More

    ಕತ್ತೆ ಕಿವಿಯಲ್ಲಿ ಸಿದ್ದರಾಮಯ್ಯ ಏನೋ ಊದಿದ್ರು.: ಹೀಗೊಂದು ಕಥೆ ಹೇಳಿದ್ರು ನಳಿನ್ ಕುಮಾರ್ ಕಟೀಲು

    ಬಾಗಲಕೋಟೆ: ಸೋನಿಯಾ ಗಾಂಧಿ ಮನೆಯ ಮುಂದಿತ್ತು ಕತ್ತೆ. ಏಳಲೂ ಆಗದ, ಓಡಲೂ ಆಗದ ಕತ್ತೆ ಅದು. ಯಾರು ಏನೇ ಮಾಡಿದ್ರೂ ಅದು ಹೋಗಲಿಲ್ಲ.. ಎನ್ನುತ್ತ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕಥೆಯೊಂದನ್ನು ಹೇಳಲಾರಂಭಿಸಿದರು.

    ಅವರು ಶನಿವಾರ ಬಾಗಲಕೋಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತ ಹೇಳಿದ ಈ ಕಥೆಯ ಮುಂದಿನ ಭಾಗ ಅವರದೇ ಮಾತುಗಳಲ್ಲಿ ಇಲ್ಲಿದೆ.

    ” ಸೋನಿಯಾ ಗಾಂಧಿ ಅವರ ಮನೆಯ ಮುಂದಿದ್ದ ಕತ್ತೆಯನ್ನು ಅಹ್ಮದ್ ಪಟೇಲ್, ಖರ್ಗೆ ಸೇರಿ ಅನೇಕ ಮುಖಂಡರಿಂದಲೂ ಓಡಿಸಲಾಗಲಿಲ್ಲ. ಕೊನೆಗೆ ಕರ್ನಾಟಕದಿಂದ ಸಿದ್ದರಾಮಯ್ಯ ಹೋದ್ರು. ಕತ್ತೆ ಓಡಿಸಲು ಕಂಡಿಷನ್ ಹಾಕಿದ್ರು. ನನ್ನನ್ನೇ ಸಿಎಂ ಮಾಡಿದ್ರೆ ಕತ್ತೆ ಓಡಿಸೋದಾಗಿ ಹೇಳಿದ್ರು. ಹಾಗೆ, ಕತ್ತೆ ಓಡಿಸಬೇಕಿತ್ತು. ಅದಕ್ಕಾಗಿ ನಿಮ್ಮನ್ನ ಸಿಎಂ ಮಾಡ್ತೇವಿ ಅಂತ ಬಾಂಡ್ ನಲ್ಲಿ ಬರೆದು ಮೇಡಂ ಸಹಿ ಹಾಕಿದ್ರು. ಸಿದ್ದರಾಮಯ್ಯ ನೇರವಾಗಿ ಕತ್ತೆ ಬಳಿ ಹೋಗಿ ಅದರ ಕಿವಿಯಲ್ಲಿ ಏನೋ ಊದಿದ್ರು. ಕೂಡಲೇ ಕತ್ತೆ ಓಡಿ ಹೋಯಿತು.

    ಏನು ಮಾಡಿದ್ರಿ ಅಂತ ಖರ್ಗೆ ಕೇಳಿದ್ರು. ಏನಿಲ್ಲ, ಕಾಂಗ್ರೆಸ್ ಸೇರ್ತಿಯಾ ಅಂತ ಕೇಳಿದೆ… ಇಲ್ಲ ಅಂತು.. ಹಾಗಾದ್ರೆ, ಇನ್ನು ಐದು ನಿಮಿಷ ಇಲ್ಲೇ ಇದ್ರೆ ನಿನಗೆ ಕಾಂಗ್ರೆಸ್ ಸದಸ್ಯತ್ವ ಕೊಡ್ತೇನೆ ಅಂದೆ, ಕತ್ತೆ ಓಡ್ತು ಅಂದ್ರು. ಈಗ ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಇಂತದ್ದು”

    ಹೀಗೆ ರಸವತ್ತಾಗಿ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದ ನಳಿನ್ ಕುಮಾರ್ ಕಟೀಲು, “ಇವತ್ತು ಮನೆ ಮನೆಯಲ್ಲಿ ಬಿಜೆಪಿ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಹಡಗು ಮುಳುಗುತ್ತಿದೆ. ಅದಕ್ಕೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿರುವುದು ಹಂಗಾಮಿ ಅಧ್ಯಕ್ಷರು. ರಾಜ್ಯದಲ್ಲಿ ಅಧ್ಯಕ್ಷರೇ ಇಲ್ಲ” ಎಂದು ಕಿಚಾಯಿಸಿದರು.

    ಅಲ್ಲದೆ, “1947 ರ ಮುಂಚೆ ಕಾಂಗ್ರೆಸ್ ರಾಷ್ಟ್ರಭಕ್ತಿ ಹೊಂದಿತ್ತು. ಹೃದಯ ಹೃದಯದಲ್ಲಿ ರಾಷ್ಟ್ರಭಕ್ತಿ ಜಾಗೃತಿ ಮಾಡಿತ್ತು. ಮಹಾತ್ಮಾ ಗಾಂಧೀಜಿಯ ಚಿಂತನೆಗೆ ಬೆಳಕುಕೊಡುವ ಕಾಂಗ್ರೆಸ್ ಆಗಿತ್ತು. ಭಾರತ ಮಾತಾಕೀ ಜೈ, ಒಂದೇ ಮಾತರಂ ಘೋಷಣೆ ಹಳ್ಳಿ ಹಳ್ಳಿಗೆ ಹೋಯ್ದಿತ್ತು. ಸ್ವಾತಂತ್ರ್ಯ ಬಂದ ಮೇಲೆ ನೆಹರು ಆಡಳಿತ ಬಂದ ಮೇಲೆ ಈ ದೇಶದಲ್ಲಿ ಕಾಂಗ್ರೆಸ್ ಭಾರತ ಮಾತಾಕೀ ಜೈ ಹೇಳಲಿಲ್ಲ. ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಜೈ ಹೇಳಿದ್ರು” ಎಂದು ವ್ಯಂಗ್ಯವಾಡಿದರು.

    “ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಸಮಾವೇಶದಲ್ಲಿ ಭಾರತ ಮಾತಾಕೀ ಜೈ ಹೇಳಿಸಿದ್ದು ನರೇಂದ್ರ ಮೋದಿ. ಇವತ್ತು ಪರಿವರ್ತನೆ ಗಾಳಿ ಬೀಸುತ್ತಿದೆ. ಹೃದಯ ಹೃದಯಗಳಲ್ಲಿ ರಾಷ್ಟ್ರಭಕ್ತಿ ಜಾಗೃತವಾಗಿದೆ. ಇದರ ಮಧ್ಯ ಕೆಲವರು ರಾಷ್ಟ್ರ ವಿರೋಧಿ ಘೋಷಣೆ ಹಾಕ್ತಿದ್ದಾರೆ. ಆದರೆ, ಜಗತ್ತು ಭಾರತದ ಕಡೆ ನೋಡ್ತಿದೆ. ಅಮೇರಿಕಾದಿಂದ ಅಪಘಾನಿಸ್ತಾನದ ವರೆಗೆ ಮುಂದಿನ ಮಿತ್ರತ್ವ ಭಾರತದೊಂದಿಗೆ ಅಂತಿದ್ದಾರೆ” ಎಂದು ಕಟೀಲು ಹೆಮ್ಮೆ ವ್ಯಕ್ತಪಡಿಸಿದರು.

    ಕೊರೊನಾ ವೈರಸ್​ ಆಯ್ತು… ಈಗ ಕೇರಳದಲ್ಲಿ ಚಿಕನ್​ಗೂ ಬಂತು ಕಂಟಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts