More

    ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಫೆ. 26ರಂದು

    ಗುತ್ತಲ: ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಮೈಲಾರ ಗ್ರಾಮದ ಮೈಲಾರ ಲಿಂಗೇಶ್ವರನ ಜಾತ್ರೆಯ ಕಾರ್ಣಿಕೋತ್ಸವ ಫೆ. 26ರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ಈ ಭವಿಷ್ಯ ವಾಣಿ ಆಲಿಸಲು ಭಕ್ತರು ಮೈಲಾರದತ್ತ ತೆರಳುತ್ತಿದ್ದಾರೆ.

    ಕಾರ್ಣಿಕದ ಗೊರವಯ್ಯ ಒಂದೇ ವಾಕ್ಯದಲ್ಲಿ ನುಡಿಯುವ ಭವಿಷ್ಯವಾಣಿಯನ್ನು ಅನೇಕರು ಅನೇಕ ರೀತಿಯಲ್ಲಿ ಅರ್ಥೈಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷದಿಂದ ಅನೇಕ ರಾಜಕೀಯ ಘಟನಾವಳಿಗೆ ಕಾರ್ಣಿದ ನುಡಿಯು ಮುನ್ಸೂಚನೆಯನ್ನು ನೀಡಿದ್ದು ಈಗ ಇತಿಹಾಸವಾಗಿದೆ.

    1900ನೇ ಇಸ್ವಿಯಿಂದ ಇಲ್ಲಿಯವರೆಗಿನ ಪ್ರತಿ ವರ್ಷದ ಭವಿಷ್ಯವಾಣಿಯನ್ನು ಸಂಗ್ರಹಿಸಲಾಗಿದ್ದು, ಪ್ರತಿ ಕಾರ್ಣಿಕದ ವಾಣಿಯೂ ನಿಜವಾಗತ್ತಲೇ ಬಂದಿರುವುದು ವಿಶೇಷ. ರಾಜಕೀಯ ಮಾತ್ರವಲ್ಲದೆ ದೇಶದಲ್ಲಿ ಮಳೆ, ಬೆಳೆ, ಆರೋಗ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯಿಸುವ ಭವಿಷ್ಯವಾಣಿ ಇದಾಗಿರುತ್ತದೆ.

    ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶದ ಬಹುಜನರ ಆರಾಧ್ಯದೈವ ಶ್ರೀ ಮೈಲಾರಲಿಂಗೇಶ್ವರ. ದ್ವಾಪರ ಯುಗದಲ್ಲಿ ಋಷಿಮುನಿಗಳಿಗೆ ಮಣಿಕಾಸುರ, ಮಲ್ಲಾಸುರ ಎಂಬುವವರು ವಿವಿಧ ರೀತಿಯಲ್ಲಿ ಉಪಟಳ ಕೊಡುತ್ತಿದ್ದರು. ಇವರ ಕಾಟ ತಪ್ಪಿಸುವಂತೆ ಋಷಿಗಳು ಶಿವನಲ್ಲಿ ಭಿನ್ನವಿಸಿಕೊಂಡರು. ಶಿವನು ಮೈಲಾರಲಿಂಗೇಶ್ವರನ ರೂಪ ತಳೆದು, ಮೈಲಾರ ಗ್ರಾಮದ ಡೆಂಕಣ ಮರಡಿಯಲ್ಲಿ ಅಸುರರನ್ನು ಸಂಹರಿಸಿದ ಎಂಬ ಪ್ರತೀತಿ ಇದೆ. ಆ ಕಾರಣಕ್ಕೆ ಈ ಕ್ಷೇತ್ರ ಭಾರಿ ಪ್ರಮುಖ್ಯತೆ ಹೊಂದಿದೆ.

    ಇನ್ನೊಂದು ಕತೆ:

    ಏಳು ಕೋಟಿ ಮಂತ್ರ ಜಪಿಸಿ ಬ್ರಹ್ಮನಿಂದ ವರ ಪಡೆದು ಲೋಕ ಕಂಟಕರಾದ ಅಸುರರನ್ನು ಶಿವನು ತನ್ನ ಏಳು ಕೋಟಿ ದೇವಗಣದೊಂದಿಗೆ ಬಂದು ಸಂಹರಿಸಿದ ಕತೆ ಇದೆ. ಮೈಲಾರ ಎಂಬುದು ಅತ್ಯಂತ ಪ್ರಾಚೀನ ಹೆಸರು. ಬ್ರಹ್ಮಾಂಡ ಪುರಾಣದ 18ನೇ ಅಧ್ಯಾಯದಲ್ಲಿ ಈ ಕ್ಷೇತ್ರದ ವರ್ಣನೆ ಇದೆ. ದ್ವಾಪರಯುಗಕ್ಕೂ ಮುನ್ನವೇ ಶ್ರೀ ಮೈಲಾರಲಿಂಗೇಶ್ವರ ಇದ್ದನೆಂಬುದಕ್ಕೆ ಸಾಕಷ್ಟು ಕತೆಗಳು ಪ್ರಚಲಿತದಲ್ಲಿವೆ.

    ಅಸುರರನ್ನು ಸಂಹರಿಸಲು ಶಿವನು ಮೈಲಾರಲಿಂಗನ ವೇಷಧಾರಿಯಾಗಿ ಹನ್ನೊಂದು ದಿನಗಳ ಯುದ್ಧವನ್ನು ಗೆದ್ದ ದಿನವೇ ಕಾರ್ಣಿಕ. ಇತರ ದಿನಗಳ ಪ್ರತೀಕವಾಗಿ ಸರಪಳಿ, ಓಕಳಿ ಮತ್ತಿತರ ಕಾರ್ಯಕ್ರಮಗಳು ಜರುಗುತ್ತವೆ.

    ಭವಿಷ್ಯವಾಣಿ-ಕಾರ್ಣಿಕ:

    ಪ್ರತಿ ವರ್ಷ ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಮೈಲಾರದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಹುಣ್ಣಿಮೆಯ ಎರಡನೇ ದಿನಕ್ಕೆ ಕಾರ್ಣಿಕೋತ್ಸವ ನಡೆಯುತ್ತದೆ. ಮೈಲಾರದಲ್ಲಿರುವ ಕುಟುಂಬಕ್ಕೆ ಸೇರಿದ ಗೊರವಯ್ಯನೇ ಕಾರ್ಣಿಕ ಹೇಳುತ್ತಾರೆ. ಮೈಲಾರದ ದೇವಾಲಯದಿಂದ ಒಂದೂವರೆ ಕಿ.ಮೀ.ಗಳಷ್ಟು ದೂರದಲ್ಲಿರುವ ಡೆಂಕನ ಮರಡಿಯಲ್ಲಿಯ ಮಂದಿರದಲ್ಲಿ ಇವರು 11 ದಿನ ಉಪವಾಸ ವ್ರತ ಆಚರಿಸುತ್ತಾರೆ.

    ಕಾರ್ಣಿಕೋತ್ಸವದ ದಿನ ಸಂಜೆ ಬಿಲ್ಲನ್ನೇರಿ ಒಂದೇ ವಾಕ್ಯದ ಭವಿಷ್ಯ ನುಡಿಯುತ್ತಾರೆ. ಈ ಕಾರ್ಣಿಕ ನುಡಿ ದೇಶದ ರಾಜಕೀಯ, ಸಾಮಾಜಿಕ, ರೈತ ವರ್ಗ ಹಾಗೂ ಇತರರಿಗೆ ವರ್ಷದ ಭವಿಷ್ಯವಾಣಿಯಾಗಿರುತ್ತದೆ. ಕಾರ್ಣಿಕ ಹೇಳಿದ ನಂತರ ಬಿಲ್ಲಿನಿಲ್ಲಿಂದ ಬೀಳುವ ಗೊರವಪ್ಪನವರ ತಲೆ ಯಾವ ಕಡೆ ಇರುತ್ತದೋ ಆ ದಿಕ್ಕಿನಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂಬ ನಂಬಿಕೆ ಜನರಲ್ಲಿದೆ.

    ಜಾತ್ರೆಯ ಕೊನೇ ದಿನ ದೇವಸ್ಥಾನದ ಮುಂಭಾಗದಲ್ಲಿ ಕಂಚಿವೀರರು ಹಲವು ಪವಾಡ ಮಾಡುತ್ತಾರೆ. ಸರಪಳಿ ಪವಾಡ, ಭಗಣಿ ಗೂಟ ಪವಾಡ, ಮುಳ್ಳು ಚುಚ್ಚುವ ಪವಾಡ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts