More

    ಫ್ರೆಂಚ್​ ಓಪನ್​ನಲ್ಲಿ 14ನೇ ಬಾರಿ ಸೆಮಿಫೈನಲ್‌ಗೇರಿದ ನಡಾಲ್; ಸ್ವಿಯಾಟೆಕ್‌ಗೆ ಕಹಿಯಾದ ಸಕ್ಕರಿ

    ಪ್ಯಾರಿಸ್: ಕಳೆದ 14 ವರ್ಷಗಳಲ್ಲಿ ಸತತ 2 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ಮೊದಲ ಆಟಗಾರ್ತಿ ಎನಿಸುವ ಹಂಬಲದಲ್ಲಿದ್ದ ಪೋಲೆಂಡ್ ತಾರೆ ಇಗಾ ಸ್ವಿಯಾಟೆಕ್ ಕ್ವಾರ್ಟರ್​ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಸತತ 11 ಪಂದ್ಯ ಮತ್ತು ಸತತ 22 ಸೆಟ್ ಗೆದ್ದಿದ್ದ ಹಾಲಿ ಚಾಂಪಿಯನ್ ಸ್ವಿಯಾಟೆಕ್ ಓಟಕ್ಕೆ ಗ್ರೀಸ್‌ನ ಮರಿಯಾ ಸಕ್ಕರಿ ತಡೆಯೊಡ್ಡಿದ್ದಾರೆ. ಮತ್ತೊಂದೆಡೆ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್‌ಸಿಕೋವಾ ಕೂಡ ಚೊಚ್ಚಲ ಗ್ರಾಂಡ್ ಸ್ಲಾಂ ಸೆಮಿಫೈನಲ್ ಪ್ರವೇಶ ಕಂಡಿದ್ದಾರೆ.

    ಬುಧವಾರ ನಡೆದ ಎಂಟರ ಘಟ್ಟದ ಕಾದಾಟದಲ್ಲಿ 8ನೇ ಶ್ರೇಯಾಂಕಿತೆ ಸ್ವಿಯಾಟೆಕ್ 4-6, 4-6 ನೇರಸೆಟ್‌ಗಳಿಂದ 17ನೇ ಶ್ರೇಯಾಂಕಿತೆ ಸಕ್ಕರಿಗೆ ಶರಣಾದರು. ಸಕ್ಕರಿ ಕಳೆದ ಪಂದ್ಯದಲ್ಲಷ್ಟೇ ಹಾಲಿ ರನ್ನರ್‌ಅಪ್ ಸೋಫಿಯಾ ಕೆನಿನ್‌ಗೂ ಸೋಲುಣಿಸಿದ್ದರು.

    ಮತ್ತೊಂದು ಕ್ವಾರ್ಟರ್​ಫೈನಲ್‌ನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಕ್ರೆಜ್‌ಸಿಕೋವಾ ಅಮೆರಿಕದ 17 ವರ್ಷದ ಆಟಗಾರ್ತಿ ಕೋಕೋ ಗೌಫ್​ ವಿರುದ್ಧ 7-6, 7-3 ನೇರಸೆಟ್‌ಗಳಿಂದ ಜಯಿಸಿದರು. ಪಾವ್ಲಚೆಂಕೋವಾ ಮತ್ತು ಜಿದಾನ್‌ಸೆಕ್ ಸಹಿತ ಈ ಬಾರಿ ಟೂರ್ನಿಯಲ್ಲಿ ಉಪಾಂತ್ಯಕ್ಕೇರಿರುವ ಎಲ್ಲ 4 ಆಟಗಾರ್ತಿಯರಿಗೂ ಇದು ಚೊಚ್ಚಲ ಗ್ರಾಂಡ್ ಸ್ಲಾಂ ಸೆಮಿಫೈನಲ್ ಆಗಿರುವುದು ವಿಶೇಷ.

    ಕಳೆದ 15 ವರ್ಷಗಳಲ್ಲಿ ಪ್ಯಾರಿಸ್‌ನಲ್ಲಿ ಎಂಟರ ಘಟ್ಟಕ್ಕೇರಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿದ್ದ 24ನೇ ಶ್ರೇಯಾಂಕಿತೆ ಗೌಫ್​, ಒಂದು ಗಂಟೆ 50 ನಿಮಿಷಗಳ ಹೋರಾಟದಲ್ಲಿ ಸೋಲುಂಡರು. ಡಬಲ್ಸ್‌ನಲ್ಲಿ ಮಾಜಿ ವಿಶ್ವ ನಂ. 1 ಆಟಗಾರ್ತಿಯಾಗಿರುವ ಕ್ರೆಜ್‌ಸಿಕೋವಾ, ಇದೀಗ ಸಿಂಗಲ್ಸ್‌ನಲ್ಲೂ ಭರ್ಜರಿ ಫಾರ್ಮ್‌ನಲ್ಲಿದ್ದು ಸತತ 10ನೇ ಗೆಲುವು ಸಾಧಿಸಿದರು. ಕಳೆದ ವಾರವಷ್ಟೇ ಅವರು ಸ್ಟ್ರಾಸ್‌ಬರ್ಗ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲೂ ಸೆಮೀಸ್‌ಗೇರಿರುವ ಕ್ರೆಜ್‌ಸಿಕೋವಾ, ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್​ಫೈನಲ್‌ನಲ್ಲಿ ನಿರ್ಗಮಿಸಿದ್ದಾರೆ.

    ನಡಾಲ್ ಜಯಭೇರಿ
    14ನೇ ಬಾರಿ ಫ್ರೆಂಚ್ ಓಪನ್ ಜಯಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಸ್ಪೇನ್‌ನ ಕ್ಲೇಕೋರ್ಟ್ ಕಿಂಗ್ ರಾಫೆಲ್ ನಡಾಲ್, ಸತತ 36 ಸೆಟ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದ ನಡುವೆಯೂ ಉಪಾಂತ್ಯಕ್ಕೇರಿದ್ದಾರೆ. 3ನೇ ಶ್ರೇಯಾಂಕಿತ ನಡಾಲ್ ಕ್ವಾರ್ಟರ್​ಫೈನಲ್‌ನಲ್ಲಿ 10ನೇ ಶ್ರೇಯಾಂಕಿತ ಅರ್ಜೆಂಟೀನಾದ ಡೀಗೋ ಸ್ಕಾರ್ಟ್ಸ್‌ಮನ್ ವಿರುದ್ಧ 6-3, 4-6, 6-4, 6-0ಯಿಂದ ಜಯಿಸಿ ದಾಖಲೆಯ 21ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಗೆ ಮತ್ತಷ್ಟು ಸನಿಹವಾದರು.

    ಮೆಡ್ವೆಡೇವ್‌ಗೆ ಸಿಸಿಪಾಸ್ ಆಘಾತ
    ವಿಶ್ವ ನಂ. 2 ಆಟಗಾರ ಡೆನಿಲ್ ಮೆಡ್ವೆಡೇವ್‌ಗೆ ಸೋಲುಣಿಸುವ ಮೂಲಕ ಗ್ರೀಕ್ ಆಟಗಾರ ಸ್ಟೆಫಾನೋಸ್ ಸಿಸಿಪಾಸ್ ಟೂರ್ನಿಯಲ್ಲಿ ಸತತ 2ನೇ ವರ್ಷ ಸೆಮಿಫೈನಲ್‌ಗೇರಿದ್ದಾರೆ. ವಿಶ್ವ ನಂ. 5 ಆಟಗಾರ ಸಿಸಿಪಾಸ್ ಮಂಗಳವಾರ ರಾತ್ರಿ ನಡೆದ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ರಷ್ಯಾದ ಮೆಡ್ವೆಡೇವ್ ವಿರುದ್ಧ 6-3, 7-6, 7-5 ನೇರಸೆಟ್‌ಗಳಿಂದ ಜಯಿಸಿದರು. ಈ ಮೂಲಕ ಸಿಸಿಪಾಸ್ ಸತತ 3ನೇ ಮತ್ತು ಒಟ್ಟಾರೆ 4ನೇ ಗ್ರಾಂಡ್ ಸ್ಲಾಂ ಸೆಮೀಸ್ ಪ್ರವೇಶಿಸಿದ ಸಾಧನೆ ಮಾಡಿದರು.

    2 ಬಾರಿಯ ಗ್ರಾಂಡ್ ಸ್ಲಾಂ ರನ್ನರ್‌ಅಪ್ ಮೆಡ್ವೆಡೇವ್, 2 ಬಾರಿ ಸೆಟ್ ಪಾಯಿಂಟ್ ಗೆಲುವಿನ ಅವಕಾಶ ಹೊಂದಿದ್ದರೂ, ಎಡವಿ ಪಂದ್ಯವನ್ನು ಕೈಚೆಲ್ಲಿದರು. 22 ವರ್ಷದ ಸಿಸಿಪಾಸ್ ಮತ್ತು ಜರ್ಮನಿಯ 24 ವರ್ಷದ ಅಲೆಕ್ಸಾಂಡರ್ ಜ್ವೆರೇವ್ ಉಪಾಂತ್ಯದಲ್ಲಿ ಮುಖಾಮುಖಿ ಆಗಲಿದ್ದು, ಇದು ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಕಳೆದ 13 ವರ್ಷಗಳಲ್ಲಿ ಅತ್ಯಂತ ಯುವ ಆಟಗಾರರ ಕಾದಾಟವೆನಿಸಲಿದೆ. ಕೊನೇಯದಾಗಿ 2008ರಲ್ಲಿ ನಡಾಲ್-ಜೋಕೊವಿಕ್ 20 ಪ್ಲಸ್ ವಯಸ್ಸಿನಲ್ಲಿದ್ದಾಗ ಮುಖಾಮುಖಿಯಾಗಿದ್ದರು.

    ಕೆಎಲ್​ ರಾಹುಲ್​ ಜತೆಗೆ ಗೆಳತಿ ಅಥಿಯಾ ಶೆಟ್ಟಿ ಕೂಡ ಸೌಥಾಂಪ್ಟನ್​ನಲ್ಲಿ ಕ್ವಾರಂಟೈನ್​?

    ಈ ಪಾಕ್​ ಕ್ರಿಕೆಟಿಗನ ಪತ್ನಿ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಭಿಮಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts