More

    ನೂರಾರು ಜನರನ್ನು ಹೊತ್ತೊಯ್ಯುವ ಮೆಟ್ರೋ ರೈಲು ಸಾರಥಿಯ ಸ್ಫೂರ್ತಿದಾಯಕ ಕತೆ ಇಲ್ಲಿದೆ….

    | ಮಂಜುನಾಥ ಕೆ. ಬೆಂಗಳೂರು

    ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಮತ್ತು ಪ್ರೋತ್ಸಾಹ ಸಿಕ್ಕರೆ ಅವರು ಎಲ್ಲ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ. ಇದಕ್ಕೆ ಸೂಕ್ತ ನಿದರ್ಶನ, ಪ್ರಿಯಾಂಕಾ. ಬಿಎಂಆರ್​ಸಿಎಲ್ ಸಂಸ್ಥೆ ಅವಕಾಶ ಕೊಟ್ಟು ತರಬೇತಿ ನೀಡಿದ್ದರ ಫಲವಾಗಿ, ಈಗ ನೂರಾರು ಜನರನ್ನು ಹೊತ್ತೊಯ್ಯುವ ಮೆಟ್ರೋ ರೈಲು ಸಾರಥಿ ಇವರು.

    ಇತ್ತೀಚೆಗೆ ಕೆ.ಆರ್.ಪುರದಿಂದ ವೈಟ್​ಫೀಲ್ಡ್ ಮಾರ್ಗದ ನೂತನ ಮೆಟ್ರೋ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಆ ವೇಳೆ ಪ್ರಧಾನಿ ಅವರಿದ್ದ ಮೆಟ್ರೋ ರೈಲು ಚಾಲನೆ ಮಾಡಿದ್ದು ಇದೇ ಪ್ರಿಯಾಂಕಾ. ದಾವಣಗೆರೆ ಮೂಲದ ಇವರು, ಬಿಇ ಪದವೀಧರೆ. ಪ್ರಸ್ತುತ ಪತಿಯೊಂದಿಗೆ ವಿಜಯನಗರದಲ್ಲಿ ವಾಸವಿದ್ದಾರೆ. ಅಂತಿಮ ವರ್ಷದ ಇಂಜಿನಿಯರಿಂಗ್ ಓದುವಾಗಲೇ ಬಿಎಂಆರ್​ಸಿಎಲ್ ಕೆಲಸಕ್ಕೆ ಸ್ನೇಹಿತರೆಲ್ಲರೂ ಸೇರಿ ಡಿಪ್ಲೊಮಾ ವಿದ್ಯಾರ್ಹತೆ ಮೇಲೆ ಅರ್ಜಿ ಸಲ್ಲಿಸಿದ್ದರು. ಅಷ್ಟು ಮಂದಿಯಲ್ಲಿ ಪ್ರಿಯಾಂಕಾ ಮಾತ್ರ ಆಯ್ಕೆಯಾದರು. 2017ರ ಡಿಸೆಂಬರ್​ನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿ ಬಿಎಂಆರ್​ಸಿಎಲ್​ಗೆ ಸೇರ್ಪಡೆಗೊಂಡರು. ಆರು ತಿಂಗಳ ತರಬೇತಿ ಬಳಿಕ ಸ್ಟೇಷನ್ ಕಂಟ್ರೋಲರ್ ಕಂ ಟ್ರೖೆನ್ ಆಫೀಸರ್ (ಟಿಒ) ಹುದ್ದೆ ನೀಡಲಾಯಿತು.

    ಇದನ್ನೂ ಓದಿ: ಗೌರವಯುತವಾಗಿ ಹೊರ ಹೋಗಬೇಕು ಈ ರೀತಿ ಹೋಗುವುದು ಸರಿಯಲ್ಲ: ಜಗದೀಶ್​ ಶೆಟ್ಟರ್ ಬೇಸರ​

    ಟೆಕ್ಕಿಯಾಗೋ ಬಯಕೆ?: ವಿದ್ಯಾರ್ಥಿಯಾಗಿದ್ದಾಗ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಕನಸನ್ನು ಪ್ರಿಯಾಂಕಾ ಹೊಂದಿದ್ದರು. ಕ್ಯಾಂಪಸ್ ಸೆಲೆಕ್ಷನ್ ಕೂಡ ಆಗಿತ್ತು. ಆದರೆ ಬಿಎಂಆರ್​ಸಿಎಲ್​ನಲ್ಲಿ ಉದ್ಯೋಗ ಖಾತ್ರಿ ಆಗುತ್ತಿದ್ದಂತೆ ಐಟಿ ಕ್ಷೇತ್ರದ ಆಸೆ ಬಿಟ್ಟು ಮೆಟ್ರೋ ರೈಲು ಹತ್ತಿದರು. ಬಿಎಂಆರ್​ಸಿಎಲ್​ನಲ್ಲಿ ಕೆಲಸದ ಭದ್ರತೆ ಇರುವುದರಿಂದ ಮರು ಯೋಚಿಸದೆ ಸೇರ್ಪಡೆಯಾಗಿದ್ದಾಗಿ ಹೇಳಿಕೊಳ್ಳುತ್ತಾರೆ ಪ್ರಿಯಾಂಕಾ. ಈವರೆಗೆ ಲಕ್ಷಾಂತರ ಪ್ರಯಾಣಿಕರನ್ನು ತಲುಪ ಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಿದ ಖುಷಿ ಅವರದು.

    ಬಾಲ್ಯ ದಲ್ಲಿಯೇ ತಂದೆ ಕಳೆದುಕೊಂಡೆ. ಇಂದು ನಾನು ಈ ಮಟ್ಟಕ್ಕೆ ಬರಲು ತಾಯಿಯೇ ಕಾರಣ. ಬಿಎಂಆರ್​ಸಿಎಲ್​ನ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡ ನನ್ನನ್ನು ಮತ್ತು ಪತಿಯನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದಾರೆ. ಜತೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ.

    | ಪ್ರಿಯಾಂಕಾ ಸ್ಟೇಷನ್ ಕಂಟ್ರೋಲರ್ ಕಂ ಟ್ರೖೆನ್ ಆಫೀಸರ್

    ಸೆಕ್ಷನ್ ಇಂಜಿನಿಯರ್ ಹುದ್ದೆ ಗಿಟ್ಟಿಸುವ ಹಂಬಲ
    ಸದ್ಯ ಟಿಒ ಹುದ್ದೆ ನಿರ್ವಹಿಸುತ್ತಿರುವ ಪ್ರಿಯಾಂಕಾ ಅವರಿಗೆ ಬಿಎಂಆರ್​ಸಿಎಲ್​ನಲ್ಲಿ ಸೆಕ್ಷನ್ ಇಂಜಿನಿಯರ್ ಆಗಬೇಕೆಂಬ ಆಸೆ ಇದೆ. ಸದ್ಯ ಬಿಎಂಆರ್​ಸಿಎಲ್ ಕೂಡ ಸೆಕ್ಷನ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆ ಉನ್ನತ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಆಕಾಂಕ್ಷೆ ಹೊಂದಿದ್ದಾರೆ. ಕ್ರಿಕೆಟ್ ಪಂದ್ಯ ಸಂದರ್ಭದಲ್ಲಿ ಮತ್ತು ಹೊಸ ವರ್ಷಾಚರಣೆ ವೇಳೆ ಮೆಟ್ರೋ ರೈಲು ಸೇವೆಯ ಅವಧಿಯನ್ನು ವಿಸ್ತರಿಸಲಾಗುತ್ತದೆ. ಆ ವೇಳೆ ಹೆಚ್ಚಿನ ಪ್ರಯಾಣಿಕರಿಂದ ಮೆಟ್ರೋ ರೈಲು ತುಂಬಿ ತುಳುಕುತ್ತಿರುತ್ತದೆ, ಅಂತಹ ಸಂದರ್ಭದಲ್ಲಿಯೂ ಮಹಿಳಾ ಟಿಒಗಳು ಎದೆಗುಂದದೆ ಲೀಲಾಜಾಲವಾಗಿ ಕಾರ್ಯನಿರ್ವಹಿಸುತ್ತಾರೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗೂ ಮೆಟ್ರೋ ಓಡಿಸುತ್ತಾರೆ. ಪ್ರತಿದಿನ ಮೂರಕ್ಕೂ ಹೆಚ್ಚು ಟ್ರಿಪ್​ಗಳನ್ನು ಮಾಡುತ್ತಾರೆ. 5 ವರ್ಷಗಳಿಂದ ಟಿಒ ಆಗಿ ಕೆಲಸ ನಿರ್ವಹಿಸುತ್ತಿರುವ ಪ್ರಿಯಾಂಕಾಗೆ ಆರಂಭದಲ್ಲಿ ಟ್ರೈನ್​ ಆಪರೇಟ್ ಮಾಡುವುದರ ಬಗ್ಗೆ ತುಂಬಾ ಭಯವಿತ್ತಂತೆ. 6 ತಿಂಗಳ ತರಬೇತಿ ಬಳಿಕ ಸ್ವಲ್ಪಮಟ್ಟಿಗೆ ಭಯ ಹೋಗಿದೆ. ಈಗ ಐದು ವರ್ಷಗಳ ಕಾಲ ರೈಲು ಓಡಿಸಿರುವುದರಿಂದ ಪರಿಪಕ್ವರಾಗಿದ್ದಾರೆ. ಎಲ್ಲ ಪ್ರಯಾಣಿಕರ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ಹೆಚ್ಚಿನ ನಿಗಾ ವಹಿಸಿ ರೈಲು ಓಡಿಸಲಾಗುತ್ತದೆ ಎನ್ನುತ್ತಾರೆ ಪ್ರಿಯಾಂಕಾ.

    ತಾಯಿಯ ಬೆಂಬಲ
    ಪ್ರಿಯಾಂಕಾ ಅವರು ಚಿಕ್ಕ ಮಗುವಿದ್ದಾಗಲೇ ತಂದೆ (ಪರಮೇಶ್) ತೀರಿಕೊಂಡರು.ಇಬ್ಬರು ಮಕ್ಕಳನ್ನು ತಾಯಿಯೇ ಸಾಕಿ ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಮಗಳ ಪ್ರತಿಯೊಂದು ಕೆಲಸಕ್ಕೂ ತಾಯಿ ರೇಣುಕಾ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಿಯಾಂಕಾ ಸಹೋದರ ವಿನಯ್ ಕೂಡ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಎಂ.ಎಸ್. ಮಾಡಲು ಜರ್ಮನಿಗೆ ಹೋಗಬೇಕು ಎಂದುಕೊಂಡಿದ್ದಾರೆ. ತಾಯಿ ದಾವಣಗೆರೆಯಲ್ಲಿ ಡಿಪ್ಲೊಮಾ ಕಾಲೇಜೊಂದರಲ್ಲಿ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಪ್ರಿಯಾಂಕಾ ಪತಿ ಮುರುಗೇಶ್ ಕೂಡ ಟಿಒ ಆಗಿ ಬಿಎಂಆರ್​ಸಿಎಲ್​ನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಒಂದೇ ಸಂಸ್ಥೆ ಮತ್ತು ಒಂದೇ ಕೆಲಸದಲ್ಲಿದ್ದು, ಒಬ್ಬರನ್ನು ಮತ್ತೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ರೇಪ್​ ಕೇಸ್​ನಲ್ಲಿ ಜಾಮೀನು: ಜೈಲಿಂದ ಹೊರಬಂದ ರೀಲ್ಸ್​ ಸ್ಟಾರ್​ನಿಂದ ಹಾಡಹಗಲೇ ನಡೆಯಿತು ಘೋರ ಕೃತ್ಯ

    ಜೀವನದ ಅವಿಸ್ಮರಣೀಯ ಕ್ಷಣ
    ಮೆಟ್ರೋ ರೈಲು ಚಾಲನೆ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಟ್​ಫೀಲ್ಡ್​ನಿಂದ ಸತ್ಯಸಾಯಿ ಆಸ್ಪತ್ರೆಯ ನಿಲ್ದಾಣದವರೆಗೆ ಕರೆದುಕೊಂಡು ಹೋಗಿದ್ದೆ. ಅದು ನನ್ನ ಜೀವನದಲ್ಲಿ ಅವಿಸ್ಮರಣೀಯ ಮತ್ತು ಹೆಮ್ಮೆಯ ಕ್ಷಣವಾಗಿದೆ. ಕರ್ತವ್ಯದಲ್ಲಿದ್ದ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಮೋದಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೂ ಕಳೆದ 5 ವರ್ಷದ ಸೇವಾ ಅವಧಿಯಲ್ಲಿಯೇ ಅತ್ಯಂತ ಹೆಮ್ಮೆಪಟ್ಟಂತಹ ಕ್ಷಣ ಅದಾಗಿತ್ತು ಎಂದು ವಿಜಯವಾಣಿ ಜತೆ ಖುಷಿಯ ಕ್ಷಣಗಳನ್ನು ಹಂಚಿಕೊಂಡರು ಪ್ರಿಯಾಂಕಾ.

    ಲಿಂಗ ತಾರತಮ್ಯವಿಲ್ಲ
    ಬಿಎಂಆರ್​ಸಿಎಲ್​ನಲ್ಲಿ ಗಂಡು-ಹೆಣ್ಣು ಎಂಬ ಭೇದಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣಲಾಗುತ್ತಿದೆ. ಇಲ್ಲಿ ಮೊದಲ, ಎರಡನೇ ಮತ್ತು ಮೂರನೇ ಪಾಳಿ ಎಂಬ 8 ಗಂಟೆ ಅವಧಿಯ ಮೂರು ಶಿಫ್ಟ್​ಗಳಿದ್ದು, ಎಲ್ಲರೂ ಎಲ್ಲ ಶಿಫ್ಟ್​ಗಳನ್ನು ಕಡ್ಡಾಯವಾಗಿ ಮಾಡಬೇಕಿದೆ. ರಾತ್ರಿ ಪಾಳಿ ಮಾಡುವಂತಹ ಮಹಿಳೆಯರು ವಿಶ್ರಾಂತಿ ಪಡೆಯಲೆಂದೇ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿಯನ್ನು ನಿರ್ವಿುಸಿ ಕೊಡಲಾಗಿದೆ. ಜತೆಗೆ ಭದ್ರತಾ ಸಿಬ್ಬಂದಿ ಕೂಡ ನಿಯೋಜಿಸಲಾಗಿರುತ್ತದೆ. ಹಾಗಾಗಿ, ಮಹಿಳೆಯರು ನಿಶ್ಚಿಂತೆಯಿಂದ ರಾತ್ರಿ ಪಾಳಿ ಮಾಡುತ್ತಿದ್ದಾರೆ. ಲೈನ್ 1, ಲೈನ್ 2ನಲ್ಲಿ ಸುಮಾರು 150 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 17 ಮಹಿಳೆಯರು ಮೆಟ್ರೋ ರೈಲು ಚಾಲನೆ ಮಾಡುತ್ತಿದ್ದಾರೆ.

    World cup 2023: ವಿಶ್ವಕಪ್​ ಆಡಲು ಪಾಕಿಸ್ತಾನಕ್ಕೆ ಭಾರತದ ಈ 2 ನಗರಗಳು ಮಾತ್ರ ಸುರಕ್ಷಿತವಂತೆ!

    ಗೋಮೂತ್ರ ಮಾನವ ಬಳಕೆಗೆ ಅನರ್ಹ; ಹಾನಿಕಾರಕ ಬ್ಯಾಕ್ಟೀರಿಯಾ ಎಂದ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts