More

    ಸಂಪಾಯಿತಲೇ ಪರಾಕ್

    ಗುತ್ತಲ: ‘ಸಂಪಾಯಿತಲೇ ಪರಾಕ್’ ಎಂದು ಸೋಮವಾರ ಸಂಜೆ ಮೈಲಾರದ ಜಾತ್ರೆಯಲ್ಲಿ ಗೊರವಪ್ಪ ರಾಮಪ್ಪಜ್ಜ ಕಾರ್ಣಿಕವನ್ನು ಹೇಳುತ್ತಿದ್ದಂತೆ ನಾನಾ ಭಾಗಗಳಿಂದ ಬಂದ ಸುಮಾರು ಲಕ್ಷಾಂತರ ಭಕ್ತರು ಹಷೋದ್ಗಾರ ವ್ಯಕ್ತಪಡಿಸಿದರು.

    ರಾಜ್ಯದಲ್ಲೇ ಪ್ರಸಿದ್ಧವಾದ ಜಾತ್ರೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಳ್ಳಾರಿ ಜಿಲ್ಲೆಯ ಶ್ರೀ ಕ್ಷೇತ್ರ ಮೈಲಾರದಲ್ಲಿ ಭರತ ಹುಣ್ಣಿಮೆಯ ನಂತರ ಪ್ರಾರಂಭವಾಗುವ ಈ ಜಾತ್ರೆಯ ಪ್ರಮುಖ ಆಕರ್ಷಣೆ ಕಾರ್ಣಿಕೋತ್ಸವ. ಇದನ್ನು ದೇಶದ ವರ್ಷದ ಭವಿಷ್ಯವಾಣಿ, ದೇವವಾಣಿ ಎಂತಲೂ ವ್ಯಾಖ್ಯಾನಿಸಲಾಗುತ್ತಿದೆ. ಸೋಮವಾರ ಸಂಜೆ ಗೊರವಪ್ಪ ರಾಮಪ್ಪಜ್ಜ ಹೇಳಿದ ಕಾರ್ಣಿಕದ ವಾಣಿಯನ್ನು ಹಲವು ರೀತಿಯಲ್ಲಿ ಅರ್ಥೈಸಲಾಗುತ್ತಿದೆ.

    ಈ ವರ್ಷದ ಕಾರ್ಣಿಕವನ್ನು ಅಲ್ಲಿದ್ದ ಬಹುತೇಕ ಭಕ್ತರು ರಾಜಕೀಯವಾಗಿ ಹೆಚ್ಚು ಅನ್ವಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ‘ಸಂಪಾಯಿತಲೇ’ ಎಂಬ ಪದವು ಅನೇಕ ಅರ್ಥಗಳನ್ನು ತಿಳಿಸುತ್ತಿದ್ದು, ಮಳೆ, ಕೃಷಿ, ವ್ಯಾಪಾರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಈ ವರ್ಷ ಉತ್ತಮವಾಗಿದ್ದು, ಉತ್ತಮ ಮಳೆ, ಬೆಳೆ, ಲಾಭದ ವ್ಯಾಪಾರ ಆಗುವುದೆಂದು ಅರ್ಥೈಯಿಸಿದ್ದಾರೆ. ರಾಜಕೀಯವಾಗಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವಾಗುವುದೆಂದು ಹಾಗೂ ಭಾರಿ ಬಹುಮತದೊಂದಿಗೆ ತಮ್ಮದೇ ಪಕ್ಷ ಅಧಿಕಾರದ ಗದ್ದುಗೆ ಏರುವುದಾಗಿ ಮಾತನಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು,

    ಕಾರ್ಣಿಕ ನುಡಿದ ಗೊರವಯ್ಯನು ನೈರುತ್ಯ ದಿಕ್ಕಿನ ಕಡೆ ತಲೆ ಮಾಡಿ ಬಿದ್ದ ಕಾರಣ ನೈರುತ್ಯ ಭಾಗದಲ್ಲಿ ಉತ್ತಮ ಮಳೆಯಯಾಗುವುದೆಂದು ಹಾಗೂ ನೈರುತ್ಯ ದಿಕ್ಕಿನಿಂದ ಬರುವ ಮುಂಗಾರು ಮಾರುತಗಳು ದೇಶಕ್ಕೆ ಮಳೆಯನ್ನು ತಂದು, ರೈತರಿಗೆ ಅನುಕೂಲವಾಗಿ ದೇಶ ಸಮೃದ್ಧಿಯತ್ತ ಸಾಗುವುದೆಂದು ಅರ್ಥೈಸುತ್ತಿದ್ದರು.

    1904, 1927ರ ವರ್ಷಗಳಲ್ಲಿ ‘ಸಂಪಲೇ ಪರಾಕ್’ ಎಂದು ಈ ಹಿಂದೆ ಕಾರ್ಣಿಕ ನುಡಿಯಲಾಗಿತ್ತು, ಪ್ರಸ್ತುತ ‘ಸಂಪಾಯಿತಲೇ ಪರಾಕ್’ ಎಂದು ಹೇಳಲಾಗಿದೆ. ಇವೆರಡೂ ಸ್ವಲ್ಪ ಹೋಲಿಕೆಯುಳ್ಳ ಕಾರ್ಣಿಕದ ವಾಣಿಯಾಗಿದೆ. 1904ರಲ್ಲಿ ಲಾಲ್ ಬಹಾದೂರ್ ಶಾಸ್ತ್ರೀ ಅವರ ಜನನವಾಗಿದ್ದು, 1927ರಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದ ಮುಖ್ಯ ಘಟ್ಟವಾಗಿ ಫೂರ್ಣ ಸ್ವರಾಜ್ ಪರಿಕಲ್ಪನೆಯ ಹೋರಾಟ ಆರಂಭವಾಗಿದ್ದು 1927ರಲ್ಲಿ ಎಂಬುದನ್ನು ಸ್ಮರಿಸಬಹುದು.

    ಕಾರ್ಣಿಕ ವೀಕ್ಷಿಸಲು ಕನಕ ಗುರುಪೀಠದ ನಿರಂಜನಾಂದಪುರಿ ಸ್ವಾಮೀಜಿ, ಹೊಳಲ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಶಾಸಕ ಕೃಷ್ಣಾ ನಾಯಕ, ಉದ್ಯಮಿ ಆನಂದ ಗಡ್ಡದ್ದೇವರಮಠ, ಭರತ ನಾಯಕ್, ಐಜಿಪಿ ಲೋಕೇಶ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಎಸ್ಪಿ ಶ್ರೀಹರಿ ಬಾಬು, ಜಿಪಂ ಸಿಇಒ ಸದಾಶಿವ ಪ್ರಭು, ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ಕೃಷ್ಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts