More

    ರೇವಣ್ಣ 4 ದಿನ ಎಸ್‌ಐಟಿ ಕಸ್ಟಡಿಗೆ

    ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ೪ ದಿನಗಳ ಕಾಲ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
    ಮೈಸೂರು ಜಿಲ್ಲೆ ಕೆ.ಆರ್.ನಗರದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ರೇವಣ್ಣ ಅವರನ್ನು ಶನಿವಾರ ಸಂಜೆ ಬಂಧಿಸಲಾಗಿತ್ತು. ಎಸ್‌ಐಟಿ ತಂಡ ಆರೋಪಿ ರೇವಣ್ಣ ಅವರನ್ನು ಭಾನುವಾರ ಸಂಜೆ ಕೋರಮಂಗಲದಲ್ಲಿರುವ ನ್ಯಾಯಾಧೀಶ ರವೀಂದ್ರ ಕುಮಾರ್ ಕಟ್ಟಿಮನಿ ಅವರ ನಿವಾಸಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಎಸ್‌ಐಟಿ ಪರ ವಕೀಲರು ಪ್ರಕರಣದ ಗಂಭೀರತೆ ವಿವರಿಸಿ, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿರುವುದರಿಂದ ಎಸ್‌ಐಟಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ರೇವಣ್ಣ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
    ತಮ್ಮ ಕಕ್ಷಿದಾರರನ್ನ ಯಾವುದೇ ಕಾರಣಕ್ಕೂ ಎಸ್‌ಐಟಿ ವಶಕ್ಕೆ ನೀಡಬಾರದು ಎಂದು ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಅಂತಿಮವಾಗಿ ಆರೋಪಿ ರೇವಣ್ಣ ಅವರನ್ನು ೪ ದಿನಗಳ ಕಾಲ (ಮೇ ೮ ರವರೆಗೆ) ಎಸ್‌ಐಟಿ ವಶಕ್ಕೆ ಒಪ್ಪಿಸಿ ಆದೇಶಿಸಿದರು.
    ಇದಕ್ಕೂ ಮುನ್ನ ಆರೋಪಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದರು. ಬಳಿಕ ಭಾರೀ ಭದ್ರತೆಯಲ್ಲಿ ನ್ಯಾಯಾಧೀಶರ ನಿವಾಸಕ್ಕೆ ಆರೋಪಿಯನ್ನು ಕರೆದೊಯ್ದರು.
    ಎಸ್‌ಐಟಿ ವಿರುದ್ಧ ಆಕ್ರೋಶ
    ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ. ಯಾವುದೇ ಪುರಾವೆ ಇಲ್ಲದೆ ದುರುದ್ದೇಶದಿಂದ ಬಂಧನ ಮಾಡಲಾಗಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನ್ನ ೪೦ ವರ್ಷಗಳ ರಾಜಕೀಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ. ಏ.೨೮ ರಂದು ಒಂದು ಪ್ರಕರಣ ದಾಖಲಿಸಿದರು. ಮೇ ೨ ರಂದು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಎಸ್‌ಐಟಿಗೆ ಯಾವುದೇ ಪುರಾವೆ ಸಿಕ್ಕಿಲ್ಲ. ಇದನ್ನು ಎದುರಿಸುವ ಶಕ್ತಿಯಿದೆ. ಎಲ್ಲವನ್ನೂ ಹೇಳುತ್ತೇನೆ ಎಂದು ಎಸ್‌ಐಟಿ ವಿರುದ್ಧ ಎಚ್.ಡಿ.ರೇವಣ್ಣ ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಮರ್ಪಕ ಉತ್ತರ ನೀಡದ ರೇವಣ್ಣ:
    ಶನಿವಾರ ಸಂಜೆ ಎಚ್.ಡಿ.ರೇವಣ್ಣನ ಬಂಧನದ ಬಳಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ ಎಸ್‌ಐಟಿ ಅಧಿಕಾರಿಗಳು, ರಾತ್ರಿ ೧೧ ಗಂಟೆಗೆ ಅರಮನೆ ರಸ್ತೆಯ ಕಾರ್ಲಟನ್ ಕಟ್ಟದಲ್ಲಿರುವ ಸಿಐಡಿ ಕಚೇರಿಗೆ ಕರೆತಂದರು. ಸಪ್ಪೆ ಮೋರೆ ಹಾಕಿಕೊಂಡಿದ್ದ ರೇವಣ್ಣ ಅವರು ಸರಿಯಾಗಿ ಊಟ ಮಾಡಿಲ್ಲ. ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಪಿ ದರ್ಜೆಯ ಇಬ್ಬರು ಅಧಿಕಾರಿಗಳು ವಿಚಾರಣೆಗೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ರೇವಣ್ಣ ಯಾವುದೇ ಪ್ರಶ್ನೆಗಳಿಗೂ ಸಮಪರ್ಕ ಉತ್ತರ ನೀಡಿಲ್ಲ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts