More

    ದಯವಿಟ್ಟು ಗಮನಿಸಿ.. ಇಂದಿನಿಂದ ಮೆಟ್ರೋದಲ್ಲೂ ಪ್ರಯಾಣಿಸಿ!

    * ಬೆಳಗ್ಗೆ, ಸಂಜೆ ತಲಾ 3 ಗಂಟೆ ಸೇವೆ * 11ರಿಂದ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ * ಕರೊನಾ ನಿಯಮ ಪಾಲನೆ ಕಡ್ಡಾಯ

    ಬೆಂಗಳೂರು: ಕಳೆದ 5 ತಿಂಗಳಿನಿಂದ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ರೈಲು ಸೇವೆ ಸೋಮವಾರದಿಂದ (ಸೆ.7) ಪುನರಾರಂಭವಾಗಲಿದೆ. ಸೆ.7ರಿಂದ ಸೆ. 10ರವರೆಗೆ ಎರಡು ಪಾಳಿಯಲ್ಲಿ ರೈಲು ಸಂಚರಿಸಲಿವೆ. ಸೆ. 7ಕ್ಕೆ ಬೈಯಪ್ಪನಹಳ್ಳಿ- ನಾಯಂಡಹಳ್ಳಿ ಮಾರ್ಗದಲ್ಲಿ ಮಾತ್ರ ಸೇವೆ ಆರಂಭವಾಗಲಿದೆ. ಉಳಿದಂತೆ ಸೆ.9ರಿಂದ ಯಲಚೇನಹಳ್ಳಿ- ನಾಗಸಂದ್ರ ಮಾರ್ಗದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 11 ಹಾಗೂ ಸಂಜೆ 4.30ರಿಂದ ರಾತ್ರಿ 7.30ರವೆಗೆ ರೈಲು ಓಡಾಟವಿರಲಿದೆ.
    ಸೆ. 11ರಿಂದ ಎರಡೂ ಮಾರ್ಗಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಪ್ರಯಾಣಿಕರ ಸಂಖ್ಯೆಯನ್ನಾಧರಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಮಾಮೂಲಿ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಿದರೆ, ಪ್ರಯಾಣಿಕರು ಹೆಚ್ಚಿರುವ ಸಮಯದಲ್ಲಿ 5 ನಿಮಿಷಕ್ಕೊಂದು ರೈಲು ಸೇವೆ ನೀಡಲಿದೆ.

    ಸ್ಮಾರ್ಟ್​ಕಾರ್ಡ್ ಇದ್ದವರಷ್ಟೇ ಪ್ರಯಾಣ

    ಕರೊನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಟೋಕನ್ ವ್ಯವಸ್ಥೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಸ್ಮಾರ್ಟ್​ಕಾರ್ಡ್ ಹೊಂದಿರುವವರು ಆನ್​ಲೈನ್ ಮೂಲಕ ರೀಚಾರ್ಜ್ ಮಾಡಿಕೊಂಡು, ರೈಲು ಬಳಸಬಹುದಾಗಿದೆ. ನಿಲ್ದಾಣಗಳಲ್ಲಿ ಮೊದಲ ಬಾರಿಗೆ ಡಿಜಿಟಲ್ ಪೇಮೆಂಟ್ ಆಧಾರಿತ ರೀಚಾರ್ಜ್ ವ್ಯವಸ್ಥೆ ಮಾಡಲಾಗಿದೆ. ಸ್ಮಾರ್ಟ್​ಕಾರ್ಡ್ ಇಲ್ಲದವರಿಗೆ ನಿಲ್ದಾಣದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

    400 ಪ್ರಯಾಣಿಕರು

    ಲಾಕ್​ಡೌನ್​ಗೂ ಮುನ್ನ ಪ್ರತಿ ಟ್ರಿಪ್​ನಲ್ಲಿ 1,800ರಿಂದ 2 ಸಾವಿರ ಜನರು ಸಂಚರಿಸುತ್ತಿದ್ದರು. ಆದರೀಗ, ರೈಲಿನಲ್ಲಿ ವ್ಯಕ್ತಿಗತ ಅಂತರ ನಿಯಮ ಪಾಲಿಸಬೇಕಿರುವ ಕಾರಣ, ಒಂದು ರೈಲಿನಲ್ಲಿ ಒಂದು ಟ್ರಿಪ್​ಗೆ ಕೇವಲ 400 ಜನರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಆಸನದ ನಡುವಿನ ಆಸನವನ್ನು ಖಾಲಿ ಬಿಡುವಂತೆ ಸ್ಟಿಕ್ಕರ್ ಅಂಟಿಸಲಾಗುತ್ತಿದೆ.

    ಮಾಸ್ಕ್ ಕಡ್ಡಾಯ, ಆರೋಗ್ಯಸೇತು ಆ್ಯಪ್ ಐಚ್ಛಿಕ

    ಜನರು ರೈಲು ನಿಲ್ದಾಣಕ್ಕೆ ಪ್ರವೇಶಿಸುವುದಕ್ಕೂ ಮುನ್ನ ಕೆಲವೊಂದು ಸುರಕ್ಷತಾ ಕ್ರಮ ಅನುಸರಿಸಬೇಕಿದೆ. ಮಾಸ್ಕ್ ಧರಿಸಿದವರಿಗಷ್ಟೇ ನಿಲ್ದಾಣ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಜತೆಗೆ, ಪ್ರಯಾಣಿಕರು ಸಾಧ್ಯವಾದರೆ ತಮ್ಮ ಮೊಬೈಲ್​ನಲ್ಲಿ ಆರೋಗ್ಯಸೇತು ಆ್ಯಪ್ ಡೌನ್​ಲೋಡ್ ಮಾಡಿಕೊಂಡು, ಅದರಲ್ಲಿ ಕೇಳಲಾದ ಮಾಹಿತಿ ನಮೂದಿಸಬಹುದಾಗಿದೆ.

    1 ನಿಮಿಷ ನಿಲುಗಡೆ

    ಇಂಟರ್​ಚೇಂಜ್ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ 75 ಕ್ಷಣಗಳು ಹಾಗೂ ಉಳಿದ ನಿಲ್ದಾಣಗಳಲ್ಲಿ 60 ಕ್ಷಣಗಳವರೆಗೆ (1 ನಿಮಿಷ) ರೈಲುಗಳು ನಿಲ್ಲಲಿವೆ. ಈ ಅವಧಿಯಲ್ಲಿ ಪ್ರಯಾಣಿಕರು ವ್ಯಕ್ತಿಗತ ಅಂತರ ಕಾಪಾಡಿಕೊಂಡು ರೈಲು ಹತ್ತಬೇಕು ಹಾಗೂ ಇಳಿಯಬೇಕು.

     ಸುರಕ್ಷತಾ ಕ್ರಮಗಳು?

    * ಪ್ರಯಾಣಿಕರಿಗೆ ಸ್ವಯಂಚಾಲಿತ ಥರ್ಮಲ್ ಸ್ಕ್ರೀನಿಂಗ್
    * ನಿಲ್ದಾಣದ ನಿರ್ದಿಷ್ಟ ಸ್ಥಳದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ
    * ನಿಯಮಿತ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ
    * ಪ್ಲಾಟ್​ಫಾರ್ಮ್​ನಲ್ಲಿ ರೈಲಿಗಾಗಿ ಕಾಯುವಾಗ ಪ್ರಯಾಣಿಕರ ನಡುವೆ 1 ಮೀಟರ್ ಅಂತರ ಕಡ್ಡಾಯ
    * ರೈಲು ಮತ್ತು ನಿಲ್ದಾಣದಲ್ಲಿ ಹವಾನಿಯಂತ್ರಿತ ವ್ಯವಸ್ಥೆ 24ರಿಂದ 28 ಡಿಗ್ರಿ ಸೆಂಟಿಗ್ರೇಡ್​ಗೆ ನಿಗದಿ
    * ಎಲಿವೇಟರ್, ಲಿಫ್ಟ್​ನಲ್ಲಿ ಸಂಚರಿಸಲು ಒಮ್ಮೆಗೆ 4ರಿಂದ 6 ಪ್ರಯಾಣಿಕರಿಗಷ್ಟೇ ಅವಕಾಶ

    ಯಾರಿಗೆ ರೈಲು ನಿಲ್ದಾಣ ಪ್ರವೇಶ ನಿರ್ಬಂಧ?

    * ದೇಹದ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್​ಗಿಂತ ಜಾಸ್ತಿ ಇರುವವರು

    * ಮಾಸ್ಕ್ ಧರಿಸದವರು

    * ಸಕಾರಣವಿಲ್ಲದೆ ಪ್ರಯಾಣಿಸಲು ಬರುವ 10 ವರ್ಷದೊಳಗಿನ ಮತ್ತು 65 ವರ್ಷ ಮೇಲ್ಪಟ್ಟವರು

    * ಸ್ಮಾರ್ಟ್​ಕಾರ್ಡ್ ಇಲ್ಲದವರು

    ಅಜ್ಜನ ಆಸ್ತಿಯಲ್ಲಿ ಅಮ್ಮನಿಗೆ ಹಕ್ಕಿಲ್ಲ ಎನ್ನುತ್ತಿದ್ದಾರೆ ಮಾವಂದಿರು, ಇದು ಸರಿಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts