More

    ಅರಮನೆ ಅಂಗಳದಲ್ಲಿ ಮೂಟೆ ಹೊತ್ತು ಅಭಿಮನ್ಯು ತಾಲೀಮು

    | ಅವಿನಾಶ್ ಜೈನಹಳ್ಳಿ ಮೈಸೂರು
    ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಮರದ ಅಂಬಾರಿ ಹೊರಿಸುವ ತಾಲೀಮಿಗೆ ಭಾನುವಾರ ಚಾಲನೆ ದೊರೆಯಿತು. ಮೊದಲದಿನ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿ 600 ಕೆಜಿ ತೂಕದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಿದ್ದಾನೆ. ಅಭಿಮನ್ಯು, ಗಜ ಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಹಿಂದೆ ಕಾವೇರಿ, ವಿಜಯಾ ಆನೆಗಳು ಹೆಜ್ಜೆ ಹಾಕಿದವು. ಇನ್ನು ನವರಾತ್ರಿಯ ಎರಡನೇ ದಿನ ಅರಮನೆ ಅಂಗಳದಲ್ಲಿ ರಾಜವಂಶಸ್ಥರಿಂದ ನವರಾತ್ರಿ ಪೂಜಾ ಕಾರ್ಯಕ್ರಮ ಮುಂದುವರಿಯಿತು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಿಧ ಪೂಜೆ ನಡೆಸಿದರು.

    ಮಂಗಳವಾದ್ಯದೊಂದಿಗೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ಅರಮನೆ ಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಲಾಯಿತು. ಮೆರವಣಿಗೆಯಿಂದ ಸವಾರಿ ತೊಟ್ಟಿಗೆ ಬಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.

    ಭಣಗುಟ್ಟಿದ ಪ್ರವಾಸಿ ತಾಣಗಳು: ಕರೊನಾ ಕಾರಣಕ್ಕೆ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಭಾನುವಾರವೂ ಪ್ರಮುಖ ಪ್ರವಾಸಿತಾಣಗಳು ಜನರಿಲ್ಲದೆ ಭಣಗುಟ್ಟಿದವು. ಚಾಮುಂಡಿ ಬೆಟ್ಟ, ಮೃಗಾಲಯ, ರೈಲ್ವೆ ಮ್ಯೂಸಿಯಂ ಸೇರಿ ಹಲವು ಪ್ರವಾಸಿ ತಾಣಗಳಲ್ಲಿ ನಿರ್ಬಂಧ ತೆರವಾಗಿದ್ದರೂ ನಿರೀಕ್ಷಿತ ಮಟ್ಟದ ಪ್ರವಾಸಿಗರು ಕಾಣಿಸಲಿಲ್ಲ. ಸಂಜೆಯಾಗುತ್ತಿದ್ದಂತೆ ನಗರದಲ್ಲಿ ತಿಳಿ ಬೆಳಕಿನೊಂದಿಗೆ ವಿವಿಧ ಬಣ್ಣಗಳಲ್ಲಿ ಕಂಗೊಳಿಸುವ ದೀಪಾಲಂಕಾರ ವೀಕ್ಷಿಸಲು ಸಾರ್ವಜನಿಕರು ರಸ್ತೆಗಿಳಿದಿದ್ದರಿಂದ ಕೆಲವೆಡೆ ಮಾತ್ರ ವಾಹನಗಳ ಸಂಚಾರ ದ್ವಿಗುಣವಾಗಿ, ರಸ್ತೆಗಳಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತು.

    ಈ ಬಾರಿ ಮೂರ್ನಾಲ್ಕು ದಿನಗಳ ಮೊದಲೇ ವಿದ್ಯುತ್ ದೀಪಾಲಂಕಾರ ಪೂರ್ಣಗೊಂಡಿತು. ಹೀಗಾಗಿ ಜನರು ದಸರೆಗೂ ಮುನ್ನವೇ ದೀಪಾಲಂಕಾರದ ಮುಂದೆ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಇನ್ನು ಅರಮನೆ ಅಂಗಳದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನ ಹಾಸನದ ವಿದ್ವಾನ್ ಶಶಾಂಕ್ ಸುಬ್ರಹ್ಮಣಂ ಮತ್ತು ತಂಡದಿಂದ ಪ್ರಸ್ತುತಪಡಿಸಿದ ಕೊಳಲುವಾದ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts