More

    ಅಭಿವೃದ್ಧಿಯೇ ಮೋದಿ ಧ್ಯೇಯ ಮಂತ್ರ: ವಾಗ್ಮಿ ಚಕ್ರವರ್ತಿ ಸೂಲಿಬೆಲೆ

    ಮೈಸೂರು: ದೇಶ ನನ್ನದು, ಅಭಿವೃದ್ಧಿಯೇ ನನ್ನ ಧ್ಯೇಯ ಎಂದೂ ರಜೆಯನ್ನೂ ಪಡೆಯದೆ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದರೆ, ಇದು ನನ್ನ ಮುತ್ತಾತ, ಅಜ್ಜಿ, ಅಪ್ಪನದು. ಹಾಗಾಗಿ, ನಾನೂ ಅಧಿಕಾರ ಹಿಡಿಯಬೇಕು ಎಂದು ರಾಹುಲ್‌ಗಾಂಧಿ ಕನಸು ಕಾಣುತ್ತಿದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಟೀಕಿಸಿದರು.
    ನಮೋ ಬ್ರಿಗೇಡ್-2.0 ನಿಂದ ನಗರದ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ನಮೋ ಭಾರತ್’ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಅಭಿವೃದ್ಧಿ ಯೋಜನೆಗಳ ಕುರಿತು ಅವರು ಮಾತನಾಡಿದರು.
    ನರೇಂದ್ರ ಮೋದಿ ಅವರಿಗೆ ದೇಶ ನನ್ನದು ಎಂದರೆ ಕನಸುಗಳನ್ನು ಕಟ್ಟುತ್ತಾರೆ. ರಾಹುಲ್ ಗಾಂಧಿ ಇದು ನಮ್ಮ ಮುತ್ತಾತ, ಅಜ್ಜಿ, ಅಪ್ಪನದು, ನಾವು ಆಳ್ವಿಕೆ ಮಾಡಬೇಕು ಎಂದು ಕನಸು ಕಾಣುತ್ತಾರೆ. ಅದು ಸಾಧ್ಯವಾಗದೆ ಚುನಾವಣೆ ಮುಗಿದ ಬಳಿಕ ವಿದೇಶ ಪ್ರವಾಸಕ್ಕೆ ಹೋಗಿ ಬಿಡುತ್ತಾರೆ. ಆದರೆ ಮೋದಿ ಅವರು ರಜೆಯನ್ನು ಪಡೆಯದೆ ನಮ್ಮ, ನಿಮ್ಮೆಲ್ಲರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
    ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿ ಎನ್ನುವ ಶುಭ ಸೂಚನೆ ಗುಜರಾತ್‌ನಿಂದಲೇ ಬಂದಿದೆ. ಫಲಿತಾಂಶ ಘೋಷಣೆಗೂ ಮುನ್ನವೇ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮೊದಲ ಸೀಟು ಬಂದಿದೆ. ಇದು ಶುಭ ಲಕ್ಷಣವಾಗಿದ್ದು, 400 ಕಮಲದಲ್ಲಿ ಮೈಸೂರಿನ ಒಂದು ಕಮಲ ಇರಬೇಕು ಎಂದರು.
    ಕಾಂಗ್ರೆಸ್‌ನ ಗಾಂಧಿ ಕುಟುಂಬ ರಾಜಕಾರಣ ಮಾಡುತ್ತಿದ್ದರೆ, ನರೇಂದ್ರ ಮೋದಿ ಅವರು ಜಗತ್ತಿನಲ್ಲೇ ಅತ್ಯಂತ ದೊಡ್ಡ ಪರಿವಾರವನ್ನು ಹೊಂದಿದ್ದಾರೆ. ಎಲ್ಲರೂ ನಮ್ಮ ಪರಿವಾರ ಎನ್ನುವ ಉದಾರ ಮನೋಭಾವನೆಯನ್ನು ಜನರಲ್ಲಿ ಬಿತ್ತಿದ್ದಾರೆ ಎಂದು ಹೇಳಿದರು.
    ಮೋದಿಗಿಂತ ಬರುವ ಮೊದಲು ಮುರಿದು ಬೀಳುವ ಆರ್ಥಿಕ ಪರಿಸ್ಥಿತಿ ದೇಶದಲ್ಲಿತ್ತು. ಎಲ್ಲೆಂದರಲ್ಲಿ ಬಾಂಬ್ ಸ್ಫೋಟ ಆಗುತ್ತಿತ್ತು. ರಸ್ತೆಗಳು ಹದಗೆಟ್ಟಿದ್ದವು. ಚೀನಿ ವಸ್ತುಗಳು ಹೆಚ್ಚು ಮಾರಾಟವಾಗುತ್ತಿದ್ದವು. ಹಿಂದು ಅಂತ ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದರು. ಆದರೆ ಮೋದಿ ಬಂದ ಮೇಲೆ ಭಾರತದ ಭವಿಷ್ಯ ಬದಲಾಯಿತು ಎಂದರು.
    ವಿದೇಶಾಂಗ ನೀತಿಯನ್ನು ನೆಹರೂ ಪಾತಾಳಕ್ಕೆ ತಳ್ಳಿದ್ದರು. ಆದರೆ ಮೋದಿ ಅವರು ವಿದೇಶಾಂಗ ನೀತಿಯನ್ನು ಗಟ್ಟಿಗೊಳಿಸಿ ಭಾರತದ ಗೌರವವನ್ನು ಎತ್ತಿ ಹಿಡಿದ್ದಾರೆ. ಕೋವಿಡ್ ಬಂದಾಗ ನೆರೆ ರಾಷ್ಟ್ರಗಳಿಗೂ ಭಾರತದ ಲಸಿಕೆ ನೀಡಲಾಗಿತ್ತು. ಶ್ರೀಲಂಕಾ ಕಷ್ಟದಲ್ಲಿದ್ದಾಗ ಸಹಾಯ ಹಸ್ತ ಚಾಚಿದ್ದು ಭಾರತ. ಅಕ್ಕಪಕ್ಕದ ರಾಷ್ಟ್ರಗಳಿಗೆ ಹಿರಿಯಣ್ಣನಂತೆ ಕೆಲಸ ಮಾಡಿದೆ. ಮುಸ್ಲಿಂ ರಾಷ್ಟ್ರಗಳಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮೋದಿ ಅವರಿಗೆ ಸಿಕ್ಕಿದೆ. ಹಾಗಾದರೆ ಮುಸ್ಲಿಂ ವಿರೋಧಿ ಮೋದಿ ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.
    ಸಿದ್ದರಾಮಯ್ಯ ಬಂದ ಮೇಲೆ ರಾಮೇಶ್ವರಂ ದಾಳಿ ನಡೆಯಿತು. ವಿಧಾನಸೌಧದಲ್ಲೂ ಪಾಕಿಸ್ತಾನ್ ಜಿಂದಾಬಾಂದ್ ಘೋಷಣೆ ಕೂಗಿತು. ಡಿಜೆ ಹಳ್ಳಿ ಘಟನೆ ಕಿಡಿಕೇಡಿಗಳನ್ನು ಬಿಡುಗಡೆ ಮಾಡಲು ಯತ್ನಿಸುತ್ತಿದೆ. ಹುಂಡಿ ಹಣವನ್ನು ಸರ್ಕಾರ ಬಳಸಿಕೊಳ್ಳುತ್ತಿದೆ. ನೇಹಾ ಹತ್ಯೆ ಬಗ್ಗೆ ಸಿಎಂ ಹಗುರವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಬಂದ ಮೇಲೆ ಭಯೋತ್ಪಾದಕರ ದಾಳಿ ಹೆಚ್ಚು ನಡೆಯಿತು ಎಂದು ಆರೋಪಿಸಿದರು.
    ಮೋದಿ ತ್ರಿಬಲ್ ತಲಾಕ್ ತೆಗೆದುಹಾಕಿದರು. ಜಗತ್ತಿನ ಮುಸ್ಲಿಂ ದೇಶಗಳು ಅಪಾರ ಗೌರವ ನೀಡುತ್ತಿದೆ. ರಾಮಮಂದಿರ ಇಂದು ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡಿದೆ. ಉರಿ ದಾಳಿಯಾದ ಮೇಲೆ ಪಾಕಿಸ್ತಾನ ಭಾರತದ ಕೆಣಕಲು ಹೆದರುತ್ತಿದೆ. ಅಬುದಾಬಿಯಲ್ಲೂ ಮೋದಿ ಮಂದಿರ ಕಟ್ಟಿದ್ದಾರೆ ಎಂದು ವಿವರಿಸಿದರು.
    ಭಾರತ ಜಗತ್ತಿನ ಐದನೇ ಶ್ರೀಮಂತ ರಾಷ್ಟ್ರ. ಆರ್ಥಿಕ ಸಂಕಷ್ಟಕ್ಕೆ ಸಿಲುಕದ ದೇಶವಿದ್ದರೆ ಅದು ಭಾರತ. ವಿದೇಶಿಗರಿಗೆ ಉತ್ಪನ್ನ ತರಿಸಿಕೊಳ್ಳದೆ ನಾವೇ ತಯಾರಿಸಿಕೊಳ್ಳುತ್ತೇವೆ. ಮೊಬೈಲ್ ತಯಾರಿಕೆಯಲ್ಲಿ ಭಾರತ ಎರಡನೇ ರಾಷ್ಟ್ರ. ಜನಧನ ಸ್ಕೀಂ ಜಾರಿಗೆ ತಂದರು. ಎಲ್ಲ ಹಣವನ್ನು ನೇರ ಖಾತೆಗೆ ಹಾಕುವಂತೆ ಆಯಿತು. ಶೇ.91 ಮಹಿಳೆಯರು ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts