More

    ನಾಗಮ್ಮಜ್ಜಿ ಮನೆಗೆ ಬೇಕು ಆಧಾರ: ಬೀಳುವ ಹಂತದಲ್ಲಿರುವ ಮನೆಯಲ್ಲಿ ಐವರ ವಾಸ್ತವ್ಯ

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಕುಸಿಯುವ ಹಂತದಲ್ಲಿರುವ ಛಾವಣಿ… ಬಿರುಕು ಬಿಟ್ಟ ಮಣ್ಣಿನ ಗೋಡೆಗಳು.. ಸುತ್ತಲೂ ಟರ್ಪಾಲು ಸುತ್ತಿಕೊಂಡಿರುವ ಶೌಚಗೃಹ… ಇಂಥ ಅಪಾಯಕಾರಿ ಮನೆಯಲ್ಲಿ ಐವರ ವಾಸ್ತವ್ಯ… ಮಳೆಗಾಲದಲ್ಲಂತೂ ನಿತ್ಯ ಜಾಗರಣೆ… ಯಾವ ಕ್ಷಣದಲ್ಲಿ ಮನೆ ಕುಸಿದು ಬೀಳುತ್ತದೋ ಎಂಬ ಆತಂಕ…

    ಬಂಟ್ವಾಳ ತಾಲೂಕಿನ ಕಳ್ಳಿಗೆ ಜಾರಂದಗುಡ್ಡೆಯಲ್ಲಿ ಈಗ ಬೀಳುವುದೋ, ಮತ್ತೆ ಕುಸಿಯುವುದೋ ಎಂಬ ಸ್ಥಿತಿಗೆ ತಲುಪಿರುವ ನಾಗಮ್ಮ ಪೂಜಾರ್ತಿ ಎಂಬುವರ ಮನೆಯ ಸ್ಥಿತಿಯಿದು. ಮಗ ಮನೆ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಸೊಸೆ ಬೀಡಿ ಕಟ್ಟಿ ಬರುವ ಆದಾಯದಲ್ಲಿ ಮನೆಯ ನಿತ್ಯ ಖರ್ಚು ನಿಭಾಯಿಸಬೇಕು. ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವಾಗ ಮನೆ ದುರಸ್ತಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲೇ ಹಲವು ವರ್ಷಗಳಿಂದ ಈ ಬಿರುಕು ಬಿಟ್ಟ ಅಪಾಯಕಾರಿ ಮನೆಯಲ್ಲೇ ದಿನಗಳೆಯುತ್ತಿದ್ದಾರೆ ನಾಗಮ್ಮಜ್ಜಿ.

    ಮಳೆಗಾಲದಲ್ಲಿ ನೀರು ಸೋರುವ ಹೆಂಚಿನ ಛಾವಣಿಯಾದರೂ ದುರಸ್ತಿ ಮಾಡೋಣವೆಂದರೆ ಗೆದ್ದಲು ಹಿಡಿದು ಮುರಿದು ಬೀಳುವ ಸ್ಥಿತಿಯಲ್ಲಿರುವ ಛಾವಣಿಯನ್ನು ಮುಟ್ಟುವುದೇ ಅಪಾಯ. ಶೌಚಗೃಹದ ಒಂದು ಪಾರ್ಶ್ವದ ಗೋಡೆ ಈ ಹಿಂದೆಯೇ ಕುಸಿದು ಬಿದ್ದಿದೆ. ಮೊನ್ನೆಯ ಮಳೆಗೆ ಇನ್ನೊಂದು ಪಾರ್ಶ್ವದ ಗೋಡೆಯೂ ವಾಲಿದೆ. ಸದ್ಯಕ್ಕೆ ಟರ್ಪಾಲು ಸುತ್ತಿ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಿರುಕು ಬಿಟ್ಟ ಗೋಡೆಗಳು ನೆಲಕ್ಕುರುಳಲು ದಿನ ಎಣಿಸುತ್ತಿವೆ. ಮುಂದಿನ ಮಳೆಗಾಲದಲ್ಲಿ ಈ ಮನೆಯಲ್ಲಿ ವಾಸ್ತವ್ಯ ಹೂಡುವುದೇ ಅಪಾಯ. ಈ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವಷ್ಟು, ಪ್ರತ್ಯೇಕ ಮನೆ ನಿರ್ಮಿಸುವಷ್ಟು ಸ್ಥಿತಿವಂತರಾಗಿಲ್ಲದೇ ಇರುವುದರಿಂದ ಸದ್ಯ ಮನೆ ರಿಪೇರಿ ಮಾಡುವ ಯೋಜನೆ ದೂರದ ಮಾತು.

    ಸಣ್ಣ ಮನೆಯ ಕನಸಿಗೆ: 47 ವರ್ಷಗಳ ಹಿಂದೆ ನಾಗಮ್ಮಜ್ಜಿ ಬ್ರಹ್ಮರಕೂಟ್ಲು ಬಳಿ ವಾಸವಾಗಿದ್ದರು. 1974ರ ಭೀಕರ ನೆರೆಯ ಸಂದರ್ಭ ಜಾರಂದಗುಡ್ಡೆ ಬಳಿ ಮನೆ ನಿರ್ಮಿಸಲು ಸರ್ಕಾರ ನಿವೇಶನ ಒದಗಿಸಿತ್ತು. ತೆಂಗಿನ ಮಡಲಿನ ತಟ್ಟಿಯ ಜೋಪಡಿ ನಿರ್ಮಿಸಿ ಜೀವನ ಆರಂಭಿಸಿದ್ದ ಇವರು ಬಳಿಕ ಹಂತಹಂತವಾಗಿ ಮಣ್ಣಿನ ಗೋಡೆ ಕಟ್ಟಿ ಈಗಿರುವ ಮನೆ ನಿರ್ಮಿಸಿಕೊಂಡಿದ್ದಾರೆ. ಬಡತನದ ಸ್ಥಿತಿಯಿಂದ ಮೇಲೇಳಲಾಗದೆ ಕಾಲಕಾಲಕ್ಕೆ ಮನೆ ದುರಸ್ತಿ ಮಾಡಲು ಸಾಧ್ಯವಾಗದೆ ಈಗ ಕುಸಿಯುವ ಹಂತದಲ್ಲಿದೆ. ಸಣ್ಣದೊಂದು ಮನೆ ನಿರ್ಮಿಸುವ ಕನಸು ಹೊತ್ತಿರುವ ನಾಗಮ್ಮಜ್ಜಿಗೆ ಮನೆ ನಿರ್ಮಿಸಲು ದಾನಿಗಳ, ಸಂಘ ಸಂಸ್ಥೆಗಳ ನೆರವು ಬೇಕಿದೆ. ಆರ್ಥಿಕ ನೆರವು ನೀಡುವವರು ಅವರ ಸೊಸೆ ಜಯಂತಿ ಬ್ಯಾಂಕ್ ಖಾತೆ ಗೂಗಲ್ ಪೇಗೆ ಜಮಾ ಮಾಡಬಹುದು. ವಸ್ತು ರೂಪದಲ್ಲಿ ನೆರವು ನೀಡುವವರು ದೂರವಾಣಿ ಸಂಖ್ಯೆ 9164323856 ಸಂಪರ್ಕಿಸಬಹುದು. ಬ್ಯಾಂಕ್ ಖಾತೆ ವಿವರ: ಜಯಂತಿ, ಬ್ಯಾಂಕ್ ಆಫ್ ಬರೋಡಾ, ತುಂಬೆ ಶಾಖೆ, ಖಾತೆ ಸಂಖ್ಯೆ 83720100001712, ದೂರವಾಣಿ ಅಥವಾ ಗೂಗಲ್ ಪೇ/ಫೋನ್ ಪೇ: 9535538870.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts