More

    ಕ್ರಾಂತಿಕೇಸರಿ ಚಂದ್ರಶೇಖರ ಆಜಾದ್ ಜೀವನಗಾಥೆ ‘ಅಜೇಯ’ ಪುಸ್ತಕಕ್ಕೆ ಐವತ್ತರ ಹರೆಯ!

    ರಾಷ್ಟ್ರೋತ್ಥಾನ ಸಾಹಿತ್ಯದ 33ನೆಯ ಪ್ರಕಟನೆಯಾಗಿ 1974ರಲ್ಲಿ ಪ್ರಕಟವಾದ ಈ ಕೃತಿ ಕಳೆದ ಐವತ್ತು ವರ್ಷಗಳಲ್ಲಿ ಹತ್ತಾರು ಸಾವಿರ ಓದುಗರಲ್ಲಿ ಧ್ಯೇಯವಾದವನ್ನು ಬಿತ್ತಿ ಬೆಳೆದಿದೆ. ಅಂದು ಚಂದ್ರಶೇಖರ ಆಜಾದ್ ಅವರ ಜೊತೆಗಾರರಾಗಿ ಕ್ರಾಂತಿಕಾರ್ಯದಲ್ಲಿ ಹೆಗಲಿಗೆ ಹೆಗಲು ಕೊಟ್ಟಿದ್ದ ಶಚೀಂದ್ರನಾಥ ಬಕ್ಷಿ, ಭಗವಾನ್ದಾಸ್ ಮಾಹೋರ್, ಸದಾಶಿವರಾವ್ ಮಲಕಾಪುರಕರ್ ಮೊದಲಾದವರು ಅಜೇಯ ಲೋಕಾರ್ಪಣೆಯಲ್ಲಿ ಉಪಸ್ಥಿತರಿದ್ದರು. ತಮ್ಮ ಹದಿನೈದರ ಹರೆಯದಲ್ಲೇ ಜಿಲ್ಲಾ ನ್ಯಾಯಾಧೀಶನನ್ನು ವಧಿಸಿ, ಕ್ರಾಂತಿಕಾರಿ ಹೋರಾಟದ ಇತಿಹಾಸದಲ್ಲಿ ಗಣ್ಯಸ್ಥಾನ ಗಿಟ್ಟಿಸಿದ ಡಾಕ್ಟರ್ ಸುನೀತಿ ಚೌಧುರಿ ಘೋಷ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಂದು ಬೆಂಗಳೂರಿನ ಪುರಭವನ ಈ ಕ್ರಾಂತಿಸೇನಾನಿಗಳ ಪಾದಧೂಳಿಯಿಂದ ಪಾವನವಾಗಿತ್ತು.

    ಕೇವಲ ಅಜೇಯ ಲೋಕಾರ್ಪಣೆಯ ಸಂದರ್ಭವಷ್ಟೇ ಅಲ್ಲ, ಆಜಾದರ ಜೀವನವಿವರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಲೇಖಕರಾದ ಡಾ. ಬಾಬು ಕೃಷ್ಣಮೂರ್ತಿಯವರು ಕಂಡುಂಡ ಅನುಭವಗಳು ರೋಮಾಂಚಕಾರಿಯಾದವು. ಆ ವಿವರಗಳು ಆಮೇಲಿನ ಆವೃತ್ತಿಯಲ್ಲಿ ಪುಸ್ತಕದಲ್ಲಿಯೂ ಸೇರ್ಪಡೆಗೊಂಡಿವೆ.

    ಕ್ರಾಂತಿಕೇಸರಿ ಚಂದ್ರಶೇಖರ ಆಜಾದ್ ಜೀವನಗಾಥೆ 'ಅಜೇಯ' ಪುಸ್ತಕಕ್ಕೆ ಐವತ್ತರ ಹರೆಯ!

    ಅದಾಗಲೆ ಲೇಖನಗಳು, ಕಿರು ಹೊತ್ತಿಗೆಗಳ ಮೂಲಕ ಕ್ರಾಂತಿಕಾರಿಗಳನ್ನು ನಾಡಿಗೆ ಪರಿಚಯಿಸಲು ಪ್ರಾರಂಭಿಸಿದ್ದ ಬಾಬು ಕೃಷ್ಣಮೂರ್ತಿಯವರು, ಅಜೇಯ ಪ್ರಕಟವಾದ ನಂತರ ‘ಕ್ರಾಂತಿಮುಖ’ವನ್ನು ಪೂರ್ಣಪ್ರಮಾಣದಲ್ಲಿ ಓದುಗರ ಮುಂದಿಡಲು ಯೋಚಿಸಿದರು. ಹಾಗೆ ಪ್ರಕಟವಾದವು, ಅದಮ್ಯ, ರುಧಿರಾಭಿಷೇಕ, ಕ್ರಾಂತಿಪರ್ವ, ಸ್ವಾತಂತ್ರ್ಯ ಹೋರಾಟದ ಹೀರೋಗಳು ಮೊದಲಾದ ಕೃತಿಗಳು. ಇವಲ್ಲದೆ ೧೮೫೭ರ ಪ್ರಥಮ ಸ್ವಾತಂತ್ರ್ಯಸಂಗ್ರಾಮ, ರಾಷ್ಟ್ರದೃಷ್ಟ ಭಗತ್​ಸಿಂಗ್ ಮೊದಲಾದ ಅನುವಾದಗಳನ್ನೂ ಅವರು ಮಾಡಿದ್ದಾರೆ. ಮಹಾಸಾಧಕ, ವಿಶಿಷ್ಟ ಮೊದಲಾದ ಕೃತಿಗಳನ್ನೂ ಬರೆದಿದ್ದಾರೆ.

    ಕಳೆದ ಆರುದಶಕಗಳಿಂದ ಪತ್ರಿಕಾಕ್ಷೇತ್ರ, ಸಾಹಿತ್ಯ, ಸಂಸ್ಕೃತಿ, ಸಿನೆಮಾ ಸೇರಿದಂತೆ ಹಲವು ಮುಖಗಳಲ್ಲಿ ದಣಿವರಿಯದೆ ಕಾರ್ಯನಿರ್ವಹಿಸುತ್ತ ಬಂದಿರುವ ಡಾ. ಬಾಬು ಕೃಷ್ಣಮೂರ್ತಿಯವರ ಅಧ್ಯಯನ_ಅನುಭವ ಇಂದಿನ ಓದುಗರು ಬರಹಗಾರರು ಪತ್ರಕರ್ತರಿಗೆ ಮಾರ್ಗದರ್ಶಕವಾಗಬಲ್ಲುದು. ಈ ಹಿನ್ನೆಲೆಯಲ್ಲಿ, ಡಾ. ಬಾಬು ಕೃಷ್ಣಮೂರ್ತಿ ಅವರೊಂದಿಗೆ #ಮಾತುಕತೆ ಯನ್ನು ಆಯೋಜಿಸಲಾಗಿದೆ.

    ದಿನಾಂಕ 15-4-2023, ಶನಿವಾರ, ಸಾಯಂಕಾಲ ೪.೩೦ಕ್ಕೆ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬನ್ನಿ…. ನಿಮ್ಮ ಸ್ನೇಹಿತರನ್ನೂ ಕರೆದುಕೊಂಡು ಬನ್ನಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts