More

    ಪರಂಪರೆಯ ಸತ್ವದೊಂದಿಗೆ ವಿಕಸನಗೊಂಡ ದಸರಾ

    ಪ್ರತಿ ವರ್ಷ ದಸರಾ ನಡೆದರೂ, ಪ್ರತಿ ವರ್ಷ ಹೆಚ್ಚು ಕಡಿಮೆ ಅದೇ ಜನ, ಅದೇ ವ್ಯವಸ್ಥೆ ಇದ್ದರೂ ನಾಡಹಬ್ಬ ದಸರಾದ ಆಕರ್ಷಣೆ ಇಂದಿಗೂ ಕಡಿಮೆಯಾಗಿಲ್ಲ. ಹಿಂದಿನ ವರ್ಷಗಳ ಕೊರತೆ, ವೈಫಲ್ಯಗಳನ್ನು ಕೊಂಚ ಮಟ್ಟಿಗೆ ನಿವಾರಿಸಿಕೊಂಡು ಹೊಸ ದಸರಾ ಬರುತ್ತದೆ. ಹೊಸ ಕಾರ್ಯಕ್ರಮಗಳು ಸೇರಿಕೊಳ್ಳುತ್ತವೆ. ಬೆರಗಿನಿಂದ ನೋಡುವ ಹೊಸತಲೆಮಾರಿನ ಪ್ರೇಕ್ಷಕರು ಹುಟ್ಟಿಕೊಳ್ಳುತ್ತಾರೆ. ಎಲ್ಲ ವರ್ಗದ ಜನರೂ ಪಾಲ್ಗೊಳ್ಳುವಂಥ ವಿನೂತನ ಕಾರ್ಯಕ್ರಮಗಳು ಇರುತ್ತವೆ. ಹೀಗಾಗಿ ಮೈಸೂರಿನ ದಸರಾ ನಿತ್ಯನೂತನ. ನಿತ್ಯಾಕರ್ಷಕ.

    ಪರಂಪರೆಯ ಸತ್ವದೊಂದಿಗೆ ವಿಕಸನಗೊಂಡ ದಸರಾಜೆ.ಬಿ.ರಂಗಸ್ವಾಮಿ

    ಕಳೆದ ಮೂರು ಸಾವಿರ ವರ್ಷಗಳಿಂದ ಆಚರಣೆಯಲ್ಲಿರುವ ಈ ನವರಾತ್ರಿ ಹಬ್ಬದ ಉತ್ಸವ ಕರ್ನಾಟಕದಲ್ಲಿ ಎರಡು ರಾಜವಂಶಗಳಿಂದ ವಿಜಯನಗರ, ಶ್ರೀರಂಗಪಟ್ಟಣ ಮತ್ತು ಮೈಸೂರು ಈ ಮೂರು ಸ್ಥಳಗಳಲ್ಲಿ ನಡೆದುಬಂತು. ವಿಜಯನಗರದ ಅರಸರ ಕಾಲದಲ್ಲಿ ವೈಭವದಿಂದ ನಡೆಯುತ್ತಿದ್ದ ದಸರಾ ಹಬ್ಬವನ್ನು ಮೈಸೂರಿನ ಅರಸರು ಮುಂದುವರಿಸಿಕೊಂಡು ಬಂದರು. ನಂತರ ಪ್ರಜಾ ಸರ್ಕಾರ ಬಂದ ಮೇಲೆ ಜನತಾ ದಸರಾ ಆಗಿ ಬದಲಾಯಿತು. ರಾಜ್ಯ ಸರ್ಕಾರದ ನೇರ ಮೇಲ್ವಿಚಾರಣೆಯಲ್ಲಿ ನಡೆಯುವ ಈ ಉತ್ಸವ ನಾಡಿನ ಸಾಂಸ್ಕೃತಿಕ ಸೊಬಗನ್ನು ಮೇಳೈಸಿಕೊಂಡಿದೆ. ಕರ್ನಾಟಕದ ಇತಿಹಾಸ, ಸಂಗೀತ, ನೃತ್ಯಕಲೆಗಳನ್ನು ಪರಿಚಯಿಸುವ ನಾಡಹಬ್ಬವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಪ್ರಾದೇಶಿಕ ಪರಂಪರೆ ಮತ್ತು ನಾಡಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರ, ಜಾನಪದ ಕಲೆಗಳ ಸಂಗಮದೊಂದಿಗೆ ನಾಡ ಜನತೆಯನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ.

    ಒಂಬತ್ತು ದಿನಗಳ ದಸರಾ ನಾಡಜನರ ಉತ್ಸವವಾಗಲು ಮುಖ್ಯ ಕಾರಣ: ಆ ಚಿನ್ನದ ರಾಜಸಿಂಹಾಸನ ಮತ್ತು ಆನೆಯ ಮೇಲೆ ಕೂರಿಸುವ ಚಿನ್ನದ ಅಂಬಾರಿ. ಪಾಂಡವರ ಕಾಲದಿಂದಲೂ ಇದ್ದ ಆ ಸಿಂಹಾಸನ ನಂತರ ವಿಕ್ರಮಾದಿತ್ಯ ಮೊದಲಾಗಿ ನಾನಾ ರಾಜವಂಶಗಳಿಗೆ ಸೇರುತ್ತ ಹೋಯಿತು. ಈ ಚಿನ್ನದ ಸಿಂಹಾಸನ ವಿಜಯನಗರದ ಅರಸರ ಕೈವಶವಾದ ಮೇಲೆ ದಸರಾಕ್ಕೆ ಸಾರ್ವತ್ರಿಕ ಸ್ವರೂಪ ಕೊಟ್ಟರು. ಇಡೀ ಸಾಮ್ರಾಜ್ಯದ ಸಾಮಂತರು, ಪುರಪ್ರಮುಖರು, ನಾಡಜನರ ಪಾಲ್ಗೊಳ್ಳುವಿಕೆಯಲ್ಲಿ ದಸರಾ ನಡೆಯತೊಡಗಿತು.

    ಈ ಸಿಂಹಾಸನದ ಮೇಲೆ ರಾಜವಂಶಜರಲ್ಲದೆ ಯಾರೇ ಕುಳಿತು ದರ್ಬಾರ್ ನಡೆಸಿದರೂ ಸುಟ್ಟು ಬೂದಿಯಾಗುತ್ತಾರೆ ಎಂಬ ಪ್ರತೀತಿ ಇತ್ತು. ಆದ್ದರಿಂದಲೇ ಇದಕ್ಕೆ ‘ಉರಿಗದ್ದುಗೆ’ ಎಂಬ ಹೆಸರು. ಇದನ್ನು ಹೊಂದಿದ ಪ್ರತಿಯೊಂದು ರಾಜವಂಶವೂ ದಸರಾದಲ್ಲಿ ಶ್ರದ್ಧಾಭಕ್ತಿಗಳಿಂದ ನವರಾತ್ರಿ ಪೂಜೆ, ಉತ್ಸವ ಮಾಡಿಕೊಂಡು ಬಂದಿದೆ. ವಿಕ್ರಮಾದಿತ್ಯನ ಕಾಲದಲ್ಲಿ ಇದಕ್ಕೆ ಮೆಟ್ಟಿಲುಗಳನ್ನು ಮಾಡಿಸಿ ಸಾಲಭಂಜಿಕೆಯರನ್ನು ಕಡೆಯಲಾಯಿತು. ರಾಜ ಇದರ ಮೇಲೆ ಆಸೀನನಾಗಿ ನ್ಯಾಯ ತೀರ್ಪು ನೀಡುತ್ತಿದ್ದ. ಆತ ನಿಷ್ಪಕ್ಷಪಾತವಾಗಿ ತೀರ್ಪು ಕೊಡಲು ಈ ಸಾಲಭಂಜಿಕೆಯರೇ ನ್ಯಾಯದೇವತೆಗಳಾಗಿ ಸಹಕರಿಸುತ್ತಾರೆ ಎಂಬ ನಂಬಿಕೆ. ಸಿಂಹಾಸನಾರೂಢ ರಾಜನ ಧ್ಯೇಯ ಮಂತ್ರವೇ ‘ಸತ್ಯಮೇವೋದ್ಧಾರಮ್ಯಹಂ’ ಅಂದರೆ ‘ನಾನು ಸತ್ಯವನ್ನು ಮಾತ್ರವೇ ಎತ್ತಿ ಹಿಡಿಯುತ್ತೇನೆ’ ಎಂಬ ಘೊಷವಾಕ್ಯ. ಇದನ್ನು ಸಿಂಹಾಸನದಲ್ಲಿ ಕೆತ್ತಿಸಲಾಗಿದೆ. ಇದು ಇರುವುದು ರಾಜನ ಆಡಂಬರ ವೈಭೋಗದ ಪ್ರದರ್ಶನಕ್ಕಲ್ಲ. ಪ್ರಜೆಗಳಿಗೆ ನ್ಯಾಯತೀರ್ಪ ನೀಡುವ ಮಹಾರಾಜ ಇದರ ಮೇಲೆ ಆಸೀನನಾದಾಗ ನ್ಯಾಯಯುತ, ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂಬ ಸದಾಶಯ.

    ಮೈಸೂರು ಹೈದರಾಲಿಯ ಕೈವಶವಾದಾಗ ಹಿಂದೂ ಧರ್ಮದ ಪ್ರತಿನಿಧಿಯಂತಿದ್ದ ಈ ಸಿಂಹಾಸನದ ಮೇಲೆ ಕೂರಲು ಹಿಂಜರಿದ. ಟಿಪು್ಪ ಕೂಡ ಬಳಸಲಿಲ್ಲ. ಅವನ ಅರಮನೆಯ ಕೋಣೆಯೊಂದರಲ್ಲಿ ಧೂಳು ತುಂಬಿದ ಈ ಸಿಂಹಾಸನ ನಂತರ ಪತ್ತೆಯಾಯಿತು. ಅದನ್ನು ದುರಸ್ತಿಗೊಳಿಸಿ ಮುಮ್ಮಡಿ ಕೃಷ್ಣರಾಜರು 1799ರಲ್ಲಿ ಅದರ ಮೇಲೆಯೇ ಪಟ್ಟಾಭಿಷಿಕ್ತರಾದರು.

    ಈ ಸಿಂಹಾಸನ ಮೂಲತಃ ಅಂಜೂರದ ಮರದಿಂದ ಮಾಡಿದ್ದಾಗಿದ್ದು ಚಿನ್ನ-ಬೆಳ್ಳಿಯ ತಗಡು ಹೊದಿಸಲಾಗಿತ್ತು. ಮುಮ್ಮಡಿಯವರು ಅದರ ಮೇಲೆ ಅಮೂಲ್ಯ ಮುತ್ತು ರತ್ನ ಅಳವಡಿಸಿದರು. ನಂತರ ಆಳಿದ ಎಲ್ಲ ರಾಜರೂ ಈ ಸಿಂಹಾಸನವನ್ನು ಅಲಂಕಾರಗೊಳಿಸುತ್ತ ಬಂದರು. ಚಿನ್ನದ ಚಾಮರ ಸೇರಿಸಿ ಸಿಂಹಾಸನ ನವರತ್ನ ಖಚಿತವಾಗುವಂತೆ ರೂಪಿಸಿದರು. 268 ಕೆಜಿ ಚಿನ್ನವಿರುವ ಶ್ರೇಷ್ಠ ಅಭಿರುಚಿಯಿಂದ ಕೂಡಿದ ಇಷ್ಟು ಸುಂದರವಾದ ರತ್ನಖಚಿತ ಚಿನ್ನದ ಸಿಂಹಾಸನ ಜಗತ್ತಿನಲ್ಲಿ ಬೇರೆಲ್ಲೂ ಇರಲಿಕ್ಕಿಲ್ಲ.

    ನಾಲ್ವಡಿಯವರು ಹೊಸ ಅರಮನೆಯನ್ನು 1912ರಲ್ಲಿ ನಿರ್ವಿುಸಿದರು. ಈ ಅತ್ಯಮೂಲ್ಯ ರಾಜ ಸಿಂಹಾಸನಕ್ಕೆ ಒಪು್ಪವಂಥ ಅಂಬಾವಿಲಾಸ ಸಭಾಂಗಣ ಅನಾವರಣಗೊಂಡಿತು. ಕಲಾವಿದ ವೆಂಕಟಪ್ಪ ತಮ್ಮ ಕಲಾಪ್ರತಿಭೆಯನ್ನೇ ಧಾರೆ ಎರೆದು ಸಭಾಂಗಣವನ್ನು ವಿನ್ಯಾಸಗೊಳಿಸಿದರು.

    ಮೈಸೂರು ದಸರಾ ವೈಭವ ನಾಲ್ವಡಿಯವರ ಕಾಲದಲ್ಲಿ ಪರಾಕಾಷ್ಠೆ ತಲುಪಿತು. ಮೈಸೂರು ದಸರಾ ವಿಶ್ವ ವಿಖ್ಯಾತವಾಯಿತು.

    ಆಚರಣೆಗಳ ರೀತಿ: ದಸರಾ, ದಶಹರ ಎಂಬುದು ಹತ್ತು ದಿನ ನಡೆಯುವ ಹಬ್ಬದ ಉತ್ಸವ. ಮೊದಲ ದಿನ ಬೆಳಗ್ಗೆ ಮಹಾರಾಜರು ಅರಮನೆ ಮುಂಭಾಗದ ಮೊಗಸಾಲೆಯಲ್ಲಿ ರತ್ನ ಸಿಂಹಾಸನವನ್ನು ಅಲಂಕರಿಸಿ ರಾಜದರ್ಬಾರನ್ನು ನಡೆಸುತ್ತಿದ್ದರು. ರಾಜಪ್ರಮುಖರು, ಸಾಮಂತರ ಸಮ್ಮುಖದಲ್ಲಿ ಇದು ನಡೆಯುತ್ತಿತ್ತು. ರಾಜರ ಗೌರವಾರ್ಥ ಫಿರಂಗಿಗಳ ಇಪ್ಪತ್ತೊಂದು ಕುಶಾಲು ತೋಪುಗಳು ಹಾರುತ್ತಿದ್ದವು. ಬ್ರಿಟಿಷ್ ಸರ್ಕಾರ ಈ ಇಪ್ಪತ್ತೊಂದು ಕುಶಾಲು ತೋಪುಗಳ ಗೌರವಾರ್ಪಣೆಗೆ ಅನುಮತಿಸಿತ್ತು. ಇದು ಅತ್ಯುನ್ನತವಾದ ಗೌರವ. ರಾಷ್ಟ್ರಪತಿಗಳಿಗೆ ಕೊಡುವ ತೋಪಿನ ಸಂಖ್ಯೆ ಸಹ ಇಪ್ಪತ್ತೊಂದೇ.

    ಅರಮನೆ ಆವರಣದಲ್ಲಿ ಸೈನಿಕರ ಪದಾತಿದಳ, ಅಶ್ವಾರೋಹಿದಳ, ಅಂಗರಕ್ಷಕರು, ಕಂದಾಚಾರಿ(ಪೊಲೀಸ್) ದಳಗಳ ಸೈನ್ಯ ಕವಾಯತು ನಡೆಯುತ್ತಿತ್ತು. ಪ್ಯಾಲೇಸ್ ಬ್ಯಾಂಡ್​ನವರು ಮಿಲಿಟರಿ ಹೆಜ್ಜೆನಾದ ನುಡಿಸುತ್ತಿದ್ದರು. ಸಭಾಸದರು ಹುದ್ದೆಗಳಿಗೆ ಅನುಗುಣವಾಗಿ ನಜರ್ ಗೌರವ ಒಪ್ಪಿಸುತ್ತಿದ್ದರು. ಇಡೀ ದರ್ಬಾರ್ ಅಪೂರ್ವ ಶಿಸ್ತಿನಿಂದ ನಡೆಯುತ್ತಿತ್ತು. ಮಲ್ಲಯುದ್ಧ, ನೃತ್ಯಗಳು ನಡೆದ ಮೇಲೆ ಅರಮನೆಯ ಮುತೆôದೆಯರು ಅರಸನಿಗೆ ಪೂಜಾಗೌರವ ಸಲ್ಲಿಸುತ್ತಿದ್ದರು.

    ಅಲ್ಲಿಗೆ ದರ್ಬಾರ್ ಮುಗಿಯುತ್ತಿತ್ತು. ಪ್ರತಿ ಸಂಜೆಯೂ ಒಂಬತ್ತು ದಿನಗಳ ಕಾಲ ಸಂಗೀತ ನೃತ್ಯಗಳು, ಐರೋಪ್ಯ ಕಲಾ ಪ್ರದರ್ಶನಗಳೂ ನಡೆಯುತ್ತಿದ್ದವು. ಆ ದಿನಗಳಲ್ಲಿ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಝುಗಮಗಿಸುತ್ತಿತ್ತು. ಬೀದಿ ಲಾಂದ್ರದ ಮಿಣುಕು ಬೆಳಕೂ ಅಪರೂಪವಾಗಿದ್ದ ಆ ದಿನಗಳಲ್ಲಿ, ನಿತ್ಯವೂ ಕಡುಗತ್ತಲೆಯೇ ಅಭ್ಯಾಸವಾಗಿದ್ದ ಆಗಿನ ಜನರ ಕಣ್ಣಿಗೆ ಈ ವೈಭವ ಹೇಗೆ ಕಾಣಿಸಿದ್ದಿರಬಹುದು? ಈಗಲೂ ಈ ದರ್ಬಾರ್ ಸಂಪ್ರದಾಯವನ್ನು ಮಾರ್ಪಾಡುಗಳೊಂದಿಗೆ ನಡೆಸಿಕೊಂಡು ಬರಲಾಗುತ್ತಿದೆ. ಮಹಾರಾಜರು ನಡೆಸುತ್ತಿದ್ದ ರಾಜದರ್ಬಾರನ್ನು ಅರಮನೆ ಒಳಗಡೆ, ರಾಜವಂಶಸ್ಥರಾದ ಯದುವೀರ್ ಕೃಷ್ಣ ದತ್ತ ನರಸಿಂಹರಾಜ ಒಡೆಯರ್ ‘ಖಾಸಗಿ ದರ್ಬಾರ್’ ನಡೆಸುತ್ತಾರೆ.

    ಅರಮನೆಯ ಹೊರ ಆವರಣದಲ್ಲಿ ರಾಷ್ಟ್ರದ ಶ್ರೇಷ್ಠ ಸಂಗೀತ ವಿದ್ವಾಂಸರಿಂದ ಸಂಗೀತ ಕಾರ್ಯಕ್ರಮಗಳು ಪ್ರತಿದಿನ ನಡೆಯುತ್ತವೆ. ಅದಕ್ಕೆ ಮುನ್ನ ನಾಡಿನ ವಿವಿಧ ಭಾಗಗಳ ಜಾನಪದ ನೃತ್ಯ ಸಂಗೀತಗಳು, 650 ಜನರ ಪೊಲೀಸ್ ವಾದ್ಯಮೇಳ ನಡೆಯುತ್ತವೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದ ಪೊಲೀಸ್ ವಾದಕರು ಕರ್ನಾಟಕ ಮತ್ತು ಐರೋಪ್ಯ ಶಾಸ್ತ್ರೀಯ ಸಂಗೀತದ ಉತ್ಕ ೃ್ಟ ಕೃತಿಗಳನ್ನು ಪರೇಡ್ ಮಾಡುತ್ತಾ ನುಡಿಸುತ್ತಾರೆ.

    ದಸರಾ ಆಚರಣೆ ನಾಡಹಬ್ಬವಾಗಿ ಬದಲಾದ ಮೇಲೆ ಎಲ್ಲ ಬಗೆಯ ಕಲೆ, ಸಾಹಿತ್ಯ, ನೃತ್ಯ, ಕ್ರೀಡೆಗಳಿಗೂ ಹೊಸ ಬಗೆಯ ಆಯಾಮ ಸಿಕ್ಕಿದೆ. ಅರಮನೆಗೆ ಸೀಮಿತವಾಗಿದ್ದ ಸಂಗೀತೋತ್ಸವ ಹಲವಾರು ಕಲಾಮಂದಿರಗಳಿಗೆ ವಿಸ್ತರಿಸಿದೆ. ಮೈಸೂರಿನ ನಾನಾಭಾಗಗಳಲ್ಲಿ ನಡೆಯುವ ಹಲವು ಬಗೆಯ ಕಾರ್ಯಕ್ರಮಗಳಲ್ಲಿ ದಸರಾ ಕ್ರೀಡಾಕೂಟ, ಕುಸ್ತಿಪಂದ್ಯ, ಫಲಪುಷ್ಪ ಪ್ರದರ್ಶನ, ಬಹುಭಾಷಾ ಕವಿಗೋಷ್ಠಿ, ಚಲನಚಿತ್ರೋತ್ಸವ, ಯುವ ದಸರಾ, ರೈತ ದಸರಾ, ಮಹಿಳಾ ದಸರಾ, ಯೋಗ ದಸರಾ… ಒಂದೇ ಎರಡೇ? ಎಲ್ಲ ಬಗೆಯ ಕಲಾ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗಿದೆ.

    ಹತ್ತನೇ ದಿನವೇ ವಿಜಯದಶಮಿ ಉತ್ಸವ. ದಸರೆ ಅಂದರೆ ರಾಜರ ದರ್ಪ ದೌಲತ್ತು, ಆಡಂಬರ ಮೆರೆಸುವ ಜಂಬೂಸವಾರಿ ಮೆರವಣಿಗೆ ಎಂಬ ತಪು್ಪಕಲ್ಪನೆ ಅನೇಕರಲ್ಲಿದೆ. ಒಂಬತ್ತು ದಿನಗಳ ಪೂಜಾವಿಧಿಗಳೆಲ್ಲವೂ ಮುಗಿದ ಮೇಲೆ, ರಾಜರು ಕೊನೆಭಾಗವಾಗಿ ಮೆರವಣಿಗೆ ಹೊರಡುತ್ತಿದ್ದುದು ಒಂದು ಪರಿಪಾಠ ಅಷ್ಟೇ. ರಾಜ್ಯಕ್ಕೆ ರಕ್ಷಣೆ, ಜನತೆಗೆ ಸುಭಿಕ್ಷವನ್ನು ಕೋರಿ, ಅಂತಿಮವಾಗಿ ಪೂಜೆ ಸಲ್ಲಿಸುವುದು ಪಟ್ಟದ ಕತ್ತಿಗೆ ಮಾತ್ರ. ಅರಮನೆಯ ವಿಶಾಲವಾದ ಸೌಂದರ್ಯ ತೊಟ್ಟಿಯಲ್ಲಿ, ಚಿನ್ನದ ಮಣೆಯ ಮೇಲೆ ಪಟ್ಟದ ಕತ್ತಿಯನ್ನಿರಿಸಿ ಪೂಜೆ ಸಲ್ಲಿಸುತ್ತಾರೆ. ನಂದಿಧ್ವಜ ಪೂಜೆ ನೆರವೇರಿಸಿದ ಮಹಾರಾಜರು ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ಕುಳಿತು ಸಕಲ ಸೈನ್ಯದ ಪದಾತಿ ದಳದೊಂದಿಗೆ ಬನ್ನಿಮಂಟಪ ಸೇರುತ್ತಿದ್ದರು. ನೌಪತ್ ಮತ್ತು ನಿಶಾನೆ ಆನೆಗಳು ಮುಂಚೂಣಿಯಲ್ಲಿ ಸಾಗುತ್ತಿದ್ದವು. ಅರಮನೆಯ ಮಂಗಳಕರ ನಿಶಾನೆಗಳಾದ ಪಟ್ಟದ ಕತ್ತಿ, ಪಟ್ಟದ ಕುದುರೆ, ಪಟ್ಟದಾನೆ, ಚಿನ್ನದ ಪಲ್ಲಕ್ಕಿ, ಬೆಳ್ಳಿಯ ಸಾರೋಟು, ಆನೆಗಾಡಿ ಮೆರವಣಿಗೆಯಲ್ಲಿ ಸಾಗುತ್ತಿದ್ದವು. ಬನ್ನಿ ಮರದ ಎಲೆಗಳನ್ನು ಹಂಚುತ್ತಿದ್ದರು. ಇದರಿಂದ ನಾಡಿನ ಜನತೆಗೆ ಶುಭವಾಗುತ್ತದೆ ಎಂಬ ಭದ್ರ ನಂಬಿಕೆ.

    ದಸರಾ ಮೆರವಣಿಗೆಯ ಮುಖ್ಯ ಆಕರ್ಷಣೆ ಜಂಬೂಸವಾರಿ. ಮಹಾರಾಜರು ಆನೆಯ ಮೇಲಿಟ್ಟ ಚಿನ್ನದ ಅಂಬಾರಿಯಲ್ಲಿ ಕುಳಿತು ಮೆರವಣಿಗೆ ಹೋಗುತ್ತಿದ್ದುದು ಕಣ್ಣಿಗೊಂದು ಹಬ್ಬವಾಗಿತ್ತು. ‘ರಾಜಾ ಪ್ರತ್ಯಕ್ಷ ದೇವತಾ’ ಎಂದು ಅಕ್ಷರಶಃ ನಂಬಿದ್ದ ಜನತೆ ಸಂಭ್ರಮ ಪಡುತ್ತಿದ್ದರು. ಬನ್ನಿ ಮಂಟಪದ ಮೈದಾನದಲ್ಲಿ ಸಕಲ ಸೈನ್ಯದ ಕವಾಯತು, ಬ್ಯಾಂಡ್ ವಾದ್ಯಗೋಷ್ಠಿ, ನೃತ್ಯ ನಡೆಯತ್ತಿದ್ದವು. ಕಂದೀಲುಗಳ ದೀವಟಿಗೆ ಬೆಳಕಿನಲ್ಲಿ ಈ ಕವಾಯತು ಸಾಹಸ ಪ್ರದರ್ಶನಗಳು ನಡೆಯುತ್ತಿದ್ದುದರಿಂದ ಇದಕ್ಕೆ ‘ಟಾರ್ಚ್ ಲೈಟ್ ಪರೇಡ್’ ಎಂಬ ಹೆಸರು. ಮಹಾರಾಜರು ಸಕಲ ಪದಾತಿ ದಳದೊಡನೆ ಮರು ಮೆರವಣಿಗೆಯಲ್ಲಿ ಅರಮನೆ ಸೇರುತ್ತಿದ್ದರು.

    ಅರಸೊತ್ತಿಗೆಯ ಕಾಲ ಮುಗಿಯಿತು. ಜನಸರ್ಕಾರದ ದಸರಾ ಆರಂಭವಾಯಿತು. ದಸರೆಯ ಪ್ರಮುಖ ಆಕರ್ಷಣೆಯೇ ಆನೆಯ ಮೇಲೆ ಸಾಗುವ ಚಿನ್ನದ ಅಂಬಾರಿ. ಮಹಾರಾಜರ ಬದಲಿಗೆ ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಪುತ್ಥಳಿಯನ್ನು ಮೆರವಣಿಗೆಯಲ್ಲಿ ಕರೆದೊಯ್ಯುವ ಪರಿಪಾಠ ಶುರುವಾಯಿತು. ಹಿಂದಿನ ಪರಂಪರೆಯ ವೈಶಿಷ್ಟ್ಯಗಳನ್ನೂ ಉಳಿಸಿಕೊಂಡು, ಜೊತೆಗೆ ನಾಡಿನ ಎಲ್ಲ ಭಾಗಗಳ ಜಾನಪದ ಕಲಾಪ್ರಕಾರಗಳನ್ನೂ ಮೆರವಣಿಗೆಗೆ ಸೇರ್ಪಡೆ ಮಾಡಿದರು. ನಾಡಿನ ಕಲೆ-ಸಂಸ್ಕೃತಿ ಪರಂಪರೆ ಬಿಂಬಿಸುವ ಪ್ರತಿಯೊಂದು ಜಿಲ್ಲೆಯ ಸ್ತಬ್ಧಚಿತ್ರಗಳೂ ಸೇರಿಕೊಂಡವು. ವಿವಿಧ ಶಾಲಾತಂಡಗಳು, ಪೊಲೀಸ್ ದಳಗಳೂ ಸೇರಿ ನಾನಾ ಇಲಾಖೆಗಳ ಸೇವಾತಂಡಗಳ ಕವಾಯತು ತುಕಡಿಗಳು, ಅಶ್ವಾರೋಹಿ ದಳಗಳು ಸೇರ್ಪಡೆಗೊಳಿಸಿದರು. ನಾಡಪರಂಪರೆ ಮತ್ತು ಸಂಸ್ಕೃತಿ ಬಿಂಬಿಸುವ 150 ತಂಡಗಳ ಮೆರವಣಿಗೆಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅಲ್ಲದೆ ಕರ್ನಾಟಕದ ವಿವಿಧ ಸ್ಥಳಗಳ ಪ್ರಾಮುಖ್ಯತೆ ಹೇಳುವ ನಮ್ಮ ಸಾಂಸ್ಕೃತಿಕ ಪರಂಪರೆಯ ವಿಶಿಷ್ಟ ಸೊಬಗನ್ನು ಸಾರುವ ಸ್ತಬ್ಧಚಿತ್ರಗಳು ಒಂದಕ್ಕಿಂತ ಮತ್ತೊಂದು ಭಿನ್ನ. ವೈವಿಧ್ಯಮಯ.

    ಸಂತಸದ ಸಂಗತಿ ಎಂದರೆ ದಸರಾ ಮೂಲೋದ್ದೇಶದ ಚೌಕಟ್ಟು ಚಡಪಡಿಸಿಲ್ಲ. ವಿಚಲಿತವೂ ಆಗಿಲ್ಲ. ಪರಂಪರೆಯ ಎಲ್ಲ ಒಳಿತನ್ನೂ ಉಳಿಸಿಕೊಂಡು, ಮಿಕ್ಕಿದ್ದನ್ನು ಆಧುನಿಕತೆಗೆ ಅಳವಡಿಸಿಕೊಂಡು ಮತ್ತು ನವೀನವಾದದ್ದನ್ನು ಸೇರಿಸಿಕೊಳ್ಳುತ್ತ ದಸರಾ ವಿಕಸನಗೊಳ್ಳುತ್ತಲೇ ಇದೆ. ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲ ನಾವೀನ್ಯತೆಯನ್ನು ಅಳವಡಿಸಿಕೊಂಡು ಕನ್ನಡಿಗರೆಲ್ಲರ ಹೆಮ್ಮೆಯ ನಾಡಹಬ್ಬವಾಗಿದೆ. ಕರ್ನಾಟಕ ನೆಲದ ಮಹಾಮಾತೆ ಎಂದು ಗುರ್ತಿಸಲಾಗಿರುವ ಶ್ರೀ ಚಾಮುಂಡೇಶ್ವರಿ ಮಾತೃಸ್ವರೂಪಳಾಗಿ ಅಂಬಾರಿಯಲ್ಲಿ ಹರಸುತ್ತ ಸಾಗಿ ಹೋಗುತ್ತಾಳೆ.

    ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಂದರೆ ಯಾವುದೋ ಧರ್ಮಕ್ಕೆ, ಕೋಮಿಗೆ ಸೇರಿದ ದೇವರಲ್ಲ. ಆಕೆ ಕನ್ನಡಿಗರೆಲ್ಲರ ಏಕಶಕ್ತಿಯ ಪ್ರತೀಕ. ಚಾಮುಂಡೇಶ್ವರಿಯೇ, ಕನ್ನಡ ನೆಲದ ಮಹಾಮಾತೆ ಎಂದು ಗುರುತಿಸಲಾಗಿರುವ ಕರ್ನಾಟಕದ ರಾಜ ರಾಜೇಶ್ವರಿ ಶ್ರೀ ಭುವನೇಶ್ವರಿ.

    ಕರ್ನಾಟಕ ಹೇಗಿದೆ ಎಂಬುದನ್ನು ಭೂಪಟದಲ್ಲಿ ನೋಡುತ್ತೇವಲ್ಲ? ಅದರ ಮಾನವ ಸ್ವರೂಪವೇ ಚಾಮುಂಡೇಶ್ವರಿ ಪುತ್ಥಳಿ. ನಾಡಹಬ್ಬ ದಸರಾದಲ್ಲಿ ಸರ್ವಜನರ ಒಗ್ಗಟ್ಟಿನ ಪ್ರತೀಕವಾಗಿ ಹರಸುತ್ತ ಸಾಗುತ್ತಾಳೆ. ದಸರಾ ಹಬ್ಬ ಭಾರತದಾದ್ಯಂತ ನಾನಾ ರೂಪಗಳಲ್ಲಿ ಆಚರಿಸಲ್ಪಡುತ್ತದೆ. ಒಂಬತ್ತು ರಾತ್ರಿಗಳ ನಂತರ ಹತ್ತನೇ ದಿನ ಆಚರಿಸುವ ವಿಜಯದಶಮಿ ಹಬ್ಬ ದುಷ್ಟಮರ್ದನ-ಶಿಷ್ಟರಕ್ಷಣೆಯ ಸಂಕೇತ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಕಿಸಾನ್ ಸೂರ್ಯೋದಯ ಲೋಕಾರ್ಪಣೆಗೊಳಿಸಿದ್ರು ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts