More

    ರಾಜ್ಯದಲ್ಲೂ ರೂಪಾಂತರಿ; ಬ್ರಿಟನ್​ನಿಂದ ಬಂದ ಮೂವರು ಬೆಂಗಳೂರಿಗರಿಗೆ ಸೋಂಕು ದೃಢ

    ಬೆಂಗಳೂರು: ಬ್ರಿಟನ್​ನಲ್ಲಿ ತಲ್ಲಣ ಮೂಡಿಸಿರುವ ರೂಪಾಂತರಿ ಕರೊನಾ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದೆ. ಬ್ರಿಟನ್​ನಿಂದ ಬೆಂಗಳೂರಿಗೆ ಆಗಮಿಸಿದ ಮೂವರಲ್ಲಿ ಸೋಂಕು ದೃಢಪಟ್ಟಿರುವುದಾಗಿ ಐಸಿಎಂಆರ್ ಘೋಷಿಸಿದೆ. ಇವರ ಜತೆಗೆ ಇನ್ನೂ ನಾಲ್ವರಲ್ಲಿ ಹೊಸ ಪ್ರಭೇದದ ಸೋಂಕು ಕಾಣಿಸಿಕೊಂಡಿರುವ ಶಂಕೆ ಇದ್ದು, ಇವರ ಪರೀಕ್ಷಾ ವರದಿ ಬುಧವಾರ ಬರುವ ಸಾಧ್ಯತೆ ಇದೆ.

    ರಾಜ್ಯಕ್ಕೆ ಬ್ರಿಟನ್​ನಿಂದ ಒಟ್ಟಾರೆ 2,127 ಮಂದಿ ಆಗಮಿಸಿದ್ದು, ಅವರಲ್ಲಿ 1,903 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 29 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 17 ಮಂದಿ ಬೆಂಗಳೂರಿನವರಾಗಿದ್ದಾರೆ. ಈ ಸೋಂಕಿತರಲ್ಲಿ ರೂಪಾಂತರಿ ಕರೊನಾ ವೈರಸ್ ಪತ್ತೆಗಾಗಿ 15 ಮಂದಿಯ ರಕ್ತದ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಸ್ ಪರೀಕ್ಷೆಗಾಗಿ ನಿಮ್ಹಾನ್ಸ್​ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ನಾಲ್ವರ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಮೂವರಲ್ಲಿ ರೂಪಾಂತರಿ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ.

    ಅಪಾರ್ಟ್​ವೆುಂಟ್ ಸೀಲ್​ಡೌನ್: ರೂಪಾಂತರಿ ವೈರಸ್ ತಗುಲಿರುವ ತಾಯಿ-ಮಗು ವಾಸವಿರುವ ವಸಂತಪುರದ ಖಾಸಗಿ ಅಪಾರ್ಟ್​ವೆುಂಟ್​ನಲ್ಲಿ 17 ಫ್ಲ್ಯಾಟ್​ಗಳಿವೆ. ಇದರಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಇಬ್ಬರು ಹಾಗೂ 35 ಮಂದಿ ದ್ವಿತೀಯ ಸಂಪರ್ಕಕ್ಕೆ ಒಳಗಾಗಿದ್ದಾರೆ. ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ವೃದ್ಧರನ್ನು ಅಪಾರ್ಟ್ ಮೆಂಟ್​ನಿಂದ ಓಲ್ಡ್ ಏರ್ ಪೋರ್ಟ್ ರಸ್ತೆಯ ಅಕ್ಷಯ ಆಸ್ಪತ್ರೆ ಹಾಗೂ ಈಸ್ಟ್ ಎಂಡ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಉಳಿದ ನಿವಾಸಿಗಳನ್ನು ಅಪಾರ್ಟ್​ವೆುಂಟ್​ನಲ್ಲಿಯೇ ಕ್ವಾರಂಟೈನ್ ಮಾಡಿ ಸೀಲ್​ಡೌನ್ ಮಾಡಲಾಗಿದೆ.

    ಜಿನೋಮಿಕ್ ಟೆಸ್ಟ್​ನಿಂದ ಪತ್ತೆ: ರೂಪಾಂತರಿ ಕರೊನಾ ವೈರಸ್​ನಿಂದ ಭಾರತದಲ್ಲಿ ಯಾವುದೇ ಗಂಭೀರ ಪರಿಣಾಮ ಆಗಿರುವುದು ಕಂಡುಬಂದಿಲ್ಲ. ಹಾಗಾಗಿ ಎಲ್ಲರಿಗೂ ಜಿನೋಮಿಕ್ ಪರೀಕ್ಷೆ ಅಗತ್ಯವಿಲ್ಲ. ಆದರೆ ಬ್ರಿಟನ್​ನಿಂದ ಬಂದವರಲ್ಲಿ ಸೋಂಕು ಪತ್ತೆ ಆಗಿರುವುದರಿಂದ ಅವರ ಸಂಪರ್ಕಕ್ಕೆ ಬಂದವ (ಔಟ್​ಬ್ರೇಕ್ ಆಗಿರುವ ಪ್ರದೇಶಗಳಲ್ಲಿ)ರಿಗೆ ಜಿನೋಮಿಕ್ ಪರೀಕ್ಷೆ ನಡೆಸಿ ರೂಪಾಂತರಿ ವೈರಸ್ ಸಮುದಾಯಕ್ಕೆ ಹರಡಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕಿದೆ. ಆರ್​ಟಿಪಿಸಿಆರ್​ನಲ್ಲಿ ವೈರಸ್ ಇರುವುದು ಪತ್ತೆ ಆಗುತ್ತದೆ. ಅದೇ ಜಿನೋಮಿಕ್ ಸೀಕ್ವೆನ್ಸಿಸ್ ಪರೀಕ್ಷೆಯಲ್ಲಿ ವೈರಸ್ ಯಾವ ತಳಿ ಎಂಬುದನ್ನು ತಿಳಿದುಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ ಎನ್ನುತ್ತಾರೆ ವೈರಾಣು ತಜ್ಞ ಡಾ. ಗಿರಿಧರ್​ ಬಾಬು.

    ಬ್ರಿಟನ್​ನಿಂದ ಬಂದವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ 15 ಮಂದಿಯ ಮಾದರಿಯನ್ನು ಜಿನೋಮಿಕ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೂವರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇನ್ನೂ 11 ಮಂದಿಯ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಬುಧವಾರ ವರದಿ ಬರುವ ಸಾಧ್ಯತೆ ಇದೆ.

    | ಡಾ. ವಿ.ರವಿ ವೈರಾಣುತಜ್ಞ, ನಿಮ್ಹಾನ್ಸ್

    ವಿಕ್ಟೋರಿಯಾದಲ್ಲಿ ಚಿಕಿತ್ಸೆ: ಡಿ.1ರಿಂದ ಡಿ.21ರ ಅವಧಿಯಲ್ಲಿ ರಾಜಧಾನಿಗೆ ಬ್ರಿಟನ್​ನಿಂದ ಒಟ್ಟು 1,594 ಮಂದಿ ವಾಪಸ್ ಬಂದಿದ್ದಾರೆ. ‘ರೂಪಾಂತರಿ ಕರೊನಾ ವೈರಸ್’ ಪತ್ತೆಯಾಗಿರುವ ತಾಯಿ, ಮಗಳು ಹಾಗೂ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಯ ವಿಶೇಷ ವಾರ್ಡ್​ನಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    48 ಗಂಟೆ ಗಡುವು: ಬ್ರಿಟನ್​ನಿಂದ ಬಂದ ಪ್ರಯಾಣಿಕರಲ್ಲಿ 212 ಮಂದಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ, ಪ್ರಯಾಣಿಕರ ಮೊಬೈಲ್ ಸಂಖ್ಯೆ, ವಿಳಾಸವನ್ನು ಪೊಲೀಸ್ ಇಲಾಖೆಗೆ ನೀಡಿ ಹುಡುಕಿ ಕೊಡುವಂತೆ ಬಿಬಿಎಂಪಿ ಮನವಿ ಮಾಡಿದೆ. ಪೊಲೀಸ್ ಇಲಾಖೆಯಿಂದ ಮುಂದಿನ 48 ಗಂಟೆ ಒಳಗಾಗಿ ಸಂಪರ್ಕಕ್ಕೆ ಸಿಗದ ಪ್ರಯಾಣಿಕರನ್ನು ಪತ್ತೆ ಮಾಡುವುದಾಗಿ ಭರವಸೆ ನೀಡಲಾಗಿದೆ. ಒಂದು ವೇಳೆ ಸಂಪರ್ಕಕ್ಕೆ ಸಿಗದಿದ್ದಲ್ಲಿ ತಪ್ಪಿಸಿಕೊಂಡವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಪಾಲಿಕೆ ಆರೋಗ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಆಸ್ಪತ್ರೆಗೆ ಹೋಗಲು ನಕಾರ: ರೂಪಾಂತರಿ ಕರೊನಾ ದೃಢಪಟ್ಟವರು ಪತ್ತೆಯಾದ ಅಪಾರ್ಟ್​ವೆುಂಟ್​ನ ನಿವಾಸಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಪ್ರತ್ಯೇಕ ಕ್ವಾರಂಟೈನ್ ಮಾಡಲು ಮುಂದಾಗಿತ್ತು. ಆದರೆ, ಎಲ್ಲ ನಿವಾಸಿಗಳು ಪಾಲಿಕೆ ಕ್ವಾರಂಟೈನ್ ಹೋಗಲೊಪ್ಪದೆ ಮನೆಯಲ್ಲಿರುವುದಾಗಿ ಹಠ ಹಿಡಿದರು. ನಿವಾಸಿಗಳ ಒತ್ತಡಕ್ಕೆ ಮಣಿದ ಪಾಲಿಕೆ ಅಪಾರ್ಟ್​ವೆುಂಟ್​ನಲ್ಲಿ 14 ದಿನಗಳವರೆಗೆ ಕ್ವಾರಂಟೈನ್​ಗೆ ಒಳಪಡಿಸಿ, ಗೇಟ್​ಗೆ ಸೀಲ್ ಮಾಡಿದೆ. ಜತೆಗೆ, ‘ನಾವೀಗ ಗೃಹಬಂಧನದಲ್ಲಿದ್ದೇವೆ’ ಎಂಬ ಭಿತ್ತಿಪತ್ರವನ್ನು ಗೋಡೆಗೆ ಅಂಟಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ ಅಗತ್ಯ ಸಾಮಗ್ರಿ ಬೇಕಾದಲ್ಲಿ ಬಿಬಿಎಂಪಿ ವತಿಯಿಂದ ಆನ್​ಲೈನ್ ಸೇವೆ ಒದಗಿಸಲಾಗಿದೆ. ಹಣವನ್ನು ನಿವಾಸಿಗಳೇ ಪಾವತಿಸಬೇಕು.

    ವಲಯವಾರು ಸೋಂಕಿತರು

    • ಮಹದೇವಪುರ ವಲಯ 5
    • ಬೊಮ್ಮನಹಳ್ಳಿ 4
    • ಪಶ್ಚಿಮ ವಲಯ 3
    • ಪೂರ್ವ ವಲಯ 2
    • ದಾಸರಹಳ್ಳಿ ವಲಯ 1
    • ದಕ್ಷಿಣ ವಲಯ 1

    ರೂಪಾಂತರಿ ವೈರಸ್ ಕುರಿತು ಜನರಲ್ಲಿ ಇರುವ ಆತಂಕವನ್ನು ಸರ್ಕಾರ ದೂರಮಾಡಬೇಕು. ಬ್ರಿಟನ್​ನಿಂದ ಬಂದ ಮೇಲೆ ಹುಡುಕುವುದಲ್ಲ. ಬರುವ ಮೊದಲೇ ಪರೀಕ್ಷೆ ಮಾಡಬೇಕಿತ್ತು. ನಿಲ್ದಾಣದಲ್ಲಿ ಪರೀಕ್ಷಿಸಿ ಕ್ವಾರಂಟೈನ್ ಮಾಡಬೇಕಿತ್ತು.

    | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

    ಬ್ರಿಟನ್​ನಲ್ಲಿ ಕಾಣಿಸಿಕೊಂಡ ರೂಪಾಂತರಿ ಕರೊನಾ ರಾಜ್ಯದಲ್ಲಿ ಪತ್ತೆಯಾದ ಕಾರಣಕ್ಕೆ ಲಾಕ್​ಡೌನ್ ಅಥವಾ ಇಡೀ ಪ್ರದೇಶ ಸೀಲ್​ಡೌನ್ ಮಾಡುವುದು ಅನಗತ್ಯ. ಕೇಂದ್ರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು.

    | ಡಾ.ಕೆ.ಸುಧಾಕರ್ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

    ಯಾರಿಗೆ ಸೋಂಕು?: ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ವಸಂತಪುರದ ಖಾಸಗಿ ಅಪಾರ್ಟ್​ವೆುಂಟ್​ನ ತಾಯಿ-ಮಗಳು ಮತ್ತು ಜೆ.ಪಿ. ನಗರದ 33 ವರ್ಷದ ವ್ಯಕ್ತಿಯಲ್ಲಿ ‘ರೂಪಾಂತರಿ ಕರೊನಾ ವೈರಸ್’ ಪತ್ತೆಯಾಗಿದೆ.

    ಸ್ವಯಂಚಿಕಿತ್ಸೆ ಬೇಡ: ರೂಪಾಂತರಿ ಕರೊನಾ ವೈರಸ್ ಸೇರಿದಂತೆ ಯಾವುದೇ ವೈರಸ್ ಇರಲಿ ಸ್ವಯಂಚಿಕಿತ್ಸೆ ಒಳಿತಲ್ಲ. ಬಹಳಷ್ಟು ಮಂದಿ ಸ್ವಯಂಚಿಕಿತ್ಸೆಯಿಂದ ರೋಗ ಗಂಭೀರ ಹಂತಕ್ಕೆ ತಲುಪಿದಾಗ ಆಸ್ಪತ್ರೆಗೆ ಬರುತ್ತಾರೆ. ಹಾಗೆ ಮಾಡದೆ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡುತ್ತಾರೆ.

    ಚಿಕಿತ್ಸೆ ಹೇಗಿರುತ್ತದೆ?: ಬ್ರಿಟನ್​ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕರೊನಾ ವೈರಸ್​ನಿಂದ ಬರುವ ರೋಗದಲ್ಲಿ ತೀವ್ರತೆಯಿಲ್ಲ. ಇದಕ್ಕೆ ಪ್ರತ್ಯೇಕ ಚಿಕಿತ್ಸೆಯ ಅಗತ್ಯವೂ ಇಲ್ಲ. ಕರೊನಾ ಸೋಂಕಿತರಿಗೆ ನೀಡಿದ ಚಿಕಿತ್ಸೆಯನ್ನೇ ರೂಪಾಂತರಿ ವೈರಸ್ ಹೊಂದಿದವರಿಗೂ ನೀಡಲಾಗುತ್ತದೆ. ಆದರೆ, ಇದು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವ ಗುಣ ಹೊಂದಿದೆ. ಅದಕ್ಕೆ ಆತಂಕಪಡುವ ಅಗತ್ಯವಿಲ್ಲ. ಬದಲಿಗೆ ಜನರು ಜಾಗ್ರತೆಯಿಂದ ಇರಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಕೈಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ನಿಮ್ಹಾನ್ಸ್​ನ ವೈರಾಣುತಜ್ಞ ಡಾ. ವಿ. ರವಿ ತಿಳಿಸಿದ್ದಾರೆ.

    ಭಾರತದಲ್ಲಿ ಆರು ಪಾಸಿಟಿವ್

    ನವದೆಹಲಿ: ಬ್ರಿಟನ್​ನಿಂದ ಭಾರತಕ್ಕೆ ವಾಪಸಾದವರ ಪೈಕಿ ಆರು ಮಂದಿಯಲ್ಲಿ ರೂಪಾಂತರಿ ಕರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಆರು ಮಂದಿಯಲ್ಲಿ ಮೂವರು ಬೆಂಗಳೂರಿನವರು. ಉಳಿದ ಇಬ್ಬರು ಹೈದರಾಬಾದ್​ನ ಸೆಲ್ಯುಲರ್ ಅಂಡ್ ಮಾಲೆಕ್ಯುಲರ್ ಬಯಾಲಜಿ ಸಂಸ್ಥೆ ಹಾಗೂ ಒಬ್ಬರು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಎಲ್ಲ ರೋಗಿಗಳನ್ನು ‘ಏಕ ಕೊಠಡಿ ಐಸೋಲೇಶನ್’ಗೆ ಒಳಪಡಿಸಲಾಗಿದೆ. ಅವರ ಸಮೀಪ ಸಂರ್ಪತರನ್ನು ಕೂಡ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts