More

    ಅನ್ನ, ಆಹಾರದಂತೆ ಧರ್ಮ, ಧ್ಯಾನವೂ ಬೇಕು: ಸರ್ವ ಜನಾಂಗವನ್ನೂ ಒಂದೆಡೆ ಕಲೆಹಾಕುತ್ತಿರುವ ಮುರುಘಾ ಶರಣರ ಅಭಿಮತ

    ‘ಬೆಂಕಿ ನಂದಿಸುವ ಅಗ್ನಿಶಾಮಕ ದಳದಂತೆ, ಮಠಗಳು ಸಹ ಸಮಾಜದಲ್ಲಿ ಅಶಾಂತಿ, ಅವಿವೇಕಗಳನ್ನು ನಂದಿಸುವ, ತಹಬದಿಗೆ ತರುವ ಕೇಂದ್ರಗಳು’ ಎಂದು ಮಠಗಳ ಬಗ್ಗೆ ವಿಶೇಷವಾಗಿ ವ್ಯಾಖ್ಯಾನಿಸುವ ಚಿತ್ರದುರ್ಗ ಮರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಮೊದಲ ಬಾರಿಗೆ ಅಸಂಖ್ಯ ಪ್ರಮಥರ ಗಣಮೇಳ ಆಯೋಜಿಸಿದ್ದಾರೆ. ಹತ್ತಾರು ಸಮಾಜಗಳ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ತಂದು ಅವರ ಮೂಲಕ ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಸಂಕಲ್ಪಿಸುವ ಕಾರ್ಯಕ್ರಮ ರೂಪಿಸಿದ್ದಾರೆ. ಈ ಪರಿಕಲ್ಪನೆ ಬಗ್ಗೆ ಅವರು ವಿಜಯವಾಣಿಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

    | ಶ್ರೀಕಾಂತ್ ಶೇಷಾದ್ರಿ

    1. ಜಾಗತಿಕ ಶಾಂತಿಗಾಗಿ ಮತ್ತು ಪ್ರಗತಿಗಾಗಿ ಅಸಂಖ್ಯ ಪ್ರಮಥರ ಗಣಮೇಳ, ಸರ್ವ ಶರಣರ ಸಮ್ಮೇಳನ ಆಯೋಜಿಸಲಾಗಿದೆ, ಏನಿದರ ವಿಶೇಷತೆ?

    -ಆಧುನಿಕ ಜಗತ್ತು ಮತ್ತು ಜೀವನ ಸಂಕೀರ್ಣ ಸ್ಥಿತಿಯಲ್ಲಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದಾಗ ಒಂದು ಹಂತದಲ್ಲಿ ಅತಿಯಾದ ದಾಹ, ಅತಿಯಾದ ಆಸೆಯೇ ಪ್ರಮುಖವಾಗಿ ಕಾಣಿಸುತ್ತದೆ. ಕೆಲವರಿಗೆ ಜಗತ್ತನ್ನು ಆಳಬೇಕೆಂಬ ಆಸೆ ಇದ್ದರೆ ಇನ್ನೂ ಕೆಲವರಿಗೆ ವ್ಯವಸ್ಥೆ ಹಾಳು ಮಾಡಬೇಕು ಉದ್ದೇಶವಿದೆ. ಇಂತಹ ಅಸಹಾಯಕ ಸ್ಥಿತಿಯಲ್ಲಿ ಮಾನವ ದಿನವೂ ಅನ್ನ ಆಹಾರಾದಿಗಳನ್ನು ಸ್ವೀಕರಿಸುವಂತೆ ಧರ್ಮ, ಧ್ಯಾನ, ಸತ್ಸಂಗದ ಮುಖಾಂತರ ಶಾಂತಿಯನ್ನು ಸ್ವೀಕರಿಸಬೇಕು. ಶಾಂತಿ ಪಡೆಯಬೇಕು, ಸಹನೆಯನ್ನು ತನ್ನದಾಗಿ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಇವತ್ತು ಶಾಂತಿ ಮತ್ತು ಪ್ರಗತಿ ಒಂದು ಜನಾಂಗಕ್ಕೆ ಮಾತ್ರವಲ್ಲ ಸರ್ವ ಧರ್ಮಗಳಿಗೂ ಸರ್ವ ಶರಣರಿಗೂ ಅನಿವಾರ್ಯ. ಆ ದಿಸೆಯಲ್ಲಿ ನಾವು ವೈಯಕ್ತಿನ ಜೀವನದಲ್ಲಿ ಶಾಂತಿಯನ್ನು ನೆಲೆಗೊಳಿಸುತ್ತಾ ಬದುಕನ್ನು ಪ್ರಗತಿಯ ಕಡೆಗೆ ಕೊಂಡೊಯ್ಯುವುದು ಕಾರ್ಯಕ್ರಮ ಗುರಿ.

    2. ಕಾರ್ಯಕ್ರಮದ ಪರಿಕಲ್ಪನೆ ಏನು? ಯಾರೆಲ್ಲ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಲಿದ್ದಾರೆ?

    -ಜನಾಂಗಗಳ ಸಮಾವೇಶಗಳು ನಡೆಯುತ್ತಿರುತ್ತದೆ, ಆದರೆ ಇದು ಸರ್ವ ಜನಾಂಗಗಳ ಸಮಾವೇಶ. ಎಲ್ಲರನ್ನೂ ಕರೆದುಕೊಂಡು ಹೋಗಬೇಕು, ಎಲ್ಲರನ್ನೂ ಒಟ್ಟಿಗೆ ಸೇರಿಸಬೇಕೆಂಬುದೇ ಉದ್ದೇಶ. ಎಲ್ಲ ಸಮಾಜದ ಸ್ವಾಮೀಜಿಗಳು ತಂತಮ್ಮ ಸಮಾಜದವರನ್ನು ಕರೆದುಕೊಂಡುಬರುತ್ತಿದ್ದಾರೆ. ಮಾರ್ಗದರ್ಶನ ಮಾಡಲು ಎಲ್ಲ ಧರ್ಮ, ಸಮುದಾಯಗಳ ಸ್ವಾಮೀಜಿ, ಧಾರ್ವಿುಕ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ, ರಾಜಕೀಯ ನಾಯಕರು ಹಾಜರಿರುವರು.

    3. ಕಾರ್ಯಕ್ರಮದ ದಿಕ್ಸೂಚಿ ಹೇಗಿರಲಿದೆ? ಚಟುವಟಿಕೆಗಳು ಏನೇನಿರಲಿದೆ?

    ಈ ಕಾರ್ಯಕ್ರಮವನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದೇವೆ, ಮುಂಜಾನೆ ಧ್ಯಾನ ಪರಂಪರೆ ನಡೆಯುವುದು. ಅದು ಶಿವಯೋಗ ಮಾರ್ಗ. ಅದರ ಮೂಲಕ ಶಾಂತಿ ನೆಮ್ಮದಿ ನೀಡುವ ಯತ್ನ ಅಲ್ಲಿರುತ್ತದೆ. ಎರಡನೇ ಸಮಾವೇಶದಲ್ಲಿ ಸರ್ವಧರ್ಮ ನೇತಾರರು, ರಾಜಕೀಯ ನಾಯಕರು ಸಾಹಿತಿಗಳು ಭಾಗವಹಿಸುತ್ತಾರೆ. ಜಾಗತಿಕ ಶಾಂತಿ ಮತ್ತು ಪ್ರಗತಿ ಎಂಬ ನಿರ್ದಿಷ್ಟ ವಿಚಾರ ಇಟ್ಟುಕೊಂಡು ಚಿಂತನೆ ಮಾಡುತ್ತಾರೆ. ಇದರ ಜತೆ ಪ್ರಸಾದ ದಾಸೋಹ ನಡೆಯುತ್ತಿರುತ್ತದೆ. ಮಧ್ಯಾಹ್ನ 3ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ, ಅಲ್ಲಿಯೂ ಸಾಮಾಜಿಕ, ರಾಜಕೀಯ ಮುಖಂಡರು ಪಾಲ್ಗೊಳ್ಳುವರು. ವಿಜಯ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು.

    4. ಕಾರ್ಯಕ್ರಮ ವಿಚಾರ ಹೊರತಾದಂತೆ, ಎಲ್ಲೆಡೆ ಅಶಾಂತಿ ವಾತಾವರಣ ಕಾಣಿಸುತ್ತದೆ, ಸಣ್ಣಪುಟ್ಟ ವಿಚಾರಗಳು ಅಸಹಿಷ್ಣುವಾಗಿಬಿಡುತ್ತದೆ, ಇಂಥಾ ಹೊತ್ತಲ್ಲಿ ಮಠಗಳ ಮಾರ್ಗದರ್ಶನ ಎಷ್ಟು ಮುಖ್ಯವಾಗುತ್ತದೆ?

    – ಅಗ್ನಿ ಅನಾಹುತ ಸಂಭವಿಸಿದಾಗ ಕಾಪಾಡಲು ಅಗ್ನಿಶಾಮಕ ದಳಗಳು ಇರುತ್ತವೆ, ಮಠಗಳೂ ಸಹ ಸಮಾಜದಲ್ಲಿ ಅಶಾಂತಿ ಅವಿವೇಕ ಇವುಗಳನ್ನು ನಂದಿಸುವಂತ, ತಹಬದಿಗೆ ತರುವ ಕೇಂದ್ರಗಳು. ತೀವ್ರತೆ ಜಾಗದಲ್ಲಿ ತಂಪನ್ನು ಎರೆಯುವ ತಾಣಗಳು, ಸ್ಥಾನಗಳು. ಸಮಾಜದಲ್ಲಿ ಗಂಭೀರ, ಗಹನ ವಿಚಾರಗಳಿಗೆ ಸಂಘರ್ಷ ನಡೆಯುವುದು ಬಹಳ ವಿರಳ. ಅಂಥ ಒಂದು ಸಾಮಾಜಿಕ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಸಂಘರ್ಷ ಏರ್ಪಡುವುದಾದರೆ ಅದು ಸ್ವಾಗತಾರ್ಹ. ಅಂಥ ಒಂದು ಬದ್ಧತೆಯ, ತಳಹದಿಯ ಮೇಲೆ ಸಂಘರ್ಷ ನಡೆಯುತ್ತಿಲ್ಲ.

    5. ಹಕ್ಕೊತ್ತಾಯ, ನಿರ್ಣಯಗಳು ಇಲ್ಲಿ ಹೊರ ಬರುತ್ತವೆಯೇ? ಸಂಕಲ್ಪಗಳನ್ನು ತೊಡಲಾಗುತ್ತದೆಯೇ? ಮುಂದೇನು?

    -ನಾವೊಂದು 8-10 ಸಂಗತಿಗಳನ್ನು ಮಂಡಿಸುವವರಿದ್ದೇವೆ. ನಾವೆಲ್ಲ ಸಂಘಟಿತರಾಗಿ ಹೋರಾಡುತ್ತಾ ಮಾನವ ಸಮಾಜದಲ್ಲಿ ಮೌಲ್ಯಗಳಿಗೆ ಜಯ ಸಿಗಬೇಕು. ಈ ಪ್ರಯತ್ನ ಮುಂದುವರಿಯುತ್ತದೆ.

    6. ಒಂದು ಜಾತಿ ಸಮಾವೇಶ ಮಾಡುವುದಕ್ಕೂ, ಸರ್ವಸಮಾಜ ಒಟ್ಟುಗೂಡಿಸುವುದಕ್ಕೂ ವ್ಯತ್ಯಾಸವಿರುತ್ತದೆ, ಪೂರ್ವ ತಯಾರಿ ಹೇಗಿತ್ತು?

    – ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಸಾವಿರಕ್ಕೂ ಮಿಕ್ಕಿ ಸ್ವಾಮೀಜಿಗಳು ಆಗಮಿಸುವರು. ಅವರಿಗೆಲ್ಲ ವ್ಯವಸ್ಥೆ ಮಾಡಲಾಗಿದೆ. ಸ್ವಾಗತ ಸಮಿತಿ ಎಲ್ಲವನ್ನೂ ನೋಡಿಕೊಳ್ಳುತ್ತಿದೆ. ದಾಸೋಹವನ್ನು ಸಮಾಜ ಬಾಂಧವರೆಲ್ಲ ಸೇರಿ ಮಾಡುತ್ತಿದ್ದಾರೆ. ಕೇರಳ, ಗೋವಾ, ಮಹಾರಾಷ್ಟ್ರ, ಆಂಧ್ರದಿಂದಲೂ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಇಂಥ ಒಂದು ಸೈದ್ಧಾಂತಿಕ ತಾತ್ವಿಕ ನಡೆಗೆ ಬೆಂಬಲ ಸಿಗುವುದು ಬಹಳ ವಿರಳ. ಆದರೆ ನಾವು ಬಸವಣ್ಣನವರಂತೆ ಸರ್ವ ಜನಾಂಗಗಳನ್ನು ಕಟ್ಟಿಕೊಂಡಿರುವುದರಿಂದ ನಮಗೆ ಇದು ಸಾಧ್ಯವಾಗುತ್ತಿದೆ. ಸುಗಮವಾಗುತ್ತಿದೆ. ನಾನು ಯಾವುದೇ ಜನಾಂಗದ ದ್ವೇಷಿಯಲ್ಲ. ಎಲ್ಲ ಜನಾಂಗದವರು ಬೆಳೆದು ಬರಬೇಕು ಎಂಬ ಆಶಯ ನನ್ನದು. ಆದರೆ ಜನಾಂಗದ ಒಳಗೆ ಇರುವಂತಹ ದ್ವೇಷ, ಅಮಾನವೀಯ ಆಚರಣೆಗಳು, ಮೂಢ ನಂಬಿಕೆಗಳು, ಶೋಷಣೆ, ಇವುಗಳನ್ನು ನಾವು ವಿರೋಧ ಮಾಡಬಹುದೇ ಹೊರತು ಯಾವುದೇ ಜನಾಂಗಗಳನ್ನು ನಾವು ದ್ವೇಷ ಮಾಡಲು ಆಗಲ್ಲ. ಎಲ್ಲ ಜನಾಂಗಗಳಲ್ಲಿಯೂ ಸ್ವಾಭಿಮಾನ ಮೂಡಬೇಕು.

    7. ಈ ಕಾರ್ಯಕ್ರಮದ ಪ್ರೇರೇಪಣೆ ಏನು?

    ವಚನ ಚಳುವಳಿ ಸರ್ವ ಜನಾಂಗಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿತ್ತು, ತಂತಮ್ಮ ಕುಲ ಕಸುಬು ಮುಖಾಂತರ ಸರಳತೆ, ಮಾನವೀಯತೆ ಬದುಕಿಗೆ ಬೇಕಾದ ನೈತಿಕತೆ ಬೋಧಿಸಿತು. ಅದೇ ಒಂದು ಮಾದರಿ. ಬಸವ ಯುಗವನ್ನು ಒಂದು ಮಾದರಿ ಯುಗ ಎಂದೇ ಕರೆಯುತ್ತೇವೆ. ಬಸವ ಯುಗದಿಂದ ಪ್ರೇರಣೆ, ಅಮರಗಣದ ಯೋಗ ಎಂದು ಹೇಳಬಹುದು. ಆಧುನಿಕ ಮಾನವ ಯಕಶ್ಚಿತ್ ಕಾರಣಕ್ಕೆ ವಿವೇಕ ಕಳೆದುಕೊಳ್ಳುತ್ತಾನೆ. ವಿವೇಕ ಕಳೆದುಕೊಳ್ಳುವುದರಿಂದ ಎಲ್ಲವನ್ನೂ ಕಳೆದುಕೊಂಡಂತಾಗುತ್ತದೆ. ವಿವೇಕ ಇಟ್ಟುಕೊಳ್ಳುವುದರಿಂದ ಎಲ್ಲವನ್ನೂ ಇಟ್ಟುಕೊಂಡಂತಾಗುತ್ತದೆ. ವಿವೇಕ ವಿವೇಚನಾ ಪರರನ್ನಾಗಿಸುತ್ತದೆ. ಈ ವಿವೇಕಪರತೆಗೆ ಒಂದಷ್ಟು ಕೊರತೆ ಆಗುತ್ತಿದೆ. ಇದು ಈ ಯುಗದ ಒಂದು ದೊಡ್ಡ ದುರಂತ. ಅದನ್ನು ಸರಿ ಮಾಡಿಕೊಳ್ಳಬೇಕಾಗಿದೆ.

    8. ಈಗಿನ ಸಂದರ್ಭದಲ್ಲಿ ಜಾಗತಿಕ ಶಾಂತಿಗೆ ಯಾರ ಜವಾಬ್ದಾರಿ ಏನು? ಸರ್ಕಾರ, ಸಮಾಜ, ವ್ಯಕ್ತಿ?

    -ಪ್ರಗತಿ ಇಲ್ಲದ ಶಾಂತಿ, ಶಾಂತಿ ಇಲ್ಲದ ಪ್ರಗತಿ ಎರಡೂ ಅನಾರೋಗ್ಯಕರ. ಈ ಒಂದು ಜಾಗತಿಕ ಶಾಂತಿಯ ಜವಾಬ್ದಾರಿ ನಮ್ಮಲ್ಲಿ ದೀಕ್ಷೆ ಪಡೆದುಕೊಂಡಂತಹ ಜನಾಂಗದ ಸ್ವಾಮಿಗಳು, ಶಾಖಾ ಮಠದ ಸ್ವಾಮಿಗಳು, ಈ ತತ್ವ, ಸಿದ್ಧಾಂತ ಇದರ ಮೇಲೆ ನಂಬಿಕೆ ಇಟ್ಟ ಬಸವ ಕೇಂದ್ರ, ಬಸವ ಸಂಘಟನೆಗಳ ಜವಾಬ್ದಾರಿ ಇದೆ. ಸಮಾಜದ ಜವಾಬ್ದಾರಿಯೂ ಇದೆ. ಇದರ ಜತೆಯಲ್ಲಿ ಸರ್ಕಾರ ಜವಾಬ್ದಾರಿಯೂ ಇದೆ. ಜತೆಗೆ ಸಮಾಜದ್ದೂ ಕೂಡ. ಸೂಕ್ಷಾ್ಮತಿ ಸೂಕ್ಷ್ಮವಾದ ಅಂದರೆ ಮೈಕ್ರೋ ಕಮ್ಯುನಿಟಿ ಅಂತಹವರಿಗೂ ನಾವು ಗಮನ ಹರಿಸಿದ್ದೇವೆ. ಬಸವಣ್ಣ ಮಾಡಿದ ಆ ಪ್ರಯೋಗ ಶೀಲ ಪ್ರವೃತ್ತಿಯಿಂದ ಪ್ರೇರಣೆ ಪಡೆದು ಅದನ್ನು ಮತ್ತೆ ಸಾಕಾರಗೊಳಿಸುವಂತಹ ಪ್ರಯತ್ನ ಇಲ್ಲಿ ಸಾಗಿದೆ. ಜನಗಳು ಇದ್ದಾಗ ಪುರಾತನ ಆಗಿ, ಜನಗಳು ಇಲ್ಲದಾಗ ಕಿರಾತನ ಆದರೆ? ಹೀಗಾಗಬಾರದು. ಆ ಪ್ರಜ್ಞೆ. ಸದಾ ಕಾಲ ಜಾಗೃತವಾಗಿರಬೇಕು. ನುಡಿ ಪುರಾತನವಾಗಿ ನಡೆ ಕಿರಾತನವಾಗಬಾರದು ಎಂಬುದು ನಮ್ಮ ಆಶಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts