More

    ನಾಗರಹಳ್ಳಿಯಲ್ಲಿ ಕೂಳೆ ಪಂಚಮಿ ಜಾತ್ರೆ

    ರಿಪ್ಪನ್‌ಪೇಟೆ: ಸಮೀಪದ ನಾಗರಹಳ್ಳಿಯ ಪ್ರಸಿದ್ಧ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಕೂಳೆ ಪಂಚಮಿ ಪ್ರಯುಕ್ತ ಮಂಗಳವಾರ ಜಾತ್ರೆ ಶ್ರದ್ಧಾಭಕ್ತಿಯಿಂದ ನಡೆಯಿತು.
    ಬೆಳಗ್ಗೆಯಿಂದಲೇ ಆರಂಭವಾದ ಪೂಜಾ ಕೈಂಕರ್ಯಗಳಲ್ಲಿ ಕ್ಷೇತ್ರನಾಥ ನಾಗೇಂದ್ರಸ್ವಾಮಿಗೆ ಭಕ್ತರು ನಾರಿಕೇಳ, ಕ್ಷೀರಾಭಿಷೇಕ ಗಂಧಾಭಿಷೇಕ, ಹರಿದ್ರಾಭಿಷೇಕದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ವರ್ಷಕ್ಕೆ ಎರಡು ಬಾರಿ ಮಾಘ ಮಾಸದ ಕೂಳೆ ಪಂಚಮಿ ಮತ್ತು ಶ್ರಾವಣ ಮಾಸದ ನಾಗರಪಂಚಮಿಯಂದು ಜಾತ್ರೆ ನಡೆಯುತ್ತದೆ.
    ಸುತ್ತಮುತ್ತಲಿನ ಹಾಗೂ ದೂರದ ಊರುಗಳಿಂದ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವುದು ಕೂಳೆ ಪಂಚಮಿಯ ವಿಶೇಷ. ಚರ್ಮವ್ಯಾಧಿ ಇರುವ ಭಕ್ತಾದಿಗಳು ಬೆಳ್ಳಿ ಹಾಗೂ ಪಂಚಲೋಹದ ನಾಗಮೂರ್ತಿಯನ್ನು ಹರಕೆ ಒಪ್ಪಿಸುವ ಮೂಲಕ ಕೃತಾರ್ಥರಾದರು. ಸಂತಾನ ಪ್ರಾಪ್ತಿಗಾಗಿ ಹಾಗೂ ಮನೆಯ ಸಕಲ ಅಭಿವೃದ್ಧಿಗಾಗಿ ಕದಳಿ ಫಲ ಸಮರ್ಪಿಸಿದರು. ಸರ್ಪದೋಷ ನಿವಾರಣೆಗಾಗಿ ವಿವಿಧ ರೀತಿಯ ವಿಶೇಷ ಪೂಜೆಗಳು ನೆರವೇರಿದವು. ನವದಂಪತಿಗಳು ಭವಿಷ್ಯದ ಜೀವನ ಸುಖಕರವಾಗಿರಲೆಂದು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
    ಮುಜರಾಯಿ ಮತ್ತು ದೇವಸ್ಥಾನ ಸಮಿತಿಯಿಂದ ಸಾಂಗವಾಗಿ ಜಾತ್ರೆ ಜರುಗಿತು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು. ಸಮಿತಿ ಅಧ್ಯಕ್ಷ ಗೇರುಗಲ್ಲು ಸತೀಶ, ವರ್ತೇಶ್, ಕಂದಾಯ ನಿರೀಕ್ಷಕ ಇನಾಯತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts