More

    ಪಾವಗಡದಲ್ಲಿ ಮಟ್ಕಾ ದಂಧೆಗೆ ಬಿದ್ದಿಲ್ಲ ಬ್ರೇಕ್!

    ಪಾವಗಡ : ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಕರೊನಾ ವೈರಸ್‌ಗಿಂತ ಪಾವಗಡ ತಾಲೂಕಿನಾದ್ಯಂತ ಬೇರುಬಿಟ್ಟಿರುವ ಮಟ್ಕಾ ಹಾಗೂ ಜೂಜಾಟ ಅತ್ಯಂತ ಭೀಕರವೆನಿಸಿದೆ.

    30 ವರ್ಷಗಳಿಂದ ಪ್ರತಿ ಹಳ್ಳಿಗೂ ಮಟ್ಕಾ ವೈರಸ್ ಹಬ್ಬಿದೆ. ಮಟ್ಕಾ, ಜೂಜಾಟ ದಂಧೆ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಶ್ರಮ ವ್ಯರ್ಥವೆನಿಸಿದೆ.  ಬರಪೀಡಿತ ತಾಲೂಕೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪಾವಗಡದಲ್ಲಿ ಕುಡಿಯಲು ಯೋಗ್ಯವಾದ ನೀರಿಲ್ಲ. ಮಟ್ಕಾ, ಜೂಜು, ಅಕ್ರಮ ಮದ್ಯ ಮಾರಾಟ ಮಾತ್ರ ಎಗ್ಗಿಲ್ಲದೆ ಸಾಗಿದೆ.

    ಈ ವ್ಯಸನಗಳಿಗೆ ತುತ್ತಾಗಿರುವವರಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು. ದಿನವಿಡೀ ದುಡಿದ ಹಣ ದಂಧೆಯ ಪಾಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಈವರೆಗೆ ಸಾಧ್ಯವಾಗಿಲ್ಲ. ಸಾಮಾಜಿಕ ಪಿಡುಗಾಗಿರುವ ಮಟ್ಕಾ, ಜೂಜಾಟ ವಿರುದ್ಧ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದರೂ ಕಡಿವಾಣ ಬಿದ್ದಿಲ್ಲ. ಪಾವಗಡದ ದಂಧೆಕೋರರು ಜಾಲವನ್ನು ಆಂಧ್ರಪ್ರದೇಶಕ್ಕೂ ವಿಸ್ತರಿಸಿದ್ದಾರೆ. ಸೀಮಾಂಧ್ರದ ಮಡಕಶಿರಾ, ರೊದ್ದಂ, ಕಂಬದೂರು, ಪೆನುಕೊಂಡ, ಅಮರಾಪುರ, ಹಿಂದೂಪುರ, ಕಲ್ಯಾಣದುರ್ಗದ ಪೊಲೀಸ್ ತಂಡ ಪಾವಗಡ ಪಟ್ಟಣದಲ್ಲಿನ ಮಟ್ಕಾ ದಂಧೆಕೋರರ ಮನೆಗಳ ಮೇಲೆ ದಾಳಿಗಳನ್ನೂ ಮಾಡಿದೆ. ಪ್ರಭಾವಿಗಳ ಹಾಗೂ ಕೆಲವು ಪೊಲೀಸರ ಕೃಪಾಕಟಾಕ್ಷ ದಂಧೆಕೋರರ ಮೇಲಿದೆ.

    ಸಾಮಾಜಿಕ ಜಾಲತಾಣದಲ್ಲಿ ಆಂದೋಲನ: ಪಾವಗಡ, ಅರಸೀಕೆರೆ, ವೈ.ಎನ್.ಹೊಸಕೋಟೆ, ತಿರುಮಣಿ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಹಾಗೂ ಇಸ್ಪೀಟ್ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ವ್ಯಾಟ್ಸ್ಆ್ಯಪ್, ಯೂಟ್ಯೂಬ್‌ಗಳಲ್ಲಿ ದಂಧೆ ಬಗ್ಗೆ ಶೇರ್ ಮಾಡಿ ಅದರ ವಿರುದ್ಧ ಆಂದೋಲನ ನಡೆಸಲಾಗುತ್ತಿದೆ. ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಜಾಗೃತಿ ಮೂಡಿಸುತ್ತಿರುವವರ ವಿರುದ್ಧವೇ ಜೂಜುಕೋರರು
    ಧಮ್ಕಿ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

    ಪಟ್ಟಣದಲ್ಲೇ ರಾಜಾರೋಷ!: ಪಟ್ಟಣದ ಟೋಲ್‌ಗೇಟ್, ಕೆಲವು ಟೀ ಅಂಗಡಿಗಳಲ್ಲಿ, ಎಸ್.ಎಸ್.ಕೆ ವೃತ್ತದ ಹೋಟೆಲ್‌ನಲ್ಲಿ, ಹಳೇ ಬಸ್ ನಿಲ್ದಾಣದಲ್ಲಿ ಹಾಗೂ ಶಾಂತಿನಗರ, ಬೋವಿ ಕಾಲನಿ, ಬೆಟ್ಟದ ಪಕ್ಕದಲ್ಲಿರುವ ಎ.ಕೆ.ಕಾಲನಿ, ಶಿರಾ ರಸ್ತೆಯ ನಾಗರಕಟ್ಟೆ ಹೋಟೆಲ್, ರೈನ್ ಗೇಜ್ ಬಡಾವಣೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಸಮೀಪ ರಾಜಾರೋಷವಾಗಿ ದಂಧೆ ನಡೆಯುತ್ತಿದೆ.

    ಕೋಳಿ ಪಂದ್ಯ ! : ವೈ.ಎನ್.ಹೊಸಕೋಟೆ, ಅರಸಿಕೇರೆ ಠಾಣಾ ವ್ಯಾಪ್ತಿಯ ಪೊನ್ನಸಮುದ್ರ ಕೋಟಗುಡ್ಡ, ಬೂದಿಬೆಟ್ಟ, ಸೂಲನಾಯಕನಹಳ್ಳಿ, ಯರ‌್ರಮ್ಮನಹಳ್ಳಿಯ, ನೀಲಮ್ಮನಹಳ್ಳಿ, ಮಾರಮ್ಮನಹಳ್ಳಿ ಬೆಟ್ಟಗುಡ್ಡಗಳಲ್ಲಿ ಮಟ್ಕಾ ಹಾಗೂ ಇಸ್ಪೀಟ್ ಜತೆಗೆ ಭರ್ಜರಿ ಕೋಳಿ ಪಂದ್ಯಗಳನ್ನು ಹ ಆಯೋಜಿಸಲಾಗುತ್ತಿದೆ.

    ‘ಮಟ್ಕಾ-ನಿಲ್ಲಿಸಿ ಪಾವಗಡ- ಉಳಿಸಿ’ ಶೀರ್ಷಿಕೆಯಡಿ ವರ್ಷದಿಂದ ಮಟ್ಕಾ ಪಿಡುಗು ಹೊಡೆದೋಡಿಸಲು ಸಾಮಾಜಿಕ ಜಾಲತಾಣದಲ್ಲಿ ಆಂದೋಲವನ್ನೇ ಪ್ರಾರಂಭ ಮಾಡಿದ್ದರೂ, ದಂಧೆಗೆ ಕಡಿವಾಣ ಬಿದ್ದಿಲ್ಲ. ಸಂಸಾರಗಳು ಬೀದಿಪಾಲಾಗುತ್ತಿವೆ.
    ಶ್ರೀನಿವಾಸ್ ನೇಕಾರ್ ಸಾಮಾಜಿಕ ಹೋರಾಟಗಾರ

    2019ರಲ್ಲಿ 106 ಮಟ್ಕಾ, 70 ಇಸ್ಪೀಟ್, ಅಕ್ರಮ ಮದ್ಯಮಾರಾಟ 35, ಅಕ್ರಮ ಮರಳು ಸಾಗಾಟ 21 ಹಾಗೂ 2020 ಲ್ಲಿ ಕಳೆದ 3 ತಿಂಗಳ ಅವಧಿಯಲ್ಲಿ 9 ಮಟ್ಕಾ, 12 ಜೂಜು, 26 ಅಕ್ರಮ ಮದ್ಯಮಾರಾಟ, 4 ಅಕ್ರಮ ಮರಳು ಸಾಗಣೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಪೋಲೀಸ್ ಇಲಾಖೆಯಿಂದ ಮಟ್ಕಾ ಮತ್ತು ಜೂಜು ಕೋರರನ್ನು ಮಟ್ಟ ಹಾಕಲು ತೀವ್ರ ನಿಗಾ ಇಡಲಾಗಿದೆ.
    ಡಿ.ನಾಗರಾಜು ಸಿಪಿಐ, ಪಾವಗಡ ಠಾಣೆ

    ಮಟ್ಕಾ, ಜೂಜು ಅಕ್ರಮ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ನಾಚೀಕೆಗೇಡು. ಬಡ ಕೂಲಿಕಾರ್ಮಿಕರು ಅಲ್ಲದೆ, ವಿದ್ಯಾವಂತರೂ ಸಹ ದಂಧೆಗೆ ಬಲಿಯಾಗುತ್ತಿದ್ದಾರೆ, ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು.
    ಪಿ.ಕೆಂಚಮ್ಮ ಅಧ್ಯಕ್ಷೆ, ಅಕ್ಷರ ದಾಸೋಹ ನೌಕರ ಸಂಘ ಹಾಗೂ ಮಹಿಳಾ ಹೋರಾಟಗಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts