರುತ್ತಿದೆ. ನಂದಿನಿ ತರಹ 1975ರಿಂದ ಹಳ್ಳಿ ಸುತ್ತಾಡಿ ಕಷ್ಟಪಟ್ಟು ಬೆವರು ಸುರಿಸಿ ಸಾವಿರಾರು ಹಾಲು ಶೇಖರಣೆ ಸಂಘ ಸ್ಥಾಪಿಸಿ ಕಷ್ಟಪಟ್ಟು ದಿನಕ್ಕೆರಡು ಬಾರಿ ಲಾರಿ ಕಳಿಸಿ ಹಾಲು ಶೇಖರಣೆ ಮಾಡಿ ಅಥವಾ ಇಲ್ಲಿ ಡೇರಿ ಸ್ಥಾಪಿಸಿ ಅದು ಹಾಲು ಸಂಸ್ಕರಣೆ ಮಾಡುವುದಿಲ್ಲ (ಹೊರರಾಜ್ಯದಲ್ಲಿ ಮಾಡುತ್ತದೆ). ಈ ಸದ್ಯಕ್ಕೆ ಅದಕ್ಕೆ ಸಹಕಾರಿ ನಿಯಮಗಳಲ್ಲಿ ಅವಕಾಶವೂ ಇಲ್ಲ.
    3. ಅಮುಲ್​ನ ಹತ್ತಾರು/ನೂರಾರು ಬಗೆಯ/ಪ್ಯಾಕ್​ಗಳ ಉತ್ಪನ್ನಗಳ ಮಾರಾಟಕ್ಕೆ ಕೆಎಂಫ್​ ನಂದಿನಿ ಆಗಲಿ ಸರ್ಕಾರವಾಗಲಿ ಮತ್ತು ನಮ್ಮ ವಿಶಾಲ ಹೃದಯದ ಧಾರಾಳಿ ಕನ್ನಡಿಗರಾಗಲಿ ವಿರೋಧವನ್ನು ಹಿಂದೆಯೂ, ಇಂದೂ ಮಾಡಿಲ್ಲ. ಹಿಂದೆ ಸರ್ಕಾರದ ನಮ್ಮ ನಗರ ಸಾರಿಗೆ ಸಂಸ್ಥೆ ಅಧಿಕಾರಿಗಳು ಇನ್ನೂ ಮುಂದಕ್ಕೆ ಹೋಗಿ ನಗರದ ಮಲ್ಲೇಶ್ವರ ಮತ್ತಿತರ ಆಯ್ದ ಬಸ್ ನಿಲ್ದಾಣಗಳಲ್ಲಿ ನಂದಿನಿ ಬದಲು ಅಮುಲ್ ಪಾರ್ಲರ್​ ಸ್ಥಾಪನೆಗೆ ಒಳ್ಳೆಯ ಜಾಗಗಳನ್ನ ಕೊಟ್ಟಿದ್ದರು .
    4. ಸಮೃದ್ಧ ನಂದಿನಿಯೂ ಕೊರತೆ ಇರುವ ರಾಜ್ಯಗಳಲ್ಲಿ ಮಾತ್ರ ಆ ಹಾಲು ಮಂಡಳಿಗಳ ಮೌಖಿಕ ಸಹಮತಿಯೊಂದಿಗೆ ಸೌಹಾರ್ದತೆಯಲ್ಲಿ ಹಾಲು ಮಾರಾಟ ಮಾಡುತ್ತಿದೆ.
    5. ಹಾಲು ಸಮೃದ್ಧಿ ಇದ್ದರೂ ನಂದಿನಿಯು ಗುಜರಾತ್ ಅಥವಾ ಅಮುಲ್ ಮೂಲಕ್ಷೇತ್ರದ ನಗರಗಳಿಗೆ ಮಾರಾಟಕ್ಕೆ ಹೋಗಿಲ್ಲ.
    6. ದಶಕಗಳಿಂದ ಅಮುಲ್ ಮತ್ತು ನಂದಿನಿ ಪರಸ್ಪರ ಸಹಕಾರ ತತ್ವ ಅಳವಡಿಸಿಕೊಂಡೇ ಒಬ್ಬೊರಿಗೊಬ್ಬರು ಪೂರಕವಾಗಿ ಮೂಲಕ್ಕೆ/ಬುಡಕ್ಕೆ ಕೈ ಹಾಕದೆ ಇಲ್ಲಿಯವರೆಗೆ ಸೋದರತ್ವದ ಹೊಂದಾಣಿಕೆಯಲ್ಲಿ ವ್ಯವಹರಿಸುತ್ತಿವೆ. ಅಮುಲ್​ಗೆ ಬೆಂಗಳೂರು ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮಾರಲು ಉತ್ತಮ-ಗುಣ ಮಟ್ಟದಲ್ಲಿ ಅಮುಲ್ ಐಸ್​ಕ್ರೀಮ್​ಗಾಗಿ ಪ್ರತಿದಿನವೂ ಸಾವಿರಾರು ಲೀಟರ್​ನಷ್ಟು ನಮ್ಮದೇ ಶುದ್ಧ ನಂದಿನಿ ಹಾಲನ್ನೇ ಕೆಎಂಎಫ್​ ದಶಕಗಳಿಂದ ಒದಗಿಸುತ್ತಿದೆ. ಇಲ್ಲಿ ಐಸ್​​ಕ್ರೀಮ್​ನ ಸಾಗಾಣಿಕೆ ವೆಚ್ಚ ತಗ್ಗಿಸಲು ಅಮುಲ್ ಹೀಗೆ ಇಲ್ಲೇ ನಂದಿನಿ ಘಟಕದಲ್ಲಿ ಉತ್ಪಾದನೆ ಮಾಡಿದಾಗ, ಹೆಚ್ಚುವರಿ ಸಾಗಾಣಿಕೆ ವೆಚ್ಚದಲ್ಲಿ ದಿನವೂ ದೊಡ್ಡ ಪ್ರಮಾಣದ ಹಾಲು ಯಾಕೆ ಬರಬೇಕು?
    7. ಇತರ ಹತ್ತಾರು ಖಾಸಗಿ ಹಾಲಿನ ಬ್ರ್ಯಾಂಡ್​ಗಳು ಮಾರಾಟಕ್ಕೆ ಬಂದ್ದಿದ್ದರೂ ಅವು ಸೋದರ ಸಂಸ್ಥೆಗಳಲ್ಲ ಮತ್ತು ವಹಿವಾಟಿನಲ್ಲಿ ದೊಡ್ಡ ಬ್ರ್ಯಾಂಡ್​ಗಳಲ್ಲ. ಹೀಗಾಗಿ ಅವು ಗಣ್ಯವಾಗುವುದಿಲ್ಲ.
    8. ಇದರಲ್ಲಿ ರಾಜಕೀಯ ವಿಷಯ ಇಲ್ಲ ಮತ್ತು ಇದು ವಿಲೀನದ ಪ್ರಯತ್ನದ ಭಾಗ ಅಲ್ಲ.
    9. ವ್ಯಾವಹಾರಿಕ ತತ್ವ, ಈವರೆಗೆ ಒಪ್ಪಿಕೊಂಡ ನಿಯಮಗಳ ಸ್ಪರ್ಧೆ, ಇತ್ಯಾದಿ ಬೇರೆಯ ಸಣ್ಣ ಬ್ರಾಂಡ್​ಗಳು/ಇತರರು ಮಾಡಿದರೆ ಸಹಿಸಿ ಕೊಂಡರೂ ಭಾವನಾತ್ಮಕ ಬಂಧ ಇರುವ ಸಹಕಾರ ರಂಗದ ನಾವುಗಳೇ ಸೋದರ ಸಂಸ್ಥೆಗಳು ಅಮುಲ್/ನಂದಿನಿ ಸಣ್ಣ ವ್ಯತ್ಯಾಸ ಮಾಡಿದರೂ ಯಾರೂ ಸಣ್ಣದಾಗಿ ಪರಿಗಣಿಸುವುದಿಲ್ಲ. ಅದು ದೊಡ್ಡದಾಗಿ ಕಾಣುವುದು ಸಹಜ.
    10. ವಿಶ್ವ ಮಾನವತೆ, ಜಗವೆಲ್ಲಾ ಒಂದೇ ಅಂದರೂ ಪ್ರಕೃತಿ ಕೊಡುಗೆಯಾದ ನೆಲ-ಜಲ-ಭಾಷೆ ವಿಷಯ ಬಂದರೆ ಪಕ್ಕದ ಜಿಲ್ಲೆಯಾಗಲಿ, ರಾಜ್ಯವಾಗಲಿ, ದೇಶವಾಗಲಿ ಯಾವುದೇ ದೇಶದ/ಆಯಾ ಪ್ರದೇಶದ ಜನತೆಗೆ/ಅಭಿಮಾನಿಗಳಿಗೆ ನೋವು/ಸಿಟ್ಟು /ಪ್ರತಿಭಟನೆ ಸಹಜ. ಭಾವನಾತ್ಮಕವಾಗಿ ಆ ತರಹದ ಬೇಡದ ಕೃತ್ಯಗಳಂತೆಯೇ ನೋಡಲಾಗುತ್ತದೆ.
    11. ಈಗ ಅಮುಲ್ ಪರ ವಾದ ಮಂಡಿಸುವ ಕನ್ನಡಿಗರಿಗೆ ನಂದಿನಿಯಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಸ್ವಲ್ಪ ವ್ಯತ್ಯಾಸಗಳೂ ಕಾರಣವಾಗಿವೆ. ಈ ವರ್ಷ ಹಾಲು/ಉತ್ಪನ್ನಗಳ/ಕೊರತೆ ಇನ್ನಿತರ ಸ್ಥಳೀಯ ವ್ಯತ್ಯಾಸಗಳೂ ಹೆಚ್ಚಾಗಿ ಭಾದಿಸುತ್ತಿವೆ. ಅವು ನಿಜ ಮತ್ತು ಸಹಜ.

    ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್ ಮಾಜಿ ಎಂಡಿ ಪ್ರೇಮನಾಥ್ ಏನಂತಾರೆ?
    ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅವರು ಉಚಿತವಾಗಿ ನಂದಿನಿಗೆ ರಾಯಭಾರಿ ಆಗಿದ್ದ ಸಂದರ್ಭ, ಅವರೊಂದಿಗೆ ಪ್ರೇಮನಾಥ್.

    ತಾತ್ಕಾಲಿಕವಾಗಿ ನಂದಿನಿಯಲ್ಲಿ ಈ ವರ್ಷ ಸ್ವಲ್ಪ ಏನೋ ಕೊರತೆ/ವ್ಯತ್ಯಾಸವಾಗಿದ್ದರೂ ಅದನ್ನೇ ವರ್ಷಪೂರ್ತಿ ಜೊತೆಗಿರುವ/ಪೊರೆಯುವ ನಿಷ್ಠಾವಂತ ನಂದಿನಿಗೆ ವಿರೋಧ/ಕೇಡು ಬಯಸಲಾಗದು. ಇಲ್ಲೂ ಪರಭಾಷಿಕರಿಗಿಂತ ನಮ್ಮ ಹಲವು ವಿಶಾಲ ಕನ್ನಡದವರೇ ರಾಜ್ಯಕ್ಕಿಂತ ಬ್ರ್ಯಾಂಡ್​ (ರಾಷ್ಟ್ರೀಯ) ಮೋಹದಲ್ಲಿ ಸ್ವಲ್ಪ ಹೆಚ್ಚು ಮನ್ನಣೆ ಜಾಸ್ತಿ ನೀಡುವವರು. ಅಮುಲ್ ಹಾಲು ಬಣ್ಣ ಸ್ವಲ್ಪ ಜಾಸ್ತಿ ಬಿಳಿ. ಗುಜರಾತ್​ನಲ್ಲಿ ಎಮ್ಮೆ ಹಾಲಿನ ಪ್ರಮಾಣ ತುಂಬಾ ಜಾಸ್ತಿ ಇರುವ ಕಾರಣ ಅದು ಸಹಜ. ಆದರೆ ಇಲ್ಲಿ ನಂದಿನಿ ಹಸುವಿನ ಹಾಲು.

    ಈ ಸಂಸ್ಥೆ ಇಷ್ಟು ದೊಡ್ಡದಾಗಿ ಬೆಳೆಯಲು ರಾಜ್ಯದ ರೈತರು, ಗ್ರಾಹಕರು, ಹಿಂದಿನಿಂದಲೂ ಸಂಸ್ಥೆಗೆ ನಿಷ್ಠೆಯಿಂದ ದುಡಿದ ಸಿಬ್ಬಂದಿ ಅಧಿಕಾರಿಗಳು, ನಿಷ್ಠ ರೈತರ ಆಡಳಿತ ಮಂಡಳಿಗಳು, ಅಧ್ಯಕ್ಷರು ಮುಖ್ಯ ಕಾರಣ. ನಮ್ಮ ವಿವಿಧ ಸರ್ಕಾರಗಳು ಪೂರ್ಣ ಉತ್ತೇಜನ ನೀಡಿ ಬೆಂಬಲಿಸಿವೆ. ಮೇಲಾಗಿ ನಾಡಿನ ಪ್ರಸಿದ್ಧ ಕನ್ನಡಿಗರ ಆರಾಧ್ಯದೈವ ನನ್ನ ಆಪ್ತರಾದ ಡಾ.ರಾಜಕುಮಾರ್ ಅವರು, ಆಪ್ತ ಸ್ನೇಹಿತರು ಸೂಪರ್ ಸ್ಟಾರ್​ಗಳಾದ ಉಪೇಂದ್ರ, ಪುನೀತ್ ರಾಜಕುಮಾರ್ ಅವರು ಉಚಿತ ಪ್ರಚಾರ ಮಾಡಿ ನಂದಿನಿಗೆ ಭಾರಿ ಬೆಂಬಲ ನೀಡಿ ಸಹಾಯ ಮಾಡಿದ್ದಾರೆ.

    ಈಗ ಎಲ್ಲಾ ಕ್ಷೇತ್ರ, ಸಂಸ್ಥೆ, ರಾಜಕೀಯ ರಂಗ, ಪ್ರದೇಶ, ಮನೆ, ಮನುಜರಲ್ಲೂ ಸ್ವಲ್ಪಮಟ್ಟಿಗೆ ಚಿಕ್ಕದಾಗಿಯೂ ಇಲ್ಲ ದೊಡ್ಡದಾಗಿಯೂ ಮೌಲ್ಯಗಳ ವ್ಯತ್ಯಾಸ/ಇಳಿಕೆ ಕಾಣುತ್ತಿದೆ. ಈ ಕ್ಷೇತ್ರದಲ್ಲಿ ಹಿಂದೆ ನಂದಿನಿಗಿಂತ ಮೇಲಿದ್ದ, ಮೆರೆದಿದ್ದ ಪಕ್ಕದ ರಾಜ್ಯಗಳ ಪ್ರಸಿದ್ಧ ಹಾಲಿನ ಬ್ರ್ಯಾಂಡುಗಳು ಈಗಾಗಲೇ ಕುಸಿತ ಕಂಡಿವೆ. ಇತ್ತೀಚಿಗೆ ಅಗ್ರ ಮಹಾಮಂಡಳಿಯ ವಾತಾವರಣದಲ್ಲೂ ಕೆಲ ಬದಲಾವಣೆಗಳೂ ಕೇಳಿ ಬರುತ್ತಿವೆ.

    ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್ ಮಾಜಿ ಎಂಡಿ ಪ್ರೇಮನಾಥ್ ಏನಂತಾರೆ?
    ರಿಯಲ್ ಸ್ಟಾರ್ ಉಪೇಂದ್ರ ಕೂಡ ನಂದಿನಿಗೆ ಉಚಿತವಾಗಿ ರಾಯಭಾರಿ ಆಗಿದ್ದರು.

    ಏನೇ ಆದರೂ ಇಲ್ಲಿ ನಂದಿನಿಯಲ್ಲಿಯೂ ನಿಷ್ಠಾವಂತ ರೈತರು ಮತ್ತು ಈ ಪರಿಯ ಭಾರಿ ವಾತ್ಸಲ್ಯ ಪ್ರೀತಿ ಭಾಂದವ್ಯ ತೋರುತ್ತಿರುವ ನಂದಿನಿಯ ಹೆಮ್ಮೆಯ ಅಪೂರ್ವ ಗ್ರಾಹಕರೂ ಅಕಸ್ಮಾತ್ ಕೊರತೆ ಇತ್ಯಾದಿ ವ್ಯತ್ಯಾಸಗಳಾಗಿ ನಂದಿನಿಯನ್ನು ಕೈ ಬಿಟ್ಟಲ್ಲಿ ನಂದಿನಿಯೂ ಮುಂದೆ ಬೇಗ ಸೊರಗಬಹುದು. ದಯವಿಟ್ಟು ಇದಕ್ಕೆ ಗ್ರಾಹಕರು, ರೈತರು, ಸಿಬ್ಬಂದಿ ಅವಕಾಶ ನೀಡಬಾರದು, ಹಾಗಾಗದಿರಲಿ 🙏

    ಈಗಲೂ ಅಮುಲ್ ತನ್ನ ಎಲ್ಲಾ ಉತ್ಪನ್ನಗಳನ್ನು ನಿರ್ವಿಘ್ನವಾಗಿ ಮಾರುತ್ತಿದೆ, ಮಾರಲು ಮುಕ್ತ ಅವಕಾಶವಿದೆ. ಅವನ್ನೆಲ್ಲಾ ನಂದಿನಿ, ರಾಜ್ಯ ಕಿಂಚಿತ್ತೂ ವಿರೋಧಿಸದೆ, ಸಹಕರಿಸಿ, ಸ್ವಾಗತಿಸಿದೆ. ನಮ್ಮ ಭಾರಿ ವಿಶಾಲ ಹೃದಯದ ಕನ್ನಡಿಗರು ಸಹ ರತ್ನಗಂಬಳಿ ಹಾಕಿ ಸ್ವಾಗತಿಸಿ ಅಪ್ಪಿಕೊಂಡಿದ್ದಾರೆ. ಮುಂದೆಯೂ ಹೆಚ್ಚಾಗಲಿದೆ. ಆದರೆ ಅಮುಲ್ ನಮ್ಮ ರೈತರ ಮೂಲ ದೈನಂದಿನ ಆದಾಯದ ಹಾಲಿನ ವಹಿವಾಟು, ಶುದ್ಧ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ಮಾತ್ರ ಬರದೆ ಎಂದಿನ ಸಹಕಾರ ತೋರಲಿ ಎಂದಷ್ಟೇ ಈಗಿನ ನಂದಿನಿ ರೈತ ಪ್ರೇಮಿಗಳಲ್ಲಿ, ಕನ್ನಡಿಗರಲ್ಲಿ ನಮ್ಮ ಮನವಿ ಅಷ್ಟೇ. ದಯವಿಟ್ಟು ನಮ್ಮ ರೈತರಿಗಾಗಿ ನಮ್ಮ ನಂದಿನಿಯನ್ನು ಉಳಿಸಿ ಬೆಳೆಸೋಣ ಎನ್ನುತ್ತಾರೆ ಪ್ರೇಮನಾಥ್.

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಿಕ್ತು ವಿಶೇಷ ಆಶೀರ್ವಾದ!

    ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts