More

    ನಮ್ಮ ನಮ್ಮಲ್ಲಿ: ಗಾಬರಿಬಿದ್ದ ಬಲಹೀನ ನಾಯಿ ಗಬಕ್ಕನೆ ಕಚ್ಚಿದಂತೆ!

    ನಮ್ಮ ನಮ್ಮಲ್ಲಿ: ಗಾಬರಿಬಿದ್ದ ಬಲಹೀನ ನಾಯಿ ಗಬಕ್ಕನೆ ಕಚ್ಚಿದಂತೆ!‘ನೋಡಿ, ನನ್ನ ಬಗ್ಗೆ ಎಂಥ ಮಾತಾಡಿಬಿಟ್ಟಿದ್ದಾರೆ’ ಅಂತ ಕಣ್ಣೀರಿಟ್ಟಳು ಹುಡುಗಿ. ಇಂಥ ಸಾವಿರ ಮಾತು ನನ್ನ ಬಗ್ಗೆಯೂ ಆಡಿದ್ದಾರೆ. ಅದಕ್ಕೇಕೆ ತಲೆಕೆಡಿಸಿಕೊಳ್ತೀ ಹೋಗು ಅನ್ನಬಹುದಿತ್ತು. ಅನ್ನಲಿಲ್ಲ. ನಿಜ ಹೇಳಬೇಕೆಂದರೆ, ನನಗೆ ಬುದ್ಧಿ ತಿಳಿದಾಗಿನಿಂದ ಎರಡೂ ತರಹದ ಮಾತು ಕೇಳಿಸಿಕೊಂಡೇ ಬೆಳೆದಿದ್ದೇನೆ. ಒಳ್ಳೆಯವು ಮತ್ತು ಕೆಟ್ಟವು. ಸಮಾನಾಂತರ ಸಂಖ್ಯೆಯಲ್ಲಿ ಗೆಳೆಯರನ್ನೂ, ವಿರೋಧಿಗಳನ್ನೂ ಸೃಷ್ಟಿಸಿಕೊಳ್ಳುವುದು ನನ್ನ ಸ್ವಭಾವವೋ, ನಸೀಬೋ, ಜಾತಕ ಲಕ್ಷಣವೋ-ಬಗೆಹರಿದಿಲ್ಲ. ಎರಡೂ ತರಹದ ಅಭಿಪ್ರಾಯಗಳು ಬರುತ್ತಿರುತ್ತವೆ. ಎರಡರ ಬಗ್ಗೆಯೂ ನಾನು ತುಂಬ ತಲೆಕೆಡಿಸಿಕೊಳ್ಳುವುದಿಲ್ಲ.

    ಆದರೆ, ಯಾವ ಮಾತನ್ನು ಯಾರು ಆಡಿದ್ದಾರೆ ಎಂಬ ಬಗ್ಗೆ ಮಾತ್ರ ತಕ್ಷಣ ಯೋಚಿಸುತ್ತೇನೆ. ಏನು ಮಾತನಾಡಿದರು ಎಂಬುದಕ್ಕಿಂತ ಯಾರು ಮಾತಾಡಿದರು ಎಂಬುದು ನನಗೆ ಮುಖ್ಯವಾಗುತ್ತದೆ. ಅದೂ ಒಂದು ಕಾಲವಿತ್ತು: ಚಿಕ್ಕ ಮಾತಿಗೂ ಪ್ರತಿಕ್ರಿಯಿಸುತ್ತಿದ್ದೆ. ನನ್ನ ಬಗ್ಗೆ ಚಿಕ್ಕದೇನಾದರೂ ಅಪಸವ್ಯದ ಸುದ್ದಿ ಬರೆದರೆ ರಿಯಾಕ್ಟ್ ಮಾಡುತ್ತಿದ್ದೆ. ಕದನಕ್ಕೆ ಬೀಳುತ್ತಿದ್ದೆ. ಆದರೆ, ಕ್ರಮೇಣ ಆ ಕದನ ಕುತೂಹಲ ಕಡಿಮೆಯಾಗಿದೆ. ತೀರ ಹರ್ಟ್ ಆಗುವಂತೆ ಬರೆದರೆ ಕೋರ್ಟ್​ನಲ್ಲೊಂದು ದಾವೆ ಹೂಡಿ ಸುಮ್ಮನಾಗುತ್ತೇನೆ. ಆದರೆ ಪರಿಚಿತರು, ಸ್ನೇಹಿತರು, ಆಪ್ತರು, ಹಿರಿಯರು, ವಿವೇಕವಂತರು, ವಿಮರ್ಶಕರಂತಹ ಓದುಗರು ಒಂದು ಚಿಕ್ಕ ಮಾತಾಡಿದರೂ ಅದರ ಬಗ್ಗೆ ಸಾವಿರ ಸಲ ಯೋಚಿಸುತ್ತೇನೆ.

    ಒಳ್ಳೆಯ ಮಾತಿನ ಸಂಗತಿ ಒತ್ತಟ್ಟಿಗಿರಲಿ, ಅದನ್ನು ಬಿಡಿ. ನಮ್ಮನ್ನು ಇಷ್ಟಪಡುವವರಿಗೆ ನಾವು ಏನು ಮಾಡಿದರೂ ಚೆನ್ನ. ನಮಗೆ ಒಳ್ಳೆಯದಾಗಲಿ ಅಂತ ಬಯಸುವವರಿಗೆ ನಮ್ಮ ಕುರಿತು ಒಳ್ಳೆಯದನ್ನೇ ಆಡುವ ಮತ್ತು ಒಳ್ಳೆಯದನ್ನೇ ಕೇಳುವ ಉಮ್ಮೇದಿ ಇರುತ್ತದೆ. ನಮ್ಮನ್ನು ಕಂಡರಾಗದಿರುವವರಿಗೆ ನಾವು ಏನೇ ರುಂಡ ಕಡಿದು ಎದುರಿಗಿಟ್ಟರೂ ನಮ್ಮ ಬಗ್ಗೆ ಮೆಚ್ಚುಗೆ ಹುಟ್ಟುವುದಿಲ್ಲ. ನನಗೆ ಈ ಎರಡೂ ಜಾಯಮಾನದವರ ಅಭಿಪ್ರಾಯ ತುಂಬ ಮುಖ್ಯ ಅನ್ನಿಸುವುದಿಲ್ಲ. ಆದರೆ ನಮ್ಮಿಂದ ದೂರ ನಿಂತು ಮಾತನಾಡುವ ಒಬ್ಬ ವಿಮರ್ಶಕ ಅಂತ ಇರುತ್ತಾನೆ. ಅವನ ಬಗ್ಗೆ ಗಮನವಿರಲಿ. ಅವನಿಗೆ ನಮ್ಮನ್ನು ಹೊಗಳಿ ಆಗಬೇಕಾಗಿರುವುದು ಏನೂ ಇಲ್ಲ. ತೆಗಳಿದರೆ ಸಿಗುವ ಲಾಭವೂ ಇರುವುದಿಲ್ಲ. ಹಾಗಂದ ಮಾತ್ರಕ್ಕೆ ಅವನು ಹೇಳಿದುದಕ್ಕೆಲ್ಲ ಬೆಲೆ ಕೊಡಬೇಕು ಅಂತಿಲ್ಲ. ಬೆಲೆ ಕೊಡಬೇಕಾಗಿರುವುದು ವಿಮರ್ಶಕನ ಮಾತಿಗೂ ಅಲ್ಲ. ಅವನ ವ್ಯಕ್ತಿತ್ವಕ್ಕೆ!

    ಅದನ್ನೇ ನಾನು ಆರಂಭದಲ್ಲಿ ಹೇಳಿದ್ದು. ಮಾತನಾಡುತ್ತಿರುವುದು ಯಾರು ಅಂತ ಎಚ್ಚರಿಕೆಯಿಂದ ಪರೀಕ್ಷಿಸಿ, ಗಮನಿಸಿ, ವಿಚಾರಿಸಿ. ಕೇವಲ ನಮಗೆ ಸಂಬಂಧವಿಲ್ಲದವನು ಅಥವಾ ಹೊರಗಿನವನು ಅಥವಾ ದೂರದವನು ಅಂದ ಮಾತ್ರಕ್ಕೆ ಅವನ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. ಈ ಮಾತನ್ನಾಡುವುದರಿಂದ ಅವನಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬ ಕಾರಣಕ್ಕಾಗಿಯೂ ನಾವು ಆತನಿಗೆ ಬೆಲೆ ಕೊಡಬೇಕಾಗಿಲ್ಲ. ಆದರೆ ಮಾತನಾಡಿದವನ ವ್ಯಕ್ತಿತ್ವ ದೊಡ್ಡದು ಅನ್ನಿಸಿದರೆ ಮಾತ್ರ, ಅವನು ಕೆಟ್ಟ ಮಾತನಾಡಿದ್ದರೂ ಎದ್ದು ನಿಂತು ಗೌರವಿಸಿ, ಕೈಮುಗಿದು ಬಿಡಿ.

    ಆದರೆ ಹಾಗೆ ಮಾತನಾಡಿದವನ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳುವುದು ಹೇಗೆ? ಮೊದಲಿಗೆ ಅವನು (ಅಥವಾ ಅವಳು) ಏನು ಮಾತನಾಡಿದ (ಳು) ಎಂಬುದನ್ನು ಮರೆತುಬಿಡಿ. ಮಾತನಾಡಿದ ವ್ಯಕ್ತಿ ಸಾಮಾಜಿಕವಾಗಿ ಭದ್ರ ನೆಲೆಯುಳ್ಳವನಾ ಅಂತ ಪರೀಕ್ಷಿಸಿ. ಸಾಮಾಜಿಕ ಭದ್ರತೆ ಇರುವವರು ಇತರರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅದಕ್ಕಿಂತ ಮುಖ್ಯವಾಗಿ, ಮಾತನಾಡಿದ ವ್ಯಕ್ತಿಗೆ ಸಾಂಸಾರಿಕ ನೆಮ್ಮದಿ ಮತ್ತು ಭದ್ರತೆ ಇದೆಯಾ? ಚೆಕ್ ಮಾಡಿ. ವ್ಯಕ್ತಿಗತ ನೆಲೆಯಲ್ಲಿ ಅಸಮಾಧಾನಿಗಳಾಗಿರುವವರಿಗೆ ಸುಮ್ಮನೆ ಇತರರ ಬಗ್ಗೆ ಹಗುರವಾಗಿ ಮಾತನಾಡುವ ಚಟವಿರುತ್ತದೆ. ಅಂಥವರನ್ನು ಕೇರ್ ಮಾಡಲೇಬೇಡಿ. ಅದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ನಾಯಿ! ನಾಯಿಗಳಲ್ಲಿ ಅನೇಕ ಜಾತಿ, ಗಾತ್ರಗಳಿರುತ್ತವೆ ಅಂತ ನಿಮಗೂ ಗೊತ್ತು. ಸಾಮಾನ್ಯವಾಗಿ ದೊಡ್ಡ ಜಾತಿಯ, ದೊಡ್ಡ ಗಾತ್ರದ, ಬಲಿಷ್ಠ ತಳಿಯ ನಾಯಿಗಳು ತೀರ ರೇಗದ ಹೊರತು ಯಾರಿಗೂ ಸುಲಭಕ್ಕೆ ಬಾಯಿ ಹಾಕುವುದಿಲ್ಲ. ಆದರೆ ಕುಳ್ಳಗೆ, ಪುಟ್ಟಗೆ ಬಲಹೀನವಾಗಿರುವಂಥ ಜಾತಿ ಯವಿದ್ದಾವಲ್ಲ? ಅವು ತಮ್ಮ ಭಯಕ್ಕರ್ಧ ಗಬಕ್ಕನೆ ಕಚ್ಚಿ ಬಿಡುತ್ತವೆ.

    ಮನುಷ್ಯರಾದರೂ ಅಷ್ಟೆ. ಮನೆಯ ಕಡೆ, ಸಮಾಜಕ್ಕೆ ಸಂಬಂಧಿಸಿದಂತೆ ತೃಪ್ತರಾಗಿರುವವರು, ದೃಢವಾದ ವ್ಯಕ್ತಿತ್ವ ಬೆಳೆಸಿಕೊಂಡವರು ಇನ್ನೊಬ್ಬರ ಬಗ್ಗೆ ತೀರ ಹಗುರವಾಗಿ ಮಾತನಾಡುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಸಂತೃಪ್ತ ಜೀವಿಗಳು, ಮತ್ತೊಬ್ಬರ ಬಗ್ಗೆ ಅಸಹನೆಯ ಮಾತುಗಳನ್ನು ಆಡುವುದಿಲ್ಲ. ಅಕಸ್ಮಾತ್ ಅಂಥವರ ಬಾಯಲ್ಲಿ ನಿಮ್ಮ ಬಗ್ಗೆ ಅತೃಪ್ತಿಯ, ಆಕ್ಷೇಪಣೆಯ, ಅಸಮಾಧಾನದ ಮಾತು ಕೇಳಿಬಂದರೆ ತಕ್ಷಣ ನಿಮ್ಮನ್ನು ನೀವು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಿ. ಎಲ್ಲಾದರೂ ತಪ್ಪಾಗಿ ನಡೆದುಕೊಂಡಿದ್ದೀರಾ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಅವರು ಆಡಿದುದರಲ್ಲಿ ಸತ್ಯವಿರಬಹುದಾ ಅಂತ ತನಿಖೆ ಮಾಡಿ. ಅಕಸ್ಮಾತ್ ‘ಹೌದು’ ಅನ್ನಿಸಿದರೆ ಸುಳ್ಳೇ ಅಹಂಭಾವ ಬಿಟ್ಟು, ಒಣಪ್ರತಿಷ್ಠೆ ಬಿಟ್ಟು ನಿಮ್ಮನ್ನು ನೀವು ತಿದ್ದಿಕೊಳ್ಳಿ. ಅಂಥ ಮಾತನಾಡಿದವರಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಒಂದು ಥ್ಯಾಂಕ್ಸ್ ಹೇಳಿ.

    ನಾವಾದರೂ ಅಷ್ಟೇ; ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ಯೋಚಿಸಿ ಮಾತನಾಡಬೇಕು. ನಮಗಿಂತ ದುರ್ಬಲರ ಬಗ್ಗೆ, ಗತಿಹೀನರ ಬಗ್ಗೆ ಮಾತನಾಡುವಾಗ (ಅವರು ತಪು್ಪ ಮಾಡಿದ್ದರೂ) ಹನಿ ಕರುಣೆ ಇರಬೇಕು. ನಮಗಿಂತ ಶಕ್ತಿವಂತರ ಬಗ್ಗೆ, ಅಕಸ್ಮಾತ್ ಅವರು ದುಷ್ಟರೂ ಆಗಿದ್ದರೆ, ಮಾತನಾಡುವಾಗ ಎಚ್ಚರಿಕೆಯಿರಬೇಕು. ಸ್ನೇಹಿತರ ತಪು್ಪ ಒಪು್ಪಗಳನ್ನು ಅವರಿಗೇ ನೇರವಾಗಿ ಹೇಳಿಬಿಡಬೇಕು. ಇವೆಲ್ಲ ಮಾಡುವ ಮುನ್ನ ವ್ಯಕ್ತಿಗತ ನೆಲೆಯಲ್ಲಿ, ಸಾಮಾಜಿಕವಾಗಿ, ಬೌದ್ಧಿಕವಾಗಿ ಸರಿಯಾಗಿದ್ದೇವಾ? ತೃಪ್ತರಾಗಿದ್ದೇವಾ? ಮತ್ತೊಬ್ಬರ ಬಗ್ಗೆ ಮಾತನಾಡುವಷ್ಟು ಸಮರ್ಥ ವ್ಯಕ್ತಿತ್ವ ಹೊಂದಿದ್ದೇವಾ? ಯೋಚಿಸಬೇಕು. ಹಿಂದುಮುಂದು ಯೋಚಿಸದೇ ಇನ್ನೊಬ್ಬರ ಬಗ್ಗೆ ಮಾತನಾಡುವುದೆಂದರೆ, ಬಲಹೀನ ಜಾತಿಯ ಕೊಳಕು ನಾಯಿಯೊಂದು ತನ್ನದೇ ಗಾಬರಿಯನ್ನು ನಿತ್ತರಿಸಿಕೊಳ್ಳಲಾಗದೆ ಗಬಕ್ಕನೆ ಕಚ್ಚಲು ಮುಂದಾದಂತೆ! ಹಾಗಾಗಬಾರದಲ್ಲವೇ?

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts