ಅಂಬಲಿ ಹಳಸೀತು ಕಂಬಳಿ ಬೀಸೀತಲೇ ಪರಾಕ್! ನಿಜವಾಯಿತು ಮೈಲಾರಲಿಂಗನ ಭವಿಷ್ಯವಾಣಿ

Mylaralinga Bhavisyavani
Published on

ಹಾವೇರಿ: ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತಂತೆ ಐತಿಹಾಸಿಕ ಮೈಲಾರಲಿಂಗೇಶ್ವರ ನುಡಿದಿದ್ದ ಭವಿಷ್ಯವಾಣಿಯು ಇಂದು ನಿಜವಾಗಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಕಾರ್ಣಿಕೋತ್ಸವ ಜರುಗಿತ್ತು. 14 ಅಡಿ ಎತ್ತರದ ಬಿಲ್ಲನ್ನೇರಿ ವರ್ಷದ ಕಾರ್ಣಿಕ ಭವಿಷ್ಯವನ್ನು ಗೊರವಯ್ಯ ರಾಮಪ್ಪ ನುಡಿದಿದ್ದರು.

ಕಾರ್ಣಿಕ ನುಡಿ ಏನು?

ಅಂಬಲಿ ಹಳಸೀತು ಕಂಬಳಿ ಬೀಸೀತಲೇ ಪರಾಕ್ ಎನ್ನುವ ಭವಿಷ್ಯವಾಣಿಯನ್ನು ಗೊರವಯ್ಯ ರಾಮಪ್ಪ ನುಡಿದಿದ್ದರು. ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನು ಆಳುತ್ತಾನೆ ಎಂದು ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಲಾಗಿತ್ತು.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಪಟ್ಟ ಎಂದು ಹೇಳಲಾಗಿತ್ತು. ಪರೋಕ್ಷವಾಗಿ ಕುರಬ ಸಮುದಾಯದ ವ್ಯಕ್ತಿಯೇ ರಾಜ್ಯವನ್ನಾಳುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಆ ಭವಿಷ್ಯ ನಿಜವಾಗುತ್ತಿದೆ ಎಂದು ಹೇಳಲಾಗಿದೆ. ಎಲ್ಲ ಪಕ್ಷಗಳಲ್ಲಿ ಕಾರ್ಣಿಕ ನುಡಿಯು ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

ನಿನ್ನೆ (ಮೇ 13) ಹೊರಬಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್​ 135 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 66 ಸ್ಥಾನಗಳನ್ನು ಗಳಿಸಿದರೆ, ಜೆಡಿಎಸ್​ ಕೇವಲ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net