More

    ನಮ್ಮ ಕಾಲ ಹೀಗಿತ್ತು | ಕೇವಲ 63 ಸಾವಿರ ರೂ. ಖರ್ಚು ಮಾಡಿ ನಾನು ಅಸೆಂಬ್ಲಿ ಎಲೆಕ್ಷನ್ ಗೆದ್ದಿದ್ದೆ!

    ಈಗಂತೂ ಎಲೆಕ್ಷನ್​ನಲ್ಲಿ ಅಭ್ಯರ್ಥಿಗಳು ನೀರಿನಂತೆ ಹಣ ಖರ್ಚು ಮಾಡುತ್ತಾರೆ. ಆದರೆ ಹಿಂದೆ ಹಾಗಿರಲಿಲ್ಲ. ಕೆಲವರಂತೂ ಹಣ ಖರ್ಚೇ ಮಾಡದೇ ಗೆದ್ದು ಬರುತ್ತಿದ್ದರು. ಇನ್ನು ಕೆಲವರು ಅತಿ ಕಡಿಮೆ ಹಣ ಖರ್ಚು ಮಾಡಿ ಗೆಲ್ಲುತ್ತಿದ್ದರು. ಹಾಗೆ ಗೆದ್ದವರಲ್ಲಿ ಚಿತ್ತಾಪುರ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಕೂಡ ಒಬ್ಬರು. ಅವರು ಎಷ್ಟು ಖರ್ಚು ಮಾಡಿದ್ದರು, ಹೇಗೆ ಗೆದ್ದರು ಎಂಬುದನ್ನು ಅವರ ಮಾತಿನಲ್ಲೇ ಕೇಳಿ.

    ‘‘1983ರ ಚುನಾವಣೆ ಸಂದರ್ಭ ಅದು. ಜನತಾ ಪಕ್ಷ, ಇಂದಿರಾ ಕಾಂಗ್ರೆಸ್ ಮಧ್ಯೆ ರಾಜ್ಯದಲ್ಲಿ ತೀವ್ರ ಪೈಪೋಟಿ ಇತ್ತು. ಇಂಥದರಲ್ಲಿ ನಾನು ಅಚಾನಕ್ಕಾಗಿ ಚಿತ್ತಾಪುರ ವಿಧಾನಸಭೆ ಕ್ಷೇತ್ರದಿಂದ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದೆ. ಆದರೆ ನಮ್ಮ ಸಂಘಟನೆ, ಓಡಾಟ, ಜನಸಂಪರ್ಕ, ತುರ್ತು ಪರಿಸ್ಥಿತಿ ಹೋರಾಟವನ್ನು ಗಮನಿಸಿದ್ದ ಕ್ಷೇತ್ರದ ಜನರು ಹಣ ಖರ್ಚು ಮಾಡಿಸದೇ ಗೆಲ್ಲಿಸಿದ್ದರು.

    ನನ್ನ ಎದುರಾಳಿ ಪ್ರಭಾಕರ ತೇಲ್ಕರ್ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಇವರೊಂದಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಸಹ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೇ ಘಳಿಗೆಯಲ್ಲಿ ಅವರು ನಾಮಿನೇಷನ್ ವಾಪಸ್ ಪಡೆದಿದ್ದರಿಂದ ಮೂವರು ಅಂತಿಮ ಕಣದಲ್ಲಿದ್ದೆವು. ಒಂದು ಬಜಾಜ್ ಬೈಕ್‌ನಿಂದ ನನ್ನ ರಾಜಕೀಯ ಜೀವನ ಆರಂಭವಾಯಿತು. ನಂತರ ಬುಲೆಟ್‌ನಲ್ಲಿ ಸಂಚರಿಸಿ ಸಂಘಟನೆ ಮಾಡುತ್ತಿದ್ದೆ. 1983ರ ಚುನಾವಣೆಗೆ ಸೊಲ್ಲಾಪುರದಿಂದ ನಾಲ್ಕು ಬಾಡಿಗೆ ಜೀಪ್ ತರಿಸಿ ಪ್ರಚಾರ ಮಾಡಿದ್ದೆ. ನಮ್ಮಲ್ಲಿದ್ದ ತೊಗರಿ 300 ರೂ.ಗೆ ಕ್ವಿಂಟಾಲ್‌ನಂತೆ ಮಾರಿ ಚುನಾವಣೆ ಮಾಡಿದೆ. ಚಿತ್ತಾಪುರ ಕ್ಷೇತ್ರದಲ್ಲಿ ನಾಲ್ಕು ಹೋಬಳಿಗಳಿದ್ದು, ಎಲ್ಲಿಯೂ ಜನರು ಹಣ ಕೇಳುತ್ತಿರಲಿಲ್ಲ. ಕಾರ್ಯಕರ್ತರೇ ಜಾಜ (ಸಾಂಪ್ರದಾಯಿಕ ಪೇಂಟ್) ಬಳಸಿ ಗೋಡೆ ಬರಹ ಬರೆಯುತ್ತಿದ್ದರು. ಪಾಂಪ್ಲೆಟ್ ಪ್ರಿಂಟ್ ಹಾಕಿಸಿ ಊರುಗಳಿಗೆ ಮುಟ್ಟಿಸಿದರೆ ಕೆಲಸ ಮುಗಿಯುತ್ತಿತ್ತು. ಆಗ ಒಂದು ಚುನಾವಣೆ ಖರ್ಚಿನ ಮಿತಿ ಒಬ್ಬ ಅಭ್ಯರ್ಥಿಗೆ ಒಂದು ಲಕ್ಷ ರೂ. ಇತ್ತು. ಆದರೆ ನನ್ನ ಇಡೀ ಚುನಾವಣೆಯಲ್ಲಿ 63 ಸಾವಿರ ರೂ. ಖರ್ಚಾಗಿತ್ತು. ನನ್ನಲ್ಲಿ ಕಾರು ಸಹ ಇರಲಿಲ್ಲ. ಶಾಸಕನಾದ ಮೇಲೂ ಸರ್ಕಾರ ಕೊಟ್ಟ ಕಾರಿನಲ್ಲೇ ಓಡಾಡುತ್ತಿದ್ದೆ. ಜನರು ಆಗ ಅಭ್ಯರ್ಥಿಗಳ ಹತ್ತಿರ ಹಣಕ್ಕಾಗಿ ಕೈ ಒಡ್ಡುತ್ತಿರಲಿಲ್ಲ. ಐವತ್ತು ವರ್ಷದಿಂದ ಚುನಾವಣೆ ರಾಜಕಾರಣ ನೋಡುತ್ತ ಬಂದಿದ್ದೇನೆ. ಆರು ಚುನಾವಣೆಗಳಲ್ಲಿ ಸ್ಪರ್ಧಿಸಿ ಮೂರು ಬಾರಿ ಸೋತಿದ್ದೇನೆ. ಅಂದಿನ ಜನರು ಸಾತ್ವಿಕರಾಗಿದ್ದರು. ವ್ಯಕ್ತಿ ಮತ್ತು ಆತನ ವಿಚಾರಗಳನ್ನು ಗಮನಿಸಿ ಮತ ನೀಡುತ್ತಿದ್ದರು.’’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts